ಚಾಮರಾಜನಗರ ಕ್ಷೇತ್ರ | ದಲಿತ ಮತ ಸೆಳೆಯಲು ಶ್ರೀನಿವಾಸ ಕೃಪೆಗೆ ಪೈಪೋಟಿ
x

ಚಾಮರಾಜನಗರ ಕ್ಷೇತ್ರ | ದಲಿತ ಮತ ಸೆಳೆಯಲು ಶ್ರೀನಿವಾಸ ಕೃಪೆಗೆ ಪೈಪೋಟಿ

ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದ ಮೇಲೆ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಈಗಲೂ ಉತ್ತಮ ಹಿಡಿತವಿದ್ದು, ಅದರಲ್ಲೂ ಈ ಭಾಗದ ದಲಿತ ಸಮುದಾಯಗಳ ನಡುವೆ ಶ್ರೀನಿವಾಸ್‌ ಪ್ರಸಾದ್‌ ಗಣನೀಯ ಪ್ರಭಾವ ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ಉಭಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ


ಚಾಮರಾಜನಗರ ಮೀಸಲು ಕ್ಷೇತ್ರದ ಸಂಸದ ಶ್ರೀನಿವಾಸ ಪ್ರಸಾದ್‌ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರೂ, ಕಾಂಗ್ರೆಸ್-ಬಿಜೆಪಿಯ ನಾಯಕರು ಅವರ ಮನೆಗೆ ಎಡತಾಕುವುದನ್ನು ಬಿಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ರಾಜಕೀಯ ವೈರತ್ವ ಮರೆತು ಬರೋಬ್ಬರಿ ಆರು ವರ್ಷಗಳ ಬಳಿಕ ಶ್ರೀನಿವಾಸ ಪ್ರಸಾದ್‌ ಅವರ ನಿವಾಸಕ್ಕೆ ತೆರಳಿ, ಭೇಟಿಯಾಗಿ ಮಾತುಕತೆ ನಡೆಸಿದ್ದರೆ, ಸಿಎಂ ಭೇಟಿಯ ಮಾರನೇ ದಿನವೇ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಕೂಡ ಶ್ರೀನಿವಾಸ ಪ್ರಸಾದ್‌ ಮನೆಗೆ ಭೇಟಿ ನೀಡಿದ್ದಾರೆ. ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಸಂದರ್ಭದಲ್ಲೇ ಬಿಎಸ್‌ವೈ ಅವರು ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪ್ರತಿಷ್ಠೆಗಾಗಿ ವೈರಿಗಳ ಮನೆ ಕದ ತಟ್ಟಿದ ಸಿಎಂ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಆಪ್ತ ಎಚ್‌ ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರನ್ನು ಗೆಲ್ಲಿಸುವ ವೈಯಕ್ತಿಕ ಜಿದ್ದಿಗೆ ಸಿದ್ದರಾಮಯ್ಯ ಬಿದ್ದಿದ್ದಾರೆ. ಇನ್ನೊಂದೆಡೆ, ಮೈಸೂರಿನಲ್ಲಿ ಯದುವಂಶದ ಅಭ್ಯರ್ಥಿ ವಿರುದ್ಧ ಸಾಮಾನ್ಯ ಕಾರ್ಯಕರ್ತ ಎಂ.ಲಕ್ಷ್ಮಣ್‌ ಗೆಲುವಿಗೆ ಪಣ ತೊಟ್ಟಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್‌ ನ ಮೈತ್ರಿ, ಚುನಾವಣೆ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿಯೇ, ಈ ಪ್ರದೇಶಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಸಿದ್ದರಾಮಯ್ಯ ಅವರ ವರ್ಚಸ್ಸಿನ ಪ್ರಶ್ನೆಯಾಗಲಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಾದ್ಯಂತ ಗಮನ ಸೆಳೆದಿದ್ದು, ಆ ಯಶಸ್ಸನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸಲು ವಿಫಲವಾದರೆ ಸಿದ್ದರಾಮಯ್ಯ ಅವರ ವರ್ಚಸ್ಸು ಅವರದೇ ನೆಲದಲ್ಲಿ ಕುಗ್ಗಿದಂತೆ ಆಗಲಿದೆ. ಈ ಲೆಕ್ಕಾಚಾರದ ಮೇಲೆ ಹಳೆ ಮೈಸೂರು ಭಾಗವನ್ನು ಸಿದ್ದರಾಮಯ್ಯ ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ರಾಜಕೀಯ ವೈರತ್ವವನ್ನು ಮೀರಿ ಹಳೆಯ ಮಿತ್ರರನ್ನು ಭೇಟಿಯಾಗುತ್ತಿದ್ದಾರೆ. ಅಖಾಡಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಇಳಿದಿದ್ದು, ಎರಡೂ ಕ್ಷೇತ್ರಗಳನ್ನು ಮರಳಿ ಪಡೆಯಲು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ ಜೊತೆ ಅಸಮಾಧಾನಗೊಂಡಿರುವ ಸ್ಥಳೀಯ ಮುಖಂಡರೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ.

