ಮಧ್ಯಪ್ರದೇಶ | ಛಿಂದ್ವಾರಾ ಕೈವಶಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಬೇಟೆ
x

ಮಧ್ಯಪ್ರದೇಶ | ಛಿಂದ್ವಾರಾ ಕೈವಶಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಬೇಟೆ


ಛಿಂದ್ವಾರಾ, ಫೆ. 29- ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಭದ್ರಕೋಟೆ ಛಿಂದ್ವಾರಾ ಲೋಕಸಭೆ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಸಕಲ ಪ್ರಯತ್ನ ಮಾಡುತ್ತಿದೆ.

ಈ ಯೋಜನೆಯ ಭಾಗವಾಗಿ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷದಿಂದ 50,000 ಕಾರ್ಯಕರ್ತರನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ಕಮಲ್ ನಾಥ್ ಛಿಂದ್ವಾರಾದಿಂದ ಒಂಬತ್ತು ಬಾರಿ ಆಯ್ಕೆಯಾಗಿದ್ದಾರೆ ಹಾಗೂ ಅವರ ಪುತ್ರ ನಕುಲ್ ನಾಥ್ ಪ್ರಸ್ತುತ ಅಲ್ಲಿಂದ ಸಂಸದ. ಕಮಲ್‌ ನಾಥ್ ತಮ್ಮ ಪುತ್ರನೊಂದಿಗೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಇತ್ತೀಚೆಗೆ ಹರಡಿತ್ತು. ಆದರೆ, 15 ತಿಂಗಳು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ 77 ವರ್ಷದ ನಾಯಕ ಕಾಂಗ್ರೆಸ್‌ ನಲ್ಲೇ ಉಳಿದರು.

ಛಿಂದ್ವಾರಾ ಮೊದಲಿನಿಂದಲೂ ಕಾಂಗ್ರೆಸ್‌ನ ಕೋಟೆಯಾಗಿಯೇ ಉಳಿದಿದೆ. 1952 ರಿಂದ 1997 ರ ಅವಧಿಯಲ್ಲಿ ಪಕ್ಷ ಕೇವಲ ಒಂದು ಬಾರಿ ಅಪಜಯಗೊಂಡಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ 29 ರಲ್ಲಿ 28 ಸ್ಥಾನ ಗಳಿಸಿತು. ಆದರೆ, ಚಿಂದ್ವಾರವನ್ನು ಗೆಲ್ಲಲು ವಿಫಲವಾಯಿತು.

ಬಿಜೆಪಿ ನಾಯಕರ ಪ್ರಕಾರ, ಚುನಾವಣೆಗೆ ಮೊದಲು ಕ್ಷೇತ್ರದ 50,000 ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಬುಧವಾರ 50 ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸೇರಿದ್ದಾರೆ ಎಂದು ಬಿಜೆಪಿ ಹೇಳಿದೆ.

ಕಳೆದ ಭಾನುವಾರ ಗ್ವಾಲಿಯರ್ ಮತ್ತು ಖಜುರಾಹೊದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ರಾಜ್ಯದ ಎಲ್ಲಾ 29 ಸ್ಥಾನಗಳಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಲು ಬೂತ್ ಕಾರ್ಯಕರ್ತರಿಗೆ ಹೇಳಿದರು.

ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ಬಹಿಷ್ಕರಿಸುವ ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡು ಫೆಬ್ರವರಿ 1 ರಿಂದ ಒಟ್ಟು 5,000 ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ಛಿಂದ್ವಾರಾ ಜಿಲ್ಲಾ ಘಟಕದ ಅಧ್ಯಕ್ಷ ಬಂಟಿ ಸಾಹು ಗುರುವಾರ ತಿಳಿಸಿದರು.

