
ಕಾಂಗ್ರೆಸ್‌ನತ್ತ ಮುಖ ಮಾಡಿದ ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ
ʼʼಕಾಂಗ್ರೆಸ್ ಸೇರಲು ಈಗಾಗಲೇ ನಿರ್ಧರಿಸಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರು ಯಾವಾಗ ಸೇರಿಸಿಕೊಳ್ಳುತ್ತಾರೆಂದು ನಾನು ಸಹ ಕಾಯುತ್ತಿದ್ದೇನೆʼʼ ಎಂದು ನಿಶಾ ಯೋಗೇಶ್ವರ್ ತಿಳಿಸಿದ್ದಾರೆ.
ಬಿಜೆಪಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರನ್ನು ನಿಶಾ ಅವರು ಭೇಟಿ ಮಾಡಿದ್ದರು. ಹಾಗಾಗಿ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಬಗ್ಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ರಾಮನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಸುರೇಶ್, ʼʼಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಅವರು ಬಹಳ ದಿನಗಳಿಂದ ಪಕ್ಷ ಸೇರುವುದಾಗಿ ಹೇಳುತ್ತಿದ್ದಾರೆ. ಅವರ ಸ್ವಯಂ ತೀರ್ಮಾನದ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜತೆ ಚರ್ಚೆ ಮಾಡಿ ಅವರ ಅಭಿಪ್ರಾಯದ ಮೇರೆಗೆ ತೀರ್ಮಾನಿಸಲಾಗುವುದುʼʼ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ನಿಶಾ ಅವರು, 'ನನಗೆ ನನ್ನದೇ ಆದ ರಾಜಕೀಯ ಕನಸುಗಳಿವೆ. ರಾಜಕೀಯದಲ್ಲಿ ತಳಮಟ್ಟದಿಂದ ಬೆಳೆದುಬಂದ ನನ್ನ ತಂದೆ ಮಾಡಿದ ಸಾಧನೆ ಕುರಿತು ನನಗೆ ಹೆಮ್ಮೆ ಹಾಗೂ ಗೌರವವಿದೆ. ಅದರಂತೆ, ನನ್ನದೇ ರಾಜಕೀಯ ಹಾದಿ ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆʼʼ ಎಂದು ಹೇಳಿದ್ದಾರೆ.
ʼʼಕಾಂಗ್ರೆಸ್ ಸೇರಲು ಈಗಾಗಲೇ ನಿರ್ಧರಿಸಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರು ಯಾವಾಗ ಸೇರಿಸಿಕೊಳ್ಳುತ್ತಾರೆಂದು ನಾನು ಸಹ ಕಾಯುತ್ತಿದ್ದೇನೆʼʼ ಎಂದು ನಿಶಾ ಯೋಗೇಶ್ವರ್ ತಿಳಿಸಿದ್ದಾರೆ.