ಸಿದ್ದರಾಮಯ್ಯ-ಶ್ರೀನಿವಾಸ್‌ ಪ್ರಸಾದ್‌ ಭೇಟಿ ಮಹತ್ವ

ತಮ್ಮ ಅಳಿಯನಿಗೆ ಬಿಜೆಪಿ ಟಿಕೆಟ್‌ ನೀಡದ ಕಾರಣ ಅಸಮಾಧಾನಗೊಂಡಿರುವ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದ ಶ್ರೀನಿವಾಸ್‌ ಪ್ರಸಾದ್‌ ಅವರು ತಮಗೆ ಮಂತ್ರಿಗಿರಿ ತಪ್ಪಿದ ಮೇಲೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಅದರ ಬಳಿಕ ಆರೇಳು ವರ್ಷಗಳಿಂದ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್‌ ಪ್ರಸಾದ್‌ ಪರಸ್ಪರ ಅಂತರ ಕಾಯ್ದುಕೊಂಡಿದ್ದರು. 2019 ರ ಚುನಾವಣೆಯಲ್ಲಿ ಶ್ರೀನಿವಾಸ್‌ ಪ್ರಸಾದ್‌ ಕಾಂಗ್ರೆಸ್‌ ಭದ್ರಕೋಟೆಯನ್ನು ಭೇದಿಸಿ ಬಿಜೆಪಿಯಿಂದ ಗೆದ್ದು ಚಾಮರಾಜನಗರದ ಸಂಸದರಾಗಿದ್ದರು. ಈ ನಡುವೆ, ಅವರು ಹಲವು ಬಾರಿ ಸಿದ್ದರಾಮಯ್ಯ ವಿರುದ್ಧ ಮಾಧ್ಯಮಗಳ ಮೂಲಕ ಕಿಡಿಕಾರಿದ್ದರು.

ಸದ್ಯ, ತಮ್ಮ ಅಳಿಯನಿಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಶ್ರೀನಿವಾಸ್‌ ಪ್ರಸಾದ್‌ ಅವರ ವಿಶ್ವಾಸವನ್ನು ಗಳಿಸುವ ಸಿದ್ದರಾಮಯ್ಯ ಪ್ರಯತ್ನ ಮೊನ್ನೆಯ ಭೇಟಿಯಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಹಾಗಾಗಿಯೇ, ಮೋದಿ ಸಮಾವೇಶಕ್ಕೂ ಹೋಗದೆ ಶ್ರೀನಿವಾಸ್‌ ಪ್ರಸಾದ್‌ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.

ಶ್ರೀನಿವಾಸ್‌ ಪ್ರಸಾದ್‌ ರನ್ನು ಭೇಟಿಯಾದ ಕಾಂಗ್ರೆಸ್‌ ನಾಯಕರು

ಇದಕ್ಕೂ ಮುನ್ನ, ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವರಾದ ಹೆಚ್‌ ಸಿ ಮಹದೇವಪ್ಪ, ಕೆ. ವೆಂಕಟೇಶ್‌ ಹಾಗೂ ಯತೀಂದ್ರ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನ ಹಲವು ನಾಯಕರು ಶ್ರೀನಿವಾಸ್‌ ಪ್ರಸಾದ್‌ ರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಶ್ರೀನಿವಾಸ್‌ ಪ್ರಸಾದ್‌ ಅಳಿಯ ಧೀರಜ್‌ ಪ್ರಸಾದ್‌ ಮತ್ತು ಇತರ ಮುಖಂಡರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

