ತಮಿಳುನಾಡು: ಎಐಎಡಿಎಂಕೆ-ಬಿಜೆಪಿ ನಡುವೆ ಸ್ಪರ್ಧೆ
ಅಣ್ಣಾಮಲೈ ಅವರಿಗೆ ಐತಿಹಾಸಿಕ ಜ್ಞಾನವಿಲ್ಲ-ಟೀಕೆ
ತಮಿಳುನಾಡಿನಲ್ಲಿ ಮೊದಲ ಹಂತದ ಮತ ಚಲಾವಣೆಗೆ ದಿನಗಣನೆ ಆರಂಭವಾಗಿದೆ. ಇತ್ತೀಚೆಗೆ ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ಸ್ಪರ್ಧೆ ತೀವ್ರಗೊಂಡಿದ್ದು, ಕೇಸರಿ ಪಕ್ಷವು ಎಐಎಡಿಎಂಕೆಯ ಉತ್ತರಾಧಿಕಾರಿ ಪ್ರಶ್ನೆಯನ್ನು ಪುನರುಜ್ಜೀವಗೊಳಿಸಲು ಪ್ರಯತ್ನಿಸುತ್ತಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ವಿವಾದಾತ್ಮಕ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ನ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಪರ ಥೇಣಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಅಣ್ಣಾಮಲೈ, ಜೂನ್ 4 ರಂದು ಫಲಿತಾಂಶ ಹೊರಬಿದ್ದ ನಂತರ ಎಐಎಡಿಎಂಕೆ ಕಾರ್ಯಕರ್ತರು ದಿನಕರನ್ ಕಡೆಗೆ ತಮ್ಮ ನಿಷ್ಠೆ ಮರುಸ್ಥಾಪಿಸಬಹುದು ಎಂದು ಸಲಹೆ ನೀಡಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ನಿಕಟವರ್ತಿ ವಿ.ಕೆ. ಶಶಿಕಲಾ, ದಿನಕರನ್ ಅವರ ಚಿಕ್ಕಮ್ಮ.
ಉತ್ತರಾಧಿಕಾರಿ ಪ್ರಶ್ನೆ: ಚುನಾವಣೆ ನಂತರ ಎಐಎಡಿಎಂಕೆ ಅಂತ್ಯಗೊಳ್ಳಲಿದೆ ಎಂದು ʻಪುತಿಯತಲೈಮುರೈʼ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ ಅಣ್ಣಾಮಲೈ , ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಬಣ ವಿಸರ್ಜನೆಯಾಗಲಿದೆ ಮತ್ತು ಅದರ ಸದಸ್ಯರು ದಿನಕರನ್ ಅವರ ಪಕ್ಷ ಸೇರುತ್ತಾರೆ ಎಂದು ಹೇಳಿದ್ದರು.
ರಾಮನಾಥಪುರಂ ಕ್ಷೇತ್ರದಲ್ಲಿ ಎಐಎಡಿಎಂಕೆ ಭಿನ್ನಮತೀಯ ನಾಯಕ ಓ. ಪನ್ನೀರ್ ಸೆಲ್ವಂ ಪರ ಪ್ರಚಾರ ನಡೆಸಿದ ಅಣ್ಣಾಮಲೈ, ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರು ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರ ಉಚ್ಚಾಟಿಸಿದ್ದು ಮೊದಲ ರಾಜಕೀಯ ದ್ರೋಹವಾದರೆ, ಎಐಎಡಿಎಂಕೆಯಿಂದ ಒಪಿಎಸ್ ಅವರ ನಿರ್ಗಮನ ಎರಡನೇ ರಾಜಕೀಯ ದ್ರೋಹ ಕೃತ್ಯ ಎಂದು ಹೇಳಿದ್ದರು.
ʻಜೂನ್ 4 ರ ನಂತರ ತಮಿಳುನಾಡು ಒಪಿಎಸ್ ಅವರ ವಿಶ್ವರೂಪಕ್ಕೆ ಸಾಕ್ಷಿಯಾಗಲಿದೆ. ಅಮ್ಮ (ಜಯಲಲಿತಾ) ನಂಬಿಕೆಯನ್ನು ಇಟ್ಟಿರುವ ನಿಜವಾದ ನಾಯಕ ಯಾರು ಎಂದು ಜನರಿಗೆ ತಿಳಿದಿದೆʼ ಎಂದು ಹೇಳಿದರು.
