Loksabha Election 2024 | ರಾಜ್ಯದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ? ಪಕ್ಷದ ಆಂತರಿಕ ಸಮೀಕ್ಷೆ ಹೇಳುವುದೇನು?
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 15 ಮತ್ತು ಕಾಂಗ್ರೆಸ್ ಸುಮಾರು 10 ಸ್ಥಾನಗಳನ್ನು ಗಳಿಸಲಿದೆಯೇ? ಮೂರು ಕ್ಷೇತ್ರಗಳಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ 50-50ರ ಅವಕಾಶವಿದೆಯೇ? ಹಾಗೆಂದು ಬಿಜೆಪಿಯ ಅಂತರಿಕ ಲೆಕ್ಕಾಚಾರವಾಗಿದ್ದು, ಹೆಚ್ಚು ಸ್ಥಾನಗಳ ಗಳಿಕೆಗೆ ಯತ್ನ ನಡೆದಿದೆ.
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಗೆಲ್ಲುವ ಸಂಸದರ ಸಂಖ್ಯೆ ಜೂನ್ 4 ರಂದು ಹೊರಬೀಳಲಿದೆ. ಸುಮಾರು 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡರೆ, ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಬಿಜೆಪಿ ಹೇಳುತ್ತಿದೆ.
ಆದರೆ ರಾಜ್ಯದಲ್ಲಿ ಬಿಜೆಪಿ ಇತ್ತೀಚೆಗೆ ನಡೆಸಿದ ಆಂತರಿಕ ಸಮೀಕ್ಷೆಯ ಲೆಕ್ಕಾಚಾರ ಬೇರೆಯೇ ಇದೆ. ತನ್ನ ಪಾಲುದಾರ ಜೆಡಿಎಸ್ ಬೆಂಬಲದೊಂದಿಗೆ ಎಲ್ಲಾ ಕ್ಷೇತ್ರಗಳನ್ನು ಸ್ವೀಪ್ ಮಾಡುವ ಬಿಜೆಪಿಯ ಹೇಳಿಕೆಗೆ ವ್ಯತಿರಿಕ್ತವಾಗಿ ಆಡಳಿತಾರೂಢ ಕಾಂಗ್ರೆಸ್‌ನಿಂದ ಪ್ರಬಲ ಪೈಪೋಟಿ ಎದುರಾಗಲಿದೆ. 2019 ರಲ್ಲಿ, ಕಾಂಗ್ರೆಸ್, ಜೆಡಿಎಸ್ ಮತ್ತು ಸ್ವತಂತ್ರ (ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯ) ಬಿಟ್ಟು 25 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಬಿಜೆಪಿಯ ಮೂಲಗಳು ಹೇಳುವಂತೆ, ಆಂತರಿಕ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ರಲ್ಲಿ 15 ಮತ್ತು ಕಾಂಗ್ರೆಸ್ ಸುಮಾರು 10 ಸ್ಥಾನಗಳನ್ನು ಗಳಿಸಲಿದೆ. ಮೂರು ಕ್ಷೇತ್ರಗಳಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ 50-50ರ ಅವಕಾಶವಿದೆ. ಮೂರು ನಿರ್ಣಾಯಕ ಸ್ಥಾನಗಳ ಮೇಲೆ ಪಕ್ಷವು ಗಮನಹರಿಸಬೇಕು ಮತ್ತು ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳಿರುವ ಇತರ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಹೋರಾಡಬೇಕು ಎಂದು ಆಂತರಿಕ ಸಮೀಕ್ಷೆ ಸೂಚಿಸಿದೆ ಎನ್ನಲಾಗಿದೆ.
ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ದಕ್ಷಿಣ ಭಾರತದ ಸಂಖ್ಯೆಯನ್ನು ಸರಿದೂಗಿಸಲು ಬಿಜೆಪಿಯು ಕೇರಳ ಮತ್ತು ತಮಿಳುನಾಡಿನಿಂದ ಸ್ಥಾನಗಳನ್ನು ಗಳಿಸುವತ್ತ ಗಮನ ಹರಿಸಲು ಉತ್ಸುಕವಾಗಿದೆ. ಆಂತರಿಕ ಸಮೀಕ್ಷೆಯ ಪ್ರಕಾರ ತಮಿಳುನಾಡಿನ ಮೂರು ಮತ್ತು ಕೇರಳದ ಒಂದು ಕ್ಷೇತ್ರಗಳಲ್ಲಿ ಬಿಜೆಪಿಗೆ ಅವಕಾಶವಿದೆ. ಚೆನ್ನೈ ದಕ್ಷಿಣ, ಕನ್ಯಾಕುಮಾರಿ ಮತ್ತು ಕೊಯಮತ್ತೂರು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಹೆಸರು ಹೇಳಲಿಚ್ಛಿಸದ ಪದಾಧಿಕಾರಿಯೊಬ್ಬರು ́ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಕೇರಳದಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದೂ ಅವರು ಹೇಳಿದ್ದಾರೆ. ಕೇರಳದಲ್ಲಿ ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಬಿಜೆಪಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದ್ದು ಅಲ್ಲೇ ಕೇರಳದ ತನ್ನ ಮೊದಲ ಖಾತೆ ತೆರೆಯುವ ಭರವಸೆ ಬಿಜೆಪಿಗಿದೆ. ಅಂತೆಯೇ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಕೆ ಅಣ್ಣಾಮಲೈ ಗೆಲ್ಲುವ ಸಾಧ್ಯತೆ ಹೇರಳವಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ:
ಕರ್ನಾಟಕದಲ್ಲಿ ಹುಬ್ಬಳ್ಳಿ-ಧಾರವಾಡ, ಉತ್ತರಕನ್ನಡ, ಗುಲ್ಬರ್ಗ, ಬೀದರ್, ರಾಯಚೂರು, ಚಿಕ್ಕಬಳ್ಳಾಪುರ, ಮೈಸೂರು, ಬೀದರ್, ಚಿಕ್ಕೋಡಿ ಮತ್ತು ಚಿತ್ರದುರ್ಗವನ್ನು ಕಳೆದುಕೊಳ್ಳುವ ಭಯ ಬಿಜೆಪಿಯಲ್ಲಿದೆ. ಆದರೆ ಬೆಳಗಾವಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 50-50 ಗೆಲ್ಲುವ ಅವಕಾಶವನ್ನು ಹೊಂದಿದೆ.
ಇದು ರಾಜ್ಯ ಬಿಜೆಪಿ ನಾಯಕತ್ವದ ಆಂತರಿಕ ಘರ್ಷಣೆಯನ್ನು ಎತ್ತಿ ತೋರಿಸುತ್ತದೆ. ಆಂತರಿಕ ಕಿತ್ತಾಟ 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಂಡುಬಂದಿತ್ತು ಮತ್ತು ಈಗಲೂ ಅದು ಮುಂದುವರಿದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಇನ್ನೂ ಕೆಲಸ ಮಾಡುತ್ತಿದ್ದರೂ ಬಿಎಸ್ ಯಡಿಯೂರಪ್ಪನವರ ಬಣಗಳು ಮತ್ತು ಬಿಎಸ್‌ವೈ ವಿರೋಧಿ ತಂಡ ಈ ಚುನಾವಣೆಯಲ್ಲೂ ಪ್ರಭಾವ ಬೀರುತ್ತಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಮುಖ್ಯಸ್ಥ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನಾಯಕತ್ವ ಮತ್ತು ಬಿಜೆಪಿಗೆ ಹೋಲಿಸಿದರೆ ನಾಯಕರ ನಡುವಿನ ಕಡಿಮೆ ಆಂತರಿಕ ಕಚ್ಚಾಟ ಕೂಡ ಕಾಂಗ್ರೆಸ್ ಪರ ಕೆಲಸ ಮಾಡುವ ಅಂಶಗಳಾಗಿವೆ. ಹೀಗಾಗಿ ಬಿಜೆಪಿಗೆ ಕಡಿಮೆ ಅವಕಾಶವಿರುವ 10 ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವು ತಕ್ಷಣಕ್ಕೆ ಕಂಡುಬರುವ ಅಂಶಗಳಾದರೂ ಮತದಾನದ ದಿನಾಂಕ ಸಮೀಪಿಸುತ್ತಿರುವಾಗ ಚುನಾವಣಾ ವಾತಾವರಣವನ್ನು ತನ್ನ ಪರವಾಗಿ ಮಾಡಿಕೊಳ್ಳುವ ಶಕ್ತಿ ಕೇಂದ್ರ ನಾಯಕತ್ವಕ್ಕಿದೆ. ಆದರೆ ಆತಂಕಕಾರಿ ಅಂಶವೆಂದರೆ ನಾಯಕರು ಮತ್ತು ಬಂಡಾಯ ಸಂಸದರು ಮತ್ತು ಟಿಕೆಟ್ ನಿರಾಕರಿಸಿದ ಇತರ ನಾಯಕರ ನಡುವಿನ ಆಂತರಿಕ ಘರ್ಷಣೆಗಳು ತಳಮಟ್ಟದಲ್ಲಿ ತಮ್ಮನ್ನು ತಾವು ತಟಸ್ಥವಾಗಿ ಇರಿಸಿಕೊಳ್ಳಲು ಅಥವಾ ವಿರುದ್ಧವಾಗಿ ಕೆಲಸ ಮಾಡುವಂತಾಗಿದೆ. ಇದು ಬಿಜೆಪಿಯ ಋಣಾತ್ಮಕ ಅಂಶವಾಗಿದೆ ಎಂದು ಅವರು ಹೇಳಿದರು.
