ಕೇಂದ್ರದಿಂದ 'ಬರ'ದ ಪರಿಹಾರ: ಚುನಾವಣಾ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದತ್ತ "ಮಲತಾಯಿ ಧೋರಣೆ" ತೋರುತ್ತಿದೆ; ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಣಿಸಿದೆ ಹಾಗೂ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ೨೫ ಸಂಸದರ ವೈಫಲ್ಯವನ್ನು ಲೋಕಸಭಾ ಚುನಾವಣೆಯ ʼವಿಷಯವಾಗಿʼ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷ ಉತ್ಸುಕವಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದತ್ತ "ಮಲತಾಯಿ ಧೋರಣೆ" ತೋರುತ್ತಿದೆ; ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಣಿಸಿದೆ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ೨೫ ಸಂಸದರ ವೈಫಲ್ಯವನ್ನು ಲೋಕಸಭಾ ಚುನಾವಣೆಯ ʼವಿಷಯವಾಗಿʼ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷ ಉತ್ಸುಕವಾಗಿದೆ. ಇಂತಹ ವಿಷಯಗಳನ್ನೇ ಎತ್ತಿತೋರಿಸುವ ಕಾಂಗ್ರೆಸ್‌ನ ತಂತ್ರಗಾರಿಕೆ ಬಿಜೆಪಿಗೆ ಇರಿಸುಮುರಿಸು ಮಾಡಿದಂತಾಗಿದೆ.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF)ನಿಂದ ಬರ ಪರಿಹಾರವನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವುದಾಗಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರುವರಿ 7 ರಂದು ತಮ್ಮ “ಚಲೋ ದೆಹಲಿ” ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ತಮ್ಮ ಪೂರ್ತಿ ಮಂತ್ರಿಮಂಡಲದ ಜತೆಯಾಗಿ " ಅನುದಾನ ಹಂಚಿಕೆಯಲ್ಲಿ ಕೇಂದ್ರದ ವೈಫಲ್ಯ ಮತ್ತು ತೆರಿಗೆ ಹಂಚಿಕೆಯ ಅಸಮಾನತೆಯಿಂದಾಗಿ ಕರ್ನಾಟಕದ ಆರ್ಥಿಕ ಸಂಕಷ್ಟ ಅನುಭವಿಸಿದೆ," ಎಂದು ಗಮನ ಸೆಳೆಯಲಾಗಿತ್ತು. ಈಗ ಸುಪ್ರೀಕೋರ್ಟ್ ಕದ ತಟ್ಟುವ ಮೂಲಕ ಹೊಸ ತಂತ್ರಗಾರಿಕೆಗೆ ಕಾಂಗ್ರೆಸ್ ಶರಣಾಗಿದೆ.
ಕಳೆದ ವರ್ಷದಿಂದ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಕೇಂದ್ರ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಆದ ಹಾನಿಯನ್ನು ಅಂದಾಜಿಸಿದ್ದರೂ ರಾಜ್ಯಕ್ಕೆ ಸಿಗಬೇಕಾದ ಪರಿಹಾರ ಇನ್ನೂ ಗಗನ ಕುಸುಮವಾಗಿದೆ. ಬರ ಪರಿಹಾರ ಸೇರಿದಂತೆ ರಾಜ್ಯ ಸರ್ಕಾರವನ್ನು ಕೇಂದ್ರ ನಿರ್ಲಕ್ಷಿಸಿರುವುದನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಮುಖ್ಯ ವಿಷಯವಾಗಿಸುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಾಪಕ ಕಾರ್ಯತಂತ್ರದ ಭಾಗವಾಗಿದ್ದು, ಆ ಮೂಲಕ ಅವರು ರಾಜ್ಯದತ್ತ ಕೇಂದ್ರದ ನಿರ್ಲಕ್ಷವನ್ನು ಎತ್ತಿ ತೋರಿಸಲು ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ದೆಹಲಿಯಲ್ಲಿ ಪ್ರತಿಪಾದಿಸಲು ಬಿಜೆಪಿಯ ಬಹುಸಂಖ್ಯೆಯ ಅಂದರೆ ೨೫ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದು ಬಿಜೆಪಿಯ ಚುನಾವಣಾ ಪ್ರಚಾರದ ತಂತ್ರಗಾರಿಕೆಗೆ ನುಂಗಲಾರದ ತುತ್ತಾದಂತೆ ಭಾಸವಾಗುತ್ತಿದೆ.
