ಲೋಕ ಸ್ವಾರಸ್ಯ | ಬೆಂ. ಗ್ರಾಮಾಂತರದಲ್ಲಿ ಮೂವರು ಸುರೇಶ್, ಐವರು ಮಂಜುನಾಥ್!
x

ಲೋಕ ಸ್ವಾರಸ್ಯ | ಬೆಂ. ಗ್ರಾಮಾಂತರದಲ್ಲಿ ಮೂವರು ಸುರೇಶ್, ಐವರು ಮಂಜುನಾಥ್!

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್‌ ಹೆಸರಿನ ಮೂವರು ಅಭ್ಯರ್ಥಿಗಳು ಮತ್ತು ಮಂಜುನಾಥ್‌ ಹೆಸರಿನ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.


ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಬಗ್ಗೆ ಮತದಾರರಲ್ಲಿ ಗೊಂದಲ ಉಂಟಾಗಲು ಡಮ್ಮಿ ಅಭ್ಯರ್ಥಿಗಳನ್ನು ಹಾಕುವ ಪರಿಪಾಠ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಸಮಯದಿಂದಲೂ ಶುರುವಾಗಿದೆ. ಇದೀಗ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಸಾಕಷ್ಟು ಗಮನ ಸೆಳೆದಿದೆ.

ಡಿ‌ ಕೆ ಸುರೇಶ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಅವರ ಅಳಿಯ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್‌ ಕಣಕ್ಕಿಳಿದಿದ್ದಾರೆ.

ಇದೀಗ, ಡಾ. ಮಂಜುನಾಥ್‌ ಮಾತ್ರವಲ್ಲದೆ ಅವರ ಹೆಸರಿನ ಇನ್ನೂ ನಾಲ್ವರು ನಾಮಪತ್ರ ಸಲ್ಲಿಸಿದ್ದು, ಸುರೇಶ್‌ ಹೆಸರಿನಲ್ಲಿ ಡಿ.ಕೆ ಸುರೇಶ್‌ ಅಲ್ಲದೆ ಇನ್ನಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಡಾ. ಮಂಜುನಾಥ್‌ ಅವರು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಬಹು‌ ಜನ್ ಭಾರತ್ ಪಾರ್ಟಿಯಿಂದ ಮಂಜುನಾಥ ಸಿ.ಎನ್. ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಮಂಜುನಾಥ್ ಸಿ., ಮಂಜುನಾಥ್ ಎನ್. ಹಾಗೂ ಮಂಜುನಾಥ್ ಕೆ. ಎಂಬ ಮೂವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್‌ ನಾಮಪತ್ರ ಸಲ್ಲಿಸಿದ್ದರೆ, ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಎಂಬುವರು ಮತ್ತು, ಪಕ್ಷೇತರ ಅಭ್ಯರ್ಥಿಯಾಗಿ ಕನಕಪುರ ಮರಳೆ ಗ್ರಾಮದ ಸುರೇಶ್ ಎಂ.ಎನ್ ಎಂಬುವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ.

ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿ ಅಭ್ಯರ್ಥಿಗಳ ವಿರುದ್ಧ ಲಾಭ ಪಡೆಯುವುದಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಉದ್ದೇಶಪೂರ್ವಕವಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ, 2019 ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ವಿರುದ್ಧ ಅದೇ ಹೆಸರಿನ ಮೂರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದರ ಹಿಂದೆಯೂ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಇದೆ ಎಂದು ಆರೋಪಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಅವರ ವಿರುದ್ಧ ಒಮ್ಮೆ ಏಳು ಬಂದಿ ಬಂಗಾರಪ್ಪ ಎಂಬ ಹೆಸರಿನವರೇ ಕಣಕ್ಕಿಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.

Read More
Next Story