ಫೆಡರಲ್ ಸಮೀಕ್ಷೆ | ಮೋದಿ 3.0ಯತ್ತ ಸ್ಪಷ್ಟ ಸೂಚನೆ
x

ಫೆಡರಲ್ ಸಮೀಕ್ಷೆ | ಮೋದಿ 3.0ಯತ್ತ ಸ್ಪಷ್ಟ ಸೂಚನೆ

ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಭವಿಷ್ಯ ನುಡಿದಿದೆ, ಕಾಂಗ್ರೆಸ್ ಪಕ್ಷವು ಈ ಬಾರಿ 2019 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ.


ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಭವಿಷ್ಯ ನುಡಿದಿದೆ, ಕಾಂಗ್ರೆಸ್ ಪಕ್ಷವು ಈ ಬಾರಿ 2019 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ.

ನರೇಂದ್ರ ಮೋದಿಯವರು ಸಂಸತ್ತಿಗೆ ಮೊದಲ ಬಾರಿಗೆ ಪ್ರವೇಶಿಸಿ ನೇರವಾಗಿ ಪ್ರಧಾನಿ ಹುದ್ದೆಗೆ ಏರಿದರು. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಅವರು, ಮೂರನೇ ಬಾರಿಗೂ ಅಧಿಕಾರಕ್ಕೆ ಏರಲು ಸಿದ್ದರಾಗಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಆಡಳಿತ ಪಕ್ಷಕ್ಕೆ ಪ್ರತಿರೋಧ ನೀಡುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟವು ಸೃಷ್ಟಿಯಾಗಿದೆ. ಈ ಮೈತ್ರಿಕೂಟವನ್ನು ಬಲಪಡಿಸಲು ಎಲ್ಲ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿರುವಾಗಲೂ, ಬಿಜೆಪಿಯು ಪ್ರಬಲವಾಗಿ ಸ್ಪರ್ಧೆಯನ್ನು ನೀಡಿ, ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ.

ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬಿಜೆಪಿಯು ದಕ್ಷಿಣ ವಲಯದ ಕೆಲವು ಕಡೆಗಳಲ್ಲಿ ಪ್ರಬಲ ಪ್ರತಿರೋಧವನ್ನು ಎದುರಿಸಲಿದೆ ಎಂದು ಭವಿಷ್ಯ ನುಡಿದಿದೆ. ಆದರೂ, ಇದು ದೇಶದ ಉಳಿದ ಭಾಗಗಳಲ್ಲಿ ಸುಲಭ ಜಯ ಗಳಿಸಲಿದೆ ಎಂದು ಹೇಳಿದೆ.

ಭಾರತೀಯ ಮತದಾರರ ರಾಜಕೀಯ ಗ್ರಹಿಕೆಗಳು ಮತ್ತು ಮತದಾನದ ಪ್ರಾಶಸ್ತ್ಯಗಳನ್ನು ಕಂಡುಕೊಳ್ಳಲು ಫೆಡರಲ್ ಮತ್ತು ಅದರ ಸೋದರ ಸಂಸ್ಥೆ ಪುಥಿಯಾತಲೈಮುರೈ ರಾಷ್ಟ್ರವ್ಯಾಪಿ ಅಭಿಪ್ರಾಯ ಸಂಗ್ರಹಕ್ಕಾಗಿ ಆಪ್ಟ್ ರಿಸರ್ಚ್ ಜೊತೆ ಸೇರಿ ಸಮೀಕ್ಷೆ ನಡೆಸಿದೆ. ನಾವು ಪ್ರದೇಶವಾರು, ರಾಜ್ಯವಾರು ಮತ್ತು ರಾಜ್ಯಗಳೊಳಗೆ ವಲಯವಾರು ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಕಳೆದ ಎರಡು ವಾರಗಳಲ್ಲಿ, ನಾವು ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿಗಳು, ಹಾಗೂ ಡೇಟಾಗಳನ್ನು ಪ್ರಕಟಿಸಿದ್ದೇವೆ ಮತ್ತು ಫೆಡರಲ್‌ನ YouTube ಚಾನಲ್‌ನಲ್ಲಿ ಪ್ಯಾನಲ್ ಚರ್ಚೆಗಳನ್ನು ನಡೆಸಿದ್ದೇವೆ.

ಲೋಕಸಭೆಯ 543 ಸ್ಥಾನಗಳ ಪೈಕಿ 509 ಸ್ಥಾನಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಉಳಿದ 34 ಕ್ಷೇತ್ರಗಳು ಭೌಗೋಳಿಕ ಮತ್ತು ಕಾನೂನು-ಸುವ್ಯವಸ್ಥೆ ನಿರ್ಬಂಧಗಳಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.

