ತಮಿಳುನಾಡು: ಬಿಜೆಪಿ, ಪಿಎಂಕೆ ಮೈತ್ರಿಗೆ ನಿರ್ಧಾರ
ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಅವರನ್ನು ಭೇಟಿಯಾಗಿ ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಮೊನ್ನೆ ಘೋಷಿಸಿತ್ತು.
ಉಭಯ ಪಕ್ಷಗಳ ಪ್ರತಿನಿಧಿಗಳು ಮಂಗಳವಾರ (ಮಾರ್ಚ್ 19) ಬೆಳಗ್ಗೆ ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಅವರ ನಿವಾಸದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ.
ಸೋಮವಾರ (ಮಾರ್ಚ್ 18) ಮೈತ್ರಿ ಕುರಿತ ವದಂತಿಗಳಿಗೆ ಅಂತ್ಯ ಹಾಡಿದ ಪಿಎಂಕೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಘೋಷಿಸಿತ್ತು. ಎನ್‌ಡಿಎಯೊಂದಿಗೆ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ. ಲೋಕಸಭೆ ಕ್ಷೇತ್ರಗಳ ಸಂಖ್ಯೆ ಮತ್ತು ಅಭ್ಯರ್ಥಿಗಳನ್ನು ಕುರಿತ ಘೋಷಣೆಯನ್ನು ಪಿಎಂಕೆ ಸಂಸ್ಥಾಪಕ ಡಾ. ಎಸ್. ರಾಮದಾಸ್ ಮಾಡಲಿದ್ದಾರೆ ಎಂದು ಪಿಎಂಕೆ ಪ್ರಧಾನ ಕಾರ್ಯದರ್ಶಿ ವಡಿವೇಲ್ ರಾವಣನ್ ಹೇಳಿದ್ದಾರೆ. ಪಕ್ಷ ವಣ್ಣಿಯಾರ್ ಸಮುದಾಯದಲ್ಲಿ ಪ್ರಾಬಲ್ಯ ಹೊಂದಿದೆ. ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿಗೆ ಉತ್ಸುಕವಾಗಿಲ್ಲ ಎಂಬ ಸಂದೇಶವನ್ನು ಎಐಎಡಿಎಂಕೆಗೆ ಪಿಎಂಕೆ ರವಾನಿಸಿದೆ.
ಎನ್‌ಡಿಎಯಿಂದ ಹೊರಬಂದಿರುವ ಎಐಎಡಿಎಂಕೆಯು ಪಿಎಂಕೆ ಮತ್ತು ಡಿಎಂಡಿಕೆ ಜೊತೆ ಮೈತ್ರಿಗೆ ಪ್ರಯತ್ನಿಸುತ್ತಿತ್ತು. ʻಪಕ್ಷದ ಸಂಸ್ಥಾ ಪಕ ಡಾ. ಎಸ್. ರಾಮದಾಸ್ ಅವರು ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ನಿರ್ಧಾರವನ್ನು ಪ್ರಕಟಿಸಿದರು. ಹಂಚಿಕೆಯಾಗುವ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳನ್ನು ಅವರು ಒಂದೆರಡು ದಿನಗಳಲ್ಲಿ ಘೋಷಿಸಲಿದ್ದಾರೆ,ʼ ಎಂದು ರಾವಣನ್ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಾ.19ರಂದು ಸೇಲಂನಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಡಾ.ರಾಮದಾಸ್ ಅವರ ಪುತ್ರ ಡಾ.ಅನ್ಬುಮಣಿ ಅವರು ಪ್ರಧಾನಿಯನ್ನು ಭೇಟಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ,ʻಕ್ಷೇತ್ರಗಳ ಹಂಚಿಕೆ ಅಂತಿಮಗೊಳಿಸಲು ಭೇಟಿಯಾಗುವ ಸಾಧ್ಯತೆಯಿದೆʼ ಎಂದು ಉತ್ತರಿಸಿದರು.
ಎಐಎಡಿಎಂಕೆ ಹೊರನಡೆದ ನಂತರ ತಮಿಳುನಾಡಿನಲ್ಲಿ ಬಿಜೆಪಿಗೆ ಪ್ರಮುಖ ಮೈತ್ರಿ ಪಾಲುದಾರರಿಲ್ಲದ ಕಾರಣ ಪಿಎಂಕೆ ಜೊತೆ ಹೊಂದಾಣಿಕೆ ಮಹತ್ವದ್ದಾಗಿದೆ.