Loksabha Election 2024 | ಮೊದಲ ಹಂತದ ಬಹಿರಂಗ ಪ್ರಚಾರ ಅಂತ್ಯ: 14 ಕ್ಷೇತ್ರಗಳ ಮಾಹಿತಿ ಇಲ್ಲಿದೆ..
x

Loksabha Election 2024 | ಮೊದಲ ಹಂತದ ಬಹಿರಂಗ ಪ್ರಚಾರ ಅಂತ್ಯ: 14 ಕ್ಷೇತ್ರಗಳ ಮಾಹಿತಿ ಇಲ್ಲಿದೆ..

ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆಯ ಮೊದಲ ಹಂತದ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆಯಲಿದೆ. ಬುಧವಾರ ಸಂಜೆ 6 ಗಂಟೆಗೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಆ ಬಳಿಕ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.


ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆಯ ಮೊದಲ ಹಂತದ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆಯಲಿದೆ. ಬುಧವಾರ ಸಂಜೆ 6 ಗಂಟೆಗೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಆ ಬಳಿಕ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.

ರಾಜ್ಯದ ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದೆ. ಮತದಾರರನ್ನು ಸೆಳೆಯಲು ಬಿರುಬಿಸಿಲನ್ನೂ ಲೆಕ್ಕಿಸದೇ ಮತಭಿಕ್ಷೆಗಾಗಿ ರಸ್ತೆಗಿಳಿದಿದ್ದಾರೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 247 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಚುನಾವಣೆಗೆ ಎರಡು ದಿನ ಮಾತ್ರ ಬಾಕಿ ಇರುವುದರಿಂದ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಕೊನೆಯ ಹಂತದ ಕಸರತ್ತು ನಡೆಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ, ಆರೋಪ- ಪ್ರತ್ಯಾರೋಪ, ಟೀಕೆ-ಟಿಪ್ಪಣಿ ತಾರಕಕ್ಕೇರಿದೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಹೀಗಾಗಿ 14 ಕ್ಷೇತ್ರಗಳಲ್ಲೂ ಪ್ರಚಾರದ ಕಾವು ಏರಿದೆ.

ಮೊದಲ ಹಂತದ 14 ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ

ಉಡುಪಿ-ಮಂಗಳೂರು

2008ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಬಳಿಕ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಾಗಿದ್ದು ಬಿಟ್ಟರೆ, ಉಳಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಬಿಜೆಪಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಪಕ್ಷವು ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಈ ಇಬ್ಬರು ಅಭ್ಯರ್ಥಿಗಳು ಸಭ್ಯ ಮತ್ತು ಸರಳ ರಾಜಕಾರಣಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ವಿಜಯದ ಮಾಲೆ ಯಾರ ಕೊರಳಿಗೆ ಎನ್ನುವುದು ನಿಗೂಢವಾಗಿದೆ.

ಹಾಸನ

ಜೆಡಿಎಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಹಾಸನ ಲೋಕಸಭಾ ಕ್ಷೇತ್ರವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ಪ್ರತಿನಿಧಿಸುತ್ತಾ ಬಂದಿರುವ ಕಾರಣಕ್ಕೆ ಸದಾ ಗಮನ ಸೆಳೆಯುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 31 ವರ್ಷದ ಶ್ರೇಯಸ್ ಪಟೇಲ್‌ ಅವರು, ರೇವಣ್ಣ ಅವರಿಗೆ ನಡುಕ ಹುಟ್ಟಿಸಿದ್ದರು. ಕೇವಲ 3152 ಮತಗಳ ಅಂತರದಲ್ಲಿ ಸೋತಿದ್ದ ಶ್ರೇಯಸ್ ಅವರಿಗೆ ಕಾಂಗ್ರೆಸ್‌ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ. ಇಬ್ಬರು ಯುವ ನಾಯಕರ ನಡುವಿನ ಈ ಫೈಟ್‌ ರೋಚಕತೆ ಸೃಷ್ಟಿಸಿದೆ.