ಎರಡೂ ಸಭೆಗಳಲ್ಲಿ ಅಣ್ಣಾಮಲೈ ಅವರು ಜಯಲಲಿತಾ ಅವರನ್ನು ʻಅಮ್ಮʼ ಎಂದು ಕರೆದರು. ಈ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ʻಜಯಲಲಿತಾ ಅವರು ಭ್ರಷ್ಟಾಚಾರಕ್ಕಾಗಿ ಶಿಕ್ಷೆ ಅನುಭವಿಸಿದ ನಾಯಕಿʼ ಎಂದು ಹೇಳಿದ್ದನ್ನು ಸ್ಮರಿಸಬಹುದು. ಇದು ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಲು ಕಾರಣವಾದ ಅಂಶಗಳಲ್ಲಿ ಒಂದು.
ಒಪಿಎಸ್ ಮತ್ತು ದಿನಕರನ್ ಮೈತ್ರಿ: ಎಡಪ್ಪಾಡಿ ಪಳನಿಸ್ವಾಮಿ ಅವರು ಮೈತ್ರಿಯ ಬಾಗಿಲು ಮುಚ್ಚಿದ ನಂತರ ಒಪಿಎಸ್ ಮತ್ತು ದಿನಕರನ್ ಅವರೊಂದಿಗೆ ಕೂಡಾವಳಿ ಮಾಡಿಕೊಳ್ಳಲು ಬಿಜೆಪಿ ಮುಂದಾಯಿತು.
ಎಐಎಡಿಎಂಕೆಯಲ್ಲಿ ಇಬ್ಬರು ನಾಯಕರಿಗೂ ಸ್ಥಾನವಿಲ್ಲ ಎಂದು ಪಳನಿಸ್ವಾಮಿ ನಿರ್ಧರಿಸುವ ಮೊದಲು, ಒಪಿಎಸ್ ಮತ್ತು ದಿನಕರನ್ ನಡುವೆ ಭಿನ್ನಾಭಿಪ್ರಾಯಗಳಿದ್ದವು.ಒಪಿಎಸ್ ಅವರ ಆರಂಭಿಕ ಭಿನ್ನಾಭಿಪ್ರಾಯ ಶಶಿಕಲಾ ಬಗ್ಗೆ ಇದ್ದಿತ್ತು. ಜಯಲಲಿತಾ ನಿಧನದ ನಂತರ ಒಪಿಎಸ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಹೊಂದಿದ್ದರು.
ಆದರೆ, ಪಳನಿಸ್ವಾಮಿ ಪಕ್ಷದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡರು ಮತ್ತು ಎರಡು ಎಲೆಗಳ ಚಿಹ್ನೆ ಉಳಿಸಿಕೊಂಡರು. ಒಪಿಎಸ್ ಮತ್ತು ದಿನಕರನ್ ಸಾಮಾನ್ಯ ನೆಲೆ ಕಂಡುಕೊಂಡರು.
