
ಪಿಎಸ್‍ಐ ಹಗರಣ | ಉಮೇಶ್ ಜಾಧವ್ ಜೊತೆ ಕಾಣಿಸಿಕೊಂಡ ದಿವ್ಯಾ ಹಾಗರಗಿ: ತನಿಖೆಗೆ ಕಾಂಗ್ರೆಸ್ ಆಗ್ರಹ
ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಮುಖ್ಯ ಆರೋಪಿಯಾಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಅವರು ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಜೊತೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಗುರಿಯಾಗಿದೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಮುಖ್ಯ ಆರೋಪಿಗಳೊಂದಿಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಕಾಣಿಸಿಕೊಂಡಿದ್ದು, ಆರೋಪಿಗಳೊಂದಿಗೆ ಸಂಸದರಿಗಿರುವ ನಂಟಿನ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಆಗ್ರಹಿಸಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ಆರ್ಡಿ ಪಾಟೀಲ್ ನಿವಾಸಕ್ಕೆ ಉಮೇಶ್ ಜಾಧವ್ ಭೇಟಿ ನೀಡಿದ ಬೆನ್ನಲ್ಲೇ, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ದಿವ್ಯಾ ಹಾಗರಗಿ ಜೊತೆಗೆ ಉಮೇಶ್ ಜಾಧವ್ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋ ವೈರಲ್ ಆಗಿವೆ.
ಈ ಕುರಿತು ಚುನಾಬಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದು, ʼಪಿಎಸ್‍ಐ ಪರೀಕ್ಷೆ ಹಗರಣದಲ್ಲಿ ಶರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪರವಾಗಿ ಸಂಸದ ಉಮೇಶ್ ಜಾಧವ್ ನಿಂತಿದ್ದಾರೆʼ ಎಂದು ಆರೋಪಿಸಿದೆ.
ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಪಕ್ಷದ ಕಾನೂನು ಘಟಕದ ಉಪಾಧ್ಯಕ್ಷ ಎನ್.ದಿವಾಕರ್, ಪಿಎಸ್‍ಐ ಪರೀಕ್ಷೆ ಹಗರಣದ ವಿಚಾರಣೆ ಪ್ರಕ್ರಿಯೆ ಮೇಲೆ ಉಮೇಶ್ ಜಾಧವ್ ತಮ್ಮ ರಾಜಕೀಯ ಅಧಿಕಾರದ ಮೂಲಕ ಪ್ರಭಾವ ಬೀರುತ್ತಿರುವುದು ಕಂಡು ಬಂದಿದೆ. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲು ಉಮೇಶ್ ಜಾಧವ್ ಪ್ರಭಾವ ಬೀರಿದ್ದಾರೆ ಎಂಬ ಸಂಶಯವಿದೆ ಎಂದು ದೂರಿದ್ದಾರೆ.
ಕಲಬುರಗಿ ಬಿಜೆಪಿಯ ಮುಖಂಡೆಯಾಗಿರುವ ದಿವ್ಯಾ ಹಾಗರಗಿ ಅವರ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ ನಡೆದಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಅಕ್ರಮ ಬಯಲಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಯನ್ನು ಅಧಿಕಾರಿಗಳು ಬಂಧಿಸಿದ್ದರು
ಕಲಬುರ್ಗಿ ಜಿಲ್ಲೆಯಲ್ಲಿ ಪ್ರಭಾವಿ ಬಿಜೆಪಿ ಮುಖಂಡೆ ಮಾತ್ರವಲ್ಲದೆ, ದಿಶಾ ಕಮಿಟಿಯ ಸದಸ್ಯೆ, ರಾಜ್ಯ ನರ್ಸಿಂಗ್ ಬೋರ್ಡ್ ಸದಸ್ಯೆ ಕೂಡಾ ಆಗಿರುವ ದಿವ್ಯಾ ಹಾಗರಗಿ ಹಿಂದೆ ಪ್ರಭಾವಿಗಳ ರಕ್ಷಣೆ ಇದೆ ಎಂಬ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು. ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ದಿವ್ಯಾ ಹಾಗರಗಿ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದರು. ಇದೀಗ, ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳೊಂದಿಗೆ ಸಾರ್ವಜನಿಕವಾಗಿ ಉಮೇಶ್ ಜಾಧವ್ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.