ಖರ್ಗೆ ಸ್ಪರ್ಧಿಸದಿರುವುದು ಕಾಂಗ್ರೆಸ್‌ ಚುನಾವಣಾ ಭವಿಷ್ಯಕ್ಕೆ ಧಕ್ಕೆಯಾಗುವುದೇ?
x

ಖರ್ಗೆ ಸ್ಪರ್ಧಿಸದಿರುವುದು ಕಾಂಗ್ರೆಸ್‌ ಚುನಾವಣಾ ಭವಿಷ್ಯಕ್ಕೆ ಧಕ್ಕೆಯಾಗುವುದೇ?


ಬರಲಿರುವ ಲೊಕಸಭಾ ಚನಾವಣೆಯಲ್ಲಿ ಸ್ಪರ್ಧಿಸುವ 17 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಪ್ರಕಟಿಸಿದೆ. ಅಲ್ಲಿಗೆ ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗಿ ಕಣಕ್ಕಿಳಿದಿದ್ದಾರೆ. ನಿರೀಕ್ಷಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿಲ್ಲ. ಇದು ಕರ್ನಾಟಕ ಕಾಂಗ್ರೆಸ್ ನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ನಾಲ್ಕೈದು ಕ್ಷೇತ್ರಗಳಲ್ಲಿ ಪೈಪೋಟಿ

ಈ ಲೋಕಸಭಾ ಚುನಾವಣೆಯಲ್ಲಿ ಸಂಪುಟದ ಹಲವು ಸಚಿವರನ್ನು ಕಣಕ್ಕಿಳಿಸುವ ನಿರ್ಧಾರ ಆಡಳಿತರೂಢ ಕಾಂಗ್ರೆಸ್‌ ತೆಗೆದುಕೊಂಡಿತ್ತು. ಆದರೆ, ಸ್ಪರ್ಧಿಸಲು ಸಚಿವರು ಕಾರಣಾಂತರದಿಂದ ನಿರಾಕರಿಸಿದ ಕಾರಣ, ಅವರ ಮಕ್ಕಳನ್ನು ಕಣಕ್ಕಿಳಿಸಲಾಗಿದೆ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಚಿವರೇ ಹೊತ್ತುಕೊಂಡಿದ್ದಾರೆ. ಪ್ರಕಟವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ 24 ಅಭ್ಯರ್ಥಿಗಳಲ್ಲಿ 11 ಮಂದಿ ಪಕ್ಷದ ನಾಯಕರ ಸಂಬಂಧಿಗಳಾಗಿದ್ದಾರೆ. ಇದು ವಂಶಪಾರಂಪರ್ಯ ರಾಜಕಾರಣದ ಮುಂದುವರಿಕೆ ಎಂಬ ಟೀಕೆ ಪ್ರತಿಪಕ್ಷಳದ್ಧಾಗಿದೆ. ಈ ಟೀಕೆಯನ್ನು ಕಾಂಗ್ರೆಸ್‌ ಪಕ್ಷ ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿದೆ. ಈ ನಡುವೆ ಇನ್ನು ಉಳಿದಿರುವ ನಾಲ್ಕು ಸವಾಲಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಈ ನಾಲ್ಕು ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅವರ ನಡುವಿನ ಪೈಪೋಟಿ ಪಕ್ಷದ ನಾಯಕರಿಗೆ ತಲೆನೋವಾಗಿ ಪರಣಮಿಸಿದೆ.