ಶಶಿಕಲಾ ಅನಿಶ್ಚಿತತೆ: ಏತನ್ಮಧ್ಯೆ, ಶಶಿಕಲಾ ಅವರ ಅನಿಶ್ಚಿತತೆ ಮುಂದುವರಿದಿದೆ. ಸೋದರಳಿಯ ದಿನಕರನ್ ಪರ ಪ್ರಚಾರ ಮಾಡುವುದನ್ನುಬಿಟ್ಟು, ಮೌನ ತಳೆದಿದ್ದಾರೆ. ʻಎಐಎಡಿಎಂಕೆಯನ್ನು ಮುನ್ನಡೆಸಲು ಜಯಲಲಿತಾ ಮತ್ತು ಶಶಿಕಲಾ ಅವರ ಸಾಮೀಪ್ಯ ಹೊಂದಿದ್ದ ದಿನಕರನ್ ಅವರು ಸೂಕ್ತರು ಎಂದು ಅಣ್ಣಾಮಲೈ ಸೂಚಿಸುತ್ತಿದ್ದು, ವಾಸ್ತವವೆಂದಲ್ಲಿ, ಶಶಿಕಲಾ ಅವರೇ ಆ ಪಾತ್ರಕ್ಕೆ ಹೆಚ್ಚು ಸೂಕ್ತರುʼ ಎಂದು ಅವರ ಆಪ್ತರು ಹೇಳುತ್ತಾರೆ . ʻಅವರು ಜಯಲಲಿತಾ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು ಮತ್ತು ಜಯಲಲಿತಾ ಅವರ ಜೀವಿತಾವಧಿಯಲ್ಲಿ ಪಕ್ಷದಲ್ಲಿ ಗಣನೀಯ ಪ್ರಭಾವ ಹೊಂದಿದ್ದರು.ʼ
ಜಯಲಲಿತಾ ಅವರೊಂದಿಗೆ ಜೀವನದ ಮಹತ್ವದ ಭಾಗವನ್ನು ಕಳೆದಿರುವ ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ಶಶಿಕಲಾ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಜಯಲಲಿತಾ ಅವರ ಮರಣದ ನಂತರ ಅವರ ಮನೆ, ವೇದಾ ನಿಲಯವನ್ನು ಅವರ ಸೋದರ ಸೊಸೆ ಜೆ. ದೀಪಾ ಮತ್ತು ಸೋದರಳಿಯ ದೀಪಕ್ ಅವರಿಗೆ ಹಸ್ತಾಂತರಿಸಲಾಯಿತು. ಶಶಿಕಲಾ ಅವರ ಹೊಸ ಮನೆಯು ವೇದ ನಿಲಯದ ಎದುರು ಇದೆ.
ಒಪಿಎಸ್-ದಿನಕರನ್ ಅವರ ನಿರೂಪಣೆಗೆ ಪ್ರತಿಕ್ರಿಯಿಸಲು ಎಡಪ್ಪಾಡಿ ಪಳನಿಸ್ವಾಮಿ ಅವರು ಶಶಿಕಲಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಎಂದು ವದಂತಿಗಳಿವೆ. ಆದರೆ, ಶಶಿಕಲಾ ಇದಕ್ಕೆ ಪ್ರತಿಕ್ರಿಯಿಸಿಲ್ಲ. ʻಚುನಾವಣೆ ನಂತರ ರಾಜಿ ಮಾಡಿಕೊಳ್ಳುವ ಸಾಧ್ಯತೆಯಿದೆʼ ಎಂದು ಹೇಳಲಾಗಿದೆ.
ಬಿಜೆಪಿಯ ಜಾತಿ ಲೆಕ್ಕಾಚಾರ: ದಕ್ಷಿಣ ತಮಿಳುನಾಡಿನಲ್ಲಿ ಮುಕ್ಕುಲತ್ತೋರ್ ಸಮುದಾಯದ ಮತಗಳಿಗಾಗಿ ಬಿಜೆಪಿಯು ಒಪಿಎಸ್-ದಿನಕರನ್ ಜೋಡಿಯನ್ನು ಅವಲಂಬಿಸಿದೆ. ಎಐಎಡಿಎಂಕೆಯನ್ನು ಮುಕ್ಕುಲತ್ತೋರ್ ಸಮುದಾಯ ಬೆಂಬಲಿಸಿದೆ. ಶಶಿಕಲಾ ಪ್ರಭಾವ ಇದಕ್ಕೆ ಕಾರಣ. ಪಳನಿಸ್ವಾಮಿ ಅವರು ನಾಯಕತ್ವ ವಹಿಸಿಕೊಂಡ ನಂತರ ಗ್ರಹಿಕೆಯಲ್ಲಿ ಪಲ್ಲಟ ಕಂಡುಬಂದಿದೆ. ಪಕ್ಷವನ್ನು ಗೌಂಡರ್ ಪಕ್ಷ ಎಂದು ಪರಿಗಣಿಸಲಾಗುತ್ತಿ ದೆ. ಇದು ಪಳನಿಸ್ವಾಮಿ ಅವರ ಸಮುದಾಯದ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಮುಕ್ಕುಲತ್ತೋರ್ ಬೆಂಬಲ ಮರಳಿ ಪಡೆಯಲು ಪಳನಿಸ್ವಾಮಿ ನಡೆಸಿದ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶ ನೀಡಲಿಲ್ಲ. ಶಶಿಕಲಾ ಅವರ ಬೆಂಬಲದಿಂದ ಎಐಎಡಿಎಂಕೆ ಸ್ಥಾನ ಬಲಗೊಳ್ಳುತ್ತದೆ.
