ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
x
ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ವಾರ ಬಾಕಿ ಉಳಿದಿರುವಾಗ ಕಾಂಗ್ರೆಸ್‌ನ ದಲಿತ ನಾಯಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಬೆಂಬಲ ನೀಡಿದ್ದಾರೆ


ಕಾಂಗ್ರೆಸ್‌ನ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ಬಿಜೆಪಿ ಸೇರಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ಧ್ವಜ ನೀಡಿ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಲೋಕಸಭೆ ಚುನಾವಣೆ ಸಮಯದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ಬಿಜೆಪಿಗೆ ಸೇರಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಡಿಜೆ ಹಳ್ಳಿ- ಕೆಜಿಹಳ್ಳಿಯಲ್ಲಿ ಹಿಂದೂ ಮತ್ತು ಮುಸ್ಲಿಮರ ಗಲಾಟೆ ನಡೆದ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನು ಸುಟ್ಟಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಬೆಂಬಲಿಸಿರಲಿಲ್ಲ. ನಾವು ಶ್ರೀನಿವಾಸಮೂರ್ತಿ ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದೆವು ಎಂದು ಹೇಳಿದರು.

ಬೆಂಬಲಿಗರೊಂದಿಗೆ ಅಖಂಡ ಶ್ರೀನಿವಾಸಮೂರ್ತಿ ಅವರು ಬಿಜೆಪಿಗೆ ಸೇರಿರುವುದರಿಂದ ಆನೆ ಬಲ ಸಿಕ್ಕಂತಾಗಿದೆ. ಎಲ್ಲರಿಗೂ ಪಕ್ಷಕ್ಕೆ ಸ್ವಾಗತ. ಶೋಭಾ ಕರಂದ್ಲಾಜೆ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜ್, ಪುಲಕೇಶಿ ನಗರದ ಮಂಡಲ ಅಧ್ಯಕ್ಷ ರವಿ ಸೇರಿದಂತೆ ಹಲವರು ಇದ್ದರು.

ಅಖಂಡ ಶ್ರೀನಿವಾಸಮೂರ್ತಿ ರಾಜಕೀಯ ಹಿನ್ನೆಲೆ ಏನು ?

ದಲಿತ ನಾಯಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಅವರು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಎಸ್‌ಪಿ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು.

ಬೆಂಗಳೂರಿನ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ)ಯ ಘಟನೆ ಅವರ ರಾಜಕೀಯ ಹಿನ್ನಡೆಗೆ ಕಾರಣವಾಗಿತ್ತು. ಡಿ.ಜೆ.ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಯು ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಗಲಭೆಯ ಬೆನ್ನಲ್ಲೇ ಪುಲಕೇಶಿನಗರದ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಶ್ರೀನಿವಾಸ ಮೂರ್ತಿ ಅವರ ಸೋದರಳಿಯ ಒಂದು ಸಮುದಾಯದ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ವಿರೋಧಕ್ಕೆ ಕಾರಣವಾಗಿತ್ತು. ಈ ಗಲಭೆಯಲ್ಲಿ ಕಿಡಿಗೇಡಿಗಳು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚಿದ್ದರು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ರಾಜಕೀಯ ಹಾದಿಗೆ ಮುಳುವಾದ ಘಟನೆ

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆ ಅಖಂಡ ಶ್ರೀನಿವಾಸ ಅವರಿಗೆ ರಾಜಕೀಯವಾಗಿ ಭಾರೀ ಹಿನ್ನಡೆಗೆ ಕಾರಣವಾಯಿತು. ಗಲಭೆ ಕಾರಣದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ಕೈತಪ್ಪಿತು. ಟಿಕೆಟ್ ಕೈತಪ್ಪಿದ್ದ ಅಸಮಾಧಾನದಲ್ಲಿ ಅಖಂಡ ಶ್ರೀನಿವಾಸ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ಇನ್ನು ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಶ್ರಮಿಸಿದರೂ ಟಿಕೆಟ್ ಸಿಗಲಿಲ್ಲ. ಆ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಒಳಗೊಂಡ ನಿಯೋಗವು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ನೀಡಬೇಡಿ ಎಂದು ದೆಹಲಿಗೆ ಭೇಟಿ ನೀಡಿ, ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಸಲ್ಲಿಸಿತ್ತು ಎಂದು ಸಹ ವರದಿಯಾಗಿತ್ತು.

ಬಿಎಸ್ ಪಿಯಿಂದ ಸ್ಪರ್ಧೆ ; ಸೋಲು

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಆಕ್ರೋಶಗೊಂಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಬಿಎಸ್ಪಿಗೆ ಸೇರಿ ಸ್ಪರ್ಧಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿಯಿಂದ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. ಪುಲಕೇಶಿನಗರದಲ್ಲಿ 2,36,000 ಮತದಾರರಿದ್ದಾರೆ. ಅವರಲ್ಲಿ ಅಂದಾಜು 85,000 ಸಾವಿರ ಜನ ಮುಸ್ಲಿಂ ಸಮುದಾಯದವರು ಮತ್ತು 65,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇದ್ದಾರೆ.

ಅಖಂಡ ಶ್ರೀನಿವಾಸಮೂರ್ತಿ ರಾಜಕೀಯ ಹಿನ್ನೆಲೆ

ಅಖಂಡ ಶ್ರೀನಿವಾಸ ಮೂರ್ತಿ ಅವರು ಬಿಜೆಪಿಗೆ ಸೇರುವ ಮೂಲಕ ನಾಲ್ಕು ಪಕ್ಷಗಳನ್ನು ಬದಲಾಯಿಸಿದಂತಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಅವರು ಪುಲಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ 2013ರಿಂದ 2018ರ ವರೆಗೆ ಜೆಡಿಎಸ್‌ನಿಂದ ಶಾಸಕರಾಗಿದ್ದರು. ಆದರೆ, 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಆರೋಪದ ಮೇಲೆ ಜೆಡಿಎಸ್‌ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದರು. 2018ರಲ್ಲಿ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ ಗೆದಿದ್ದರು. 2013ರಲ್ಲಿ ಪುಲಿಕೇಶಿ ನಗರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸಮೂರ್ತಿ, 2018ರ ಚುನಾವಣೆ ಸಮಯಕ್ಕೆ ಕಾಂಗ್ರೆಸ್ ಸೇರಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದಿದ್ದರೂ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆಯಿಂದ ಟಿಕೆಟ್ ಕೈತಪ್ಪಿತ್ತು. ಪುಲಕೇಶಿನಗರದಿಂದ 2023ರಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಸಿ ಶ್ರೀನಿವಾಸ ವಿರುದ್ಧ ಸೋತಿದ್ದರು. ಇದೀಗ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

Read More
Next Story