Loksabha Election 2024 | ದೇಶಾದ್ಯಂತ ಏ.19ರಿಂದ ಏಳು ಹಂತದಲ್ಲಿ ಚುನಾವಣೆ; ಕರ್ನಾಟಕದಲ್ಲಿ ಏ. 26, ಮೇ 7ರಂದು ಮತದಾನ
x

Loksabha Election 2024 | ದೇಶಾದ್ಯಂತ ಏ.19ರಿಂದ ಏಳು ಹಂತದಲ್ಲಿ ಚುನಾವಣೆ; ಕರ್ನಾಟಕದಲ್ಲಿ ಏ. 26, ಮೇ 7ರಂದು ಮತದಾನ


ಲೋಕಸಭೆ ಚುನಾವಣೆ 2024ರ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಲೋಕಸಭೆಯ 543 ಸ್ಥಾನಗಳಿಗೆ ಏ.19 ರಿಂದ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏ.26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಪೂರಕ ವಿವರಗಳನ್ನು ಪ್ರಕಟಿಸಿದರು.


2024ರ ಲೋಕಸಭಾ ಮತ್ತು ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ, ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ರಾಜೀವ್‌ ಕುಮಾರ್‌ (Rajiv Kumar) ಪ್ರಕಟಿಸಿದರು.

ಏ. 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಏ.26 ರಂದು ಎರಡನೇ ಹಂತದಲ್ಲಿ 89 ಸ್ಥಾನಗಳಲ್ಲಿ, ಮೇ 7 ರಂದು ಮೂರನೇ ಹಂತದಲ್ಲಿ 94 ಕ್ಷೇತ್ರಗಳಲ್ಲಿ, ಮೇ 13ರಂದು ನಾಲ್ಕನೇ ಹಂತದಲ್ಲಿ 96 ಕ್ಷೇತ್ರಗಳಲ್ಲಿ, ಮೇ ೨೦ರಂದು ಐದನೇ ಹಂತದಲ್ಲಿ 49 ಕ್ಷೇತ್ರಗಳಲ್ಲಿ, ಮೇ 25ರಂದು 57 ಕ್ಷೇತ್ರಗಳಲ್ಲಿ ಮತ್ತು ಜೂನ್‌ 1 ರಂದು ಕೊನೆಯ ಮತ್ತು ಏಳನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.


ಕರ್ನಾಟಕದಲ್ಲಿ ಎರಡು ಹಂತ

ಏ.26 ರಂದು ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮತ್ತು ಮೇ 7 ರಂದು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ದೇಶದಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 96.88 ಕೋಟಿ. ಈ ಪೈಕಿ 49.72 ಕೋಟಿ ಪುರುಷ ಮತದಾರರು. 47.15 ಕೋಟಿ ಮಹಿಳಾ ಮತದಾರರು. ಉಳಿದಂತೆ, 48,044 ತೃತೀಯ ಲಿಂಗಿ ಮತದಾರರು. ಅಂಗವೈಕಲ್ಯ ಹೊಂದಿರುವ ಮತದಾರರ ಸಂಖ್ಯೆ 88.35 ಲಕ್ಷ. ಇನ್ನು 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 1.85 ಕೋಟಿ. 100 ವರ್ಷ ಮೇಲ್ಪಟ್ಟ ಮತದಾರರು 2.38 ಲಕ್ಷ ಇದ್ದಾರೆ. ಇನ್ನು 18-19ರ ವಯೋಮಾನದವರು 1.84 ಕೋಟಿ. 20-29 ವರ್ಷ ವಯೋಮಾನದವರು 19.74 ಕೋಟಿ ಮತದಾರರಿದ್ದಾರೆ.

ಭಾರತದ ಒಟ್ಟು ಮತದಾರರು: 96.88 ಕೋಟಿ, ಪುರುಷರು: 49.72 ಕೋಟಿ, ಮಹಿಳೆಯರು: 47.15 ಕೋಟಿ,

ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಹೊಸ ಸರ್ಕಾರ ರಚನೆಯಾಗಬೇಕಿದೆ.‌

ಹಿಂದಿನ ಚುನಾವಣೆ

ಕಳೆದ 2019ರಲ್ಲಿ ಮಾರ್ಚ್‌ 10ರಂದು ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತು. ಆಗ ಒಟ್ಟು ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದು ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಏಪ್ರಿಲ್ 11 ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಮೇ 19 ರಂದು ಕೊನೆಯ ಹಂತದ ಮತದಾನ ನಡೆದಿತ್ತು. ಆ ಚುನಾವಣೆಯ ಸಮಯದಲ್ಲಿ, ದೇಶದಲ್ಲಿ 91 ಕೋಟಿಗೂ ಹೆಚ್ಚು ಮತದಾರರಿದ್ದರು, ಅದರಲ್ಲಿ 67% ಜನರು ಮತ ಚಲಾಯಿಸಿದ್ದರು.

Read More
Next Story