ಉತ್ತರ ವಲಯ: ಬಿಜೆಪಿಯು 2019ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆ


ಉತ್ತರದ ನಾಲ್ಕು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು - ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಗಳಲ್ಲಿ 110 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 102 ಸ್ಥಾನಗಳನ್ನು ಗಳಿಸುತ್ತದೆ ಎಂದು ಫೆಡರಲ್ ಸಮೀಕ್ಷೆ ನಿರೀಕ್ಷಿಸುತ್ತದೆ. 2019 ರಲ್ಲಿ 83 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 102 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. 9 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಎರಡಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳುತ್ತದೆ.

2019ರಿಂದ ಅಕಾಲಿದಳ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಕೂಡ ತಮ್ಮ ಸ್ಥಾನಗಳಲ್ಲಿ ಕುಸಿತ ಕಾಣುತ್ತಲೇ ಬರುತ್ತಿವೆ. ಮತ್ತೊಂದೆಡೆ, ಆಮ್‌ ಆದ್ಮಿ ಪಕ್ಷವು ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರಗಳನ್ನು ಸ್ಥಾಪಿಸಿ, ಪ್ರಬಲವಾಗಿ ಬೆಳೆಯುತ್ತಿದೆ. ಲೋಕಸಭೆಯಲ್ಲೂ ಪ್ರಬಲ ಪೈಪೋಟಿ ನೀಡುತ್ತಿದೆ. 2019 ರಲ್ಲಿ ಒಂದೇ ಸ್ಥಾನ ಪಡೆದಿದ್ದ ಆಪ್ ಈ ವರ್ಷ ಐದು ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತಿದೆ

ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.








ದಕ್ಷಿಣ ವಲಯ: ಕಾಂಗ್ರೆಸ್ ಫೈಟ್ ನೀಡುವ ಸಾಧ್ಯತೆ

ಐದು ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ 129 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ 32 ಸ್ಥಾನಗಳನ್ನು ಪಡೆಯಲಿವೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಸಾಂಪ್ರದಾಯಿಕ ಎದುರಾಳಿಗಳು 2019ಕ್ಕಿಂತ ಈ ಬಾರಿ ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ - ಬಿಜೆಪಿ 29 ರಿಂದ 32 ಸ್ಥಾನಕ್ಕೆ ಏರಿಕೆಯಾದರೆ, ಕಾಂಗ್ರೆಸ್ 23 ರಿಂದ 32 ಸ್ಥಾನಕ್ಕೆ ಏರಿಕೆಯಾಗಿದೆ.


2019ರಲ್ಲಿ ಕೇವಲ 3 ಸ್ಥಾನ ಪಡೆದಿದ್ದ ಟಿಡಿಪಿ ಈ ಬಾರಿ 11ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಡಿಎಂಕೆ ಫ್ರಂಟ್, ಈ ಬಾರಿ ತೃಪ್ತಿದಾಯಕ ಗೆಲುವಿಗೆ ಸಿದ್ಧವಾಗಿದೆ. 2019ರಲ್ಲಿ 38ಸ್ಥಾನ ಪಡೆದಿದ್ದ ಡಿಎಂಕೆ ಫ್ರಂಟ್ ಈ ಬಾರಿ 30ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ. ಪ್ರತಿಸ್ಪರ್ಧಿಯಾಗಿರುವ ಎಐಎಡಿಎಂಕೆ ಬಾರಿ ತನ್ನ ಸಂಖ್ಯೆಯನ್ನು ಒಂದರಿಂದ ಐದಕ್ಕೆ ಏರಿಸಲು ಸಿದ್ಧವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

ಈ ಬಾರಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೇರಿದಂತೆ ಇತರ ಪಕ್ಷಗಳು ಕುಸಿತ ಕಂಡಿವೆ.










ಪೂರ್ವ ವಲಯ: ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆ

ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್‌ನ 131 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 112 ಸ್ಥಾನಗಳನ್ನು ಗಳಿಸಲಿದೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ.


ಪೂರ್ವ ವಲಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಶ್ರಮಿಸುತ್ತಿರುವ ಕೇಸರಿ ಪಕ್ಷವು 2019 ರಲ್ಲಿ 86 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 112ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. 2019ರಲ್ಲಿ 9 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಐದಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.ಸಮೀಕ್ಷೆಯ ಉದ್ದೇಶಕ್ಕಾಗಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳನ್ನು ಪಶ್ಚಿಮ ವಲಯ ಎಂದು ವರ್ಗೀಕರಿಸಲಾಗಿದೆ.