ದಕ್ಷಿಣ ಕನ್ನಡ

ಕೆಲವು ದಶಕಗಳಿಂದಲೇ ಕಾಂಗ್ರೆಸ್-ಬಿಜೆಪಿ ನೇರ ಹಣಾ ಹಣಿಯ ಕಣವಾಗಿ ಮಾರ್ಪಟ್ಟಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಉಭಯ ಪಕ್ಷಗಳಿಂದಲೂ ಹೊಸಬರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ನಿಂದ ವಕೀಲರಾದ ಪದ್ಮರಾಜ್ ರಾಮಯ್ಯ ಅವರು ಕಣದಲ್ಲಿದ್ದಾರೆ, ಬಿಜೆಪಿಯಿಂದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಪರ್ಧೆಗಿಳಿದಿದ್ದಾರೆ. ಈ ಕ್ಷೇತ್ರದ ಮತದಾರರು ಇಲ್ಲಿಯವರೆಗೆ ಮೋದಿ ಹಾಗೂ ಹಿಂದುತ್ವ ವಿಚಾರಕ್ಕೆ ಮಣೆಹಾಕುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಹಿಂದುತ್ವ ಪರ ಹೋರಾಟಗಾರರು ನೋಟಾ ಅಭಿಯಾನ ಆರಂಭಿಸಿದ್ದಾರೆ. ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.

ಚಿತ್ರದುರ್ಗ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನಿಂದ ಬಿ ಎನ್‌ ಚಂದ್ರಪ್ಪ, ಬಿಜೆಪಿಯಿಂದ ಗೋವಿಂದ ಕಾರಜೋಳ ಚುನಾವಣಾ ಕಣದಲ್ಲಿದ್ದಾರೆ. ಗೋವಿಂದ ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯವರಾಗಿದ್ದು, ಚಿತ್ರದುರ್ಗಕ್ಕೆ ಹೊಸಬರಾಗಿದ್ದಾರೆ. ಇಲ್ಲಿಯ ಕಾಂಗ್ರೆಸ್‌ ಶಾಸಕರು ಏಳು ಮಂದಿ ಇದ್ದರೆ ಬಿಜೆಪಿಯಿಂದ ಒಬ್ಬರೇ ಇದ್ದಾರೆ. ಕಾರಜೋಳ ಹಾಗೂ ಚಂದ್ರಪ್ಪ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ತುಮಕೂರು

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೀರಶೈವ-ಲಿಂಗಾಯತ ಮುಖಂಡ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ, ಇವರ ವಿರುದ್ಧ ಕಾಂಗ್ರೆಸ್ ನಿಂದ ಒಕ್ಕಲಿಗ ಹಾಗೂ ಅಹಿಂದ ನಾಯಕ ಎಸ್‌ಪಿ ಮುದ್ದಹನುಮೇಗೌಡ ಸ್ಪರ್ಧಿಸಿದ್ದಾರೆ. ಸೋಮಣ್ಣ ಅವರಿಗೆ ಭಿನ್ನಮತೀಯ ಕಾಟ ಎದುರಾಗಿದ್ದು, ಜೊತೆಗೆ ಹೊರಗಿನವರು ಎನ್ನುವ ಅಸಮಾಧಾನ ಇದೆ. ಆದರೆ ಸೋಮಣ್ಣ ಈಗ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುದ್ದುಹನುಮೇಗೌಡ ಕಣದಲ್ಲಿದ್ದಾರೆ.

ಮಂಡ್ಯ

ಪ್ರತಿ ಬಾರಿ ಕೌತುಕದ ಕೇಂದ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ಅಷ್ಟೇ ಕುತೂಹಲ ಹುಟ್ಟುಹಾಕಿದೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಇದ್ದರೆ, ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಅಖಾಡದಲ್ಲಿದ್ದಾರೆ. ಈ ಬಾರಿ ಸೋತರೆ ಸತ್ತಂತೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ತಮ್ಮ ಪ್ರತಿಷ್ಠೆಯನ್ನೇ ಪಣವಾಗಿಟ್ಟಿದ್ದಾರೆ. ಸ್ಟಾರ್‌ ಚಂದ್ರು ಬೆನ್ನಿಗೆ ಚೆಲುವನಾರಾಯಣ ಸ್ವಾಮಿ ನಿಂತಿದ್ದಾರೆ. ಮಂಡ್ಯ ಚುನಾವಣಾ ಕಣ ಕುಮಾರಸ್ವಾಮಿ ವರ್ಸಸ್ ಚೆಲುವನಾರಾಯಣ ಸ್ವಾಮಿ ಎನ್ನುವಂತಾಗಿದೆ.

