ಹರಿಯಾಣ: ಒಬಿಸಿಗಳ ಓಲೈಕೆಗೆ ಮುಂದಾದ ಬಿಜೆಪಿ   -ಜ್ಞಾನ್ ವರ್ಮಾ
x

ಹರಿಯಾಣ: ಒಬಿಸಿಗಳ ಓಲೈಕೆಗೆ ಮುಂದಾದ ಬಿಜೆಪಿ -ಜ್ಞಾನ್ ವರ್ಮಾ


2024 ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ, ತನ್ನ ಪ್ರಮುಖ ಬೆಂಬಲಿಗರಾದ ಇತರ ಹಿಂದುಳಿದ ವರ್ಗ(ಒಬಿಸಿ) ಗಳನ್ನು ಓಲೈಸಲು ಮುಂದಾಗಿದೆ. ಇತ್ತೀಚೆಗೆ ಹರಿಯಾಣ ಘಟಕದ ಮುಖ್ಯಸ್ಥರಾಗಿ ನಯಾಬ್ ಸಿಂಗ್ ಸೈನಿ ಅವರನ್ನು ನೇಮಿಸಿದೆ. ಕಳೆದ 10 ವರ್ಷಗಳಿಂದ ಬಿಜೆಪಿ ಗೆಲುವಿನಲ್ಲಿ ಜಾಟ್ ಸಮುದಾಯ ಪ್ರಮುಖ ಪಾತ್ರ ವಹಿಸಿದೆ.

ಹಿರಿಯ ನಾಯಕ ಒ.ಪಿ. ಧನ್ಕರ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲು ನಿರ್ಧರಿಸಲಾಯಿತು. ಈ ಹಿಂದೆ ಸಂಪುಟದಲ್ಲಿ ಸಚಿವರಾಗಿದ್ದ ಧನ್ಕರ್, ಜಾಟ್ ಸಮುದಾಯದಲ್ಲಿ ಗಮನಾರ್ಹ ಪ್ರಭಾವ ಹೊಂದಿದ್ದರು.

ಜಾಟ್ ಸಮುದಾಯದ ಶಕ್ತಿ: ʻನಯಾಬ್ ಸಿಂಗ್ ಸೈನಿ ಅವರನ್ನು ನೇಮಕವು ಲೆಕ್ಕಾಚಾರಕ್ಕೆ ಅನುಗುಣವಾಗಿ ನಡೆದಿದೆ. ಒಬಿಸಿ ಸಮುದಾಯಕ್ಕೆ ಸೇರಿದ ಅವರು ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರ ನಡುವೆ ಉತ್ತಮ ಹೊಂದಾಣಿಕೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

ಹರಿಯಾಣದಲ್ಲಿ ಜಾಟ್ ಅಲ್ಲದ ನಾಯಕರೊಬ್ಬರನ್ನು ನೇಮಿಸುವಿಕೆಯು ಆಸಕ್ತಿಕರವಾಗಿದೆ. 2014 ಮತ್ತು 2019 ರ ವಿಧಾನಸಭೆ ಚುನಾವಣೆಗಳಲ್ಲಿ ಜಾಟ್ ಅಲ್ಲದ ಮತದಾರರಿಂದ ಬೆಂಬಲ ಗಳಿಸುವ ಮೂಲಕ ಹರಿಯಾಣದ ರಾಜಕೀಯ ಚಿತ್ರಣವನ್ನು ಬಿಜೆಪಿ ಬದಲಿಸಿತು. 2014 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನ ಗಳಿಸಿತು; ಕನಿಷ್ಠ 29 ಶಾಸಕರು ಜಾಟ್ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ.

