ಸೋಲು ಗ್ಯಾರಂಟಿ ಆಗುತ್ತಿದ್ದಂತೆ ಗೂಂಡಾಗಿರಿಗೆ ಇಳಿದ ಡಿಕೆ ಬ್ರದರ್ಸ್: ಬಿಜೆಪಿ ಕಿಡಿ
x

ಸೋಲು ಗ್ಯಾರಂಟಿ ಆಗುತ್ತಿದ್ದಂತೆ ಗೂಂಡಾಗಿರಿಗೆ ಇಳಿದ ಡಿಕೆ ಬ್ರದರ್ಸ್: ಬಿಜೆಪಿ ಕಿಡಿ


ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ರೇಷ್ಮೆ ಬೆಳೆಗಾರ ನವೀನ್ ಮೇಲೆ ನಡೆದ ಹಲ್ಲೆ ವಿಚಾರ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ʻʻಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ CM-in-waiting ಆಗಿ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ ಕೆ ಸುರೇಶ್ ಅವರು ಮತದಾರರ ಮೇಲೆ ಗೂಂಡಾಗಿರಿಗೆ ಇಳಿದಿದ್ದಾರೆʼʼ ಎಂದು ಕಿಡಿಕಾರಿದ್ದಾರೆ.

ʻʻಬಿಜೆಪಿ ಕಾರ್ಯಕರ್ತ ಸಹೋದರ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಹಲ್ಲೆಕೋರರನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರದ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ಕೆಡಿಸಿ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಈ ದುಷ್ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕೈಗೊಂಡು ನಿಷ್ಪಕ್ಷಪಾತವಾಗಿ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ, ವಿಶ್ವಾಸ ತುಂಬುವ ಕೆಲಸ ಮಾಡಬೇಕುʼʼ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕ ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ʻʻಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಗೂಂಡಾಗಳು ಸಕ್ರಿಯಗೊಂಡಿದ್ದು ಅಲ್ಲದೆ, ಅವರನ್ನು ಮಜಾವಾದಿ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ ನವೀನ್ ಮೇಲೆ ಕಾಂಗ್ರೆಸ್‌ ಗೂಂಡಾ ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಆತನನ್ನು ಬಂಧಿಸದೆ ಸಣ್ಣ ಕೇಸ್ ಹಾಕಿ ರಾಜಾರೋಷವಾಗಿ ಬೀದಿಗೆ ಬಿಟ್ಟಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ʻʻಆ ದಿನಗಳಂತೆ ಚುನಾವಣೆ ಗೆಲ್ಲಲು ಗೂಂಡಾಗಿರಿ ಮಾಡುತ್ತಿರುವ ಅಣ್ಣ- ತಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮತದಾರರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ" ಎಂದು ಡಿಕೆ ಸಹೋದರರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಬಿಜೆಪಿ, ಕೂಡಲೇ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮ ಕೈಗೊಂಡು ನಿಷ್ಪಕ್ಷಪಾತವಾಗಿ ರಾಜ್ಯದಲ್ಲಿ ಚುನಾವಣೆ ನಡೆಯಲು ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ ತುಂಬಬೇಕಿದೆʼʼ ಎಂದು ಆಗ್ರಹಿಸಿದೆ.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಿಡಿಕಾರಿರುವ ಮಾಜಿ ಡಿಸಿಎಂ ಡಾ ಸಿ ಎನ್ ಅಶ್ವತ್ಥ ನಾರಾಯಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಕಳೆದ 24 ಗಂಟೆಗಳಲ್ಲಿ 2 ಪ್ರಕರಣಗಳು ಸುದ್ದಿಯಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ದು ಇದನ್ನೇ! ಇಲ್ಲಿ ಅಧಿಕಾರದ ದುರ್ಬಳಕೆ ಎದ್ದು ಕಾಣುತ್ತಿದೆʼʼ ಎಂದು ಕಿಡಿಕಾರಿದ್ದಾರೆ.

ʻʻಅಪರಾಧಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದೇ ಸಣ್ಣ ಪ್ರಕರಣ ದಾಖಲಿಸಿ, ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ಗೂಂಡಾಗಳ ರಕ್ಷಣೆಗೆ ನಿಂತಿದೆಯೇ? ಅಥವಾ, ಬೆಂಗಳೂರು ಗ್ರಾಮಾಂತರದಲ್ಲಿ ಹೇಗಾದರೂ ಗೆಲ್ಲಲೇಬೇಕು ಎನ್ನುವ ಉದ್ದೇಶದಿಂದ ಇಂಥ ಗೂಂಡಾ ವರ್ತನೆಗೆ ಸ್ವತಃ ಕಾಂಗ್ರೆಸ್ ನಾಯಕರೇ ಕುಮ್ಮಕ್ಕು ನೀಡುತ್ತಿದ್ದಾರೆಯೇ?ʼʼ ಎಂದು ಡಾ ಸಿಎನ್ ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ.

ʻʻಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಸಿ, ಅಪರಾಧಿ ಹಾಗೂ ಅಪರಾಧಿಗಳಿಗೆ ಬೆಂಬಲವಾಗಿ ನಿಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ರಾಜ್ಯದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿರ್ಭಯವಾಗಿ ಚುನಾವಣೆ ಪ್ರಕ್ರಿಯೆ ನಡೆಯುವ ವಾತಾವರಣ ಕಲ್ಪಿಸಬೇಕುʼʼ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

Read More
Next Story