ಶಿವಮೊಗ್ಗ ಲೋಕಸಭಾ ಕ್ಷೇತ್ರ| ಬಿಜೆಪಿ ಅಭ್ಯರ್ಥಿ ಪಕ್ಕಾ, ಕಾಂಗ್ರೆಸ್ ಗೆ ಇನ್ನೂ ಸಿಕ್ಕಿಲ್ಲ ಲೆಕ್ಕ!
x

ಶಿವಮೊಗ್ಗ ಲೋಕಸಭಾ ಕ್ಷೇತ್ರ| ಬಿಜೆಪಿ ಅಭ್ಯರ್ಥಿ ಪಕ್ಕಾ, ಕಾಂಗ್ರೆಸ್ ಗೆ ಇನ್ನೂ ಸಿಕ್ಕಿಲ್ಲ ಲೆಕ್ಕ!


ಕಳೆದ ಒಂದೂವರೆ ದಶಕದಿಂದ ಬಿ ಎಸ್ ಯಡಿಯೂರಪ್ಪ ವರ್ಸಸ್ ದಿವಂಗತ ಎಸ್ ಬಂಗಾರಪ್ಪ ಕುಟುಂಬಗಳ ನಡುವಿನ ಕದನ ಭೂಮಿಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಈ ಬಾರಿ ಮತ್ತೊಮ್ಮೆ ರಾಜ್ಯದ ಎರಡು ಪ್ರತಿಷ್ಠಿತ ರಾಜಕೀಯ ಕುಟುಂಬಗಳ ನಡುವಿನ ಹಣಾಹಣಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಿದೆ.

2009ರಿಂದ ಈವರೆಗೆ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಈ ಬಾರಿ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಬಿಜೆಪಿ ಸಂಸದರಾಗಿ ಸತತ ಆಯ್ಕೆಯಾಗುತ್ತಿರುವ ಅವರಿಗೆ ಈ ಬಾರಿಯೂ ಪಕ್ಷದೊಳಗೆ ಟಿಕೆಟ್ ವಿಷಯದಲ್ಲಿ ಯಾವುದೇ ಪೈಪೋಟಿ ಇಲ್ಲ. ಜೊತೆಗೆ ಯಾವುದೇ ಹಗರಣವಾಗಲೀ, ಕಳಂಕವಾಗಲೀ ಸುತ್ತಿಕೊಂಡಿಲ್ಲ. ಅಲ್ಲದೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಸಜ್ಜನಿಕೆ ಅವರ ಪ್ಲಸ್ ಪಾಯಿಂಟ್. ಹಾಗಾಗಿ ಅವರಿಗೇ ಈ ಬಾರಿಯೂ ಬಿಜೆಪಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿದ್ದು, ನಾಲ್ಕನೇ ಬಾರಿಗೆ ಕಣಕ್ಕಿಳಿಯುವುದು ಬಹುತೇಕ ಶತಸಿದ್ಧ ಎಂಬ ವಿಶ್ವಾಸ ರಾಘವೇಂದ್ರ ಅವರಲ್ಲಿದೆ.

ಆದರೆ, ಎದುರಾಳಿ ಪಾಳೆಯ ಕಾಂಗ್ರೆಸ್ನಲ್ಲಿ ಇನ್ನೂ ಚಿತ್ರಣ ಸ್ಪಷ್ಟವಾಗಿಲ್ಲ. ಕಳೆದ ಎರಡು ಚುನಾವಣೆಯಲ್ಲಿ(ಉಪ ಚುನಾವಣೆ ಸೇರಿ) ಅಭ್ಯರ್ಥಿಯನ್ನೇ ಹಾಕದೆ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದ ಕಾಂಗ್ರೆಸ್, ಈ ಬಾರಿ ಬಿಜೆಪಿ ಜನಪ್ರಿಯ ಅಭ್ಯರ್ಥಿಯ ಎದುರು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. 1999ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಎಸ್ ಬಂಗಾರಪ್ಪ ಜಯಗಳಿಸಿದ ಬಳಿಕ ಕಾಂಗ್ರೆಸ್ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಸೋಲುಂಡಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ತಂತ್ರ ಹೆಣೆಯುತ್ತಿದೆ. ಆದರೆ, ಆ ಗುರಿ ತಲುಪಲು ದೊಡ್ಡ ಸವಾಲಾಗಿರುವ ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಕ್ಷೇತ್ರ ಕೂಡ ಒಂದು. ಹಾಗಾಗಿ ಕಾಂಗ್ರೆಸ್ಸಿಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ೨೫ ವರ್ಷಗಳ ಬಳಿಕ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕೈ ಮುಂದಿದೆ ಭಾರೀ ಸವಾಲು

ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಳೆದ ೧೫ ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಅದರಲ್ಲೂ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬದ ಬಿಗಿ ಹಿಡಿತ ಇದೆ. ಬಿಜೆಪಿಯ ಮತೀಯ ಧ್ರುವೀಕರಣದ ಪ್ರಯೋಗಶಾಲೆಯಾಗಿ ಕ್ಷೇತ್ರ ಕಳೆದ ಎರಡೂವರೆ ಮೂರು ದಶಕದಿಂದ ಪಳಗಿದೆ.