ಎಐಎಡಿಎಂಕೆಯ ಸ್ಥಿತಿಸ್ಥಾಪಕತ್ವ: ಅಣ್ಣಾಮಲೈ ಅವರ ಹೇಳಿಕೆ ರಾಜಕೀಯ ಅಪ್ರಬುದ್ಧತೆಯನ್ನು ಮತ್ತು ತಮಿಳುನಾಡಿನ ರಾಜಕೀಯದ ಬಗ್ಗೆ ತಿಳಿವಳಿಕೆಯ ಕೊರತೆಯನ್ನು ಬಹಿರಂಗಪಡಿಸುತ್ತದೆ ಎಂದು ಹಿರಿಯ ಪತ್ರಕರ್ತ ದುರೈ ಕರುಣಾ ಹೇಳುತ್ತಾರೆ. ʻಚುನಾವಣೆಯಲ್ಲಿ ಎಐಎಡಿಎಂಕೆಗೆ ಹಿನ್ನಡೆಯಾದರೆ, ರಾಜಿ ಅನಿವಾರ್ಯವಾಗಬಹುದುʼ ಎಂದು ಅವರು ಹೇಳುತ್ತಾರೆ.
ʻಎಐಎಡಿಎಂಕೆ ಹುಟ್ಟು, ಬೆಳವಣಿಗೆ, ಎಂಜಿಆರ್ ಮತ್ತು ಜಯಲಲಿತಾ ಬಗ್ಗೆ ಅಣ್ಣಾಮಲೈ ಅವರಿಗೆ ಏನಾದರೂ ಸುಳಿವು ಇದೆಯೇ ಎಂದು ನಾನು ಆಶ್ಚರ್ಯಪಡುತ್ತೇನೆ. ಅಂತಹ ನಾಯಕರಿದ್ದರೂ, ಎಐಎಡಿಎಂಕೆ ಯಾವಾಗಲೂ ಕಾರ್ಯಕರ್ತರನ್ನು ಆಧರಿಸಿದ ಪಕ್ಷʼ ಎಂದು ದುರೈ ಹೇಳಿದರು.
ಸಾಂಸ್ಥಿಕ ರಚನೆ: ಎಐಎಡಿಎಂಕೆಯ ಸಾಂಸ್ಥಿಕ ರಚನೆಯು ತಳಮಟ್ಟದ ಘಟಕಗಳಿಂದ ರಾಜ್ಯ ಮಟ್ಟದ ನಾಯಕತ್ವದವರೆಗೆ ವ್ಯಾಪಿಸಿದೆ. ಬಿಜೆಪಿಯ ಒಟ್ಟು ಸದಸ್ಯತ್ವದ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚುಸದಸ್ಯರು ಇದ್ದಾರೆ. ಎಐಎಡಿಎಂಕೆಯ ಮತದಾರರು ಬಿಜೆಪಿಗಿಂತ 15 ಪಟ್ಟು ಹೆಚ್ಚುʼ ಎಂದು ದುರೈ ಹೇಳಿದರು.
ʻಎಂಜಿಆರ್ ನಿಧನದ ಬಳಿಕ ಜಯಲಲಿತಾ ಮತ್ತು ಜಾನಕಿ ರಾಮಚಂದ್ರನ್ ನೇತೃತ್ವದ ಬಣಗಳು 1989 ರ ಚುನಾವಣೆ ನಂತರ ವಿಲೀನಗೊಂಡವು. ಈ ಚುನಾವಣೆಯ ನಂತರವೂ ಅಂತಹ ಪ್ರಯತ್ನ ನಡೆಯುವ ಸಾಧ್ಯತೆಗಳಿವೆʼ ಎಂದರು.ಆದರೆ, ಅಣ್ಣಾಮಲೈ ಸೂಚಿಸಿದಂತೆ ಕಾರ್ಯಕರ್ತರು ಒಪಿಎಸ್ ಮತ್ತು ಟಿಟಿವಿಯನ್ನು ಸ್ವಯಂಚಾಲಿತವಾಗಿ ಬೆಂಬಲಿಸುತ್ತಾರೆ ಎಂದು ಭಾವಿಸಬಾರದು ಎಂದು ಹೇಳಿದರು.
