ಲೋಕ ಸ್ವಾರಸ್ಯ | ಮೋದಿ ಪೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ ಕೆ.ಎಸ್ ಈಶ್ವರಪ್ಪ!
x
ಪ್ರಧಾನಿ ನರೇಂದ್ರ ಮೋದಿ, ಕೆ.ಎಸ್‌ ಈಶ್ವರಪ್ಪ

ಲೋಕ ಸ್ವಾರಸ್ಯ | ಮೋದಿ ಪೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ ಕೆ.ಎಸ್ ಈಶ್ವರಪ್ಪ!

ಕೆ.ಎಸ್ ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದು, ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.


ಕರ್ನಾಟಕ ಬಿಜೆಪಿ ಹಾಗೂ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೊಸ ಸವಾಲು ಹಾಕಿದ್ದಾರೆ.

ಶಿವಮೊಗ್ಗ ಲೋಕಸಭಾ ಕಣದಿಂದ ಕೆ.ಎಸ್ ಈಶ್ವರಪ್ಪ ಹಿಂದೆ ಸರಿಯುತ್ತಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದರೂ, ಬಿಜೆಪಿಯ ಅಸ್ತ್ರಗಳನ್ನೇ ಬಳಸಿಕೊಳ್ಳುತ್ತಿರುವುದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಸುವ ವಿಚಾರವಾಗಿ ಇದೀಗ ಕೆ.ಎಸ್ ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಸುತ್ತಿರುವ ಬಗ್ಗೆ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಶ್ವರಪ್ಪ ಅವರು ಶಿವಮೊಗ್ಗ ನ್ಯಾಯಾಲಯದಲ್ಲಿ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.

“ನಾನು ದೇಶಭಕ್ತ, ಮೋದಿ ಭಕ್ತ. ನನ್ನ ಎದೆ ಬಗೆದರೆ ಒಂದು ಕಡೆ ಶ್ರೀರಾಮ, ಮತ್ತೊಂದು ಕಡೆ ಮೋದಿ ಕಾಣ್ತಾರೆ” ಎಂದು ಈಶ್ವರಪ್ಪ ಹೇಳಿದ್ದು, ಬಂಡಾಯ ಅಭ್ಯರ್ಥಿಯಾಗಿ ತಮ್ಮ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಸುತ್ತಿದ್ದಾರೆ. ಆದರೆ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ಮತ್ತು ಬಿಜೆಪಿ ಶಿವಮೊಗ್ಗ ಘಟಕ ಈಶ್ವರಪ್ಪ ಅವರು ಮೋದಿ ಫೋಟೋ ಬಳಸಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆ.ಎಸ್‌ ಈಶ್ವರಪ್ಪ ಅವರು, “ಮೋದಿ ಫೋಟೋ ಬಳಸಿಕೊಳ್ಳಬಾರದು ಎಂದು ಹೇಳುವುದಕ್ಕೆ ಮೋದಿ, ಅವರ ಅಪ್ಪನ ಮನೆಯ ಆಸ್ತಿ ಅಲ್ಲ. ಪ್ರಧಾನಿ ಮೋದಿ ವಿಶ್ವ ನಾಯಕ. ನಾನು ನರೇಂದ್ರ ಮೋದಿಯನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ” ಎಂದು ಹೇಳಿದ್ದರು.

ಇದೀಗ ಕೆ.ಎಸ್.ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದು, ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದ ನಂತರ ಮುಂದಿನ ವಿಚಾರಣೆ ನಡೆಯಲಿದೆ.

ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿರುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ.ಮೇಘರಾಜ್, ಚುನಾವಣೆ ಹಾಗೂ ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಿಜೆಪಿ ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ. ಈ ಸಂಬಂಧ ನಾವು ಸಹ ಕಾನೂನು ಹೋರಾಟ ಮುಂದುವರಿಸಲಿದ್ದೇವೆ. ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ" ಎಂದು ಹೇಳಿದ್ದಾರೆ.

Read More
Next Story