ಚಾಮರಾಜನಗರ | ತಡ ರಾತ್ರಿ ಆನೆ ಅಡ್ಡಗಟ್ಟಿದರೂ, ಕರ್ತವ್ಯ ಪ್ರಜ್ಞೆ ಮೆರೆದ ಮತಗಟ್ಟೆ ಸಿಬ್ಬಂದಿ
x
ಚುನಾವಣಾ ಸಿಬ್ಬಂದಿಯಿದ್ದ ವಾಹನವನ್ನು ಕಾಡಾನೆ ಅಟ್ಟಾಡಿಸಿಕೊಂಡು ಬಂದ ಘಟನೆ ನಡೆದಿದೆ.

ಚಾಮರಾಜನಗರ | ತಡ ರಾತ್ರಿ ಆನೆ ಅಡ್ಡಗಟ್ಟಿದರೂ, ಕರ್ತವ್ಯ ಪ್ರಜ್ಞೆ ಮೆರೆದ ಮತಗಟ್ಟೆ ಸಿಬ್ಬಂದಿ

ಮತಗಟ್ಟೆ ಸಿಬ್ಬಂದಿ ಎಂಥ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಚುನಾವಣಾ ಕರ್ತವ್ಯ ನಿಭಾಯಿಸಬೇಕಾಗುತ್ತದೆ? ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅರಣ್ಯದ ನಡುವಿನ ಮತಗಟ್ಟೆಗಳಲ್ಲಿ, ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸುವವರು ಹೇಗೆ ಪ್ರಾಣವನ್ನೇ ಪಣಕ್ಕಿಟ್ಟು ಮತಪೆಟ್ಟಿಗೆಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿ.

Click the Play button to hear this message in audio format

ಚಾಮರಾಜನಗರ: ಪ್ರಜಾಪ್ರಭುತ್ವದ ಬುನಾದಿಯೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ. ಅಂತಹ ಚುನಾವಣೆಯ ನಿರ್ಣಾಯಕ ಭಾಗವೇ ಮತದಾನ. ಮತದಾನವನ್ನು ಮುಕ್ತವಾಗಿ ನಡೆಸುವುದು ಮತ್ತು ಚಲಾವಣೆಯಾದ ಮತಗಳನ್ನು ಸುರಕ್ಷಿತವಾಗಿ ನಿಗದಿತ ಸ್ಟ್ರಾಂಗ್‌ ರೂಂಗೆ ತಲುಪಿಸುವುದು ಚುನಾವಣಾ ಸಿಬ್ಬಂದಿಯ ಕರ್ತವ್ಯ. ಹಾಗೆ ವಹಿಸಿದ ಹೊಣೆಗಾರಿಕೆಯನ್ನು ಚುನಾವಣಾ ಸಿಬ್ಬಂದಿ ಎಷ್ಟು ಜತನದಿಂದ ಮಾಡುತ್ತಾರೆ, ಎಂತಹ ಪರಿಸ್ಥಿತಿಯಲ್ಲೂ ಮತಪೆಟ್ಟಿಗೆಯ ರಕ್ಷಣೆಗೆ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾರೆ ಎಂಬುದಕ್ಕೆ ಶುಕ್ರವಾರ ಜಿಲ್ಲೆಯ ಬೇಡಗುಳಿಯಲ್ಲಿ ನಡೆದ ಘಟನೆಯೇ ಸಾಕ್ಷಿ.

