Lok Sabha Election 2024: ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪುವ ಭೀತಿ; ಯದುವೀರ್ ಗೆ  ಬಿಜೆಪಿ ಮಣೆ ಸಾಧ್ಯತೆ
x

Lok Sabha Election 2024: ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪುವ ಭೀತಿ; ಯದುವೀರ್ ಗೆ ಬಿಜೆಪಿ ಮಣೆ ಸಾಧ್ಯತೆ

ಮೈಸೂರು ಟಿಕೆಟ್‌ನ್ನು ಈ ಬಾರಿ ಒಬಿಸಿಯವರಿಗೆ ನೀಡಬೇಕು, ಆಗ ನಮಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗುತ್ತದೆ ಎನ್ನುವ ವಾದವನ್ನು ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಕೇಂದ್ರ ನಾಯಕರ ಮುಂದಿಟ್ಟಿದ್ದಾರೆ.


ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಹೊರಬೀಳುವ ಸಾಧ್ಯತೆ ಇದೆ. ಈ ನಡುವೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿವೆ.

ಮೈಸೂರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದ್ದು, ಕಾಂಗ್ರೆಸ್‌ಗೆ ಈ ಕ್ಷೇತ್ರ ಗೆಲ್ಲುವುದು ಪ್ರತಿಷ್ಠೆಯ ಕ್ಷೇತ್ರವಾಗಿದೆ. ಮತ್ತೊಂದೆಡೆ ಬಿಜೆಪಿಗೂ ಇದು ಅತ್ಯಂತ ಪ್ರಮುಖವಾದ ಕ್ಷೇತ್ರವಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮೈಸೂರು - ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಸರ್ವೆ ನಡೆಸಿದ್ದು, ಅಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ನೀಡಿದರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಪ್ರತಾಪ್ ಸಿಂಹ ಮೈಸೂರು ಕ್ಷೇತ್ರದಲ್ಲಿ ಪ್ರಭಾವಿ ಅಭ್ಯರ್ಥಿ ಆಗಿದ್ದರೂ ಸ್ಥಳೀಯ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ. ಹಾಗಾಗಿ ಅವರಿಗೆ ಟಿಕೆಟ್‌ ತಪ್ಪುವ ಸಾಧ್ಯತೆ ಇದೆ ಅಂತಲೂ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

ಇತ್ತೀಚೆಗೆ ದೆಹಲಿಯಲ್ಲಿ ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದ ಪ್ರಭಾವಿ ನಾಯಕರು ಭಾಗಿಯಾಗಿದ್ದರು. ಈ ವೇಳೆ ಪ್ರತಾಪ್ ಸಿಂಹ್‌ ಅವರಿಗೆ ಟಿಕೆಟ್‌ ನೀಡುವ ವಿಚಾರವಾಗಿ ಭಿನ್ನಾಭಿಪ್ರಾಯಗಳು ಕೇಳಿಬಂದವು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು, ಮೈಸೂರು ಟಿಕೆಟ್‌ ಅನ್ನು ಈ ಬಾರಿ ಒಬಿಸಿಯವರಿಗೆ ನೀಡಬೇಕು, ಆಗ ನಮಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗುತ್ತದೆ ಎನ್ನುವ ವಾದವನ್ನು ಕೇಂದ್ರ ನಾಯಕರ ಮುಂದಿಟ್ಟಿದ್ದಾರೆ.

ಒಬಿಸಿ ಅಂದರೆ ಯಾರಿಗೆ ಕೊಡಬೇಕು ಎನ್ನುವ ಪ್ರಶ್ನೆಯನ್ನು ಕೇಳಿದಾಗ ʼಯಾದವ ಸಮುದಾಯʼದ ಮೈಸೂರು‌ ಅರಮನೆ ರಾಜ ಪ್ರತಿನಿಧಿ ಯದುವೀರರಿಗೆ ನೀಡಬೇಕು ಎಂದು ವಿಜಯೇಂದ್ರ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರತಾಪ್ ಸಿಂಹ್‌ಗೆ ಟಿಕೆಟ್ ಕೈ ತಪ್ಪುವ ಭೀತಿ

ಈ ಸಭೆ ಬಳಿಕ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈತಪ್ಪುವ ಭೀತಿ ಶುರುವಾಗಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ʼʼನಾನು ಈ ಭಾಗದಲ್ಲಿ ಸಂಸದನಾಗಿ ಮಾಡಬೇಕಿದ್ದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಿಂದುತ್ವ ಹಾಗೂ ಅಭಿವದ್ಧಿ ವಿಚಾರದಲ್ಲಿ ನನ್ನನ್ನು ಮೀರುವ ಇನ್ನೊಬ್ಬ ವ್ಯಕ್ತಿ ಯಾರಿಲ್ಲ. ನನ್ನನ್ನ ಕಾಯೋಕೆ ಬೆಟ್ಟದ ಮೇಲಿನ ಚಾಮುಂಡೇಶ್ವರಿ ಇದ್ದಾಳೆ, ಮಾಡಿದ್ದ ಕೆಲಸ ನೋಡೋಕೆ ಜನ ಇದಾರೆ, ಬೆನ್ನಿಗೆ ನಿಲ್ಲಲು ಕಾರ್ಯಕರ್ತರಿದ್ದಾರೆ. ಇವರೆಲ್ಲರ ಶ್ರೀರಕ್ಷೆ ಇದ್ದರೆ ಅಷ್ಟೇ ಸಾಕುʼʼ ಎಂದು ಹೇಳಿದ್ದಾರೆ.

ಈ ಬಾರಿ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ಗೆ ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್‌, ಮೈಸೂರು ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರು ಚರ್ಚೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಸಂಸದ ಪ್ರತಾಪ್ ಸಿಂಹ ‌ಅವರಿಗೆ ಟಿಕೆಟ್‌ ಕೈತಪ್ಪಲಿದ್ದು, ಮೈಸೂರು ಸಂಸ್ಥಾನದ ಪ್ರತಿನಿಧಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಕ್ಷ ಮಣೆ ಹಾಕಲಿದೆಯಾ ಎನ್ನುವ ಪ್ರಶ್ನೆ ಎಲ್ಲರೂ ಮೂಡಿದೆ.

ಈ ಬಗ್ಗೆ ಶನಿವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ʼʼನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲʼʼ ಎಂದು ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ ಅವರು ಪರೋಕ್ಷವಾಗಿ ಪ್ರತಾಪ್ ಸಿಂಹ್ ಗೆ ಟಿಕೆಟ್ ಮಿಸ್ ಆಗುವ ಸುಳಿವು ನೀಡಿದರಾ ಎಂಬ ಅನುಮಾನ ಹುಟ್ಟುಹಾಕಿದೆ.

Read More
Next Story