ಖರ್ಗೆ ಸ್ಪರ್ಧಿಸದಿರುವ ಇರುಸು ಮುರುಸು

ನಿರೀಕ್ಷಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿಲ್ಲ. ಇದು ಕರ್ನಾಟಕ ಕಾಂಗ್ರೆಸ್ ನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಖರ್ಗೆ ಅವರ ಕ್ಷೇತ್ರವಾದ ಕಲಬುರಗಿಯಲ್ಲಿ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲಾಗಿದೆ. ಖರ್ಗೆ ಚುನಾವಣಾ ಕಣದಿಂದ ಈ ಬಾರಿ ದೂರ ಉಳಿಯಲು ನಿಜವಾದ ಕಾರಣಗಳಿವೆ. ಅವರೇನಾದರೂ ಕಲಬುರಗಿಯಿಂದ ಸ್ಪರ್ಧಿಸಿದರೆ, ಅವರನ್ನು ಕಲಬುರಗಿಯಲ್ಲಿಯೇ ಕಟ್ಟಿಹಾಕಿ ಅವರು ದೇಶದ ಬೇರೆಬೇರೆ ಕಡೆಗಳಲ್ಲಿ ಪ್ರಚಾರ ಮಾಡದಂತೆ ಮಾಡಲು ವಿರೋಧ ಪಕ್ಷ ವ್ಯೂಹ ರಚಿಸಿದೆ. ಆದರೆ ದೇಶದ ಹಾಗೂ ವಿಶೇಷವಾಗಿ ರಾಜ್ಯದ ಪ್ರಬಲ ದಲಿತ ನಾಯಕ ಖರ್ಗೆ ಕಣಕ್ಕಿಳಿಯದಿರುವುದು ಸ್ವಲ್ಪ ಇರುಸುಮುರುಸಿನ ವಿಷಯವೇ ಎಂದು ಕಾಂಗ್ರೆಸ್‌ ನಾಯಕರು ಒಪ್ಪಿಕೊಳ್ಳುತ್ತಾರೆ. ಆದರೆ ಖರ್ಗೆ ಸ್ಪರ್ಧಿಸದಿರುವುದು, ದೇಶದ, ಪಕ್ಷದ ದೃಷ್ಟಿಯಂದ ಅನಿವಾರ್ಯ ಎಂದೂ ಅವರೇ ವಾದಿಸುತ್ತಾರೆ. ಕಾಂಗ್ರೆಸ್‌ ಇತಿಹಾಸ ಗಮನಿಸಿದರೆ, ಕಾಂಗ್ರೆಸ್‌ ನ ಅಧ್ಯಕ್ಷರಾಗಿದ್ದವರೆಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2009 ಹಾಗೂ 2014 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಖರ್ಗೆ 2019ರಲ್ಲಿ ಸೋತಿದ್ದರು. ಹಾಗಾಗಿ ಈ ಸೋಲಿಗೆ ಉತ್ತರ ನೀಡಲು ಈಗ ತಮ್ಮ ಅಳಿಯ ರಾಧಾಕೃಷ್ಣ ಅವರ ಭವಿಷ್ಯ ಪಣಕ್ಕೊಡ್ಡಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಖರ್ಗೆ ಅವರ ಪುತ್ರ ಹಾಗೂ ಸಂಪುಟ ಸಚಿವ ಪ್ರಿಯಾಂಕ್‌ ಖರ್ಗೆ ಮೇಲಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.

ಮಹಿಳಾ ಮತದಾರರ ಮೇಲುಗೈ ಮತ್ತು ಭಾಗ್ಯ ಯೋಜನೆ

ಮೊದಲೇ ಹೇಳಿದಂತೆ, ಸಚಿವರು ಹಾಗೂ ನಾಯಕರ ಮಕ್ಕಳಿಗೆ ಮಣೆಹಾಕಿರುವುದರಿಂದ ಕಾಂಗ್ರೆಸ್‌ ಸ್ವಲ್ಪ ಮುಜುಗರ ಸ್ಥಿತಿಯಲ್ಲಿದೆ. ಕೆಲವು ತಿಂಗಳ ಹಿಂದೆ ಉದಯಪುರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ, ನಾಯಕರ ಸಂಬಂಧಿಗಳಿಗೆ, ಮಕ್ಕಳಿಗೆ ಪಕ್ಷದಲ್ಲಿ ಭವಿಷ್ಯ ಕಲ್ಪಿಸಲು ಕೆಲವು ನಿಯಮಾವಳಿಗಳನ್ನು ಹೇರಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಆಯ್ಕೆ ಆ ನಿಯಮಾವಳಿಗಳನ್ನು ಗಾಳಿಗೆ ತೂರಿದಂತಾಗಿದೆ. ಆದರೆ 24 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶ ನೀಡಿರುವುದು ಮತ್ತು ಅವರೆಲ್ಲ ವಿದ್ಯಾವಂತರಾಗಿದ್ದು, ರಾಜಕೀಯ ಪಟ್ಟುಗಳನ್ನು ಅರಿತಿರುವುದು. ಕೆಲವು ಕಾಲದಿಂದ ಪಕ್ಷಕ್ಕಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್‌ ಗೆ ಲಾಭ ತರುವ ಸಾಧ್ಯತೆಗಳಿವೆ. ಆದರೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿ ಸವಾಲೊಂದನ್ನು ಮೈಮೇಲೆ ಎಳೆದುಕೊಂಡಿರುವ ಕಾಂಗ್ರೆಸ್‌, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬುದು ಇಂದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಬಾರಿ ಆರು ಮಂದಿ ಮಹಿಳೆಯರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಒಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಕಳೆದ 2019ರ ಚುನಾವಣೆಯಲ್ಲಿ ಒಬ್ಬೇ ಒಬ್ಬ ಮಹಿಳೆಗೆ ಮಾತ್ರ ಪಕ್ಷ ಅವಕಾಶ ನೀಡಿತ್ತು. ಪಕ್ಷದ ಈ ತೀರ್ಮಾನಕ್ಕೆ ಸಕಾರಣಗಳಿವೆ. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ರಾಜ್ಯದ 5 42 08 088 ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆ 2 70 81 750. ಒಟ್ಟು 28 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಭಾಗ್ಯ ಯೋಜನೆಗಳಿಂದ ಹೆಚ್ಚಿನ ಲಾಭವಾಗಿರುವುದು ಮಹಿಳೆಯರಿಗೆ. ಅಲ್ಲದೆ ಮಹಿಳಾ ಮೀಸಲಾಗಿ ಕಾಯ್ದೆಯನ್ನು ಜಾರಿಗೊಳಸಿದ ಶ್ರೇಯಸ್ಸು ಕಾಂಗ್ರೆಸ್‌ ದಕ್ಕಿದಂಗಾಗುವುದರಿಂದ ಈ ಸಂದರ್ಭದ ಲಾಭ ಪಡೆದುಕೊಳ್ಳುವ ಯಾವುದೇ ಅವಕಾಶವನ್ನು ಕಾಂಗ್ರೆಸ್‌ ಪಕ್ಷ ಕಳೆದುಕೊಳ್ಳದಿರಲು ತೀರ್ಮಾನಿಸಿದೆ.