ಮೈಸೂರು

ದಶಕಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರಸ್ತುತ ಬಿಜೆಪಿಯ ಭದ್ರಕೋಟೆಯಾಗಿದೆ. ಮತ್ತೆ ತನ್ನ ಹಳೆಯ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹೊಸ ಮುಖವನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಣಕ್ಕಿಳಿದಿದ್ದಾರೆ. ಇಲ್ಲಿ ರಾಜವಂಶಸ್ಥ vs ಕಾಮನ್‌ಮೆನ್‌ ಕಾಳಗ ನಡೆಯಲಿದೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವದರಿಂದ ಅವರು ಈ ಕೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಅದರಂತೆ ತಂತ್ರಗಳನ್ನು ಪ್ರಯೋಗಿಸಿದ್ದಾರೆ.

ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರವೂ ಸೇರಿರುವುದರಿಂದ ರಾಜ್ಯದ ಗಮನ ಸೆಳೆದಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಈ ಬಾರಿ 'ಕೈ' – 'ಕಮಲ'ದ ನಡುವೆ ನೇರ ಹಣಾಹಣಿಗೆ ವೇದಿಕೆಯಾಗಿದೆ. ಬಿಜೆಪಿಯಿಂದ ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜು ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಮಗ ಸುನಿಲ್ ಬೋಸ್ ಅಖಾಡದಲ್ಲಿದ್ದಾರೆ. ಇಬ್ಬರಿಗೂ ಇದು ಮೊದಲ ಲೋಕಸಭಾ ಚುನಾವಣೆ.‌

ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲೇ 2ನೇ ಅತೀ ದೊಡ್ಡ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯು 2 ಪ್ರತಿಷ್ಠಿತ ಕುಟುಂಬಗಳ ನೇರ ಹಣಾಹಣಿಗೆ ಸಾಕ್ಷಿಯಾಗಿದೆ. ಈಗಾಗಲೇ ಮೂರು ಬಾರಿ ಸಂಸದರಾಗಿರುವ ಡಿ.ಕೆ. ಸುರೇಶ್‌ ಅವರ ಎದುರು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್‌. ಮಂಜುನಾಥ್‌ ಅವರ ಸ್ಪರ್ಧೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸಹೋದರ. ಇನ್ನೊಂದೆಡೆ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌. ಮಂಜುನಾಥ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅಳಿಯ. ಎಚ್‌ಡಿಡಿ ಹಾಗೂ ಡಿಕೆಶಿ ಕುಟುಂಬದ ನಡುವೆ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ ಎರಡರಲ್ಲಿ ಡಿಕೆಶಿ, ಇನ್ನೆರೆಡಲ್ಲಿ ಎಚ್‌ಡಿಡಿ ಕುಟುಂಬ ಮೇಲುಗೈ ಸಾಧಿಸಿದೆ. ಈಗ ನಡೆಯುತ್ತಿರುವ 5ನೇ ಮುಖಾಮುಖಿಯಲ್ಲಿ ಪಕ್ಷಗಳೊಂದಿಗೆ ಕುಟುಂಬದ ಪ್ರತಿಷ್ಠೆಯೂ ಪಣಕ್ಕಿದೆ.

ಬೆಂಗಳೂರು ಉತ್ತರ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ ಎಂವಿ ರಾಜೀವ್‌ಗೌಡ ನಡುವಿನ ನೇರಾನೇರ ಸ್ಪರ್ಧೆಯಿಂದಾಗಿ ಚುನಾವಣೆ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿದೆ. ಉಡುಪಿ-ಚಿಕ್ಕಮಗಳೂರಿನಿಂದ ವಲಸೆ ಬಂದವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಪ್ರೊ ಎಂವಿ ರಾಜೀವ್‌ಗೌಡ ಕೂಡ ಕ್ಷೇತ್ರಕ್ಕೆ ಹೊಸಬರು. ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದೊಳಗಿನ ನಾಯಕರ ಅಸಮಾಧಾನದ ಬಿಸಿ ಜೋರಾಗಿ ತಟ್ಟಿದೆ. ಇನ್ನು ರಾಜೀವ್‌ಗೌಡ ಅವರಿಗೆ ಗ್ಯಾರಂಟಿ ಯೋಜನೆಗಳು ವರವಾಗುವ ಸಾಧ್ಯತೆ ಇದೆ.