ಚುನಾವಣಾ ಕಾಲದಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ತಂತ್ರದ ಭಾಗವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿದ ತೆರಿಗೆ ಹಂಚಿಕೆಯ ಅಸಮಾನತೆ ಮತ್ತು ತಡೆಹಿಡಿಯಲಾಗಿರುವ ಕೇಂದ್ರ ಅನುದಾನ ವಿಷಯಗಳು ಸೇರಿವೆ. ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸಂಸದರ ಉದಾಸೀನತೆ ಕರ್ನಾಟಕವನ್ನು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿದೆ ಎಂದು ಆರೋಪಿಸಲು ಮತ್ತು ಜನಮಾನಸದಲ್ಲಿ ಬಿಜೆಪಿ ಸಂಸದರಿಗಿಂತ ಕಾಂಗ್ರೆಸ್ ಸಂಸದರಿದ್ದರೆ ರಾಜ್ಯದ ಹಿತಾಸಕ್ತಿ ಕಾಪಾಡಲ ಅನುಕೂಲವಾಗಲಿದೆ ಎಂದು ಗಟ್ಟಿಯಾಗಿ ಆರೋಪಿಸುವುದು ಕಾಂಗ್ರೆಸ್‌ನ ತಂತ್ರಗಾರಿಕೆಯಾಗಿದೆ ಚುನಾವಣಾ ತಂತ್ರಗಾರಿಕೆ ತಂಡದ ಹಿರಿಯ ಮುಖಂಡರೊಬ್ಬರು "ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು. "ಕರ್ನಾಟಕದಿಂದ 25 ಬಿಜೆಪಿ ಸಂಸದರನ್ನು ೨೦೧೯ರ ಚುನಾವಣೆಯಲ್ಲಿ ಕಳುಹಿಸಲಾಗಿದ್ದರೂ ರಾಜ್ಯದ ಹಿತಾಸಕ್ತಿ ಕಾಪಾಡುವುದು ಸಾಧ್ಯವಾಗಿಲ್ಲʼ ಎಂದವರು ಆರೋಪಿಸಿದ್ದಾರೆ.
"ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹೇಗೆ ಪ್ರಯತ್ನಿಸುತ್ತಿದೆ. ರಾಜ್ಯದೆಲ್ಲೆಡೆ ಬರಪೀಡಿತ ಪ್ರದೇಶಗಳಲ್ಲಿ ನಮ್ಮ ಜನರು ಸಂಕಷ್ಟ ಎದುರಿಸುತ್ತಿದ್ದು, ರಾಜ್ಯದ ಹಿತ ಕಾಪಾಡುವುದು ಯಾವುದೇ ಸಂಸದನ ಕರ್ತವ್ಯ. ಬಿಜೆಪಿ ಸಂಸದರ ನಿಜಬಣ್ಣ ಬಯಲಾಗಬೇಕಿದೆ,’’ ಎಂದು ಹೆಸರು ಹೇಳಲಿಚ್ಛಿಸದ ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ಪರಿಹಾರ
“ಕೇಂದ್ರದಿಂದ ನಮಗೆ ಕಾನೂನು ಪ್ರಕಾರವಾಗಿ ಲಭಿಸಬೇಕಾದ ಪರಿಹಾರಕ್ಕಾಗಿ ಕಾದು, ಅನೇಕ ಪತ್ರಗಳನ್ನು ಬರೆದು ಅದರ ಫಲಿತಾಂಶ ಸಿಗುವುದು ಬಹಳ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇವೆ. ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನಾವು ನಮ್ಮ ಕಾನೂನು ಹಕ್ಕನ್ನು ಚಲಾಯಿಸಿದ್ದೇವೆ. ರಾಜ್ಯಕ್ಕೆ ಎನ್‌ಡಿಆರ್‌ಎಫ್ ನಿಧಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ನಮ್ಮ ಪಾಲು ಸಿಗುತ್ತದೆ ಎಂದು ಐದು ತಿಂಗಳು ಕಾದೆವು. ನಮಗೆ ಬೇರೆ ದಾರಿಯಿಲ್ಲದ ಕಾರಣ ನಾವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದೇವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ಅರ್ಜಿ ಸಲ್ಲಿಸಿದ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬರಗಾಲದಂತಹ ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಬರದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ರಚಿಸಲಾಗಿದೆ, ಆದರೆ ಕಾನೂನಿನಡಿಯಲ್ಲಿ ರಾಜ್ಯಕ್ಕೆ ನೀಡಬೇಕಾದ ಒಂದು ಪೈಸೆ ಪರಿಹಾರವನ್ನು