ʻಈಮೊದಲು ಮುಖ್ಯಮಂತ್ರಿ ಸ್ಥಾನದಲ್ಲಿ ಜಾಟ್ ಅಲ್ಲದ ಮತ್ತು ಅಧ್ಯಕ್ಷರು ಜಾಟ್ ಸಮುದಾಯದವರಾಗಿದ್ದರು. ಆದರೆ, ಈಗ ಎರಡೂ ಸ್ಥಾನಗಳಲ್ಲಿ ಜಾಟೇತರರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಒ.ಪಿ.ಧನ್ಕರ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಲಾಗಿದ್ದು, ರಾಷ್ಟ್ರೀಯ ಪಾತ್ರ ನೀಡಲಾಗಿದೆʼ ಎಂದು ಬಿಜೆಪಿ ನಾಯಕ ಹೇಳಿದರು.

ಜಾತಿ ಗಣತಿಗೆ ಆಗ್ರಹ: ಹರಿಯಾಣದಲ್ಲಿ ಚುನಾವಣೆಗೆ ಮುನ್ನ ಜಾತಿ ಸಮೀಕ್ಷೆ ನಡೆಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ ಲೋಕತಂತ್ರ ಸುರಕ್ಷಾ ಪಕ್ಷ (ಎಲ್ಎಸ್ಪಿ) ಮತ್ತು ಇತರ ಸಣ್ಣ ಪ್ರಾದೇಶಿಕ ಪಕ್ಷಗಳು ಕೂಡ ಸಮೀಕ್ಷೆಗೆ ಆಗ್ರಹಿಸುತ್ತಿವೆ. ಬಿಜೆಪಿ ಮಾಜಿ ಸಂಸದ ರಾಜ್ ಕುಮಾರ್ ಸೈನಿ ಈ ಚಳವಳಿಯ ನಾಯಕರು. ಇತ್ತೀಚೆಗೆ ರೋಹ್ಟಕ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಹಾರದಲ್ಲಿ ನಡೆದಂತೆ ಹರಿಯಾಣದಲ್ಲೂ ಜಾತಿವಾರು ಸಮೀಕ್ಷೆ ನಡೆಯಬೇಕು. ಇದು ವಿವಿಧ ಸಮುದಾಯಗಳ ಜನಸಂಖ್ಯೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಕೊಡುತ್ತದೆ ಎಂದು ಸೈನಿ ಹೇಳಿದ್ದರು.

ವಿರೋಧ ಪಕ್ಷಗಳು ಮಾತ್ರವಲ್ಲದೆ, ಎನ್ಡಿಎ ಸದಸ್ಯ ಪಕ್ಷಗಳು ಕೂಡ ಜಾತಿ ಜನಗಣತಿಗೆ ಬೇಡಿಕೆ ಇಟ್ಟಿವೆ. ಜಾಟ್ ಮೀಸಲು ವಿಚಾರ ಹರಿಯಾಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಹುದು ಎಂದು ಬಿಜೆಪಿಯ ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಗೆ ಜಾಟ್ ಸಮುದಾಯದಿಂದ ಅಪಾರ ಬೆಂಬಲ ಸಿಕ್ಕಿದೆ. ಆದರೆ, ಸಮುದಾಯದ ಮತಗಳು ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ವಿಭಜನೆ ಆಗಬಹುದು. ಬಿಜೆಪಿಯ ಹಿರಿಯ ನಾಯಕರ ಪ್ರಕಾರ, ಜಾಟ್ ಸಮುದಾಯದ ಮತದಾರರನ್ನು ಮೋದಿಯವರ ವರ್ಚಸ್ಸು ಮತ್ತು ದುಶ್ಯಂತ್ ಚೌತಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಜೊತೆಗಿನ ಮೈತ್ರಿಯಿಂದ ಸೆಳೆಯಬಹುದು.

ʻನಮಗೆ ಸೀಮಿತ ಬೆಂಬಲವಿದೆ ಎಂದು ಭಾವಿಸುವವರಿದ್ದಾರೆ. ಅದು ಸರಿಯಲ್ಲ. ನಮ್ಮ ಮತದಾರರಾದ ಯುವಕರು ಮತ್ತು ಮಹಿಳೆಯರು ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆʼ ಎಂದು ಜೆಜೆಪಿಯ ರಾಷ್ಟ್ರೀಯ ವಕ್ತಾರ ಪ್ರತೀಕ್ ಸೋಮ್ ಹೇಳುತ್ತಾರೆ.