ʻಚುನಾವಣೆಗೂ ಮುನ್ನ 50,000 ಕಾಂಗ್ರೆಸ್ ಕಾರ್ಯಕರ್ತರನ್ನು ಸೇರ್ಪಡೆಗೊಳಿಸುವ ಮತ್ತು ಕಾಂಗ್ರೆಸ್‌ ನ್ನು ಸೋಲಿಸುವ ಗುರಿ ಹೊಂದಿದ್ದೇವೆ. ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿರುವವರು ಬಿಜೆಪಿ ಸೇರುತ್ತಿದ್ದಾರೆʼ ಎಂದು ಹೇಳಿದರು. ಬಿಜೆಪಿ ಹಿರಿಯ ನಾಯಕರೊಬ್ಬರ ಪ್ರಕಾರ, 50,000 ಕಾಂಗ್ರೆಸ್ ಸದಸ್ಯರನ್ನು ಸೇರಿಸಿಕೊಳ್ಳಲು ಛಿಂದ್ವಾರಾ ಘಟಕವನ್ನು ಪಕ್ಷ ಕೇಳಿದೆ. ಫೆ. 21 ರಂದು ಮಾಜಿ ಸಂಸದ, ಉದ್ಯಮಿ ಉಜ್ವಲ್ ಸಿಂಗ್ ಠಾಕೂರ್ ಅಕಾ ಅಜ್ಜು ಸೇರಿದಂತೆ 1500 ನಾಯಕರು ಪಕ್ಷ ಸೇರಿದರು ಎಂದು ಬಿಜೆಪಿ ಹೇಳಿಕೊಂಡಿದೆ. ಪಕ್ಷಕ್ಕೆ ಸ್ವಾಗತಿಸಿದ ಮುಖ್ಯಮಂತ್ರಿ ಮೋಹನ್ ಯಾದವ್, ಆತಂಕದಲ್ಲಿರುವವರು ಬಿಜೆಪಿ ಸೇರುತ್ತಾರೆ ಎಂದು ಹೇಳಿದರು.

ಆದರೆ, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ವಿಶ್ವನಾಥ್ ಒಕ್ಟೆ, ಬಿಜೆಪಿ ಸುಳ್ಳು ಹೇಳಿಕೆ ನೀಡುತ್ತಿದೆ. ಫೆಬ್ರವರಿ 1 ರಿಂದ 24 ಕಾಂಗ್ರೆಸ್ ನಾಯಕರು ಮಾತ್ರ ಬಿಜೆಪಿ ಸೇರಿದ್ದಾರೆ. ಸ್ವಾರ್ಥಿಗಳು ಮತ್ತು ಅಕ್ರಮ ಹಣ ಹೊಂದಿರುವವರು ಮಾತ್ರ ಬಿಜೆಪಿ ಸೇರುತ್ತಿದ್ದಾರೆʼ ಎಂದು ಆರೋಪಿಸಿದರು.

ಬಿಜೆಪಿಯ ಯೋಜನೆಯನ್ನು ಗ್ರಹಿಸಿದ ಕಮಲ್‌ ನಾಥ್ ತಮ್ಮ ಪುತ್ರ ನಕುಲ್‌ಗೆ ಬೆಂಬಲ ನೀಡಲು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ವನ್ನು ಬುಧವಾರ ಪ್ರಾರಂಭಿಸಿದರು. 5 ದಿನಗಳ ಪ್ರವಾಸದಲ್ಲಿ ಅವರು ಛಿಂದ್ವಾರದ ಎಲ್ಲಾ 11 ಕಂದಾಯ ಬ್ಲಾಕ್‌ಗಳಿಗೆ ಭೇಟಿ ನೀಡಲಿದ್ದಾರೆ.

ʻ2019 ರ ಚುನಾವಣೆಯಲ್ಲಿ ಛಿಂದ್ವಾರಾ ಕ್ಷೇತ್ರವನ್ನು 34,953 ಮತಗಳಿಂದ ಹಾಗೂ 2014 ರಲ್ಲಿ 1,16,537 ಮತಗಳಿಂದ ಕಳೆದುಕೊಂಡಿ ದ್ದೇವೆ. ಸೋಲಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಿದ್ದೇವೆʼ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ʻಕಳೆದ ವರ್ಷ ಛಿಂದ್ವಾರಾದಲ್ಲಿ ಎಲ್ಲಾ ಏಳು ವಿಧಾನಸಭೆ ಸ್ಥಾನಗಳನ್ನು ಕಳೆದುಕೊಂಡಿದ್ದರೂ, ಮತ ಗಳಿಕೆ ಗಣನೀಯವಾಗಿ ಜಿಗಿದಿದೆ. ನಾವು ದಿನದಿಂದ ದಿನಕ್ಕೆ ಬಲಶಾಲಿಯಾಗುತ್ತಿದ್ದೇವೆ ಮತ್ತು ಛಿಂದ್ವಾರಾದಲ್ಲಿ ಜಯಗಳಿಸಲು ಸಿದ್ಧರಾಗಿದ್ದೇವೆʼ ಎಂದು ಬಿಜೆಪಿ ಕಾರ್ಯಕರ್ತಯೊಬ್ಬರು ಹೇಳಿದರು.

Read More
Next Story