ಶ್ರೀನಿವಾಸ್‌ ಪ್ರಸಾದ್‌ ಮನವೊಲಿಕೆಗೆ ಬಿಎಸ್‌ ವೈ ಪ್ರಯತ್ನ

ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಭೇಟಿಯಾದ ಮರುದಿನವೇ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಶ್ರೀನಿವಾಸ್‌ ಪ್ರಸಾದ್‌ ರನ್ನು ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ರ್ಯಾಲಿ ಆರಂಭಕ್ಕೆ ಕೆಲವೇ ತಾಸು ಮುನ್ನು ಬಿಡುವಿಲ್ಲದೆ ಕಾರ್ಯದೊತ್ತಡದ ನಡುವೆಯೂ ಬಿಎಸ್‌ ವೈ ಅವರು ಶ್ರೀನಿವಾಸ್‌ ಪ್ರಸಾದ್‌ ಅವರ ಮನೆಗೆ ಧಾವಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದರು. ಈ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿರುವ ಸಂಸದ ಶ್ರೀನಿವಾಸ್‌ ಪ್ರಸಾದ್‌, ಆರೋಗ್ಯದ ನೆಪ ನೀಡಿ ಚುನಾವಣಾ ಪ್ರಚಾರಕ್ಕೆ ಬರಲಾಗುವುದಿಲ್ಲ ಎಂದಿದ್ದಾರೆ.

ಅದಕ್ಕೂ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಬಾಲರಾಜು ಮೊದಲಾದವರು ಪಕ್ಷದ ಪರವಾಗಿ ಶ್ರೀನಿವಾಸ್‌ ಪ್ರಸಾದ್‌ ರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರಾದರೂ, ಅದು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ.

ಶ್ರೀನಿವಾಸ್‌ ಪ್ರಸಾದ್‌ ರನ್ನು ಭೇಟಿಯಾದ ಬಿಜೆಪಿ ನಾಯಕರು

ಉಭಯ ಪಕ್ಷಗಳಿಗೆ ಶ್ರೀನಿವಾಸ್‌ ಪ್ರಸಾದ್‌ ಬೆಂಬಲ ಮುಖ್ಯ ಏಕೆ?

ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದ ಮೇಲೆ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಈಗಲೂ ಉತ್ತಮ ಹಿಡಿತವಿದ್ದು, ಅದರಲ್ಲೂ ಈ ಭಾಗದ ದಲಿತ ಸಮುದಾಯಗಳ ನಡುವೆ ಶ್ರೀನಿವಾಸ್‌ ಪ್ರಸಾದ್‌ ರಿಗೆ ಗಣನೀಯ ಪ್ರಭಾವ ಹೊಂದಿದ್ದಾರೆ. ವರುಣ, ಟಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಕೊಳ್ಳೇಗಾಲ, ಹನೂರು, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಸ್ತರಿಸುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದಲಿತರ ಮತಗಳು ನಿರ್ಣಾಯಕವಾಗಿವೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಒಟ್ಟು 18 ಲಕ್ಷ ಮತದಾರರಲ್ಲಿ ಪರಿಶಿಷ್ಟ ಪಂಗಡದ 4.5 ಲಕ್ಷ ಮತಗಳಿದ್ದರೆ, ಪರಿಶಿಷ್ಟ ಜಾತಿಯ 2.5 ಲಕ್ಷ ಮತಗಳಿವೆ. 3.5 ಲಕ್ಷ ಲಿಂಗಾಯತ ಮತಗಳು, 2 ಲಕ್ಷ ಉಪ್ಪಾರ, 1.5 ಲಕ್ಷ ಒಕ್ಕಲಿಗ, 1.2 ಲಕ್ಷ ಕುರುಬ, 80 ಸಾವಿರ ಮುಸ್ಲಿಂ ಮತಗಳಿವೆ. ಚಾಮರಾಜನಗರದಲ್ಲಿ ದಲಿತ ರಾಜಕಾರಣ ಕೂಡಾ ಸಕ್ರಿಯವಾಗಿದ್ದು, ಬಿಎಸ್‌ ಪಿ ಸೇರಿದಂತೆ ದಲಿತ ಚಳುವಳಿಯೂ ಪ್ರಭಾವ ಹೊಂದಿದೆ. ದಲಿತ ಮತಗಳನ್ನು ನಿರ್ಲಕ್ಷಿಸಿ ಇಲ್ಲಿ ಯಾವ ಪಕ್ಷವೂ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಹಾಗಾಗಿಯೇ, ದಲಿತ ಸಮುದಾಯಗಳಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರಿಗಿರುವ ಪ್ರಭಾವವನ್ನು ಬಳಸಿಕೊಳ್ಳಲು ಉಭಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ದಿವಂಗತ ಆರ್. ಧ್ರುವನಾರಾಯಣ್‌ ರನ್ನು ಪರಾಭವಗೊಳಿಸಿದ್ದ ಶ್ರೀನಿವಾಸ್‌ ಪ್ರಸಾದ್‌, 1980, 1984, 1989, 1991 ರಲ್ಲಿ ಸತತವಾಗಿ ಕ್ಷೇತ್ರವನ್ನು ಗೆದ್ದು ಹಿಡಿತ ಸಾಧಿಸಿದ್ದರು. ಒಟ್ಟು ಆರು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸ್‌ ಪ್ರಸಾದ್‌, ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2008, 2013 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಹೀಗಾಗಿ, ಈ ಭಾಗದಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರ ಪ್ರಾಬಲ್ಯ ಹೆಚ್ಚುತ್ತಲೇ ಹೋಗಿತ್ತು. ಇದೀಗ, ಕಾಂಗ್ರೆಸ್‌ ಹಾಗೂ ಬಿಜೆಪಿ; ಎರಡೂ ಪಕ್ಷಗಳಿಗೆ ಚಾಮರಾಜನಗರ ಗೆಲ್ಲಲು ಶ್ರೀನಿವಾಸ್‌ ಪ್ರಸಾದ್‌ ಅವರ ಬೆಂಬಲ ಅನಿವಾರ್ಯವಾಗಿದೆ.

ಕಾಂಗ್ರೆಸ್‌ ಪರ ಶ್ರೀನಿವಾಸ್‌ ಪ್ರಸಾದ್‌ ಒಲವು

ಸದ್ಯದ ಪರಿಸ್ಥಿತಿಯಲ್ಲಿ, ಶ್ರೀನಿವಾಸ್‌ ಪ್ರಸಾದ್‌ ಅವರು ಕಾಂಗ್ರೆಸ್‌ ಪರ ತಮ್ಮ ಒಲವು ವ್ಯಕ್ತಪಡಿಸಿದ್ದು, ಚಾಮರಾಜನಗರದಲ್ಲಿ ಕಾಂಗ್ರೆಸ್‌ ಪರ ವಾತಾವರಣ ಇದೆ ಎಂದು ಹೇಳಿಕೆ ನೀಡಿದ್ದರು. ಶ್ರೀನಿವಾಸ್‌ ಪ್ರಸಾದ್‌ ಅವರ ಸಹೋದರ, ಅಳಿಯ ಮತ್ತು ಆಪ್ತರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಶ್ರೀನಿವಾಸ್‌ ಪ್ರಸಾದ್‌ ಸೂಚನೆ ಮೇರೆಗೆ ಅವರ ಆಪ್ತರು ಕಾಂಗ್ರೆಸ್‌ ಸೇರಿದ್ದಾರೆ ಎನ್ನಲಾಗಿದೆ. ಶ್ರೀನಿವಾಸ್‌ ಪ್ರಸಾದ್‌ ಸಹೋದರ ವಿ.ರಾಮಸ್ವಾಮಿ, ಅಳಿಯ ಧೀರಜ್‌ ಪ್ರಸಾದ್, ಆಪ್ತ ಅಯ್ಯನಪುರ ಶಿವಕುಮಾರ್‌ ಅವರು ಬಿಜೆಪಿ ತೊರೆದಿದ್ದು, ಇನ್ನೂ ಹಲವು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.

Read More
Next Story