ಅದೆಲ್ಲಕ್ಕಿಂತ ಮುಖ್ಯವಾಗಿ ಬಿ ವೈ ರಾಘವೇಂದ್ರ ಅವರು ಸಂಸದರಾಗಿ ಕಳೆದ ಎರಡು ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳು, ಅಭಿವೃದ್ಧಿ ಯೋಜನೆಗಳು ಕ್ಷೇತ್ರದ ಚಿತ್ರಣ ಬದಲಿಸಿವೆ. ಜೊತೆಗೆ ಯಾವುದೇ ವಿವಾದಗಳಾಗಲೀ, ಹಗರಣಗಳನ್ನಾಗಲೀ ಅಂಟಿಸಿಕೊಳ್ಳದೆ, ಪಕ್ಷ, ಸಿದ್ಧಾಂತವೆಂದು ನೋಡದೆ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಮತ್ತು ಸ್ನೇಹ ಹೊಂದಿರುವ ರಾಘವೇಂದ್ರ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಸಂಘಪರಿವಾರ, ಬಿಜೆಪಿಯ ಸೇರಿದಂತೆ ಪಕ್ಷ, ಸಿದ್ಧಾಂತವನ್ನು ಮೀರಿ ತಮಗಾಗಿ ಕೆಲಸ ಮಾಡುವ ಯುವ ಪಡೆಯನ್ನು ಕ್ಷೇತ್ರದುದ್ದಕ್ಕೂ ಕಟ್ಟಿಕೊಂಡಿದ್ದಾರೆ.

ಒಂದು ಕಡೆ ಪ್ರಭಾವಿ ಪಕ್ಷದ ಸಂಘಟನೆಯ ಬಲ, ಮತ್ತೊಂದು ಕಡೆ ವೈಯಕ್ತಿಕ ವರ್ಚಸ್ಸಿನ ಜನಪ್ರಿಯತೆ ರಾಘವೇಂದ್ರ ಅವರ ಬೆನ್ನಿಗಿದೆ. ಹಾಗಾಗಿ ಕಾಂಗ್ರೆಸ್ ಗೆ ರಾಜ್ಯದಲ್ಲೇ ಅತಿ ಕಠಿಣ ಸವಾಲು ಇರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಪ್ರಮುಖ.


ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ

ಕಳೆದ ಎರಡು ಚುನಾವಣೆಗಳಲ್ಲಿ ಕ್ಷೇತ್ರವನ್ನು ಅಂದಿನ ತನ್ನ ಮಿತ್ರಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದರ ಪರಿಣಾಮವಾಗಿ ಕಾಂಗ್ರೆಸ್ ಈ ಬಾರಿ ಅಭ್ಯರ್ಥಿಗಾಗಿ ಹುಡುಕಾಡುವ ಪರಿಸ್ಥಿತಿ ಬಂದಿದೆ. ಎಸ್ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂಥ ಘಟಾನುಘಟಿ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದ ಬಳಿಕ, ಸದ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಕಿಮ್ಮನೆ ರತ್ನಾಕರ್ ಅವರುಗಳೇ ಹಿರಿಯರು. ಮಧು ಬಂಗಾರಪ್ಪ ಪಕ್ಷಕ್ಕೆ ಕಾಲಿಟ್ಟು ಕೇವಲ ಎರಡು ವರ್ಷವಷ್ಟೇ ಕಳೆದಿದೆ. ಕಿಮ್ಮನೆ ರತ್ನಾಕರ್ ತಮ್ಮ ಎಂದಿನ ಶೈಲಿಯಲ್ಲಿ ತಮ್ಮೆಲ್ಲಾ ರಾಜಕೀಯ ಚಟುವಟಿಕೆಗಳನ್ನು ತೀರ್ಥಹಳ್ಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ.

