ದಾವಣಗೆರೆ ಲೋಕಸಭಾ ಕ್ಷೇತ್ರ | ಕಟ್ಟಾ ಶಿಷ್ಯರ ಬಂಡಾಯ ಶಮನಕ್ಕೆ ಬಿಎಸ್ ವೈ ಹೈರಾಣು!
ಚಿತ್ರದುರ್ಗ ಕ್ಷೇತ್ರ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಲೋಕಸಭಾ ಕ್ಷೇತ್ರಗಳ ಹುರಿಯಾಳುಗಳನ್ನು ಘೋಷಿಸಿರುವ ಬಿಜೆಪಿಗೆ ಈಗ ಪಕ್ಷದ ಹಿರಿಯ ನಾಯಕರ ಬಂಡಾಯವೇ ತಲೆನೋವಾಗಿ ಪರಿಣಮಿಸಿದೆ.
ಶಿವಮೊಗ್ಗ, ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಜೊತೆಗೆ ಮಧ್ಯಕರ್ನಾಟಕದ ಬಿಜೆಪಿ ಭದ್ರಕೋಟೆ ದಾವಣಗೆರೆಯಲ್ಲಿ ಕೂಡ ಹೆಡೆ ಎತ್ತಿರುವ ಬಂಡಾಯವನ್ನು ಸಮಾಧಾನಪಡಿಸಲು ಪಕ್ಷದ ವರಿಷ್ಠರು ನಡೆಸುತ್ತಿರುವ ನಿರಂತರ ಪ್ರಯತ್ನಗಳು ಫಲ ಕೊಟ್ಟಿಲ್ಲ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2004ರಿಂದ ಈವರೆಗೆ ನಿರಂತರವಾಗಿ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಡುವ ಮೂಲಕ ಕ್ಷೇತ್ರವನ್ನು ಪಕ್ಷದ ಭದ್ರಕೋಟೆಯನ್ನಾಗಿ ಮಾಡಿದ್ದ ಸಂಸದ ಜಿ ಎಂ ಸಿದ್ದೇಶ್ವರ್ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಅವರ ವಿರುದ್ಧ ಪ್ರಬಲ ಆಡಳಿತ ವಿರೋಧ ಅಲೆ ಮತ್ತು ಪಕ್ಷದ ಸ್ಥಳೀಯ ಹಿರಿಯ ನಾಯಕರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಬಿಜೆಪಿ ಈ ಬಾರಿ ಸಿದ್ದೇಶ್ವರ್ ಅವರನ್ನು ಕೈಬಿಟ್ಟಿದೆ.
ಆದರೆ, ಪಕ್ಷದ ಮಾಜಿ ಶಾಸಕರು ಸೇರಿದಂತೆ ಬಹುತೇಕ ಪ್ರಮುಖರ ವಿರೋಧದ ಹೊರತಾಗಿಯೂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಕಣಕ್ಕಿಳಿಸಲಾಗಿದೆ. ಪಕ್ಷದ ವರಿಷ್ಠರ ಈ ನಿರ್ಧಾರ ಸಿದ್ದೇಶ್ವರ್ ವಿರುದ್ಧ ಬಂಡೆದ್ದಿರುವ ಸ್ಥಳೀಯ ಮುಖಂಡರಿಗೆ ಇನ್ನಷ್ಟು ಆಕ್ರೋಶ ಮೂಡಿಸಿದೆ.
ಹಾಲಿ ಸಂಸದರ ವಿರುದ್ಧ ಬಂಡಾಯ
ಪ್ರಮುಖವಾಗಿ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಎಸ್ ಎ ರವೀಂದ್ರನಾಥ್, ಮತ್ತೊಬ್ಬ ಮಾಜಿ ಸಚಿವ ಮತ್ತು ಬಿ ಎಸ್ ಯಡಿಯೂರಪ್ಪ ಆಪ್ತ ಎಂ ಪಿ ರೇಣುಕಾಚಾರ್ಯ ಅವರಂತೂ ಟಿಕೆಟ್ ಬದಲಾಯಿಸಿ ಎಂದು ಪಟ್ಟು ಹಿಡಿದಿದ್ದಾರೆ. ಪಕ್ಷದ ಯಾವುದೇ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ತಾವು ಶ್ರಮ ಹಾಕಿ ಗೆಲ್ಲಿಸಿಕೊಂಡು ಬರುತ್ತೇವೆ. ಆದರೆ, ಸಿದ್ದೇಶ್ವರ್ ಕುಟುಂಬದ ಪರ ಪ್ರಚಾರ ಮಾಡುವುದಿಲ್ಲ ಎಂದು ಆ ಇಬ್ಬರೂ ಪ್ರಮುಖ ನಾಯಕರು ಹಿಡಿದಿರುವ ಪಟ್ಟು ಸಡಿಲಿಸಿಲ್ಲ.
