ಶಿವಮೊಗ್ಗ ಬಿಗ್‌ ಫೈಟ್‌ | ಭಾರೀ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ: ಕೆ.ಎಸ್‌ ಈಶ್ವರಪ್ಪ ʼಶಕ್ತಿ ಪ್ರದರ್ಶನʼ
x

ಶಿವಮೊಗ್ಗ ಬಿಗ್‌ ಫೈಟ್‌ | ಭಾರೀ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ: ಕೆ.ಎಸ್‌ ಈಶ್ವರಪ್ಪ ʼಶಕ್ತಿ ಪ್ರದರ್ಶನʼ

ಶಿವಮೊಗ್ಗದಲ್ಲಿ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರ ಭಾರೀ ಮೆರವಣಿಗೆಯ ಮೂಲಕ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್‌ ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದರು.


ತಮ್ಮ ಪುತ್ರನಿಗೆ ಬಿಜೆಪಿ ಪಕ್ಷ ಟಿಕೆಟ್‌ ನೀಡದೆ ಇರುವುದನ್ನು ವಿರೋಧಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಈಶ್ವರಪ್ಪ ಅವರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯೊಬ್ಬರ ನಾಮಪತ್ರ ಸಲ್ಲಿಕೆ ವೇಳೆ ಈ ಮಟ್ಟಿನ ಜನಸಾಗರ ಹರಿದು ಬಂದಿದೆ.

ಜೈ ಶ್ರೀರಾಂ ಘೋಷಣೆ ಸೇರಿದಂತೆ ಮೋದಿ, ಈಶ್ವರಪ್ಪ ಪರವಾಗಿಯೂ ಅಭಿಮಾನಿಗಳು ಜಯಘೋಷ ಮೊಳಗಿಸಿದ್ದು, ಕೇಸರಿ ಧ್ವಜಗಳನ್ನು ಪ್ರದರ್ಶಿಸಿದ್ದಾರೆ. ಒಂದು ಕಡೆ ಪ್ರಧಾನಿ ಮೋದಿ ಭಾವಚಿತ್ರ ಹಾಗೂ ಮತ್ತೊಂದು ಕಡೆ ಈಶ್ವರಪ್ಪ ಅವರ ಭಾವಚಿತ್ರವನ್ನು ಹೊಂದಿದ್ದ ತೆರೆದ ವಾಹನದಲ್ಲಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕಿನ ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಶಿವಪ್ಪನಾಯಕ ಸರ್ಕಲ್‌, ಎಎ ಸರ್ಕಲ್‌ ಮೂಲಕ ಹಾದು, ನೆಹರೂ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ತಮ್ಮ ಹೋರಾಟ ಬಿ.ಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತ್ರವೆಂದು ಘೋಷಿಸಿದ್ದ ಕೆ.ಎಸ್‌ ಈಶ್ವರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಮತ್ತು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಪಾರು ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದರು. ಇದೀಗ, ಈಶ್ವರಪ್ಪ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತದ್ರೂಪಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡು, ಜನರ ಗಮನ ಸೆಳೆದಿದ್ದಾರೆ.

ಈ‍ಶ್ವರಪ್ಪ ಅವರು ಕೆಲ ಹೊತ್ತು ಮೆರವಣಿಗೆ ಜೊತೆ ಹೋದ ಬಳಿಕ ನಾಮಪತ್ರ ಸಲ್ಲಿಸಲು ತೆರಳಿದ್ದು, ನಂತರ ಅವರ ಪುತ್ರ ಕೆ.ಈ.ಕಾಂತೇಶ್‌ ನೇತೃತ್ವದಲ್ಲಿ ಮೆರವಣಿಗೆ ಮುಂದುವರಿಯಿತು. ವಿವಿಧ ಕಲಾ ಪ್ರದರ್ಶನ ತಂಡಗಳೂ ಮೆರವಣಿಗೆಯಲ್ಲಿದ್ದವು.

ಪತ್ನಿ ಜಯಲಕ್ಷ್ಮಿ ಅವರೊಂದಿಗೆ ತೆರಳಿದ ಕೆ.ಎಸ್.ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ನಾಮಪತ್ರ ಸ್ವೀಕರಿಸಿದರು. ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಮಹಾಲಿಂಗ ಶಾಸ್ತ್ರ ಮೊದಲಾದವರು ಇದ್ದರು.

Read More
Next Story