ಬಿಜೆಪಿ ಮುಂದಿರುವ ಸವಾಲು: ಎನ್ಡಿಎ ಮೈತ್ರಿಕೂಟದ ಸದಸ್ಯರು ಜಾತಿ ಗಣತಿ ಮತ್ತು ಜಾಟ್ ಹಾಗೂ ಮರಾಠ ಸಮುದಾಯಕ್ಕೆ ಮೀಸಲು ಬೇಡಿಕೆಗೆ ಬೆಂಬಲ ವ್ಯಕ್ತಪಡಿ ಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಗಂಭೀರ ಸವಾಲು ಒಡ್ಡಬಹುದು ಎಂಬ ಅರಿವು ಬಿಜೆಪಿ ನಾಯಕರಿಗೆ ಇದೆ. .

ಬಿಹಾರದಲ್ಲಿ ಜಾತಿ ಗಣತಿಗೆ ಬಿಜೆಪಿ ಸಮ್ಮತಿಸಿದೆ. ಆದರೆ, ಇತರ ರಾಜ್ಯಗಳಲ್ಲಿ ಅದಕ್ಕೆ ಅವಕಾಶ ನೀಡದಿರುವುದು ಸಮಸ್ಯೆಯಾಗಿದೆ. ಜಾಟರು ಮತ್ತು ಮರಾಠರ ಬೇಡಿಕೆಗಳು ತೊಂದರೆ ಉಂಟುಮಾಡುತ್ತಿವೆ. ಏಕೆಂದರೆ ಚುನಾವಣೆ ಹತ್ತಿರದಲ್ಲಿದೆ; ಇದು ಸುಲಭದ ಪರಿಸ್ಥಿತಿಯಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

ಮಿತ್ರಪಕ್ಷಗಳಿಂದ ಜಾತಿ ಗಣತಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಜಾಟರು-ಮರಾಠರ ಮೀಸಲು ಬೇಡಿಕೆಯನ್ನು ಪರಿಗಣಿಸಿ, ಬಿಜೆಪಿ ಈಗ ಒಬಿಸಿ ಸಮುದಾಯದ ಓಲೈಕೆಗೆ ಮುಂದಾಗಿದೆ. ʻಸಂವಿಧಾನದ ಪ್ರಕಾರ ಜನಗಣತಿಯಲ್ಲಿ ಜಾತಿಯನ್ನು ಸೇರಿಸಲು ಸಾಧ್ಯವಿಲ್ಲ ಎಂಬುದು ಸತ್ಯ; ಆದ್ದರಿಂದ, ವಿರೋಧ ಪಕ್ಷಗಳ ಆಶ್ವಾಸನೆ ಕಾರ್ಯಸಾಧುವಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರ ಮಾತ್ರ ನಡೆಸಬಹುದು ಮತ್ತು ಜಾತಿ ಜನಗಣತಿಯ ಭಾಗವಲ್ಲ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸಲು ಇಂಥ ಭರವಸೆ ನೀಡುತ್ತಿವೆ. ಇದನ್ನು ಜನರಿಗೆ ತಿಳಿಸಲು ಎಲ್ಲಾ ರಾಜ್ಯಗಳಲ್ಲಿ ರೋಡ್ ಶೋ, ಸಾರ್ವಜನಿಕ ಸಭೆಗಳು ಮತ್ತು ಮನೆ-ಮನೆ ಪ್ರಚಾರ ನಡೆಸುತ್ತೇವೆʼ ಎಂದು ಬಿಜೆಪಿ ನಾಯಕ ಹೇಳಿದರು.

Read More
Next Story