ಎಐಎಡಿಎಂಕೆ ತೊಲಗಿಸಲು ಬಿಜೆಪಿ ಯತ್ನ: ʻಎಐಎಡಿಎಂಕೆ ಕಾರ್ಯಕರ್ತರು ಡಿಎಂಕೆಯನ್ನು ಸಮರ್ಥವಾಗಿ ಎದುರಿಸುವ ಮತ್ತು ಬಿಜೆಪಿಯ ಪ್ರಗತಿಯನ್ನು ತಡೆಯುವ ಸಾಮರ್ಥ್ಯವಿರುವ ನಾಯಕನನ್ನು ಹುಡುಕುತ್ತಿದ್ದಾರೆ. ಕಳಗಮ್ (ಎಐಎಡಿಎಂಕೆ ಮತ್ತು ಡಿಎಂಕೆ) ರಹಿತ ತಮಿಳುನಾಡಿನ ಬಗ್ಗೆ ಬಿಜೆಪಿ ಹೇಳಿದ್ದು ನೆನಪಿದೆಯೇ? ಎಐಎಡಿಎಂಕೆಗೆ ಬಿಜೆಪಿ ಮಾಡುತ್ತಿರುವುದು ದೃತರಾಷ್ಟ್ರ ಆಲಿಂಗನʼ ಎಂದು ಕರುಣಾ ಹೇಳಿದರು.ʻಬಿಜೆಪಿಯು ಎಐಎಡಿಎಂಕೆಯ ಒಂದು ಬಣವನ್ನು ಇತರರ ವಿರುದ್ಧ ಎತ್ತಿ ಕಟ್ಟುವ ಗುರಿ ಹೊಂದಿದೆ. ಆಂತರಿಕ ಕಲಹದ ಮೂಲಕ ಎಐಎಡಿಎಂಕೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆದರೆ, ಅಂತಹ ತಂತ್ರ ತಮಿಳುನಾಡಿನಲ್ಲಿ ಕೆಲಸ ಮಾಡುವ ಸಾಧ್ಯತೆಯಿಲ್ಲʼ ಎಂದು ಹೇಳಿದರು.
'ಪ್ರಚಾರಪ್ರಿಯ, ವಿದೂಷಕ': ಎಐಎಡಿಎಂಕೆ ನಾಯಕರು ಅಣ್ಣಾಮಲೈ ಅವರನ್ನು 'ಪ್ರಚಾರಪ್ರೇಮಿ', 'ಗಮನಕ್ಕಾಗಿ ಪ್ರಯತ್ನಿಸುವವನು' ಮತ್ತು 'ವಿದೂಷಕ' ಎಂದು ಟೀಕಿಸಿವೆ. ʻಅಣ್ಣಾಮಲೈ ಡೆಪ್ಯುಟೇಶನ್ ಮೇಲೆ ರಾಜಕೀಯಕ್ಕೆ ಬಂದಿದ್ದಾರೆ. ಈ ಹಿಂದೆ ಅನೇಕರು ಎಐಎಡಿಎಂಕೆ ತೊರೆದಿದ್ದಾರೆ; ಆನಂತರ ಅಜ್ಞಾತವಾಗಿದ್ದಾರೆ. ಆದರೆ, ಎಐಎಡಿಎಂಕೆ ಉಳಿದುಕೊಂಡಿದೆ. ಅಣ್ಣಾಮಲೈ ಈ ಐತಿಹಾಸಿಕ ವಿಷಯ ಗೊತ್ತಿಲ್ಲʼ ಎಂದು ಎಐಎಡಿಎಂಕೆ ಹಿರಿಯ ನಾಯಕ ಕಡಂಬೂರ್ ರಾಜ್ ಇತ್ತೀಚೆಗೆ ಹೇಳಿದರು. ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮುಖಾಮುಖಿಯು ಬಿಜೆಪಿಯ ಕಾರ್ಯತಂತ್ರದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಆದರೆ, ಪಳನಿಸ್ವಾಮಿ ಯಾವುದನ್ನೂ ಅದೃಷ್ಟಕ್ಕೆ ಬಿಡದೆ ಇರಲು ನಿರ್ಧರಿಸಿದಂತಿದೆ.