ಅನಂತಕುಮಾರ್‌ಗೆ ತಪ್ಪಿದ ಬಿಜೆಪಿ ಟಿಕೆಟ್‌; ಶೆಟ್ಟರ್‌ ಬೆಳಗಾವಿಯಿಂದ ಸ್ಪರ್ಧೆ
x

ಅನಂತಕುಮಾರ್‌ಗೆ ತಪ್ಪಿದ ಬಿಜೆಪಿ ಟಿಕೆಟ್‌; ಶೆಟ್ಟರ್‌ ಬೆಳಗಾವಿಯಿಂದ ಸ್ಪರ್ಧೆ


ಸಂವಿಧಾನವನ್ನೇ ಬದಲಿಸುವುದಾಗಿ ಹೇಳಿಕೆ ನೀಡಿದ ಬಿಜೆಪಿ ಮುಖಂಡ, ಉತ್ತರ ಕನ್ನಡ ಕ್ಷೇತ್ರವನ್ನು ಆರು ಬಾರಿ ಗೆದ್ದಿರುವ ಹಾಲಿ ಸಂಸದ ಅನಂತ ಕುಮಾರ್‌ ಹೆಗಡೆ ಅವರಿಗೆ ಈ ಬಾರಿಯ ಬಿಜೆಪಿ ಟಿಕೆಟ್‌ ಕೈ ತಪ್ಪಿದೆ. ವಿಧಾನಸಭೆ ಟಿಕೆಟ್‌ ಕೈತಪ್ಪಿ ಕಾಂಗ್ರೆಸ್‌ಗೆ ಹಾರಿ ಅಲ್ಲಿ ಸ್ಪರ್ಧಿಸಿ ಸೋಲು ಕಂಡ ಬಳಿಕ ಮತ್ತೆ ಬಿಜೆಪಿಗೆ ಜಿಗಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಟಿಕೆಟ್‌ ನೀಡಲಾಗಿದೆ.


ಇದರಿಂದ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಮೂವರು ಸೇರಿದಂತೆ ನಾಲ್ವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗಿದ್ದು, ಇದುವರೆಗೆ ಒಟ್ಟು ೨೪ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದಂತಾಗಿದೆ.

ಸತತ ಆರು ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅನಂತ ಕುಮಾರ್‌ ಹೆಗಡೆ ಬದಲಿಗೆ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಾಜಿ ಸಚಿವ ಹಾಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಶಾಸಕರಾಗಿದ್ದು, ಬಳಿಕ ಬಿಜೆಪಿಯ ಆಪರೇಷನ್‌ ಕಮಲದಿಂದ ಬಿಜೆಪಿ ಪಾಳಯಕ್ಕೆ ಜಿಗಿದು ಬಿಎಸ್‌ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಿದ್ದ ಮಾಜಿ ಸಚಿವ ಡಾ, ಕೆ ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ರಾಯಚೂರು ಎಸ್‌ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರು ಮತ್ತೆ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇದರಿಂದ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ಗೆ ಮಂಡ್ಯ, ಹಾಸನ ಜತೆಗೆ ಕೋಲಾರ ಕ್ಷೇತ್ರಗಳು ಬಹುತೇಕ ಖಚಿತವಾಗಿದೆ. ಬಿಜೆಪಿ ಇನ್ನೂ ಚಿತ್ರದುರ್ಗ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸುವುದು ಬಾಕಿಯಿದೆ.

Read More
Next Story