ಮುಸ್ಲೀಮರ ವಿರುದ್ಧ ಹಿಂದುಳಿದವರನ್ನು ಎತ್ತಿಕಟ್ಟುತ್ತಿದ್ದಾರೆ: ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
x
ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ಕಿಡಿಕಾರಿದರು.

ಮುಸ್ಲೀಮರ ವಿರುದ್ಧ ಹಿಂದುಳಿದವರನ್ನು ಎತ್ತಿಕಟ್ಟುತ್ತಿದ್ದಾರೆ: ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದ ರಾಮಾ ಜೋಯಿಸ್ ಬಿಜೆಪಿಯವರಲ್ಲವೇ ? ಎಂದು ಸಿ.ಎಂ.ಸಿದ್ದರಾಮಯ್ಯ ಆಕ್ರೋಶದಿಂದ ಪ್ರಶ್ನಿಸಿದ್ದಾರೆ.


Click the Play button to hear this message in audio format

ಬಾಗಲಕೋಟೆ: ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ದೇಶದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಯವರಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಭಯಾನಕ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎನ್ನುವ ಸುಳ್ಳನ್ನು ಹೇಳುವ ಮೂಲಕ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಎಚ್ಚರ ವಹಿಸಿ ಎಂದು ಹಿಂದುಳಿದ ಜಾತಿ-ಸಮುದಾಯಗಳಿಗೆ ಎಚ್ಚರಿಸಿದರು.

ಮೋದಿ ಮೀಸಲಾತಿ ವಿಚಾರದಲ್ಲೂ ಸುಳ್ಳು ಹೇಳ್ತಿದಾರೆ. ಇವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಈ ಮಟ್ಟದ ಸುಳ್ಳು ಹೇಳುವ ಇವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು.

ಮಂಡಲ್ ವರದಿ ವಿರೋಧಿಸಿ ಹಿಂದುಳಿದವರ ಹಾದಿ ತಪ್ಪಿಸಿ ಆತ್ಮಹತ್ಯೆಗೆ ದೂಡಿದ್ದು ಇದೇ ಬಿಜೆಪಿ. ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದ ರಾಮಾ ಜೋಯಿಸ್ ಬಿಜೆಪಿಯವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ವಿರೋಧಿಯಾಗಿರುವ ಇವರು ಈಗ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟಿ ಏಕ ಕಾಲದಲ್ಲಿ ಎರಡೂ ಸಮುದಾಯಗಳ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

Read More
Next Story