ಮೋದಿ ಮಂಗಳಸೂತ್ರ ಹೇಳಿಕೆಗೆ ಡಿಕೆಶಿ ತಿರುಗೇಟು, ಪ್ರಧಾನಿ ವಿರುದ್ಧ ಕಿಮ್ಮನೆ ದೂರು
x

ಮೋದಿ 'ಮಂಗಳಸೂತ್ರ' ಹೇಳಿಕೆಗೆ ಡಿಕೆಶಿ ತಿರುಗೇಟು, ಪ್ರಧಾನಿ ವಿರುದ್ಧ ಕಿಮ್ಮನೆ ದೂರು

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲಿದೆ, ಇದರಿಂದಾಗಿ ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರವೂ ಉಳಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು


ದೇಶದ ಜನರ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದ್ದು, ಇದರಿಂದ ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರ ಕೂಡಾ ಉಳಿಯುವುದಿಲ್ಲ ಎಂಬ ಪ್ರಧಾನಿ ಮೋದಿ ಅವರ ದ್ವೇಷ ಭಾಷಣದ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್‌, “ಬಿಜೆಪಿ ಹತಾಶೆಯಲ್ಲಿದೆ. ಈ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಹಾಗಾಗಿ ಹತಾಶೆಯಿಂದ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ನಾವು ಭಾರತೀಯರು, ಎಲ್ಲರಿಗೂ ಸಮಾನತೆ ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಬಂದರೆ ಮಂಗಳಸೂತ್ರ ಕಳೆದುಕೊಳ್ತಾರೆ. ಅಂದ್ರೆ ಏನರ್ಥ?, ಈ ಮಾತುಗಳನ್ನು ನೋಡಿದ್ರೆ ಬಿಜೆಪಿ ಹತಾಶೆ ಕಾಣುತ್ತದೆ. ಮಂಗಳಸೂತ್ರ ಹೆಣ್ಣುಮಕ್ಕಳ ಸೌಭಾಗ್ಯ, ಆ ಭಾಗ್ಯಕ್ಕೆ ನಾವೆಲ್ಲ ಗೌರವ ಕೊಡ್ತೀವಿ. ಎಷ್ಟೊಂದು ಬೇಜಾರಾಗಿ ಈ ಮಟ್ಟಕ್ಕೆ ಇಳಿಯುತ್ತಿದ್ದಾರೆ ಗೊತ್ತಿಲ್ಲ. ಈ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮೋದಿ ವಿರುದ್ಧ ಕಿಮ್ಮನೆ ದೂರು

ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್‌ ನಾಯಕ ಕಿಮ್ಮನೆ ರತ್ನಾಕರ್ ದೂರು ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ ಎಂಬ ಮೋದಿ ಹೇಳಿಕೆ ನೀಡಿದ್ದಾರೆ. ಇದು ಸಮುದಾಯಗಳ ನಡುವೆ ದ್ವೇಷ, ಕೋಮುಭಾವನೆ ಕೆರಳಿಸುವ ಹೇಳಿಕೆಯಾಗಿದೆ. ರಾಜ್ಯ ದೇಶದ ಶಾಂತಿ ಸುವ್ಯವಸ್ಥೆ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂತಹ ಪ್ರಚೋದನಕಾರಿ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಅವರ ಹತಾಶೆ ಹಾಗೂ ಸೋಲಿನ ಭಯದಿಂದ ಕೂಡಿದ ಪ್ರತಿಕ್ರಿಯೆಯಾಗಿದೆ. ಆದರೂ, ಇದು ಹಿಂದೂ ಮಹಿಳೆಯರ ಭಾವನಾತ್ಮಕ ವಿಚಾರಗಳನ್ನು ಕೆರಳಿಸುವ ವ್ಯವಸ್ಥಿತ ಒಳಸಂಚಾಗಿದೆ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

ಪ್ರಧಾನಿಗಳ ಈ ಹೇಳಿಕೆಯೂ ಸಂವಿಧಾನ ವಿರೋಧಿಯಾಗಿದ್ದು, ಪ್ರಧಾನಿ ಗೌಪ್ಯ ಪ್ರಮಾಣವಚನ ಮತ್ತು ಸಂಸತ್‌ ಸದಸ್ಯರ ಪ್ರಮಾಣವಚನಕ್ಕೆ ವಿರುದ್ಧವಾಗಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಈ ಹೇಳಿಕೆ ಅಪರಾಧವಾಗಿದ್ದು, ದೇಶದ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿರುವ ನರೇಂದ್ರ ಮೋದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ರಾಜಸ್ಥಾನದ ಬನ್ಸ್ವಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ʼಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸುತ್ತಾ, ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಸಂಪತ್ತನ್ನು ಹಂಚುವುದೇ ಕಾಂಗ್ರೆಸ್ ಗ್ಯಾರಂಟಿ. ಕಾಂಗ್ರೆಸ್‌ ಈ ಸಂಪತ್ತನ್ನು ನುಸುಳುಕೋರರಿಗೆ ಹಂಚಲಿದೆ. ನೀವು ಕಷ್ಟಪಟ್ಟು ದುಡಿದ ಸಂಪತ್ತು ಮತ್ತು ಹಣವನ್ನು ನುಸುಳುಕೋರರಿಗೆ ಹಂಚಬೇಕೆ? ನಿಮ್ಮ ಆಸ್ತಿಗಳನ್ನು ಕಸಿದು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದರಿಂದ ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರ ಕೂಡಾ ಉಳಿಯುವುದಿಲ್ಲʼ ಎಂದು ಹೇಳಿದ್ದರು.

Read More
Next Story