ಶುಕ್ರವಾರ (ಏ.26) ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಮತದಾನ ನಡೆದ ಲೋಕಸಭಾ ಕ್ಷೇತ್ರದ ಬೇಡಗುಳಿ ಮತಗಟ್ಟೆಯ ಸಿಬ್ಬಂದಿ, ಮತದಾನ ಅವಧಿ ಮುಗಿದ ಬಳಿಕ ಮತಗಟ್ಟೆ ತೆಗೆದುಕೊಂಡು ವಾಪಸ್‌ ಹೊರಟಾಗ ರಾತ್ರಿ ಆಘಾತ ಎದುರಾಗಿತ್ತು. ಚುನಾವಣಾ ಕರ್ತವ್ಯವನ್ನು ಮುಗಿಸಿ, ಸುಗಮವಾಗಿ ಮತದಾನ ಮುಗಿಯಿತು ಎಂಬ ನಿಟ್ಟುಸಿರಿನಿಂದ ಹೊರಟ ಸಿಬ್ಬಂದಿಗೆ ಜೀವವೇ ಬಾಯಿಗೆ ಬಂದಂತಹ ಅನುಭವ ಅದು.

ದೂರದ ಹಳ್ಳಿಯ ಕಾಡುದಾರಿಯಲ್ಲಿ ರಾತ್ರಿ ಮತಪೆಟ್ಟಿಗೆ ಮತ್ತು ಚುನಾವಣಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಕಾಡಾನೆ ಎದುರಾಗಿದೆ. ಅಷ್ಟೇ ಅಲ್ಲ, ವಾಹನವನ್ನು ಕಂಡಕೂಡಲೇ ಅಟ್ಟಾಡಿಸಿಕೊಂಡು ಹೋಗಿದೆ. ಇದರಿಂದ ಗಾಬರಿಯಾದ ಸಿಬ್ಬಂದಿ ಮತ್ತು ವಾಹನ ಚಾಲಕರು ಕೆಲ ಹೊತ್ತು ಆನೆ ದೂರ ಹೋಗಬಹುದು ಎಂದು ಕಾದು, ಕೊನೆಗೆ ಅನಿವಾರ್ಯವಾಗಿ ಗಾಡಿ ತಿರುಗಿಸಿಕೊಂಡು ವಾಪಸು ಹೋಗಿದ್ದಾರೆ. ಅರ್ಧ ದಾರಿಗೆ ಬಂದು ವಾಪಸ್‌ ಹೋದ ಸಿಬ್ಬಂದಿ, ಆನೆ ದಾಳಿಯ ವಿಷಯ ತಿಳಿಸಿ ಅರಣ್ಯ ಸಿಬ್ಬಂದಿಯನ್ನು ಕರೆಸಿಕೊಂಡು ಅವರ ಬೆಂಗಾವಲು ಪಡೆ ನೆರವಿನಲ್ಲಿ ಮತಪೆಟ್ಟಿಗೆ ಸಹಿತ ಮಸ್ಟರಿಂಗ್‌ ಸೆಂಟರ್‌ಗೆ ತಡರಾತ್ರಿ ತಲುಪಿದ್ದಾರೆ.

ಆನೆ ದಾಳಿಯಿಂದ ಭಯಭೀತರಾಗಿದ್ದ ಚುನಾವಣಾ ಸಿಬ್ಬಂದಿ, ಅಂತಿಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಧೈರ್ಯ ತುಂಬಿದ ಬಳಿಕ ಮತಪೆಟ್ಟಿಗೆಯೊಂದಿಗೆ ಗ್ರಾಮದಿಂದ ಮಸ್ಟರಿಂಗ್‌ ಸೆಂಟರ್‌ ಗೆ ಬಂದಿದ್ದಾರೆ.

ಮತಗಟ್ಟೆ ಸಿಬ್ಬಂದಿ ಎಂಥ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಚುನಾವಣಾ ಕರ್ತವ್ಯ ನಿಭಾಯಿಸಬೇಕಾಗುತ್ತದೆ? ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅರಣ್ಯದ ನಡುವಿನ ಮತಗಟ್ಟೆಗಳಲ್ಲಿ, ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸುವವರು ಹೇಗೆ ಪ್ರಾಣವನ್ನೇ ಪಣಕ್ಕಿಟ್ಟು ಮತಪೆಟ್ಟಿಗೆಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿ.

Read More
Next Story