ಬೆಂಗಳೂರು ಕೇಂದ್ರ

ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಇಲ್ಲಿ ಕಳೆದ ಮೂರು ಅವಧಿಯಲ್ಲಿ ಸತತವಾಗಿ ಬಿಜೆಪಿಯ ಪಿಸಿ ಮೋಹನ್ ಗೆಲುವು ಸಾಧಿಸಿದ್ದಾರೆ. ತಮಿಳು ಭಾಷಿಗರು, ಮುಸ್ಲಿಮರು, ದಲಿತರು ಹಾಗೂ ಕ್ರೈಸ್ತ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಪಿಸಿ ಮೋಹನ್ ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕೆ ಇಳಿಸಿದೆ. ಶಿಕ್ಷಣ ತಜ್ಞರಾಗಿರುವ ಅವರು ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ

ಬಿಜೆಪಿ ಭದ್ರಕೋಟೆ ಆಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರಧಾನಿ ಮೋದಿ ಗ್ಯಾರಂಟಿಯೊಂದಿಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಮತಬೇಟೆಯಲ್ಲಿ ತೊಡಗಿದ್ದರೆ, ಗ್ಯಾರಂಟಿ ಅಲೆಯ ಜತೆಗೆ ಅಪ್ಪನ ರಣತಂತ್ರದಡಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ ಮುನ್ನುಗ್ಗುತ್ತಿದ್ದಾರೆ.

ಚಿಕ್ಕಬಳ್ಳಾಪುರ

ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಧುಮುಕಿರುವ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸುಧಾಕರ್‌ ಅವರು ಚುನಾವಣಾ ಪ್ರಚಾರಕ್ಕೆ ಮೋದಿ ವರ್ಚಸ್ಸನ್ನು ಬಳಸಿಕೊಂಡರೇ, ಅದನ್ನು ಎದುರಿಸಲು ಕಾಂಗ್ರೆಸ್‌ ನಾಯಕರು, ಬೆಲೆ ಏರಿಕೆ ಭ್ರಷ್ಟಾಚಾರದಂತಹ ವಿಚಾರಗಳನ್ನು ಉನ್ನೆಲೆಗೆ ತಂದಿದ್ದಾರೆ. ಅದರ ಜೊತೆಗೆ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಒಂದಷ್ಟು ಮತಗಳನ್ನು ತಂದುಕೊಡುವ ಸಾಧ್ಯತೆ ಇದೆ.

ಕೋಲಾರ

ಕೋಲಾರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಇಲ್ಲಿ ಕನ್ನಡದಂತೆಯೇ ತಮಿಳು ಮತ್ತು ತೆಲುಗು ಭಾಷೆಯ ಪ್ರಾಬಲ್ಯ ಕೂಡ ತೀವ್ರವಾಗಿದೆ. ತಮಿಳು ಭಾಷಿಕರು ಕೂಡ ಇದ್ದಾರೆ. 'ಚಿನ್ನದ ಗಣಿ' ಇರುವ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿದೆ. ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಮತ್ತು ಕಾಂಗ್ರೆಸ್‌ನಿಂದ ಕೆವಿ ಗೌತಮ್ ಸ್ಪರ್ಧೆಗಿಳಿದಿದ್ದಾರೆ. ಕ್ಷೇತ್ರಕ್ಕೆ ಇಬ್ಬರೂ ಹೊಸ ಮುಖಗಳಾಗಿದ್ದು, 35 ವರ್ಷಗಳ ಬಳಿಕ ಕಾಂಗ್ರೆಸ್‌ನಿಂದ ಹೊಸ ಮುಖಕ್ಕೆ ಅವಕಾಶ ಸಿಕ್ಕಿದೆ. ಬಂಗಾರಪೇಟೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತಿರುವ ಮಲ್ಲೇಶ್‌ ಬಾಬು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಎರಡೂ ಕಡೆಗಳಲ್ಲಿನ ಮನಸ್ತಾಪ ಹಾಗೂ ಒಳೇಟುಗಳನ್ನು ಮೀರಿದವರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ.

Read More
Next Story