ಲೋಕ ಸ್ವಾರಸ್ಯ | ವರ್ಷದೊಡಕಿಗೆ ತಂದ ಮರಿ ತಿನ್ನುವ ಮುನ್ನವೇ ಸೀಜಾಯ್ತು!
x

ಲೋಕ ಸ್ವಾರಸ್ಯ | ವರ್ಷದೊಡಕಿಗೆ ತಂದ ಮರಿ ತಿನ್ನುವ ಮುನ್ನವೇ ಸೀಜಾಯ್ತು!

ತೆನೆಹೊತ್ತ ಮಹಿಳೆ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತನ್ನ ಫಾರ್ಮ್ ಹೌಸ್‌ನಲ್ಲಿ ತನ್ನ ದೋಸ್ತಿ ಕಮಲಕ್ಕನೊಂದಿಗೆ ಈ ವರ್ಷದ ಮೈತ್ರಿ ವರ್ಷದೊಡಕು ಬಾಡೂಟಕ್ಕೆ ಸಜ್ಜುಮಾಡಿಕೊಂಡಿದ್ದಾಳೆ. ತಮ್ಮಿಬ್ಬರ ದೋಸ್ತಿಯ ನೆಂಟರು, ದಿಷ್ಟರು, ಆಪ್ತರು, ಮಿತ್ರರನ್ನೂ ಕರೆದು ಬಾಡೂಟ ಹಾಕಿ ಓಟು ಹಾಕೋಕೆ ಆಪ್ತ ಸಲಹೆ ಕೊಡೋದು ಆಕೆಯ ಔದಾರ್ಯದ ಅಂದಾಜಾಗಿತ್ತಂತೆ. ಅಷ್ಟರಲ್ಲಿ, ಈ ʼಮೈತ್ರಿ ಸೇವೆʼಯ ಮಾಹಿತಿ ತಿಳಿದವರು ʼಕೈʼಕೊಟ್ಟಿದ್ದಾರೆ!

ಮಂಗಳವಾರ ಯುಗಾದಿ ಹಬ್ಬವನ್ನು ಮುಗಿಸಿ, ಬುಧವಾರ ವರ್ಷದೊಡಕು ಹಬ್ಬದ ಭಾರೀ ಬಾಡೂಟದ ಸಂಭ್ರಮ ಎಂದಿನಿಂತೆ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಜೋರಾಗಿಯೇ ಇತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರನ ಜೇಬಿಗೆ ಇಳಿದಿರುವ ಕಾಂಚಾಣದಿಂದಾಗಿ ಈ ಬಾರಿ ವರ್ಷಡೊಡಕು ತುಸು ಹೆಚ್ಚೇ ಜೋಷ್ ತಂದಿತ್ತು.

ಇಡೀ ಮೈಸೂರು- ಬೆಂಗಳೂರು ಸೀಮೆಯೇ ಬೆಳಿಗ್ಗೆಯಿಂದಲೇ ಮರಿ ಬಾಡಿನ ಘಮಲಿನಲ್ಲಿ, ಎಣ್ಣೆ ಅಮಲಿನಲ್ಲಿ ತೇಲಾಡುತ್ತಿರುವಾಗ, ಆ ನಡುವಿನ ಬಿಡದಿಯಲ್ಲಿ ಮಾತ್ರ ಮರಿ ಬಾಡು ಕಂದಿಹೋದ ಕಮಟು ವಾಸನೆ ನಡು ಮಧ್ಯಾಹ್ನದ ಹೊತ್ತಿಗೇ ಮೂಗಿಗೆ ಬಡಿಯುತ್ತಿತ್ತು! ಹರಕೆಗೆ ತಂದ ಕುರಿ ತಳಿರ ಮೇಯಿತ್ತು ಎಂಬುದರ ಬದಲಾಗಿ ʼವರ್ಷದೊಡಕಿಗೆ ತಂದ ಮರಿ ತಿನ್ನುವ ಮುನ್ನವೇ ಸೀಜಾಯ್ತುʼ ಎಂಬ ದಾರುಣ ಕಥೆ ಇದು.

ತೆನೆಹೊತ್ತ ಮಹಿಳೆ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತನ್ನ ಫಾರ್ಮ್ ಹೌಸ್‌ನಲ್ಲಿ ತನ್ನ ದೋಸ್ತಿ ಕಮಲಕ್ಕನೊಂದಿಗೆ ಈ ವರ್ಷದ ಮೈತ್ರಿ ವರ್ಷದೊಡಕು ಬಾಡೂಟಕ್ಕೆ ಸಜ್ಜುಮಾಡಿಕೊಂಡಿದ್ದಾಳೆ. ತಮ್ಮಿಬ್ಬರ ದೋಸ್ತಿಯ ನೆಂಟರು, ದಿಷ್ಟರು, ಆಪ್ತರು, ಮಿತ್ರರನ್ನೂ ಕರೆದು ಬಾಡೂಟ ಹಾಕಿ ಓಟು ಹಾಕೋಕೆ ಆಪ್ತ ಸಲಹೆ ಕೊಡೋದು ಆಕೆಯ ಔದಾರ್ಯದ ಅಂದಾಜಾಗಿತ್ತಂತೆ. ಅಷ್ಟರಲ್ಲಿ, ಈ ʼಮೈತ್ರಿ ಸೇವೆʼಯ ಮಾಹಿತಿ ತಿಳಿದವರು ʼಕೈʼಕೊಟ್ಟಿದ್ದಾರೆ!

