ಬಿಜೆಪಿ ಸೇರುವುದಾಗಿ ಸುಮಲತಾ ಘೋಷಣೆ; ಎಚ್. ಡಿ ಕುಮಾರಸ್ವಾಮಿಗೆ ಬೆಂಬಲ !
x
ಸುಮಲತಾ ಅಂಬರೀಶ್‌

ಬಿಜೆಪಿ ಸೇರುವುದಾಗಿ ಸುಮಲತಾ ಘೋಷಣೆ; ಎಚ್. ಡಿ ಕುಮಾರಸ್ವಾಮಿಗೆ ಬೆಂಬಲ !

ಲೋಕಸಭೆ ಚುನಾವಣೆಯಲ್ಲಿ ಎನ್‌ ಡಿಎ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಗೆ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಘೋಷಿಸಿದ್ದಾರೆ.


ಮಹತ್ವದ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ, ಶೀಘ್ರವೇ ತಾವು ಬಿಜೆಪಿ ಸೇರುವುದಾಗಿಯೂ ಹೇಳಿದ್ದಾರೆ.

ಮಂಡ್ಯದಲ್ಲಿ ಬುಧವಾರ ನಡೆದ ಸುಮಲತಾ ಅಂಬರೀಶ್‌ ಅವರ ಬೆಂಬಲಿಗರ ಬಹಿರಂಗ ಸಭೆಯಲ್ಲಿ ಮಾತನಾಡಿದ ಸುಮಲತಾ, ಈ ನಿರ್ಧಾರ ಪ್ರಕಟಿಸಿದ್ದಾರೆ.

“ಸನ್ನಿವೇಶ ಬದಲಾಗಿ, ಈಗ ಪ್ರಬುದ್ಧವಾಗಿ ವರ್ತಿಸಬೇಕಿದ್ದು ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವುದಿಲ್ಲ” ಎಂದು ಮಂಡ್ಯ ಸಂಸದೆ ಸುಮಲತಾ ತಿಳಿಸಿದ್ದಾರೆ.

“ನಾನು ರಾಜಕೀಯ ಪ್ರವೇಶ ಮಾಡಿದ್ದು ಆಕಸ್ಮಿಕವಾಗಿ, ನನಗೆ ರಾಜಕೀಯ ಎನ್ನುವುದು ಎಂದಿಗೂ ಅನಿವಾರ್ಯವಲ್ಲ. ಮಂಡ್ಯ ಜನ ನನ್ನ ಮೇಲೆ ಇರಿಸಿದ ಅಭಿಮಾನ, ದಿ. ಅಂಬರೀಷ್ ಅವರ ಮೇಲಿನ ಅಭಿಮಾನ, ಪ್ರೀತಿ ಹಾಗೂ ಒತ್ತಾಯಕ್ಕೆ ಮಣಿದು ರಾಜಕೀಯ ಪ್ರವೇಶ ಮಾಡಿ ನಾನು ಸಂಸದೆಯಾಗಿ ಆಯ್ಕೆಯಾದೆ. ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವಾಗ ಹಾಗೂ ಆಯ್ಕೆಯಾದ ನಂತರ ಹಲವು ಸವಾಲು ಎದುರಿಸಿದ್ದೇನೆ. ಸವಾಲುಗಳ ನಡುವೆ ಮಂಡ್ಯ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದೇನೆ. ಆದರೆ, ಅದು ಸಮರ್ಪಕವಾಗಿ ಜನರನ್ನು ತಲುಪಿಲ್ಲ. ಪ್ರಚಾರ ಸಿಕ್ಕಿಲ್ಲ ಎಂದು ಸಂಸದೆ ಸುಮಲತಾ ಹೇಳಿದರು.

"ಮಂಡ್ಯ ಜಿಲ್ಲೆಯ ಮಳವಳ್ಳಿಯ ಹುಚ್ಚೇಗೌಡರ ಸೊಸೆಯಾಗಿ, ಅಂಬರೀಷ್ ಅವರ ಪತ್ನಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಬಗ್ಗೆ ನನಗೆ ಅಭಿಮಾನ ಹಾಗೂ ಹೆಮ್ಮೆ ಇದೆ. ಅವರು ಎಲ್ಲೇ ಇದ್ದರೂ, ನನ್ನ ಬೆನ್ನು ತಟ್ಟಿ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ, ನನಗೆ ಬಿಜೆಪಿ ನಾಯಕರು ಬೆಂಗಳೂರು ಉತ್ತರ, ಚಾಮರಾಜನಗರದಲ್ಲಿ ಸ್ಪರ್ಧಿಸುವಂತೆ ಕೇಳಿದ್ದರು. ಆದರೆ, ನಾನು ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ ಎಂದು ಹೇಳಿದ್ದೆ. ನಾನು ಸ್ವಾರ್ಥ ರಾಜಕಾರಣ ಮಾಡಲ್ಲ, ಅಧಿಕಾರಕ್ಕೆ ಅಂಟಿಕೊಂಡು ಕೂರುವುದೂ ಇಲ್ಲ. ಮಂಡ್ಯ ಕ್ಷೇತ್ರ ಹೊರತುಪಡಿಸಿ, ನನಗೆ ರಾಜಕೀಯ ಬೇಡ, ಹಠಕ್ಕೆ ಬಿದ್ದು ಸ್ವತಂತ್ರವಾಗಿ ನಿಲ್ಲುವುದೂ ನನಗೆ ಇಷ್ಟವಿಲ್ಲ. ಆ ರೀತಿ ಮಾಡಿದರೆ, ಮಂಡ್ಯ ಮಣ್ಣಿನ ಸೊಸೆ ಎಂದು ಕರೆಸಿಕೊಳ್ಳುವ ಯೋಗ್ಯತೆ ನನಗೆ ಇರುವುದಿಲ್ಲ" ಎಂದಿದ್ದಾರೆ.

"ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್‌ಗೂ ಸೇರ್ಪಡೆ ಆಗುವುದಿಲ್ಲ. ಜನ ಸಾಮಾನ್ಯರು ನೋಡುವ ರಾಜಕೀಯ ಬೇರೆ, ಒಳಗಿನ ರಾಜಕೀಯ ಬೇರೆ. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಯಾವ ರೀತಿ ಮಾತನಾಡಿದ್ದಾರೆ ಎಂದು ನೀವೆಲ್ಲ ನೋಡಿದ್ದೀರಿ, ಕೇಳಿದ್ದೀರಿ. ಕಾಂಗ್ರೆಸ್ ನವರೇ ಬೇಡ ಎಂದು ಹೇಳಿದ ಮೇಲೆ ನಾನು ಎಂದಿಗೂ ಅಲ್ಲಿಗೆ ಹೋಗುವುದಿಲ್ಲ. ಗೌರವ ಸಿಗದೆ ಇರುವ ಕಡೆ ನಾನು ಯಾಕೆ ಹೋಗಬೇಕು. ನನಗೆ ಮಂಡ್ಯ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಬಿಜೆಪಿ ಸಹಕಾರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ನನಗೆ ಗೌರವ ನೀಡಿದ್ದಾರೆ" ಎಂದಿದ್ದಾರೆ.

ಕುಮಾರಸ್ವಾಮಿ ಸಂಧಾನ ಯಶಸ್ವಿ

ಮಂಡ್ಯ ಲೋಕಸಭೆ ಚುನಾವಣೆಯ ಬಿಜೆಪಿ- ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ ಜೆಡಿಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಎಚ್‌.ಡಿ ಕುಮಾರಸ್ವಾಮಿ ಅವರು ಈಚೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದ್ದರು.

ಈ ವೇಳೆ ಏ, 3ರಂದು ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಅಂಬರೀಶ್‌ ಅವರು ಹೇಳಿದ್ದರು. ಇದೀಗ ಎಚ್‌.ಡಿ ಕುಮಾರಸ್ವಾಮಿ ಅವರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಸುಮಲತಾ ತಮ್ಮ ಮುಂದಿನ ನಡೆಯ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಒಂದು ಕಡೆ ಬಿಜೆಪಿ ಪಕ್ಚವನ್ನು ಸೇರುವುದಾಗಿ ಘೋಷಿಸಿರುವ ಅವರು, ಅದೇ ಹೊತ್ತಿಗೆ ಬಿಜೆಪಿ ಮಿತ್ರಪಕ್ಷ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಪರ ಪ್ರಚಾರ ಕಗೊಳ್ಳುವ ಮಾತನ್ನೂ ಆಡಿದ್ದಾರೆ.

Read More
Next Story