ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದಿಸುತ್ತೇನೆ: ಎಚ್.ಡಿ ಕುಮಾರಸ್ವಾಮಿ
x
ಎಚ್‌.ಡಿ ಕುಮಾರಸ್ವಾಮಿ

ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದಿಸುತ್ತೇನೆ: ಎಚ್.ಡಿ ಕುಮಾರಸ್ವಾಮಿ

ಎಚ್‌.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್‌ ನಡುವೆ ವಾಗ್ವಾದ ಮುಂದುವರಿದಿದೆ. ಗ್ರಾಮೀಣ ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆಗೆ ಎಚ್‌.ಡಿಕೆ ವಿಷಾದ ವ್ಯಕ್ತಪಡಿಸಿದ್ದಾರೆ.


ʻಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ನಾನು ಆ ರೀತಿ ಮಾತನಾಡಿಲ್ಲ. ನನ್ನ ಮಾತಿನಿಂದ ರಾಜ್ಯದ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆʼ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಯಾವ ಪದವನ್ನೂ ನಾನು ಬಳಸಿಲ್ಲ. ತಾಯಂದಿರು ಎಂದು ಗೌರವಸೂಚಕ ಪದವನ್ನೇ ಬಳಸಿ ಮಾತನಾಡಿದ್ದೇನೆ. ದಾರಿ ತಪ್ಪಿದ್ದಾರೆ ಎನ್ನುವುದು ಅಶ್ಲೀಲ ಪದವಲ್ಲ. ಮನೆಗಳಲ್ಲಿ ಮಕ್ಕಳಿಗೆ ದಾರಿ ತಪ್ಪಬೇಡಿ ಎಂದು ಹೇಳುತ್ತೇವಲ್ಲ, ಆ ರೀತಿ ಹೇಳುವುದು ಹೇಗೆ ತಪ್ಪಾಗುತ್ತದೆʼ ಎಂದು ಪ್ರಶ್ನೆ ಮಾಡಿದರು.

ʻರಾಜ್ಯ ಸರ್ಕಾರ 2,000 ಕೊಟ್ಟು ದುಡಿಯುವ ಜನರಿಂದ 5,000 ಸಾವಿರ ರೂಪಾಯಿ ಕಿತ್ತುಕೊಳ್ಳುತ್ತಿದೆ ಎಂಬರ್ಥದಲ್ಲಿ ನಾನು ಮಾತನಾಡಿದ್ದೆ. ನಾನು ಮಹಿಳೆಯರ ಮೇಲಿನ ಗೌರವದಿಂದ ಸಾರಾಯಿ ನಿಷೇಧ ಮಾಡಿದ್ದೆ. ಕೋಟಿಗಟ್ಟಲೆ ಆಮಿಷವಿದ್ದರೂ ಅದೆನ್ನೆಲ್ಲ ಕಾಲಿನಲ್ಲಿ ಒದ್ದು ಸಾರಾಯಿ ನಿಷೇಧ ಮಾಡಿದ್ದೆ. ಚುನಾವಣಾ ಪ್ರಚಾರ ಸಭೆಯಲ್ಲಿ ನಾನು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದೇನೆ. ಎಲ್ಲಿಯೂ ಮಹಿಳೆಯರಿಗೆ ಅವಮಾನಿಸಿಲ್ಲ. ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಮಾರುಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದರಿಂದ, ಕರ್ನಾಟಕದ ಸಂಪತ್ತಿನ ಲೂಟಿ ಮತ್ತು ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದು ಎಚ್ಚರಿಸಿದ್ದೇನೆ. ಆದರೆ, ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆʼ ಎಂದು ತಿಳಿಸಿದರು.

ʻನಾನು ದಾರಿ ತಪ್ಪಿದ್ದೇನೆ ಎಂದು ಕೆಲವರು ಎಚ್ಚರಿಸಿದ್ದರು. ನಾನು ದಾರಿ ತಪ್ಪಿದ್ದೇನೆ ಎಂದು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಆ ತಪ್ಪುಗಳನ್ನು ತಿದ್ದಿಕೊಂಡು ಹೋಗುತ್ತಿದ್ದೇನೆ. ನನ್ನ ಪತ್ನಿಯೇ ನನ್ನನ್ನು ತಿದ್ದಿದ್ದಾಳೆ. ಗೋ ಬ್ಯಾಕ್ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಏನಾದರೂ ವಿಷಯ ಸಿಕ್ಕ ಕೂಡಲೇ ಗೋ ಬ್ಯಾಕ್ ಎಂದು ಪ್ರತಿಭಟಿಸುತ್ತಾರೆ. ಯಾವುದೇ ತಪ್ಪು ಮಾಡದವರು ನಿಮ್ಮ ಗೋ ಬ್ಯಾಕ್‌ಗೆ ಹೆದರುವುದಿಲ್ಲʼ ಎಂದರು.

ಕಾಂಗ್ರೆಸ್‌ನವರಿಂದ ಗೌರವ ಕಲಿಯಬೇಕೇ ?

ʻಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ದೇಶದಲ್ಲಿ ಅತ್ಯಂತ ಗೌರವ ನೀಡುವ ಮಹಾನುಭಾವರಲ್ಲವೇ, ಹೇಮಮಾಲಿನಿ, ಕಂಗನಾ ರಣಾವತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದಾಗ ನಿಮ್ಮ ಪಕ್ಷದವರು ಏನೆಂದು ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆಗಳ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನಂತಾರೆ ಹೇಳಪ್ಪಾ ಶಿವಕುಮಾರ್ʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಪ್ರಶ್ನಿಸಿದರು.

ʻಕಾಂಗ್ರೆಸ್‌ನ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಅತ್ಯಾಚಾರದ ಬಗ್ಗೆ ಏನಂದಿದ್ದರು, ಶ್ಯಾಮನೂರು ಶಿವಶಂಕರಪ್ಪ ಮಹಿಳೆಯರು ಅಡುಗೆ ಮನೆಯಲ್ಲೇ ಇರಲಿ ಎಂದು ಹೇಳಿದ್ದರಲ್ಲವೇ. ಆಸ್ತಿಯ ದುರಾಸೆಗಾಗಿ 30 ವರ್ಷಗಳಲ್ಲಿ ನೀವು ಅದೆಷ್ಟು ಕುಟುಂಬಗಳಿಗೆ ತೊಂದರೆ ಕೊಟ್ಟಿದ್ದೀರಿ ಎನ್ನುವುದು ತಿಳಿದಿದೆ. ಧಮ್ಮಿ ಹಾಕಿಕೊಂಡು ರಾಜಕೀಯ ಮಾಡುತ್ತಿರುವವರು ನನಗೆ ಬುದ್ಧಿ ಹೇಳುವ ಮಟ್ಟಕ್ಕೆ ಇದ್ದೀರಾʼ ಎಂದು ಪ್ರಶ್ನಿಸಿದರು.

ʻನನ್ನ ಹೇಳಿಕೆಯಿಂದ ಇವರಿಗೆ ಕಣ್ಣೀರು ಬಂತಂತೆ, ಕೆಲವು ಹೆಣ್ಣು ಮಕ್ಕಳನ್ನು ಅಪಹರಿಸಿ ಜಮೀನು ಬರೆಸಿಕೊಂಡಾಗ ಕಣ್ಣೀರು ಬರಲಿಲ್ಲ. ಕಣ್ಣೀರು ಹಾಕಬೇಡಪ್ಪಾ ಶಿವಕುಮಾರ್, ನಾನು ಮಾಡಬಾರದ ಅಪರಾಧ ಮಾಡಿದ್ದಾನೆ ಅಂತ ದುಃಖ ಪಡಬೇಡ. ಜೀವನದಲ್ಲಿ ಯಾವ ಸಂದರ್ಭದಲ್ಲೂ ದುಃಖಪಟ್ಟವನಲ್ಲ ನೀನು. ಏನೇನೂ ನಡೆಸಿದ್ದೀಯ ಎನ್ನುವುದು ಗೊತ್ತಿದೆʼ ಎಂದರು.

ಆಸ್ತಿ ವಿಚಾರದ ಬಗ್ಗೆ ಮಾತನಾಡಿದ ಅವರು, ʻನನಗೆ 45 ಎಕರೆ ಜಮೀನಿದೆ. ಆ ಜಮೀನಿನಲ್ಲಿ ನಾನು ತೆಂಗು, ಕಲ್ಲಂಗಡಿ, ಬಾಳೆ ಬೆಳೆಯುತ್ತಿದ್ದೇನೆ. ಅವರಂತೆ ಕಲ್ಲು ಬಂಡೆಗಳನ್ನು ಕದ್ದು ವಿದೇಶಕ್ಕೆ ಸಾಗಿಸಿಲ್ಲʼ ಎಂದು ದೂರಿದರು.

ಎಚ್.ಡಿ ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

Read More
Next Story