Loksabha Election 2024 | ಸಂಗಣ್ಣ ಕರಡಿ ಬಂಡಾಯ ಸ್ಪರ್ಧೆ ಸಾಧ್ಯತೆ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ಕೆಎಸ್ ಈಶ್ವರಪ್ಪ ಸ್ಪರ್ಧೆಗೆ ಇಳಿದಿದ್ದು, ಇದೀಗ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಬಂಡಾಯ ಸ್ಪರ್ಧೆ ಮಾಡುವ ಸೂಚನೆಗಳು ನಿಚ್ಛಳವಾಗಿವೆ.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಸಂಸದರಾಗಿರುವ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡಿದ್ದು, ಅವರು ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.
ಈ ಬಾರಿ ವೈದ್ಯ ಕೆ. ಬಸವರಾಜ ಕ್ಯಾವಟ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದು, ಅಂದಿನಿಂದಲೇ ಸಂಗಣ್ಣ ತಮ್ಮ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಗೊಂಡಿದ್ದಾರೆ. ತುಂಬಿದ ಸಭೆಯಲ್ಲಿ ಭಾವುಕರಾಗಿ ಕಣ್ಣೀರುಗೆರೆದದ್ದಕ್ಕೆ ಅವರ ಬೆಂಬಲಿಗರು ಆಕ್ರೋಶಿತರಾಗಿ ತಮ್ಮ ನಾಯಕನನ್ನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಂಗಣ್ಣ ಅವರ ಸಮೀಪವರ್ತಿಗಳು ಹೇಳುತ್ತಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಂಗಣ್ಣ ಕರಡಿ ಅವರು, ʼʼಬಿಜೆಪಿಯವರ ನಡವಳಿಕೆಯಿಂದ ನನಗೆ ನೋವಾಗಿದೆ. ಇದುವರೆಗು ಒಬ್ಬೇಒಬ್ಬ ನಾಯಕ ನನ್ನನ್ನು ಮಾತನಾಡಿಸಿಲ್ಲ. ಹಾಗಾಗಿ ನಾನು ಮಾ. 21 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಭೆ ಕರೆದಿದ್ದೇನೆ. ಅವರೊಟ್ಟಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಸ್ಪಷ್ಟಪಡಿಸುತ್ತೇನೆʼʼ ಎಂದು ಹೇಳಿದ್ದಾರೆ.
ʼʼಟಿಕೆಟ್ ತಪ್ಪಿರುವದಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರದ ಎಂಟು ವಿಧಾಸಭಾ ಕ್ಷೇತ್ರದ ಕಾರ್ಯಕರ್ತರು ಹಾಗು ಮುಖಂಡರು, ನಿಮಗೆ ಅನ್ಯಾಯವಾಗಿದೆ, ಮುಂದಿನ ನಡೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಅದೆಲ್ಲದ್ದಕ್ಕೂ ಗುರುವಾರದ ಸಭೆ ಬಳಿಕ ಉತ್ತರ ನೀಡುತ್ತೇನೆʼʼ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.
ʼʼಎರಡು ಬಾರಿ ಸಂಸದನಾಗಿ ಅನೇಕ ಕೆಲಸ ಮಾಡಿದ್ದರೂ ಟಿಕೆಟ್ ನೀಡಲಿಲ್ಲ. ಕೊನೆಗೆ ಟಿಕೆಟ್ ನೀಡದಿದ್ದರೂ ಅದಕ್ಕೆ ಕಾರಣ ಕೊಡಲಿಲ್ಲ. ಕನಿಷ್ಠ ಟಿಕೆಟ್ ತಪ್ಪಿದ ಬಳಿಕ ಈವರೆಗೆ ನನ್ನನ್ನು ಕರೆದು ಮಾತನಾಡಿಸಲಿಲ್ಲ. ಸೌಜನ್ಯಕ್ಕೂ ಕರೆ ಮಾಡಲಿಲ್ಲ. ಕನಿಷ್ಠ ಸೌಜನ್ಯಕ್ಕೂ ಕರೆ ಮಾಡಬೇಕು ಎಂದು ಅವರಿಗೆ ಅನಿಸದಿದ್ದರೇ ಹೇಗೆ..?ʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼʼಬಿಎಸ್ ಯಡಿಯೂರಪ್ಪ ಮೇಲೆ ನನಗೆ ಅಪಾರ ಗೌರವವಿತ್ತು. ವಿಜಯೇಂದ್ರ ಅವರೂ ರಾಜ್ಯಾಧ್ಯಕ್ಷರಾದಾಗ ನಾನು ಸ್ವಾಗತ ಮಾಡಿದ್ದೆ. ಆದರೆ, ಇವತ್ತಿನವರೆಗೂ ಬಿಎಸ್ ಯಡಿಯೂರಪ್ಪ, ಆರ್ ಅಶೋಕ, ವಿಜಯೇಂದ್ರ ಅವರು ನನ್ನನ್ನು ಕರೆದು ಮಾತನಾಡಿಲ್ಲʼʼ ಎಂದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಸಂಗಣ್ಣ ಕರಡಿ ಅವರು ಗುರುವಾರ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ ವಿ ಸದಾನಂದ ಗೌಡ ಅವರಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅವರು ಕಾಂಗ್ರೆಸ್ ನತ್ತ ಮುಖ ಮಾಡಿದ್ದರೆಂದು ಸುದ್ದಿ ಹಬ್ಬಿತ್ತು. ಅದನ್ನು ಸದಾನಂದ ಗೌಡರೂ ಪತ್ರಕರ್ತರ ಮುಂದೆ ಒಪ್ಪಿಕೊಂಡಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ಅವರ ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ಬುಧವಾರ ಅವರು ನಡೆಸಬೇಕಿದ್ದ ಪತ್ರಿಕಾಗೋಷ್ಠಿ ಕೂಡ ಅಂತಿಮ ಸಮಯದಲ್ಲಿ ರದ್ದಾಯಿತು. ಅದೇ ರೀತಿಯಲ್ಲಿ ಸಂಗಣ್ಶ ಕರಡಿಯವರ ಮನವೊಲಿಸಿ ಪಕ್ಷದಲ್ಲೇ ಉಳಿಕೊಳ್ಳುವರೆಂಬ ನಂಬಿಕೆ ಪಕ್ಷದ ನಿಷ್ಠಾವಂತ ನಾಯಕರದು.
ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು, ತಮ್ಮ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದರು. ಆದರೆ, ಟಿಕೆಟ್ ಕೈತಪ್ಪಿದಾಗ ಅಸಮಾಧಾನಗೊಂಡ ಈಶ್ವರಪ್ಪ ಅವರು, ಇದೇ ರೀತಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು. ಆ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು. ಇದೀಗ ಸಂಗಣ್ಣ ಕರಡಿ ಅವರು ನಾಳೆ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದು, ಆ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗುವ ಸಾಧ್ಯತೆ ಇದೆ.