ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಗೃಹ ಸಚಿವ ಪರಮೇಶ್ವರ್‌
x
ಗೃಹ ಸಚಿವ ಪರಮೇಶ್ವರ

ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಗೃಹ ಸಚಿವ ಪರಮೇಶ್ವರ್‌

ಪ್ರಧಾನಿ ಮೋದಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‌ ಟೀಕಿಸಿದ್ದಾರೆ


Click the Play button to hear this message in audio format

ಬೆಂಗಳೂರು: ಪ್ರಧಾನಿ ಮೋದಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ನೆನಪಿಡುವಂತಹ ಯಾವ ಯೋಜನೆಗಳನ್ನೂ ನೀಡಿಲ್ಲ ಎಂದು ಗೃಹ ಸಚಿವ‌ ಡಾ ಜಿ ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಸಂಪೂರ್ಣವಾಗಿ ಸಿಕ್ಕಿಲ್ಲ. ಬರ ಪರಿಹಾರದ ರೂ. 18 ಸಾವಿರ ಕೋಟಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ತಂಡವು ಸಹ ಬರ ಅಧ್ಯಯನ ನಡೆಸಿದ್ದು, ಎನ್‌ಡಿಆರ್‌ಎಫ್ ನಿಧಿಯಿಂದ ಒಂದು ರೂ. ಅನುದಾನ ಬಿಡುಗಡೆಯಾಗಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲಾಗುವುದು. ಇದಕ್ಕೆ ರೂ. 5300 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು. ಇದಲ್ಲದೇ ಯಾವ ಹೊಸ ಯೋಜನೆಗಳನ್ನು ರಾಜ್ಯಕ್ಕೆ ನೀಡಿಲ್ಲ. ಬಿಜೆಪಿಯ 26 ಸಂಸದರು ಐದು ವರ್ಷ ಏನು ಮಾಡಿದರು? ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ‌ ಏನಿದೆ? ಯಾವ ಮುಖ ಹೊತ್ತು ಪದೇಪದೆ ರಾಜ್ಯಕ್ಕೆ ಬರುತ್ತಾರೋ ಎಂದು ಟೀಕಿಸಿದರು.

ಸತ್ಯವನ್ನು ಮುಚ್ಚಿಡಲು ಆಗಲ್ಲ

ಹುಬ್ಬಳ್ಳಿಯಲ್ಲಿ ನಡೆದ ಯುವತಿ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಎಬಿವಿಪಿಯವರಿಗೆ ಮತ್ತು ಬಿಜೆಪಿಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ನನಗೂ ಜವಾಬ್ಧಾರಿ ಇದೆ. ಜವಾಬ್ಧಾರಿತನದಿಂದ ನಡೆದುಕೊಳ್ಳುತ್ತಿದ್ದು, ನಮಗೆ ಬಂದಿರುವ ವರದಿಯನ್ನು ನಾವು ತಿಳಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ‌ ಕುರಿತು ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸುತ್ತಾರೆ. ಬಳಿಕ ಸತ್ಯಾಂಶ ಹೊರಬರಲಿದೆ. ನನ್ನ ಹೇಳಿಕೆಯಿಂದ ಯುವತಿಯ ತಂದೆ-ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ಸತ್ಯವನ್ನು ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.

Read More
Next Story