
ಪಶ್ಚಿಮ ಬಂಗಾಳದಲ್ಲಿ ಏಕಾಂಗಿ ಸ್ಪರ್ಧೆಗೆ ಸಿದ್ಧ: ಟಿಎಂಸಿ
ಕೋಲ್ಕತ್ತಾ, ಜನವರಿ 6 (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಟಿಎಂಸಿ ʻಮುಕ್ತ ಮನಸ್ಸುʼ ಹೊಂದಿದೆ. ಆದರೆ, ಮಾತುಕತೆ ವಿಫಲವಾದರೆ ಏಕಾಂಗಿ ಸ್ಪರ್ಧೆಗೆ ಸಿದ್ಧವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ,
ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಪಿಟಿಐ ಜೊತೆ ಮಾತನಾಡಿ, ಸ್ಥಾನ ಹಂಚಿಕೆ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಏನು ಯೋಚಿಸುತ್ತಿದ್ದಾರೆ ಎಂಬುದು ಅಪ್ರಸ್ತುತ. ಏಕೆಂದರೆ, ಎರಡೂ ಪಕ್ಷಗಳ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ʻನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಈಗಾಗಲೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಬಗ್ಗೆ ಸೋನಿಯಾ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ನಿರ್ಧರಿಸುತ್ತಾರೆ. ಸ್ಥಳೀಯ ಕಾಂಗ್ರೆಸ್ ನಾಯಕರ ನಿಲುವು ಅಪ್ರಸ್ತುತʼ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ತಮ್ಮ ಪಕ್ಷ ಟಿಎಂಸಿ ಬಳಿ ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿದ 2 ದಿನಗಳ ಬಳಿಕ ಈ ಪ್ರತಿಕ್ರಿಯೆ ಬಂದಿದೆ.
ರಾಜ್ಯದ 42 ಲೋಕಸಭಾ ಸ್ಥಾನಗಳ ಪೈಕಿ ನಾಲ್ಕನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಟಿಎಂಸಿ ಚಿಂತನೆ ನಡೆಸಿದೆ ಎಂದು ಹಲವು ನಾಯಕರು ದೃಢಪಡಿಸಿದ್ದಾರೆ. 2019 ರ ಚುನಾವಣೆಯಲ್ಲಿ ಟಿಎಂಸಿ 22, ಕಾಂಗ್ರೆಸ್ ಎರಡು ಮತ್ತು ಬಿಜೆಪಿ 18 ಸ್ಥಾನ ಗಳಿಸಿದ್ದವು. ಲೋಕಸಭೆಯಲ್ಲಿ ಸಭಾನಾಯಕರಾಗಿರುವ ಚೌಧರಿ ಅವರು ಮುರ್ಷಿದಾ ಬಾದ್ ಜಿಲ್ಲೆಯ ಬೆಹ್ರಂಪುರ ಕ್ಷೇತ್ರದಿಂದ ಹಾಗೂ ಮಾಜಿ ಕೇಂದ್ರ ಸಚಿವ ಅಬು ಹಸೀಮ್ ಖಾನ್ ಚೌಧರಿ ಅವರು ಮಾಲ್ಡಾ ಜಿಲ್ಲೆಯ ಮಾಲ್ಡಾ ದಕ್ಷಿಣ ಕ್ಷೇತ್ರದಿಂದ ಸತತ ಮೂರನೇ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಬಗ್ಗೆ ಟಿಎಂಸಿ ಮುಖ್ಯಸ್ಥೆ ಬ್ಯಾನರ್ಜಿ ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಪ್ರಸ್ತಾವನೆಯನ್ನು ಸಿಪಿಐ(ಎಂ) ತಳ್ಳಿಹಾಕಿತು ಮತ್ತು ಕಾಂಗ್ರೆಸ್ನ ಕೆಲವು ನಾಯಕರು ಟೀಕಿಸಿದರು. ಕೆಲವು ದಿನಗಳ ನಂತರ ಈ ಎರಡು ಪಕ್ಷಗಳು ಬಿಜೆಪಿಯೊಂದಿಗೆ ಕೈಜೋಡಿಸುತ್ತಿವೆ ಎಂದು ಆರೋಪಿಸಿದ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಾಳಯವನ್ನು ಟಿಎಂಸಿ ಎದುರಿಸಲಿದೆ ಎಂದು ಪ್ರತಿಕ್ರಿಯಿಸಿದ್ದರು.
2001ರ ವಿಧಾನಸಭೆ ಚುನಾವಣೆ, 2009ರ ಲೋಕಸಭೆ ಚುನಾವಣೆ ಮತ್ತು 2011ರ ವಿಧಾನಸಭೆ ಚುನಾವಣೆಗಳಲ್ಲಿ ಟಿಎಂಸಿ, ಕಾಂಗ್ರೆಸ್ನೊಂ ದಿಗೆ ಮೈತ್ರಿ ಮಾಡಿಕೊಂಡಿತು; 34 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರವನ್ನು ಬೇರುಸಹಿತ ಕಿತ್ತೊಗೆದವು.
(ಪಿಟಿಐ)