ನೀಡಲು ಕೇಂದ್ರವು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ನಾಲ್ಕು ಬಾರಿ ಮೌಲ್ಯಮಾಪನದ ನಂತರ ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರದಿಂದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ನಷ್ಟವಾಗಿದ್ದು, ನೆರವು ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮೂರು ಬಾರಿ ಪತ್ರ ಬರೆದಿದೆ. "ನಮ್ಮ ಸರ್ಕಾರ ಬರಗಾಲದ ವಿನಾಶಕಾರಿ ಪರಿಣಾಮಗಳನ್ನು ಎದುರಿಸಲು NDRF ನಿಂದ 18,171.44 ಕೋಟಿ ರೂ. ಸಹಾಯ ಕೇಳಿದೆ. ಒಟ್ಟಾರೆ, ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯಕ್ಕೆ 35,162.05 ಕೋಟಿ ರೂ. ಬೇಕಾಗಿದೆ," ಎಂದರು.
15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ರೂ. 6,764 ಕೋಟಿ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆನೀಡಲು ಶಿಫಾರಸು ಮಾಡಿದೆ. ಅಂತಿಮ ವರದಿಯು ಕರ್ನಾಟಕಕ್ಕೆ 6,000 ಕೋಟಿ ರೂ.ಗಳನ್ನು ಸಹ ಮಂಜೂರು ಮಾಡಿದೆ, ಆದರೆ ನಿರ್ಮಲಾ ಸೀತಾರಾಮನ್ ನೇತೃತ್ವದ ಹಣಕಾಸು ಸಚಿವಾಲಯವು ಈ ಶಿಫಾರಸುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಕರ್ನಾಟಕಕ್ಕೆ ತನ್ನ ಹಕ್ಕಿನ ಪಾಲನ್ನು ನಿರಾಕರಿಸಿರುವುದು ಒಕ್ಕೂಟ ವ್ಯವಸ್ಥೆಯ ಮಹತ್ವಕ್ಕೆ ಧಕ್ಕೆಯಾದಂತಾಗಿದೆ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.
ಚುನಾವಣಾ ಪ್ರಚಾರ ತಂತ್ರ
ಕರ್ನಾಟಕದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ‘ಮಲತಾಯಿ’ಯ ಧೋರಣೆಯನ್ನು ಎತ್ತಿ ತೋರಿಸಲು ಮತ್ತು ‘ಅಸಮಾನತೆ’ಯ ಸುತ್ತ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಒತ್ತು ನೀಡುವಂತೆ ಕಾಂಗ್ರೆಸ್‌ನ ವರಿಷ್ಠರು ಪ್ರಚಾರ ಸಮಿತಿಗೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಮೋದಿ ಸರ್ಕಾರದ ವೈಫಲ್ಯಗಳು ಮತ್ತು ಕರ್ನಾಟಕದ ಕೇಂದ್ರ ಸರ್ಕಾರದ ನಿರ್ಲಕ್ಷತೆಯನ್ನಯ ಎತ್ತಿ ತೋರಿಸಲು ಪ್ರಚಾರ ಸಮಿತಿಯ ಸಾಮಾಜಿಕ ಮಾಧ್ಯಮ ಕೋಶಕ್ಕೂ ಸ್ಪಷ್ಟ ಸಂದೇಶ ರವಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಹೋರ್ಡಿಂಗ್‌ಗಳು, ಎಲ್‌ಇಡಿ ಪರದೆಗಳು ಮತ್ತು ಟಿವಿ ಮತ್ತು ಮುದ್ರಣ ಜಾಹೀರಾತುಗಳಿರಲಿದ್ದು, ಕರ್ನಾಟಕದ ನ್ಯಾಯಯುತ ಅಗತ್ಯಗಳನ್ನು ಪೂರೈಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಮತ್ತು ರಾಜ್ಯದ ಕಡೆಗೆ ಅದರ ಮಲತಾಯಿಯ ವರ್ತನೆಯನ್ನು ತೋರಿಸುವ ವಿಚಾರವನ್ನು ಅಳವಾಡಿಸಲಾಗಿಎ. ಕೇಂದ್ರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ಬಿಜೆಪಿಯ 25 ಸಂಸದರ ವೈಫಲ್ಯವನ್ನೂ ಪ್ರಚಾರ ಕಾರ್ಯದಲ್ಲಿ ಎತ್ತಿ ತೋರಿಸಲಾಗುವುದು ಎಂದು ಹೇಳಲಾಗಿದೆ.
