ಸೋಮಣ್ಣಗೆ ಬೆಂಬಲ ನೀಡುವುದಿಲ್ಲ; ಕಾಂಗ್ರೆಸ್‌ ಬಗ್ಗೆ ಯೋಚಿಸಿಲ್ಲ ಎಂದ ಮಾಧುಸ್ವಾಮಿ
x

ಸೋಮಣ್ಣಗೆ ಬೆಂಬಲ ನೀಡುವುದಿಲ್ಲ; ಕಾಂಗ್ರೆಸ್‌ ಬಗ್ಗೆ ಯೋಚಿಸಿಲ್ಲ ಎಂದ ಮಾಧುಸ್ವಾಮಿ

ʼʼನಾವು ದುಡ್ಡಲ್ಲಿ ರಾಜಕಾರಣ ಮಾಡಿದವರಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆʼʼ ಎಂದು ಮಾಧುಸ್ವಾಮಿ ಹೇಳಿದ್ದಾರೆ


ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕ ಜೆ ಸಿ ಮಾಧುಸ್ವಾಮಿ ಅವರಿಗೆ ತೀವ್ರ ನಿರಾಸೆಯಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಅವರು ತಮ್ಮ ಆಕ್ರೋಶ ಹೊರ ಹಾಕಿದ್ದಲ್ಲದೇ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼಪಕ್ಷದಲ್ಲಿನ ನನ್ನ ಅಸಮಾಧಾನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆʼʼ ಎಂದಿದ್ದಾರೆ.

ʼʼನಾನು ಕಾಂಗ್ರೆಸ್ ಸೇರಲಿದ್ದೇನೆ, ಬಿ ಫಾರಂ ನನಗೇ ಸಿಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ. ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆ ಆಗಲ್ಲʼʼ ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ಮಾತನಾಡಿದ್ದಾರೆ.

ʼʼಕಾಂಗ್ರೆಸ್ಗೆ ಸೇರುತ್ತೇನೆ ಎಂದು ಯಾರಿಗೂ ಹೇಳಿಲ್ಲ, ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೇನೆ. ಹಾಗಂತ ಕಾಂಗ್ರೆಸ್‌ಗೆ ಬರಲ್ಲ ಎಂದೂ ಎಲ್ಲೂ ಹೇಳಲ್ಲ. ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ. ಯಾಕೆ ಬಂದಿದ್ದೀರಿ ಎಂದು ಕೇಳಿದೆ. ‘ಯಾಕೆ ನಾನು ಬರಬಾರದಾ? ಮಾತನಾಡಬಾರದಾ?’ ಎಂದು ಕೇಳಿದರು" ಎಂದು ಮಾಧುಸ್ವಾಮಿ ತಿಳಿಸಿದರು.

ಶಾಸಕ ಜಯರಾಂ ಅವರನ್ನು ಕರೆದುಕೊಂಡು ಗೋಪಾಲಯ್ಯ ಅವರೆಲ್ಲ ಬಂದು ಹೋದರು. ನನಗೆ ಅಸಮಾಧಾನ ಇರುವುದು ಯಡಿಯೂರಪ್ಪನವರ ಮೇಲೆ. ನೀವೆಲ್ಲ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ, ಎಲ್ಲದಕ್ಕೂ ಯಡಿಯೂರಪ್ಪನವರೇ ಉತ್ತರ ಕೊಡಬೇಕು. ಅವರು ಮಾತನಾಡಬೇಕಿತ್ತು, ಆದರೆ, ಅವರು ಮಾತನಾಡುವ ಸೌಜನ್ಯ ತೋರಿಸಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದರು.

ʼʼನಿಮ್ಮ ನೋವು ನನಗೆ ಅರ್ಥ ಆಗುತ್ತೆ, ದಯವಿಟ್ಟು ಬಿಜೆಪಿ ಬಿಡಬೇಡಿ ಎಂದು ಅಶೋಕ್ ಮನವಿ ಮಾಡಿದ್ದರುʼʼ ಎಂಬುದನ್ನೂ ಮಾಧುಸ್ವಾಮಿ ಬಹಿರಂಗಪಡಿಸಿದರು.

ʼʼಸೋಮಣ್ಣ ಮೇಲೆ ಅಸಮಾಧಾನವಿಲ್ಲ, ಆದರೆ…’

"ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ. ಅವರು ಜಾತಿ ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು? ಹೊರಗಿನವರಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ನನ್ನಲ್ಲಿಲ್ಲʼʼ ಎಂದರು.

ʼʼನಾವು ದುಡ್ಡಲ್ಲಿ ರಾಜಕಾರಣ ಮಾಡಿದವರಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಎಲ್ಲಾ ವಿಚಾರ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆʼʼ ಎಂದು ನೋವು ತೋಡಿಕೊಂಡರು.

ʼʼಎರಡು ಮೂರು ಸಾರಿ ನಾನು ಬೇಡ ಅಂದಾಗ ನಿಲ್ಲು ಎಂದವರು ಯಡಿಯೂರಪ್ಪ. ಇದು ಬಹಿರಂಗ ಆಗಬೇಕುʼʼ ಎಂದು ಮಾಧುಸ್ವಾಮಿ ಹೇಳಿದರು.

ʼʼನಾನು ಯಡಿಯೂರಪ್ಪ ಫೋನ್ ಸ್ವೀಕರಿಸದಿದ್ದಾಗ ಜ್ಯೋತಿ ಗಣೇಶ್ ಮೂಲಕ ಕರೆ ಮಾಡಿಸಿದರು. ಶಿವಮೊಗ್ಗದಲ್ಲಿ ನೊಣಬರು ಬಹಳಷ್ಟು ಮತದಾರರಿದ್ದಾರೆ. ಹಾವೇರಿಯಲ್ಲಿದ್ದಾರೆ, ದಾವಣಗೆರೆಯಲ್ಲಿದ್ದಾರೆ, ಚಿತ್ರದುರ್ಗದಲ್ಲಿದ್ದಾರೆ. ಎಲ್ಲಾ ಕಡೆ ಇರುವವರಿಗೆ ಎಲ್ಲಾದರೂ ಒಂದು ಕಡೆ ಟಿಕೆಟ್ ಕೊಡಬೇಕಿತ್ತು. ನಾನು ಎರಡು ಮೂರು ದಿನದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡೋಕೆ ಹೊರಟಿದ್ದೀನಿ. ಕಾರ್ಯಕರ್ತರು ಏನು ಹೇಳ್ತಾರೆ ಕೇಳಿಕೊಂಡು ತೀರ್ಮಾನ ಮಾಡುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ.

Read More
Next Story