ಎಲ್ಲ ಬಣಗಳಿಂದ ಸಮಾನ ಅಂತರ ಕಾಯ್ದುಕೊಂಡಿರುವ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟದ ಮಾಜಿ ಸಚಿವರೊಬ್ಬರ ಪ್ರಕಾರ, ಬಿಎಸ್‌ವೈ ಫ್ಯಾಕ್ಟರ್ ಚುನಾವಣಾ ಗೆಲುವಿನ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಫೆಡರಲ್‌ಗೆ ತಿಳಿಸಿದ್ದಾರೆ. 'ವಿಧಾನಸಭಾ ಚುನಾವಣೆ ವೇಳೆ ಬಿಎಸ್‌ವೈ ಅವರನ್ನು ದೂರವಿರಿಸಿದ್ದು ಪಕ್ಷಕ್ಕೆ ಹಿನ್ನೆಡೆಯಾಯಿತು. ಈಗ ಅವರ ನೇತೃತ್ವವೇ ಅವರ ವಿರುದ್ಧ ಬಣಗಳು ತೊಡೆತಟ್ಟುವಂತೆ ಮಾಡಿದ್ದು ಪಕ್ಷದ ಓಟಕ್ಕೆ ಅಡೆತಡೆಯಾದಂತಾಗಿದೆ ಎಂಬುದು ಅವರ ಅಭಿಪ್ರಾಯ.
ಉದಾಹರಣೆಗೆ, ಮಂಗಳೂರಿನಂತೆಯೇ ಹಿಂದುತ್ವದ ಭದ್ರಕೋಟೆಯಾಗಿರುವ ಉತ್ತರಕನ್ನಡ ಕ್ಷೇತ್ರದ ಕೈಜಾರುತ್ತಿದೆ ಎಂಬ ಆತಂಕ ಬಿಜೆಪಿಗಿದೆ. ಹಿಂದುಳಿದ ವರ್ಗ ಯುವಕರ ಪ್ರಮುಖ ಬೆಂಬಲವಿರುವ ಬ್ರಾಹ್ಮಣ ನಾಯಕ ಹಾಗೂ ಹಿಂದುತ್ವದ ಫೈರ್‌ಬ್ರಾಂಡ್ ಅನಂತ್‌ಕುಮಾರ್ ಹೆಗಡೆಯವರಿಗೆ ಟಿಕೆಟ್ ನಿರಾಕರಿಸಿರುವುದು ಹಿಂದುಳಿದ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕಲಬುರ್ಗಿ, ಬೀದರ್, ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲವಿದ್ದರೂ ‘ಮೋದಿ ಅಲೆ’ಯಿಂದಾಗಿ ಕಾಂಗ್ರೆಸ್‌ಗೆ ಹಾನಿಯಾಗಿದೆ. ಆದರೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ ತಳಹದಿಯನ್ನು ಭದ್ರವಾಗಿ ಕಟ್ಟಿಕೊಂಡಿರುವುದು ಕಾಣುತ್ತಿದೆ, ಜೊತೆಗೆ ಸಿದ್ದರಾಮಯ್ಯನವರ ಸಾಮೂಹಿಕ ನಾಯಕತ್ವವೂ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಲಿಂಗಾಯತ ಮತ್ತು ಒಕ್ಕಲಿಗರು ಒಂದು ಕಡೆ ವಾಲಿದರೆ; ಅಹಿಂದ (ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ದಲಿತರು) ಕ್ರೋಢೀಕರಣ ಕಾಂಗ್ರೆಸ್‌ಗೆ ವರವಾಗಿದೆ. ಜತೆಗೆ ಮುಸ್ಲಿಂ ಮತ ಬ್ಯಾಂಕ್ ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗೆ ತಿರುಗಿಸುವಂತೆ ಮಾಡಿದೆ. ಇವೆಲ್ಲವನ್ನು ಮನಗಂಡಿರುವ ಬಿಜೆಪಿ ನಾಯಕತ್ವ ತನ್ನ ಕಾರ್ಯತಂತ್ರಗಳೊಂದಿಗೆ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದೆ, ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಆದರೆ, ಧಾರವಾಡ, ಉತ್ತರ ಕನ್ನಡ ಕ್ಷೇತ್ರಗಳು ಸೇರಿದಂತೆ ಬಿಜೆಪಿ ಭದ್ರಕೋಟೆಗಳನ್ನು ಕಳೆದುಕೊಳ್ಳುವ ಚಿಂತೆ ಕಾಡುತ್ತಿದ್ದು ಯಾವುದೇ ಕಾರಣಕ್ಕೆ ಆ ಕ್ಷೇತ್ರಗಳನ್ನು ಕಳೆದುಕೊಳ್ಳಲು ಬಿಜೆಪಿ ಬಯಸುತ್ತಿಲ್ಲ. ಈ ನಿಟ್ಟಿನಲ್ಲಿ ಅನಂತ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಂಡಾಯಗಾರರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕತ್ವ ಸರ್ವಪ್ರಯತ್ನ ನಡೆಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಗುರಿ ತಲುಪಲು ಬಿಎಸ್‌ವೈ ಹಾಗೂ ಬಿಎಸ್‌ವೈ ವಿರೋಧಿ ಪಾಳಯಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
50-50 ಅವಕಾಶಗಳು
ಬಿಜೆಪಿ ಅಧ್ಯಯನವು ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಎಸ್ ಸಹೋದರರ (ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್) ನೆಲೆಗೆ ಲಗ್ಗೆಹಾಕುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲಿ ಬಿಜೆಪಿ, ಹಿರಿಯ ಹೃದ್ರೋಗ ತಜ್ಞ ಡಾ.ಸಿಎನ್ ಮಂಜುನಾಥ್ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಉಮೇದುವಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು ಆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯುವ ಅವಕಾಶ ಹೆಚ್ಚಿಸಿಕೊಂಡಿದೆ. ಬೆಳಗಾವಿ ಕ್ಷೇತ್ರವೂ ಬಿಜೆಪಿ-ಕಾಂಗ್ರೆಸ್‌ಗೆ ಸಮನಾವಕಾಶ ಕಲ್ಪಿಸಿದೆ. ಬಹುತೇಕ ರಾಜಕಾರಣಿಗಳು ಸಕ್ಕರೆ ಮತ್ತು ಮದ್ಯದ ಲಾಬಿ ಇಟ್ಟುಕೊಂಡಿರುವುದು ಚುನಾವಣೆಯಲ್ಲಿ ಪ್ರಭಾವ ಬೀರುತ್ತಿರುವುದು ಹೊಸದೇನಲ್ಲ. ಬೆಳಗಾವಿ ಕ್ಷೇತ್ರವು ಲಿಂಗಾಯತರು ಮತ್ತು ಮರಾಠಿ ಮಾತನಾಡುವ ಸಮುದಾಯಗಳನ್ನು ಒಳಗೊಂಡಿರುವುದು ಮತ್ತು ಹಿಂದುತ್ವದ ಮತಬ್ಯಾಂಕ್ ಇರುವುದೂ ಚುನಾವಣೆಯಲ್ಲಿ ನಿರ್ಣಾಯಕ ಅಂಶಗಳಾಗಿವೆ. ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಾವಧಿಯ ಪಕ್ಷಾಂತರ ಮಾಡಿದ್ದ ಜಗದೀಶ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡರು ಆದರೆ ಅವರ ಕನಸಾದ “ಧಾರವಾಡ ಕ್ಷೇತ್ರ” ಗಿಟ್ಟಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಶೆಟ್ಟರ್ ಬೆಳಗಾವಿ ಕ್ಷೇತ್ರದಿಂದ ‘ಹೊರಗಿನವರು’ ಎಂಬ ಕಾರಣಕ್ಕಾಗಿ ಅವರದೇ ಪಕ್ಷದ ನಾಯಕರಿಂದಲೇ ‘ಗೋ ಬ್ಯಾಕ್’ ಅಭಿಯಾನ ಬಿಜೆಪಿ ಮಟ್ಟಿಗೆ 50-50 ಅವಕಾಶ ನೀಡಿದೆ.
ಕೋಲಾರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಅವರ ಎದುರಾಳಿ ತಂಡದ ಘರ್ಷಣೆ ಕಂಡುಬಂದಿದ್ದು, ಬಿಜೆಪಿಗೆ 50-50 ಸಾಧ್ಯತೆಯಿದೆ. ಎಡಗೈ ದಲಿತರು) ಇಲ್ಲಿ ಬಿಜೆಪಿಯನ್ನು ಬೆಂಬಲಿಸುವ ಅವಕಾಶವಿದ್ದು ಬಲಗೈ ದಲಿತರು ಕಾಂಗ್ರೆಸ್‌ಗೆ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್ ಎಡಗೈ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಎರಡೂ ಪಕ್ಷಗಳಿಗೂ ಸಮಾನ ಅವಕಾಶವಿದೆ.
ಇತರ ಅಂಶಗಳು
ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (ಧಾರವಾಡ), ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಂತಾದ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಂದ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು ಇವೆಲ್ಲವೂ ಪಕ್ಷಕ್ಕೆ ಆತಂಕಕಾರಿಯಾಗಿದೆ. 2019ರ ಚುನಾವಣೆಯಲ್ಲಿ ಪಕ್ಷದೊಳಗೆ ಕೆಲವು ಸಮಸ್ಯೆಗಳಿದ್ದರೂ, 2024ರಲ್ಲಿ ನಡೆದಂತಹ ಬಂಡಾಯದ ಘಟನೆಗಳು ನಡೆದಿರಲಿಲ್ಲ. ಈ ಬಾರಿ ರಾಜ್ಯದ ಬಿಎಸ್‌ವೈ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ‘ಮೂಲ’ ಬಿಜೆಪಿ ನಾಯಕರಿಗೆ ಸಂತಸವಿಲ್ಲ ಎಂದು ಬಿಜೆಪಿ ನಾಯಕ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಒಕ್ಕಲಿಗರು ಮತ್ತು ಲಿಂಗಾಯತರ ಮತಗಳ ಒಂದು ಭಾಗವು ಕಾಂಗ್ರೆಸ್‌ಗೆ ಹೋಯಿತು. ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಸೇರಿದಂತೆ ಹಲವು ಅಂಶಗಳು ಬಿಜೆಪಿ ವಿರುದ್ಧ ಕೆಲಸ ಮಾಡಿದ್ದವು. ಲಿಂಗಾಯತ (ಪಂಚಮಸಾಲಿ ಉಪಪಂಗಡ) ಮತ್ತು ಒಕ್ಕಲಿಗರ ಒಂದಂಶ ಈಗಲೂ ಕಾಂಗ್ರೆಸ್‌ನತ್ತ ವಾಲಿದರೆ, 2019 ರಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಬಿಜೆಪಿಗೆ ಅರಿವಿದೆ.
ಇದೇ ಸಂದರ್ಭದಲ್ಲಿ ಬಿಜೆಪಿ ಮೋದಿ ಅಲೆ ಮತ್ತು ರಾಮಮಂದಿರದಂತಹ ವಿಷಯಗಳು ಮತ್ತು ಪ್ರಧಾನಿಯವರ ಕಿಸಾನ್ ಸಮ್ಮಾನ್ ನಂತಹ ಯೋಜನೆಗಳು ಮತ್ತು ರಾಷ್ಟ್ರೀಯ ನಾಯಕತ್ವದ ವಿಚಾರಗಳು ಬಿಜೆಪಿಗೆ ಧನಾಂಶಗಳಾಗಿವೆ. ಆದರೆ ಅನುದಾನದಂತಹ ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಕೇಂದ್ರ ಅಸಮಾನತೆ ತೋರಿದೆ ಎಂಬ ವಿಷಯಗಳ ಆಧಾರದಲ್ಲಿ ರಾಜ್ಯ ಕಾಂಗ್ರೆಸ್ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಸ್ವಲ್ಪ ಶೇಕಡಾವಾರು ಅಂಶ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿವೆ. ಬಿಜೆಪಿ ನಾಯಕತ್ವಕ್ಕೆ ಇದು ತಿಳಿದಿರುವುದುರಿಂದ ವಿಭಿನ್ನ ಚುನಾವಣಾ ತಂತ್ರಗಳನ್ನು ರೂಪಿಸುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: