ಚಿನ್ನ ಪೆದ್ದಪ್ಪ ನುವ್ವು ವೊದ್ದಪ್ಪಾ | ಕೋಲಾರದಲ್ಲಿ ಮುನಿಯಪ್ಪಗೆ ʼಗೋ ಬ್ಯಾಕ್ʼ ಬಿಸಿ
x

'ಚಿನ್ನ ಪೆದ್ದಪ್ಪ ನುವ್ವು ವೊದ್ದಪ್ಪಾ' | ಕೋಲಾರದಲ್ಲಿ ಮುನಿಯಪ್ಪಗೆ ʼಗೋ ಬ್ಯಾಕ್ʼ ಬಿಸಿ


ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.

ಸಚಿವ ಕೆ.ಎಚ್ ಮುನಿಯಪ್ಪ ಕುಟುಂಬದವರಿಗೆ ಟಿಕೆಟ್ ನೀಡಬಾರದು ಎಂದು ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿರಿಯ ಕಾಂಗ್ರೆಸ್ ನಾಯಕ ಕೆ ಹೆಚ್ ಮುನಿಯಪ್ಪ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಕುಟುಂಬ ರಾಜಕೀಯಕ್ಕೆ ಬ್ರೇಕ್ ಹಾಕಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭವಾಗಿದ್ದು, 'ಚಿನ್ನ ಪೆದ್ದಪ್ಪ ನುವ್ವು ವೊದ್ದಪ್ಪಾ(ಚಿಕ್ಕ ಪೆದ್ದಪ್ಪ ನಮಗೆ ಬೇಡಪ್ಪಾ)' ಎಂದು ಡೈಲಾಗ್ ಹೊಡೆದು ಕೈ ಕಾರ್ಯಕರ್ತರು ವ್ಯಂಗ್ಯ ಮಾಡುತ್ತಿದ್ದಾರೆ.


ಸಚಿವ ಕೆಎಚ್ ಮುನಿಯಪ್ಪ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡಿದ್ದು, ಮೀಸಲಾತಿ ಒಂದೇ ಕುಟುಂಬಕ್ಕೆ ಸೀಮಿತವಾಗಿದೆ ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ಆಪ್ತರಾಗಿರುವ ಸತೀಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ನೀಡಬಾರದು ಅನ್ನೋದು ಮುನಿಯಪ್ಪ ವಿರೋಧಿ ಬಣದ ವಾದವಾಗಿದೆ.

ಮಾಜಿ ಸ್ಪೀಕರ್, ಮಾಜಿ ಸಚಿವ ರಮೇಶ್‌ ಕುಮಾರ್ ‌ಬಣ ಮೊದಲಿಂದಲೂ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರದಲ್ಲಿ ವಿರೋಧ ಮಾಡುತ್ತಲೇ ಇದೆ. ಆದರೂ, ಹೈಕಮಾಂಡ್ ಚಿಕ್ಕಪೆದ್ದಣಗೇ ಮಣೆ ಹಾಕ್ತಿರೋದರಿಂದ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಮಾಲೂರು ಶಾಸಕ ಕೆ ವೈ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್‌ ಎನ್ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ನಸೀರ್ ಅಹ್ಮದ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ.

ಈವರೆಗೆ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಗುಂಪುಗಾರಿಕೆ ಕಲಹ ಇದೀಗ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಮುನಿಯಪ್ಪ ಅವರು ಜಿಲ್ಲೆಯಲ್ಲಿ ಎಲ್ಲರನ್ನೂ ಸೋಲಿಸುವ ಹುನ್ನಾರ ನಡೆಸುತ್ತಿದ್ದರು, ಪ್ರತ್ಯೇಕ ಸಭೆ, ಗುಂಪುಗಾರಿಕೆ ಮಾಡುತ್ತಿದ್ದರು. ಇದರ ವಿರುದ್ಧ ನಮ್ಮ ಹೋರಾಟ ಎಂದು ರೆಬೆಲ್ ಶಾಸಕರು ಆರೋಪಿಸಿದ್ದಾರೆ.

Read More
Next Story