ಆ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸ್ವತಃ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್, ಜಗಳೂರು ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಹರಿಹರ ಮಾಜಿ ಶಾಸಕ ಬಿ ಪಿ ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು. ಆದರೆ, ಮುಖ್ಯವಾಗಿ ಸಂಧಾನಕ್ಕೆ ಬರಬೇಕಿದ್ದ ಬಂಡಾಯದ ನೇತೃತ್ವ ವಹಿಸಿರುವ ಎಸ್ ಎ ರವೀಂದ್ರನಾಥ್ ಮತ್ತು ಎಂ ಪಿ ರೇಣುಕಾಚಾರ್ಯ ಮಾತ್ರ ಅತ್ತ ಸುಳಿದಿಲ್ಲ!
ರವೀಂದ್ರನಾಥ್ ಮತ್ತು ರೇಣುಕಾಚಾರ್ಯ; ಇಬ್ಬರೂ ಬಿ ಎಸ್ ಯಡಿಯೂರಪ್ಪ ಅವರ ಆಪ್ತರು. ಇದೀಗ ಅವರೇ ಸಂಧಾನ ಸಭೆಗೂ ಬಾರದೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರೊಂದಿಗೆ ಮತ್ತೊಬ್ಬ ಮಾಜಿ ಶಾಸಕ ಹಾಗೂ ಗಣಿ ರೆಡ್ಡಿ ಬ್ರದರ್ಸ್ ನಲ್ಲಿ ಒಬ್ಬರಾದ ಜಿ ಕರುಣಾಕರ ರೆಡ್ಡಿ ಕೂಡ ಕೈಜೋಡಿಸಿದ್ದು, ಪಕ್ಷದ ಟಿಕೆಟ್ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
ಕಣಕ್ಕಿಳಿಯಲು ಸಿದ್ಧ ಎಂದ ಎಸ್ ಎ ಆರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮೂವರೂ ಮಾಜಿ ಶಾಸಕರು, ತಮ್ಮ ಸೋಲಿಗೆ ಸಂಸದರಾಗಿರುವ ಸಿದ್ದೇಶ್ವರ್ ಅವರೇ ಕಾರಣ. ನಮ್ಮನ್ನು ಸೋಲಿಸಿದ ಅವರು, ಪಕ್ಷದ ದ್ರೋಹ ಬಗೆದಿದ್ದಾರೆ. ಹಾಗಾಗಿ ಅವರ ಪರ ಪ್ರಚಾರ ಮಾಡಿ ಗೆಲ್ಲಿಸುವ ಮಾತೇ ಇಲ್ಲ ಎಂದು ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಎಸ್ ಎ ರವೀಂದ್ರನಾಥ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೀವೆಲ್ಲಾ ಬೆಂಬಲ ಕೊಟ್ಟು, ಪೂರ್ಣ ಶ್ರಮ ಹಾಕಿ ಕೆಲಸ ಮಾಡುವುದಾದರೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಾನು ಸಿದ್ಧ ಎಂದೂ ಹೇಳಿದ್ದಾರೆ!
ಬಿಜೆಪಿ ಮುಂದಿದೆ ಕಠಿಣ ಸವಾಲು
ಒಂದು ವೇಳೆ, ಪಕ್ಷ ಟಿಕೆಟ್ ಬದಲಾಯಿಸದೇ ಇದ್ದಲ್ಲಿ ತಾವು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದೂ ಬಂಡಾಯದ ನೇತೃತ್ವ ವಹಿಸಿರುವ ನಾಯಕರು ಘೋಷಿಸಿದ್ದಾರೆ. ಕಾಂಗ್ರೆಸ್ ನಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಕಣದಲ್ಲಿದ್ದಾರೆ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರದಲ್ಲಿ ಇಬ್ಬರೂ ಲಿಂಗಾಯತ ನಾಯಕಿಯರ ನಡುವಿನ ಸಮರ ಇಡೀ ರಾಜ್ಯದ ಗಮನ ಸೆಳೆಯುವ ಸಾಧ್ಯತೆ ಇದೆ. ಅದರಲ್ಲೂ ಪ್ರಭಾ ಅವರು ಕಳೆದ 20 ವರ್ಷಗಳಿಂದ ತಮ್ಮ ಪತಿ ಮಲ್ಲಿಕಾರ್ಜುನ್ ಮತ್ತು ಮಾವ ಶಾಮನೂರು ಶಿವಶಂಕರಪ್ಪ ಪರ ಚುನಾವಣಾ ಪ್ರಚಾರವನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಚಿರಪರಿಚಿತ ಮುಖ ಅವರದು. ಹಾಗಾಗಿ ಈ ಬಾರಿ ಬಿಜೆಪಿ ಪಾಲಿಗೆ ಕ್ಷೇತ್ರ ಕಠಿಣ ಸವಾಲು ಒಡ್ಡಿದೆ.
ಈ ನಡುವೆ, ಬಹುಸಂಖ್ಯಾತ ಲಿಂಗಾಯತ ಸಮುದಾಯದ ಪ್ರಮುಖರೂ, ಪ್ರಭಾವಿ ನಾಯಕರೂ ಆದ ರವೀಂದ್ರನಾಥ್, ರೇಣುಕಾಚಾರ್ಯ ಅವರ ಬಂಡಾಯ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದೆ.