
Tariff War: ಫಾರ್ಮಾ ಮೇಲೂ ಟ್ರಂಪ್ ಸುಂಕದ ಬೆದರಿಕೆ, ಔಷಧ ದರ ಏರಿಕೆ?
ಒಂದು ವೇಳೆ ಟ್ರಂಪ್ ನಿಜಕ್ಕೂ ಔಷಧದ ಮೇಲೆ ಸುಂಕ ಹೇರಿದ್ದೇ ಆದಲ್ಲಿ, ಅದು ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದ ಔಷಧೀಯ ವಲಯದ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ.
ಜಾಗತಿಕವಾಗಿ “ವ್ಯಾಪಾರ ಯುದ್ಧ” ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump), ಈಗ ಭಾರತಕ್ಕೆ ಮತ್ತೊಂದು ಹೊಡೆತ ನೀಡುವ ಸೂಚನೆ ದೊರಕಿದೆ. ಸದ್ಯದಲ್ಲೇ ಔಷಧದ ಆಮದಿನ ಮೇಲೆ ಸುಂಕ ಹೇರುವ "ಮಹತ್ವದ" ನಿರ್ಧಾರವನ್ನು ಘೋಷಿಸಲು ಯೋಜಿಸಿದ್ದೇನೆ ಎಂದು ಬುಧವಾರ ಟ್ರಂಪ್ ಹೇಳಿದ್ದಾರೆ.
ಒಂದು ವೇಳೆ ಟ್ರಂಪ್ ನಿಜಕ್ಕೂ ಔಷಧದ ಮೇಲೆ ಸುಂಕ ಹೇರಿದ್ದೇ ಆದಲ್ಲಿ, ಅದು ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದ ಔಷಧೀಯ ವಲಯದ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ.
ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಷನಲ್ ಕಮಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ನಾವು ಔಷಧಗಳ ಮೇಲೂ ಸುಂಕ ವಿಧಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದರಿಂದಾಗಿ ಔಷಧ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಚೀನಾ, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಪ್ರತಿಸುಂಕ ಹೇರಿದ್ದ ಟ್ರಂಪ್ ಸರ್ಕಾರವು, ಈ ಸುಂಕದ ವ್ಯಾಪ್ತಿಯಿಂದ ಔಷಧ ಮತ್ತು ಸೆಮಿ ಕಂಡಕ್ಟರ್‌ಗಳನ್ನು ಹೊರಗಿಟ್ಟಿತ್ತು.
ಭಾರತದ ಮೇಲೆ ಹೇಗೆ ಪರಿಣಾಮ ಬೀರಬಹುದು?
ಅಮೆರಿಕವು ಔಷಧೀಯ ಸರಕುಗಳಿಗೆ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. 2024ರ ಹಣಕಾಸು ವರ್ಷದಲ್ಲಿ ಭಾರತವು ಒಟ್ಟು 27.9 ಶತಕೋಟಿ ಡಾಲರ್ ಮೌಲ್ಯದ ಫಾರ್ಮಾ ಉತ್ಪನ್ನಗಳನ್ನು ರಫ್ತು ಮಾಡಿದೆ. ಆ ಪೈಕಿ ಶೇ.31ರಷ್ಟು ಅಂದರೆ 8.7 ಶತಕೋಟಿ ಡಾಲರ್ ನಷ್ಟು ಉತ್ಪನ್ನಗಳು ಅಮೆರಿಕವೊಂದಕ್ಕೇ ರಫ್ತಾಗಿದೆ ಎಂದು ಕೈಗಾರಿಕಾ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ.
ವರದಿಗಳ ಪ್ರಕಾರ, ಅಮೆರಿಕದಲ್ಲಿ ಬಳಸುವ ಶೇಕಡಾ 45 ರಷ್ಟು ಜೆನೆರಿಕ್ ಮತ್ತು 15 ಪ್ರತಿಶತದಷ್ಟು ಬಯೋಸಿಮಿಲರ್ ಔಷಧಗಳನ್ನು ಭಾರತವೇ ಪೂರೈಸುತ್ತದೆ. ರೆಡ್ಡೀಸ್, ಅರಬಿಂದೋ ಫಾರ್ಮಾ, ಜೈಡಸ್ ಲೈಫ್ ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲಾಂಡ್ ಫಾರ್ಮಾದಂತಹ ಸಂಸ್ಥೆಗಳು ತಮ್ಮ ಒಟ್ಟು ಆದಾಯದ ಶೇಕಡಾ 30-50 ರಷ್ಟು ಅಮೆರಿಕನ್ ಮಾರುಕಟ್ಟೆಯಿಂದ ಗಳಿಸುತ್ತವೆ ಎಂದು ವರದಿಯಾಗಿದೆ.
ಭಾರತ ಮಾತ್ರವಲ್ಲ, ಅಮೆರಿಕದ ಮೇಲೂ ಪರಿಣಾಮ
ಔಷಧೀಯ ಆಮದಿನ ಮೇಲಿನ ಅಮೆರಿಕವು ಹೆಚ್ಚಿನ ಸುಂಕ ವಿಧಿಸಿದರೆ, ಅದು ಭಾರತದ ಮೇಲೆ ಮಾತ್ರವಲ್ಲದೇ ಅಮೆರಿಕದ ಮೇಲೂ ತೀವ್ರವಾಗಿ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸುಂಕ ಹೆಚ್ಚಾದರೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತವೆ, ತಯಾರಕರಿಗೆ ಬೆಲೆಯಲ್ಲಿನ ಸ್ಪರ್ಧಾತ್ಮಕತೆ ತಗ್ಗುತ್ತದೆ, ಔಷಧಗಳಿಗೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ಒಂದು ವೇಳೆ ಅಮೆರಿಕವು ಫಾರ್ಮಾ ವಲಯದ ಮೇಲೆ ಸುಂಕ ವಿಧಿಸಲು ಪ್ರಾರಂಭಿಸಿದರೆ, ಅದು ಎರಡೂ ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ವಿಶ್ಲೇಷಕರು ಹೇಳಿದ್ದಾರೆ. ಅಮೆರಿಕವು ಭಾರತದಲ್ಲಿ ತಯಾರಿಸಿದ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಅವಲಂಬಿಸಿದೆ. ಹೆಚ್ಚಿನ ಸುಂಕ ವಿಧಿಸಿದರೆ ಔಷಧಗಳ ಬೆಲೆ ಏರಿಕೆಯಾಗುತ್ತದೆ, ಹಣದುಬ್ಬರವೂ ಹೆಚ್ಚಾಗುತ್ತದೆ, ಔಷಧಿಗಳ ಕೊರತೆಗೂ ಅದು ಕಾರಣವಾಗುತ್ತವೆ ಎಂದೂ ಅವರು ವಿವರಿಸಿದ್ದಾರೆ.