ಅದರ ಬೆನ್ನಲ್ಲೇ ಸಂತೆಗೆ ಮುಂಚೆ ಗಂಟುಕಳ್ಳರು ಲೂಟಿ ಹೊಡೆದರು ಎಂಬಂತೆ ಊಟಕ್ಕೆ ಮುಂಚೆಯೇ ಉಪದ್ರ ಒಕ್ಕರಿಸಿತು. ಚುನಾವಣಾಧಿಕಾರಿಗಳು ಲಗ್ಗೆ ಇಡುವ ಸೂಚನೆ ಸಿಗುತ್ತಲೇ ತೆನೆ ಹೊತ್ತು ಅಭ್ಯಾಸವಿದ್ದ ಮಹಿಳೆ, ಅಷ್ಟೇ ನಾಜೂಕಾಗಿ ಬಾಡೂಟವನ್ನೂ ಸದ್ದಿಲ್ಲದೆ ಅಕ್ಕಪಕ್ಕದ ತೋಟಗಳಿಗೆ ಸಾಗಹಾಕಿದಳು. ಹಾಗಾಗಿ ದಾಳಿಗೆ ಹೋದವರು, ʼದಾಳʼದ ಕುರುಹೂ ಸಿಗದೆ ಬರಿಗೈಲಿ ವಾಪಸ್ಸಾದರು!

"ಬಿಡದಿ ಮನೆಯಲ್ಲಿ ಊಟ ಇದೆ, ವಿಚಿತ್ರ ಭಕ್ಷ್ಯಗಳಿವೆ, ಬೀಗರಿಗೆ ಔತಣವಂತೆ.. " ಬೆಂಗಳೂರಿಂದ ಬಿಡದಿಗೆ ಹೋಗಿದ್ದ ಕಮಲಳ ಮನೆಯ ʼಮುನಿʼಯನ ಮಾದರಿಯ ʼಚಕ್ರವರ್ತಿʼಗಳು, ಸಾಮಂತರುಗಳೆಲ್ಲಾ ಬರೀದೇ ಬಾಯಲ್ಲಿ ನೀರೂರಿಸಿಕೊಂಡು ವಾಪಸ್ಸಾದರಂತೆ!

ಇದಿಷ್ಟು ಕೇತಗಾನಹಳ್ಳಿ ವರ್ಷದೊಡಕಿನ ಈ ಬಾರಿಯ ಯುಗಾದಿ ಫಲ!

ಆದರೆ, ಈ ಬಾಡೂಟ ಅಪಹರಣ ಪ್ರಹಸನ ಅಲ್ಲಿಗೇ ಮುಗಿಯಲಿಲ್ಲ. ಬಿಡದಿಯಿಂದ ಬೆಂಗಳೂರು ತಲುಪುವ ಹೊತ್ತಿಗೆ ಬಾಡೂಟ ʼಹಿಂದೂ ಸಂಸ್ಕೃತಿʼಯಾಗಿತ್ತು. ಬಾಡೂಟದ ಮೇಲಿನ ದಾಳಿ ʼಹಿಂದೂ ಸಂಸ್ಕೃತಿ ಮೇಲಿನ ʼಕೈʼ ದಾಳಿʼಯಾಗಿತ್ತು. ಮೊದಲು ʼಔತಣಕೂಟʼ ಎಂದಾಗಿದ್ದು, ಬಳಿಕ ತೋಟದ ಕೆಲಸಗಾರರಿಗೆ ʼಹಬ್ಬದ ಊಟʼವಾಗಿತ್ತು.

ಬೆಳಿಗ್ಗೆ ಮಿತ್ರರು ಸೇರಿ ‌ʼಗೆಟ್ ಟುಗೆದರ್ʼ ಮಾಡುತ್ತಿರುವುದು, ಸಂಜೆಯ ಹೊತ್ತಿಗೆ ತೋಟದ ಕೆಲಸಗಾರರ ʼಹಬ್ಬದೂಟʼವಾಗುವ ಹೊತ್ತಿಗೆ ʼಹಿಂದೂ ಸಂಸ್ಕೃತಿಯ ಮೇಲಿನ ದಾಳಿʼ ಭಾರೀ ಚರ್ಚೆಗೆ ಗ್ರಾಸವಾಗಿತ್ತು!

Read More
Next Story