Loksabha Election 2024 | ಖರ್ಗೆ ನೆಲದಲ್ಲಿ ಮೋದಿ ಶೋ; ಟಿಕೆಟ್ ವಂಚಿತರ ಬಿಸಿ ತಟ್ಟುವ ಸಾಧ್ಯತೆ
ಶನಿವಾರ (ಮಾ.16) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೆಲದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರ ಸಮಾವೇಶದ ಮೂಲಕ ಲೋಕಸಭೆ ಚುನಾವಣೆಗೆ ಅಬ್ಬರದ ಪ್ರಚಾರ ಆರಂಭಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಲಬುರಗಿ ನಗರದ ಡಿ.ಆರ್.ಗ್ರೌಂಡ್‌ನಿಂದ ಎನ್.ವಿ ಕಾಲೇಜು ಮೈದಾನದವರೆಗೆ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ. ಆ ಬಳಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಸಮಾವೇಶದಲ್ಲಿ ಸುಮಾರು 2 ಲಕ್ಷ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನಿತರರು ಭಾಗಿ ಆಗಲಿದ್ದಾರೆ.
ಬಿಜೆಪಿಯಲ್ಲಿ ಸದ್ಯ ಬಂಡಾಯ ತಾಂಡವಾಡುತ್ತಿದೆ. ಪ್ರಧಾನಿ ಮೋದಿ ಅವರ ಮೊದಲ ಪ್ರಚಾರಕ್ಕೆ ಭಿನ್ನಮತೀಯರ ಆಕ್ರೋಶದ ಬಿಸಿ ತಟ್ಟುವ ಸಾಧ್ಯತೆ ಕೂಡ ಇದೆ. ಮೊದಲ ಹಂತದಲ್ಲೇ ಪ್ರವಾಸ ಮಾಡುವ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸ್ಫರ್ಧೆಗೆ ಸ್ಥಳೀಯ ಬಿಜೆಪಿ ಶಾಸಕರ ವಿರೋಧ ವ್ಯಕ್ತಪಡಿಸಿದ್ಧಾರೆ.
ಮಾಜಿ ಸಿಎಂ ಯಡಿಯೂರಪ್ಪ ಮನವೊಲಿಕೆ ಮಾಡಿದರೂ ಶಾಸಕರು ಖುಬಾಗೆ ಸಹಕಾರ ನೀಡುತ್ತಿಲ್ಲ. ಬೀದರ್ ಭಾಗದ ಪ್ರಭಾವಿ ನಾಯಕ ಪ್ರಭು ಚೌಹಾನ್ ರೆಬೆಲ್ ಆಗಿದ್ದಾರೆ. ಶಾಸಕ ಶರಣು ಸಲಗರ ಕೂಡ ಸೈಲೆಂಟ್ ಆಗಿದ್ದಾರೆ. ಮತ್ತೊಂದು ಕಡೆ ಸಿದ್ದು ಸವದಿ, ಶೈಲೇಂದ್ರ ಬಿಲ್ದಾಳೆ ಅವರು ಖುಬಾ ಪರ ಕೆಲಸ ಮಾಡುವುದಾಗಿ ಹೇಳಿದರೂ ಕೂಡ, ಚುನಾವಣೆಯಲ್ಲಿ ಒಳ ಏಟು ಕೊಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.