ಆದರೆ, ಎಸ್ ಬಂಗಾರಪ್ಪ ಅವರ ಮಕ್ಕಳ ಹೆಸರುಗಳೇ ಸದ್ಯ ಜೋರಾಗಿ ಕೇಳಿಬರುತ್ತಿವೆ. ಕೆಲವು ತಿಂಗಳ ಹಿಂದೆ 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೀತಾ ಶಿವರಾಜ್ ಕುಮಾರ್ ಹೆಸರು ಸದ್ದು ಮಾಡುತ್ತಿತ್ತು. ಆದರೆ, ಕಳೆದ ಬಾರಿ ಸೋತು ಬೆಂಗಳೂರಿಗೆ ಹೋದ ಗೀತಾ, ಮತ್ತೆ ಶಿವಮೊಗ್ಗದ ಕಡೆ ತಲೆ ಹಾಕಿದ್ದೇ ವಿರಳ. ಜೊತೆಗೆ ಕಳೆದ ಬಾರಿಯೇ ಮೂರನೇ ಸ್ಥಾನಕ್ಕೆ ಕುಸಿದಿದ್ದ ಅವರು ಕಣಕ್ಕಿಳಿದರೆ ಬಿ ವೈ ರಾಘವೇಂದ್ರ ಪಾಲಿಗೆ ಕ್ಷೇತ್ರ ಸುಲಭ ತುತ್ತಾಗಲಿದೆ ಎಂಬುದು ಕ್ಷೇತ್ರದಲ್ಲಿ ಜನಜನಿತ ಅಭಿಪ್ರಾಯವಾಗಿತ್ತು. ಆ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಸಮೀಕ್ಷೆಯ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ. ಈಗಾಗಲೇ ಮಧು ಅವರೊಂದಿಗೆ ವರಿಷ್ಠರು ಆ ಬಗ್ಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂಬುದು ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಮಧು ಈಗಾಗಲೇ ಎರಡು ಬಾರಿ (2018 ರ ಉಪಚುನಾವಣೆ ಮತ್ತು 2019) ಬಿ ವೈ ರಾಘವೇಂದ್ರ ವಿರುದ್ಧ ಸೆಣೆಸಿ ಸೋತಿದ್ದರೂ, ಈ ಬಾರಿ ಕಾಂಗ್ರೆಸ್‌ ಮತಬ್ಯಾಂಕ್‌ ಮತ್ತು ವೈಯಕ್ತಿಕ ವರ್ಚಸ್ಸಿನ ಮೇಲೆ ಗೆಲ್ಲಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಕಣಕ್ಕಿಳಿಯುವರೇ ಕುಮಾರ್ ಬಂಗಾರಪ್ಪ?

ಈ ನಡುವೆ, ಬಿಜೆಪಿಯಲ್ಲಿ ತಮಗೆ ಅವಕಾಶವಿಲ್ಲ ಎಂಬ ಅಸಮಾಧಾನದಲ್ಲಿರುವ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಸೆಳೆದು ಲೋಕಸಭಾ ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎಂಬ ಸಂಗತಿ ಕೂಡ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಮಧು ಬಂಗಾರಪ್ಪ ಈಗಿರುವ ಉತ್ತಮ ಖಾತೆಯನ್ನು ಬಿಟ್ಟು ಲೋಕಸಭಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಅವರ ಬದಲಿಗೆ ಬಂಗಾರಪ್ಪ ಕುಟುಂಬದ ಹಿರಿಯ ಮಗ ಕುಮಾರ್ ಅವರನ್ನು ಕಣಕ್ಕಿಳಿಸಿ, ಅವರ ಸಿನಿಮಾ ಗ್ಲಾಮರ್, ಸಜ್ಜನಿಕೆಯ ರಾಜಕಾರಣದ ನಡವಳಿಕೆಯ ಲಾಭ ಪಡೆದು ಬಂಗಾರಪ್ಪ ಕುಟುಂಬದ ಭಾವನಾತ್ಮಕ ಅಂಶವನ್ನು ಮುಂದಿಟ್ಟು ಮತದಾರರನ್ನು ಮನವೊಲಿಸಬಹುದು. ವಿಶೇಷವಾಗಿ ಬಂಗಾರಪ್ಪ ಅವರಿಗೆ ಇಳಿಗಾಲದಲ್ಲಿ ಯಡಿಯೂರಪ್ಪ ಕುಟುಂಬ ಸೋಲುಣಿಸಿತು, ಬಂಗಾರಪ್ಪ ಪುತ್ರರ ಮೂಲಕವೇ ಆ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂಬ ಭಾವನಾತ್ಮಕ ಅಂಶವನ್ನು ಬಹುಸಂಖ್ಯಾತ ಈಡಿಗ ಸಮುದಾಯದಲ್ಲಿ ಬಿತ್ತುವ ತಂತ್ರ ಪಕ್ಷದ್ದು ಎನ್ನಲಾಗುತ್ತಿದೆ.

