
ದೇಶಕ್ಕಾಗಿ ನನ್ನ ತಾಯಿ ಮಾಂಗಲ್ಯ ಕಳೆದುಕೊಂಡರು: ಪ್ರಿಯಾಂಕಾ ಗಾಂಧಿ
ʻಯುದ್ಧದ ಸಮಯದಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿಯವರು ತಮ್ಮ ಒಡವೆಗಳನ್ನು ದೇಶಕ್ಕೆ ಕೊಟ್ಟರು. ನನ್ನ ತಾಯಿ ದೇಶಕ್ಕಾಗಿ ತಮ್ಮ ಮಾಂಗಲ್ಯವನ್ನೇ ತ್ಯಾಗ ಮಾಡಿದರುʼ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ʼದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿವೆ. ಅದರಲ್ಲಿ 55 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಯಾರಾದರೂ ನಿಮ್ಮ ಚಿನ್ನವನ್ನು, ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರಾ?. ಆದರೆ, ಯುದ್ದದ ಸಮಯದಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿಯವರು ತಮ್ಮ ಒಡವೆಗಳನ್ನು ದೇಶಕ್ಕೆ ಕೊಟ್ಟರು. ನನ್ನ ತಾಯಿ ಈ ದೇಶಕ್ಕಾಗಿ ತಮ್ಮ ಮಾಂಗಲ್ಯವನ್ನೇ ತ್ಯಾಗ ಮಾಡಿದರುʼ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ತಾರಾ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ʻಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳ ಸೂತ್ರವನ್ನೇ ಕಸಿದುಕೊಳ್ಳಲಿದೆ ಎನ್ನುತ್ತಿದ್ದಾರೆ. ಆದರೆ, ನನ್ನ ತಾಯಿಯ ಮಾಂಗಲ್ಯ ಈ ದೇಶಕ್ಕಾಗಿ ಬಲಿಯಾಗಿದೆʼ ಎಂದರು.
ʻಮೋದಿ ಅವರಿಗೆ ಮಾಂಗಲ್ಯ ಸೂತ್ರದ ಬೆಲೆ ತಿಳಿದಿಲ್ಲ. ರೈತರು ಸಾಲದಿಂದ ಮನೆಯಲ್ಲಿರುವ ಮಹಿಳೆಯ ಮಾಂಗಲ್ಯವನ್ನು ಅಡಮಾನವಿರಿಸುತ್ತಾರೆ. ಸಂಕಷ್ಟದ ಸಂದರ್ಭದಲ್ಲೂ ಮಾಂಗಲ್ಯ ಅಡ ಇರಿಸುತ್ತಾರೆ. ಬಿಜೆಪಿಗೆ ಹೆಣ್ಣು ಮಕ್ಕಳ ಕಷ್ಟಗಳು ಅರ್ಥವಾಗುವುದಿಲ್ಲ. ಕೊರೊನಾ ಸೋಂಕಿನಿಂದ ಲಾಕ್‌ಡೋನ್ ಎದುರಾದ ಸಂದರ್ಭದಲ್ಲಿ ಬಡವರಿಗೆ ಊಟ ಸಿಗಲಿಲ್ಲ. ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡರು. ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ 600ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಆಗ ಪ್ರಧಾನಿ ಮೋದಿಗೆ ಮಾಂಗಲ್ಯ ನೆನಪಾಗಲಿಲ್ಲವೇʼ ಎಂದು ಪ್ರಶ್ನಿಸಿದರು.
ಅಭಿವೃದ್ಧಿಯ ಮಾತಿಲ್ಲ
ʻಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯ ಯಾವೊಬ್ಬ ಸಂಸದರೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿದೆ. ಆದರೆ, ಪ್ರಧಾನಿ ಮೋದಿ ಅವರ 10 ವರ್ಷಗಳ ಆಡಳಿತದಿಂದ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ?. ಮೋದಿ ಸೂಪರ್ ಮ್ಯಾನ್ ರೀತಿ ನಿಂತು ಮಾತನಾಡುತ್ತಿದ್ದಾರೆʼ ಎಂದು ಟೀಕಿಸಿದರು. ʻಮಣಿಪುರದಲ್ಲಿ ಒಂದು ಹೆಣ್ಣನ್ನು ಬೆತ್ತಲೆ ಮಾಡಿದಾಗ ಮೋದಿ ಎಲ್ಲಿದ್ದರುʼ ಎಂದು ಪ್ರಶ್ನಿಸಿದ ಅವರು, ʻದೇಶದ ಬಗ್ಗೆ ಅವರಿಗೆ ಕಾಳಜಿ ಇಲ್ಲವೇ? ಮೋದಿಯವರಿಗೆ ನಾಚಿಕೆ ಆಗಬೇಕು' ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಕಾಂಗ್ರೆಸ್ ಟ್ವೀಟ್
10 ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ತನ್ನ ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರು, ಅತ್ಯಂತ ನಿರ್ಲಜ್ಜ ಹಾಗೂ ಸಂವೇದನಾಶೂನ್ಯರಾಗಿ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಹ ಟ್ವೀಟ್ ಮಾಡಿದೆ.