ಜೆಡಿಎಸ್‌ಗೆ ಮಂಡ್ಯ ಕಗ್ಗಂಟು | ಎಚ್‌ ಡಿ ಕೆ ಸ್ಪರ್ಧೆಗೆ ಚನ್ನಪಟ್ಟಣ ಕಾರ್ಯಕರ್ತರ ವಿರೋಧ
x

ಜೆಡಿಎಸ್‌ಗೆ ಮಂಡ್ಯ ಕಗ್ಗಂಟು | ಎಚ್‌ ಡಿ ಕೆ ಸ್ಪರ್ಧೆಗೆ ಚನ್ನಪಟ್ಟಣ ಕಾರ್ಯಕರ್ತರ ವಿರೋಧ


ಲೋಕಸಭಾ ಚುನಾವಣೆಗೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ವಿಚಾರದಲ್ಲಿ ಜೆಡಿಎಸ್‌ನ ಕಗ್ಗಂಟು ಇನ್ನೂ ಮುಂದುವರಿದಿದೆ. ಈ ಸಂಬಂಧ ಮಂಗಳವಾರ ಜೆಡಿಎಸ್ ಪಕ್ಷದ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸಭೆ ಎಚ್‌ ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆಯಿತು.

ಮಂಡ್ಯ ಲೋಕಸಭೆ ಅಖಾಡಕ್ಕೆ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಈ ನಡುವೆ ಕಾರ್ಯಕರ್ತರ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಸೋಮವಾರ ಕೂಡ ಎಚ್‌ಡಿಕೆ ಸಭೆ ನಡೆಸಿದರು. ಜೆಪಿ ನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಚನ್ನಪಟ್ಟಣ ಹಾಗೂ ಮಂಡ್ಯದ ಕಾರ್ಯಕರ್ತರು ಭಾಗಿಯಾಗಿದ್ದರು.

ಈ ವೇಳೆ ಚನ್ನಪಟ್ಟಣ ತೊರೆದು ಮಂಡ್ಯ ಲೋಕ ರಾಜಕೀಯಕ್ಕೆ ಕುಮಾರಸ್ವಾಮಿ ಎಂಟ್ರಿಗೆ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚನ್ನಪಟ್ಟಣ ಜೆಡಿಎಸ್ ಮುಖಂಡ ಮಹೇಶ್ ಗೌಡ, ಚನ್ನಪಟ್ಟಣ ತೊರೆಯಲು ನಾವು ಬಿಡೋದಿಲ್ಲ ಎಂದಿದ್ದಾರೆ.

ಮತ್ತೊಂದೆಡೆ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದ್ದು, ಇದಕ್ಕೆ ನೀವು ಒಪ್ಪಿಗೆ ನೀಡಬೇಕು ಎನ್ನುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ತಾವು ಸದ್ಯ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪರೋಕ್ಷ ಸಂದೇಶ ನೀಡಿದ್ದಾರೆ.

ಕುಮಾರಸ್ವಾಮಿ ಅವರಿಗಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ನಡುವೆ ಜಟಾಪಟಿಯೇ ನಡೆದಿದೆ. ಒಂದು ಕಡೆ ಚನ್ನಪಟ್ಟಣ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೆ ಇತ್ತ ಮಂಡ್ಯ ಕಾರ್ಯಕರ್ತರೊಬ್ಬರು ಕೈ ಕೊಯ್ದುಕೊಂಡು ಮಂಡ್ಯಗೆ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಬರಲೇಬೇಕು ಎಂದು ಹಠ ಹಿಡಿದಿದ್ದರು. ಅಲ್ಲದೆ ನಿವಾಸದ ಮುಂದೆ ಜೈಕಾರ ಕೂಗುತ್ತಾ, ಈ ಬಾರಿ ಮಂಡ್ಯದಿಂದ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದು ಘೋಷಣೆ ಕೂಗಿದರು.

ಸೋಮವಾರ ನಡೆದ ಕಾರ್ಯಕರ್ತರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ʼʼಚನ್ನಪಟ್ಟಣ ತೊರೆಯಲು ಸಮಸ್ಯೆ ಎದುರಾಗಿದ್ದು, ಕಾರ್ಯಕರ್ತರ ಮನವೊಲಿಸುವ ಕೆಲಸ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಮಂಗಳವಾರ ಪಟ್ಟಿ ಬಿಡುಗಡೆಯಾಗಲಿದೆʼʼ ಎಂದು ಹೇಳಿದರು.

ಸದ್ಯ ಜೆಡಿಎಸ್ ಇನ್ನೂ ತನ್ನ ಮೂರು ಲೋಕ ಅಖಾಡಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಮಾಡಿಲ್ಲ. ಹಾಸನ, ಕೋಲಾರ, ಮಂಡ್ಯಕ್ಕೆ ಮೂರು ಕ್ಷೇತ್ರಗಳೂ ಜೆಡಿಎಸ್ ಕೈಯಲ್ಲಿದ್ದು, ಅಭ್ಯರ್ಥಿಗಳ ಆಯ್ಕೆ ಮಾತ್ರ ವಿಳಂಬವಾಗುತ್ತಿದೆ. ಆದರೆ ಮಂಡ್ಯಕ್ಕೆ ಕುಮಾರಸ್ವಾಮಿ ಹೆಸರೇ ಮುಂಚೂಣಿಯಲ್ಲಿದ್ದು, ಬಹುತೇಕ ಆಂತಿಮವಾದಂತಿದೆ.

ಮೈತ್ರಿ ಧರ್ಮಪಾಲನೆ ಮಾಡುವ ಉದ್ದೇಶದಿಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮ ಪಕ್ಷದ ಎಲ್ಲ ಹಂತದ ಮುಖಂಡರಿಗೆ 8 ಪ್ರಮುಖ ಅಂಶಗಳನ್ನು ಒಳಗೊಂಡ ನಿರ್ದೇಶನಗಳನ್ನು ರವಾನಿಸಿದ್ದಾರೆ.

ಎಚ್‌ ಡಿಕೆ ಅಷ್ಟ ಸೂತ್ರಗಳು

1) ಎರಡೂ ಪಕ್ಷಗಳು ಎರಡೂ ಪಕ್ಷದ ಚಿಹ್ನೆಗಳನ್ನು ಸಮ ಅಳತೆಯಲ್ಲಿ ಬಳಕೆ ಮಾಡಬೇಕು.

2) ಸಾರ್ವಜನಿಕ ಸಭೆ ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲಿ ಎರಡೂ ಪಕ್ಷಗಳ ಬಾವುಟ ಪ್ರದರ್ಶಿಸಬೇಕು.

3) ಜೆಡಿಎಸ್ ಮತ್ತು ಬಿಜೆಪಿ ನಾಯಕರ ಫೋಟೋಗಳನ್ನು ಭೇದವಿಲ್ಲದೇ ಉಪಯೋಗಿಸಿಕೊಳ್ಳಬೇಕು.

4) ಸಭೆಗಳಲ್ಲಿ ಕಡ್ಡಾಯವಾಗಿ ಎರಡೂ ಪಕ್ಷಗಳ ಕಾರಕರ್ತರು ತಮ್ಮ ತಮ್ಮ ಪಕ್ಷದ ಶಾಲುಗಳನ್ನು ಬಳಸಬೇಕು.

5) ರಾಷ್ಟ್ರ ಮತ್ತು ರಾಜ್ಯಮಟ್ಟದ ಜೆಡಿಎಸ್‌ ಮತ್ತು ಬಿಜೆಪಿ ನಾಯಕರ ಸಾಧನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು.

6) ಕ್ಷೇತ್ರ/ಜಿಲ್ಲಾ/ವಿಧಾನಸಭಾವಾರು ಮುಖಂಡರ ಫೋಟೋಗಳನ್ನು ಕ್ಷೇತ್ರವಾರು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಳಸಬೇಕು.

7) ಮೈತ್ರಿ ಪಕ್ಷದೊಂದಿಗೆ ಚರ್ಚಿಸಿ, ಮತ ಗಟ್ಟೆ ಸಮಿತಿಗಳನ್ನು ರಚಿಸಿ, ಮತದಾರರನ್ನು ಮತಗಟ್ಟೆಗೆ ಕರೆತಂದು ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಕ್ರಮ ವಹಿಸುವುದು.

8) ಗೊಂದಲ ಉಂಟು ಮಾಡಿಕೊಳ್ಳಬಾರದು. ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು.

Read More
Next Story