ವಂಶಪಾರಂಪರ್ಯ ಕಲ್ಪನೆಯ ಸಮರ್ಥನೆ

ಹಾಗಾಗಿ ಬಿಜೆಪಿಯ ವಂಶಪಾರಂಪಾರಿಕ ಟೀಕೆಯನ್ನು ಸಮರ್ಥವಾಗಿ ಕಾಂಗ್ರೆಸ್‌ ಎದುರಿಸುತ್ತಿದೆ. ತಮ್ಮ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿರುವ ಹಿರಿಯ ನಾಯಕ ಮತ್ತು ರಾಜ್ಯದ ಮಂತ್ರಿ ಸತೀಶ್‌ ಜಾರಕಿಹೊಳಿ ಅವರನ್ನು ದ ಫೆಡರಲ್‌ ಕರ್ನಾಟಕ ಪ್ರಶ್ನಿಸಿದಾಗ ಅವರು ಸಮರ್ಥಿಸಿಕೊಂಡದ್ದು ಈ ರೀತಿ: “ವಂಶಪಾರಂಪರ್ಯದ ಕಲ್ಪನೆಗೆ ಸಿಕ್ಕಿಹಾಕಿಕೊಳ್ಳದ ಒಂದು ರಾಜಕೀಯ ಪಕ್ಷವನ್ನು ತೋರಿಸಿ ನೋಡೋಣ? ರಾಜ್ಯದಲ್ಲಿ ಯಡಿಯೂರಪ್ಪ, ದೇವೇಗೌಡ ಅವರು ಮಾಡುತ್ತಿರುವುದು ವಂಶಪಾರ್ಯ ರಾಜಕಾರಣದ ಮುಂದುವರಿಕೆಯಲ್ಲವೇ? ಇದು ಸತೀಶ್‌ ಜಾರಕಿಹೊಳಿ ಅವರ ಪ್ರಶ್ನೆ.

ಕರ್ನಾಟಕ ಕಾಂಗ್ರೆಸ್‌ ನ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ ಅವರನ್ನು ಈ ಕುರಿತು ಪ್ರಶ್ನಿಸಿದಾಗ; “ಹೊಸ ಮುಖಗಳಿಗೆ ಮತ್ತು ಯುವಕರಿಗೆ ಅವಕಾಶ ನೀಡಬೇಕೆಂದು ನಾವು ಮೊದಲೇ ನಿರ್ಧರಿಸಿದ್ದೆವು. ಜೊತೆಯಲ್ಲಿ ಪಕ್ಷ ಕೂಡ ನಮ್ಮ ಚಿಂತನೆಗೆ ಸ್ಪಂದಿಸಿತು. ಹಾಗಾಗಿ ನಮಗೆ ಈ ದಿಕ್ಕಿನಲ್ಲಿ ಪ್ರಯೋಗ ನಡೆಸಲು ಸಾಧ್ಯವಾಗಿದೆ. ಅಲ್ಲದೆ ನಾವು ಅಯ್ಕೆ ಮಾಡಿರುವವರಿಗೆ ರಾಜಕಾರಣದ ಮೌಲ್ಯಗಳ ತಿಳುವಳಿಕೆ ಇದೆ. ಅವರು ಬದ್ಧತೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಪಕ್ಷದ ಮಂತ್ರಿಗಳು, ನಾಯಕರು ಕಾರ್ಯಕರ್ತರು ಹೆಗಲು ನೀಡಿದ್ದಾರೆ. ಅವರೆಲ್ಲರೂ ಈ ಬಾರಿ ಇತಿಹಾಸ ನಿರ್ಮಿಸುವುದು ನಿಶ್ಚಿತ” ಎಂದು ಶಿವಕುಮಾರ್‌ ಸಮರ್ಥಿಸಿಕೊಳ್ಳುತ್ತಾರೆ.

ಕಾಂಗ್ರೆಸ್‌ ನ ಈ ನಿರ್ಧಾರ ಸರಿಯೇ? ತಪ್ಪೇ? ಎಂಬುದನ್ನು ಕಾಲ ಹಾಗೂ ಚುನಾವಣೆ ನಿರ್ಧರಿಸಲಿದೆ. ಅದಕ್ಕಾಗಿ ಜೂನ್‌ ಮೊದಲ ವಾರದವರೆಗೆ ಕಾಯಬೇಕಿದೆ.

Read More
Next Story