ಪಶ್ಚಿಮ ವಲಯ: ಯಥಾಸ್ಥಿತಿ ಫಲಿತಾಂಶ

ಸಮೀಕ್ಷೆಯ ಉದ್ದೇಶಕ್ಕಾಗಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳನ್ನು ಪಶ್ಚಿಮ ವಲಯ ಎಂದು ವರ್ಗೀಕರಿಸಲಾಗಿದೆ.

ಇಲ್ಲಿ, ಯಾವುದೇ ಪಕ್ಷವು ಅಚ್ಚರಿಯ ಫಲಿತಾಂಶವನ್ನು ನೀಡುವಂತೆ ಕಾಣುತ್ತಿಲ್ಲ ಎಂದು ಫೆಡರಲ್ ಸಮೀಕ್ಷೆ ಹೇಳಿದೆ.

ಐದು ರಾಜ್ಯಗಳ 139 ಲೋಕಸಭಾ ಸ್ಥಾನಗಳ ಪೈಕಿ, ಬಿಜೆಪಿ 128 ಸ್ಥಾನಗಳನ್ನು ಗೆಲ್ಲಲು ಸಜ್ಜಾಗಿದೆ, ಕಾಂಗ್ರೆಸ್‌ನ 11 ಸ್ಥಾನ ಪಡೆಯುವ ಸಾಧ್ಯತೆ ಇದೆ. ಈ ಎಲ್ಲಾ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಮೀಕ್ಷೆಯ ಫಲಿತಾಂಶ ಆಶ್ಚರ್ಯವನ್ನುಂಟುಮಾಡುತ್ತವೆ.

ದೇಶದ ಒಟ್ಟು ಸ್ಥಾನಗಳ ಫಲಿತಾಂಶ ಇಂತಿದೆ...

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 364-370 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ. ಇತ್ತೀಚೆಗೆ ಮೋದಿಯವರು 370 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ..

ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳನ್ನು ಸೇರಿದಂತೆ ಒಟ್ಟು 400 ಸ್ಥಾನಗಳನ್ನು ತಲುಪುವ ಬಿಜೆಪಿಯ ಕನಸು ನನಸಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ 50-55 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಡಿಎಂಕೆ, ಟಿಎಂಸಿ, ಎಎಪಿ ಮತ್ತು ಎಸ್‌ಪಿಯಂತಹ ಅದರ ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳೊಂದಿಗೆ, ಅದು ಸುಮಾರು 90 ಸ್ಥಾನಗಳನ್ನು ಪಡೆಯಬಹುದು.

ಈ ಸಮೀಕ್ಷೆಯನ್ನು 2023ರ ಡಿಸೆಂಬರ್ನಿಂದ 2024ರ ಜನವರಿ ತಿಂಗಳ ನಡುವೆ ನಡೆಸಲಾಗಿದೆ. ಈ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಮುಖ ಘಟನೆಗಳು ನಡೆದಿವೆ. ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರಲ್ಲಿ ಶ್ರೀರಾಮ ಬಾಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರತಿಭಟನೆ ಹಾಗೂ ದೆಹಲಿ ಚಲೋ ರೈತರ ಆಂದೋಲನ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಹಲವು ವಿದ್ಯಾಮಾನ್ಯಗಳು ನಡೆದಿವೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಆಂದೋಲನ, ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಮೀಸಲಾತಿ ಹೋರಾಟ ಹಾಗೂ ಮರಾಠ ಮೀಸಲಾತಿ ಮಸೂದೆ ಮಂಡನೆ ಆಗಿದೆ. ಅಲ್ಲದೇ ರಾಷ್ಟ್ರ ರಾಜಕೀಯದಲ್ಲಿ ಹಾಗೂ ಇಂಡಿಯಾ ಮೈತ್ರಿ ಕೂಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿ(ಯು) ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮರಳಿ ಎನ್‌ಡಿಎ ಬಣಕ್ಕೆ ಸೇರಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸಹ ವಿವಿಧ ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳೊಂದಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುತ್ತಿದೆ.

ಈ ಅಂಶಗಳು ಮತದಾರನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿವೆ ಮತ್ತು ಅದರಲ್ಲೂ ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Read More
Next Story