ಬರಗಾಲದ ಸಮಸ್ಯೆ ಮತ್ತು ಕರ್ನಾಟಕಕ್ಕೆ ಕೇಂದ್ರದ ಅಸಹಕಾರವಿದೆ ಎಂಬುದನ್ನು ಚುನಾವಣಾ ಪ್ರಚಾರದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಆ ಮೂಲಕ ಕರ್ನಾಟಕ ರೈತರ ಹಿತಾಸಕ್ತಿಗಳ ರಕ್ಷಕ ಎಂದು ಸ್ವತಃ ಬಿಂಬಿಸಲು ಕಾಂಗ್ರೆಸ್ ಉದ್ದೇಶಿಸಿದೆ ಮತ್ತು ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂಬ ಬಿಜೆಪಿ ಆರೋಪವನ್ನು ಎದುರಿಸಲು ಸ್ಪಷ್ಟ ತಂತ್ರಗಳನ್ನು ಹೆಣೆಯಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬಿಜೆಪಿ ತಕರಾರು
ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವ ಸಿಎಂ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ ನಡೆ ರಾಜಕೀಯ ಪ್ರೇರಿತವಾಗಿದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ವಿಚಾರ ಕರ್ನಾಟಕದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾದಂತಿದೆ ಎಂದಿದ್ದಾರೆ. “ತಮ್ಮ ಎಲ್ಲ ಲೋಪದೋಷಗಳನ್ನು ಕೇಂದ್ರಕ್ಕೆ ಎತ್ತಿ ತೋರಿಸುವುದೊಂದೇ ತಮ್ಮ ಕೆಲಸ ಎಂದು ಮುಖ್ಯಮಂತ್ರಿಯವರು ಭಾವಿಸಿದಂತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಬರ, ಪ್ರವಾಹದಂತಹ ಪ್ರಕೃತಿ ವಿಕೋಪಗಳನ್ನು ಎದುರಿಸಿತ್ತು. ಆದರೆ ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದ ಬೊಕ್ಕಸದಿಂದ ಪರಿಹಾರ ಒದಗಿಸಿದೆ. ಬರ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿ ರಾಜಕೀಯ ಮಾಡುತ್ತಿದ್ದಾರೆ,’’ ಎಂದು ಅಶೋಕ್ ಟೀಕಿಸಿದ್ದಾರೆ.
"ಚುನಾವಣೆ ಬಂದಾಗ ರಾಜಕೀಯ ಮಾಡಿ. ಆದರೆ ಚುನಾವಣೆಯ ನಂತರ ರಾಜಕೀಯವನ್ನು ಬದಿಗಿಟ್ಟು ಆಡಳಿತದತ್ತ ಗಮನ ಹರಿಸಿ ಜನರ ಹಿತ ಕಾಪಾಡಲು ಆದ್ಯತೆ ನೀಡಿ," ಎಂದು ಅಶೋಕ್ ಅವರು ಮುಖ್ಯಮಂತಿಗೆ ಕಿವಿಮಾತು ಹೇಳಿ ಲೇವಡಿ ಮಾಡಿದ್ದಾರೆ.