ಆದರೆ, ಈ ಬಗ್ಗೆ ಕುಮಾರ್ ಬಂಗಾರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೊರಬ ಕ್ಷೇತ್ರದಿಂದ ತಮ್ಮ ಸಹೋದರ ಮಧು ಎದುರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಅವರು ಬಹುತೇಕ ಬಿಜೆಪಿಯ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವ ಅವರು ಆ ನಂಟಿನ ಮೂಲಕ ಕಾಂಗ್ರೆಸ್ ಗೆ ಪ್ರವೇಶ ಪಡೆಯಬಹುದು ಎನ್ನಲಾಗುತ್ತಿದೆ. ಆದರೆ, ಸಹೋದರ ಕಲಹ ಇನ್ನೂ ತಣ್ಣಗಾಗಿಲ್ಲ. ಮಧು ಬಂಗಾರಪ್ಪ ಅವರು ತಮ್ಮ ಅಣ್ಣ ಕುಮಾರ್ ಅವರು ಕಾಂಗ್ರೆಸ್ಗೆ ಬರುವುದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದ್ದಾರೆ ಎಂಬ ಮಾತುಗಳೂ ಇವೆ. ಆದರೆ, ಅಂತಿಮವಾಗಿ ಇಬ್ಬರೂ ಸಹೋದರರನ್ನು ಮನವೊಲಿಸಿ, ಪಕ್ಷ ಕೊನೆ ಕ್ಷಣದಲ್ಲಿ ಕುಮಾರ್ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ.


ಬಂಗಾರಪ್ಪ ಕುಟುಂಬದ ಕುಡಿಯೇ ಅಂತಿಮ?

ಬಂಗಾರಪ್ಪ ಕುಟುಂಬ ಹೊರತುಪಡಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಆಯನೂರು ಮಂಜುನಾಥ್, ಬೇಳೂರು ಗೋಪಾಲಕೃಷ್ಣ, ಕಿಮ್ಮನೆ ರತ್ನಾಕರ್ ಅವರ ಹೆಸರುಗಳೂ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿವೆ. ಆದರೆ, ಬಹುತೇಕ ಬಂಗಾರಪ್ಪ ಕುಟುಂಬದ ಕುಡಿಯೇ ಕಣಕ್ಕಿಳಿಯಲಿದೆ ಮತ್ತು ಅದರಲ್ಲೂ ಅವರಿಬ್ಬರು ಪುತ್ರರಲ್ಲೇ ಒಬ್ಬರು ಅಂತಿಮವಾಗಿ ಕಣದಲ್ಲಿರುತ್ತಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ನಿಖರವಾಗಿ ಕೇಳಿಬರುತ್ತಿರುವ ಅಭಿಪ್ರಾಯ.

ಆದರೆ, ಸದ್ಯದ ಕ್ಷೇತ್ರದ ಜನಾಭಿಪ್ರಾಯದಲ್ಲಿ ಮಧು ಅಥವಾ ಕುಮಾರ್ ಅವರಲ್ಲಿ ಯಾರೇ ನಿಂತರೂ ತುರುಸಿನ ಪೈಪೋಟಿ ಉಂಟಾಗಲಿದೆ. ಇನ್ನು ಉಳಿದಂತೆ ಯಾವುದೇ ಅಭ್ಯರ್ಥಿ ನಿಂತರೂ ಬಿಜೆಪಿಯ ರಾಘವೇಂದ್ರ ಅವರಿಗೆ ಗೆಲುವು ಸಲೀಸಾಗಲಿದೆ.

ಕ್ಷೇತ್ರದಲ್ಲಿ ಪಕ್ಷಗಳ ಬಲಾಬಲ

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಆ ಪೈಕಿ ಬೈಂದೂರು, ತೀರ್ಥಹಳ್ಳಿ, ಶಿವಮೊಗ್ಗ ನಗರ ಮತ್ತು ಶಿಕಾರಿಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಾಗರ, ಸೊರಬ, ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕಿ ಇದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮೇಲೆ ಈ ಬಾರಿ ಚುನಾವಣೆ ಎದುರಿಸುವುದರಿಂದ ವಿಧಾನಸಭಾ ಕ್ಷೇತ್ರವಾರು ಬಲಾಬಲದ ಪ್ರಕಾರ ಬಿಜೆಪಿ ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿದೆ. ಆದರೆ, ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಮತ್ತು ಬಂಗಾರಪ್ಪ ಕುಟುಂಬದ ವರ್ಚಸ್ಸಿನ ಜೊತೆಗೆ ಈಡಿಗ ಸಮುದಾಯದ ಮತಗಳನ್ನು ಸೆಳೆಯುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.

Read More
Next Story