
ಮತಗಟ್ಟೆಯಲ್ಲಿ ಬಿಜೆಪಿಯ ಕಟೀಲು, ಕಾಂಗ್ರೆಸ್ ಪದ್ಮರಾಜ್ ಮುಖಾಮುಖಿ
ಪದ್ಮರಾಜ್ ರಾಮಯ್ಯ ಅವರು ಮತ ಚಲಾಯಿಸಿ ಹೊರ ಬರುತ್ತಿದ್ದಂತೆ, ಅಲ್ಲಿಗೆ ಮತ ಚಲಾಯಿಸಲು ಬಂದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎದುರಾದರು.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಶುಕ್ರವಾರ) ನಡೆಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಬಿಸಿಲಿನ ಬೇಗೆ ಮತ್ತಿತರ ಕಾರಣಗಳಿಂದ ಕೆಲವು ಬೂತ್ ಗಳ ಮತದಾರರಿಂದ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ. ಮಧ್ಯಾಹ್ನ 3 ರ ವೇಳೆಗೆ ದಕ್ಷಿಣಕನ್ನಡದಲ್ಲಿ 58% ಮತದಾನವಾಗಿದೆ.
ಮಂಗಳೂರಿನ ಲೇಡಿ ಹಿಲ್ ನಲ್ಲಿರುವ ಸಂತ ಅಲೋಶಿಯಸ್ ಶಾಲೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಮತ ಚಲಾವಣೆಗೆ ಬಂದಿದ್ದು, ಉಭಯ ನಾಯಕರು ಮುಖಾಮುಖಿಯಾಗಿದ್ದಾರೆ.
ಪದ್ಮರಾಜ್ ರಾಮಯ್ಯ ಅವರು ಮತ ಚಲಾಯಿಸಿ ಹೊರ ಬರುವ ಹೊತ್ತಿಗೆ ಅಲ್ಲಿಗೆ ನಳಿನ್ ಕುಮಾರ್ ಕಟೀಲ್ ಅವರೂ ಮತ ಚಲಾವಣೆಗೆ ಬಂದಿದ್ದಾರೆ. ನಳಿನ್ ಕುಮಾರ್ ರನ್ನು ಕಂಡು ಅವರ ಪಾದಮುಟ್ಟಲು ಮುಂದಾದ ಪದ್ಮರಾಜ್ ರ ಭುಜ ತಟ್ಟಿ ಕಟೀಲ್ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಧನ್ಯವಾದ ತಿಳಿಸಿರುವ ಪದ್ಮರಾಜ್ ರಾಮಯ್ಯ, "ಇಂದು ಮತದಾನ ಮಾಡಿ ಬರುವಾಗ ದಕ್ಷಿಣ ಕನ್ನಡದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಭೇಟಿಯಾಗಿ ಶುಭಹಾರೈಸಿದರು. ಅವರ ನಲ್ಮೆಯ ಹಾರೈಕೆಗಳಿಗೆ ಧನ್ಯವಾದಗಳು" ಎಂದಿದ್ದಾರೆ.