ನಿಗಮ ಮಂಡಳಿಗಳ ನೇಮಕಾತಿ:  ಸರ್ಕಾರಕ್ಕೆ ದೊಡ್ಡ ಸವಾಲು
x

ನಿಗಮ ಮಂಡಳಿಗಳ ನೇಮಕಾತಿ: ಸರ್ಕಾರಕ್ಕೆ ದೊಡ್ಡ ಸವಾಲು

ಕರ್ನಾಟಕದಲ್ಲಿ ನಿಗಮ ಮಂಡಳಿಗಳಿಗೆ ತೀವ್ರ ಲಾಬಿ ನಡೆಯುತ್ತಿದೆ. ಈ ವಿಚಾರದಲ್ಲಿ ಕಾರ್ಯಕರ್ತರು ಮತ್ತು ಅತೃಪ್ತ ಶಾಸಕರನ್ನು ತೃಪ್ತಿಪಡಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.


ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ವಿವಿಧ ನಿಗಮ ಮಂಡಳಿಗಳಿಗೆ ಲಾಬಿ ತೀವ್ರಗೊಂಡಿದೆ. ಬಜೆಟ್ ಅಧಿವೇಶನದ ನಂತರ ರಾಜ್ಯದ ವಿವಿಧ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ನಡೆಯಲಿದೆ ಎಂದು ಕಾಂಗ್ರೆಸ್ ಸುಳಿವು ನೀಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು, ಎಲ್ಲಾ 34 ಸ್ಥಾನಗಳನ್ನು ಹಂಚಿಕೆ ಮಾಡಿದೆ. ಆದರೆ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಅನೇಕ ಹಿರಿಯ ಮತ್ತು ಕಿರಿಯ ಶಾಸಕರಿಗೆ ಯಾವುದೇ ಸ್ಥಾನಮಾನ ಸಿಗದಿರುವುದರಿಂದ ಒಳಗೊಳಗೆ ಅಸಮಾಧಾನ ಸ್ಪೋಟಗೊಳ್ಳುತ್ತಿದೆ. ಸಂಪುಟ ಸೇರಲು ಸಾಧ್ಯವಾಗದ ಶಾಸಕರು ಪಾಲಿಕೆ, ನಿಗಮಗಳ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷ(ಸಿಎಲ್‌ಪಿ)ದ ಸಭೆ ಕರೆದು ಶಾಸಕರನ್ನು ಸಾಂತ್ವನಗೊಳಿಸಲು ವಿವಿಧ ಸರ್ಕಾರಿ ಸ್ವಾಮ್ಯದ ಮಂಡಳಿಗಳು ಮತ್ತು ನಿಗಮಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಬಗ್ಗೆ ಚರ್ಚಿಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಲೋಕಸಭೆಗೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಶಾಸಕರ ನಡುವೆ ಹೆಚ್ಚುತ್ತಿರುವ ಘರ್ಷಣೆಯ ನಡುವೆ ಸ್ಥಳೀಯ ಕುಂದುಕೊರತೆಗಳನ್ನು ಪರಿಹರಿಸುವುದು ಖರ್ಗೆ ಅವರ ಗುರಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಖರ್ಗೆ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮಂಡಳಿ ಮತ್ತು ನಿಗಮಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಹೊಸದೇನಲ್ಲ. ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು 14 ಕಾಂಗ್ರೆಸ್ ಶಾಸಕರನ್ನು ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬೃಹತ್ ಗೆಲುವಿಗಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ನಿಗಮಮಂಡಳಿಗಳಲ್ಲಿ ಉನ್ನತ ಹುದ್ದೆಗಳನ್ನು ನೀಡುವುದು ಶಿವಕುಮಾರ್ ಅವರ ಯೋಜನೆಯಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೂಲಗಳು ಶಿವಕುಮಾರ್ ಅವರು ಈಗಾಗಲೇ ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದು, ನಿಗಮ-ಮಂಡಳಿಗಳ ನಿರ್ದೇಶಕರು ಮತ್ತು ಜಿಲ್ಲಾ - ತಾಲೂಕು ಮಟ್ಟದ ಸಮಿತಿಗಳ ಸದಸ್ಯರ ಹೆಸರನ್ನು ಶಿಫಾರಸು ಮಾಡುವಂತೆ ಸೂಚಿಸಿದ್ದಾರೆ. ಆದರೆ, ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ನಿಗಮ-ಮಂಡಳಿಗಳ ಹುದ್ದೆಗಳನ್ನು ಶಾಸಕರು ಹಾಗೂ ಕಾರ್ಯಕರ್ತರ ನಡುವೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

Read More
Next Story