
ಬರ ಪರಿಹಾರಕ್ಕೆ ಕೇಂದ್ರದ ಹಣ ಬಿಡುಗಡೆಗೆ ತಡೆ: ಸಿದ್ದರಾಮಯ್ಯ- ಅಮಿತ್ ಶಾ ನಡುವೆ ಮಾತಿನ ಚಕಮಕಿ
ಬರಪರಿಹಾರಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ಬರಬೇಕಿರುವ ಬರ ಪರಿಹಾರದ ಹಣಕ್ಕಾಗಿ ಕೇಂದ್ರ ಗೃಹ ಸಚಿವ, ಕರ್ನಾಟಕದ ಮುಖ್ಯಮಂತ್ರಿಯ ನಡುವೆ ಇಂದು ಮಾತಿನ ಚಕಮಕಿ ನಡೆದಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದ ಜನರಿಗೆ ದ್ರೋಹ ಮತ್ತು ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪರಿಹಾರ ಕೋರಿ ಪ್ರಸ್ತಾವನೆ ಕಳುಹಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಅಮಿತ್ ಶಾ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅಮಿತ್ ಶಾ ಅವರು “ಕರ್ನಾಟಕದಲ್ಲಿ ಅಧಿಕಾರದಲ್ಲಿರುವ (ಕಾಂಗ್ರೆಸ್) ಸರ್ಕಾರವು ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ, ಇಲ್ಲಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇಬ್ಬರೂ ರಾಜ್ಯದ ಜನತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಎಂದು ಅಮಿತ್ ಶಾ ಇಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಕರ್ನಾಟಕದಲ್ಲಿ ಬರಗಾಲವಿದೆ, ಅವರು (ರಾಜ್ಯ ಸರ್ಕಾರ) ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮೂರು ತಿಂಗಳು ತಡ ಮಾಡಿದೆ. ಕೇಂದ್ರದಿಂದ ಬರ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ತಡಮಾಡಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಕರ್ನಾಟಕಕ್ಕೆ ಕಾಂಗ್ರೆಸ್ ಏನು ಮಾಡಿದೆ? ಎಂದು ಪ್ರಶ್ನಿಸಿದ ಶಾ ಅವರು 10 ವರ್ಷಗಳ ಯುಪಿಎ ಆಡಳಿತದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಕರ್ನಾಟಕಕ್ಕೆ ಕೇವಲ ಒಂದು ಲಕ್ಷದ ನಲವತ್ತೆರಡು ಸಾವಿರ ಕೋಟಿ ರೂಪಾಯಿ ನೀಡಿದರೆ, ನರೇಂದ್ರ ಮೋದಿ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಇದನ್ನು ಹೊರತುಪಡಿಸಿ, ರಸ್ತೆ ಅಭಿವೃದ್ಧಿಗೆ ಇಪ್ಪತ್ತೈದು ಸಾವಿರ ಕೋಟಿ, ರೈಲ್ವೆ ಯೋಜನೆಗಳಿಗೆ ಎಪ್ಪತ್ತೈದು ಸಾವಿರ ಕೋಟಿ, ವಾಯುಮಾರ್ಗ ಅಭಿವೃದ್ಧಿಗೆ ಹನ್ನೊಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಮೋದಿ ಅವರು ಜಾರಿಗೆ ತಂದಿರುವ ಕೇಂದ್ರದ ವಿವಿಧ ಯೋಜನೆಗಳಿಂದ ಕರ್ನಾಟಕದ ಮೂರೂವರೆ ಕೋಟಿಗೂ ಹೆಚ್ಚು ಮಂದಿ ಫಲಾನುಭವಿಗಳಾಗಿದ್ದಾರೆ ಎಂದು ಅವರು ವಿವರಿಸಿದರು.
ಕರ್ನಾಟಕಕ್ಕೆ ದ್ರೋಹ; ಆರೋಪ
ಇದಕ್ಕೂ ಮುನ್ನ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದು, ಅನ್ಯಾಯ ಮಾಡುತ್ತಿದೆ. ಶಾ ಅವರಿಗೆ ಕರ್ನಾಟಕದ ಮತದಾರರಿಂದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು. ವಿಶೇಷವಾಗಿ ಕರ್ನಾಟಕ್ಕೆ ಬರಬೇಕಿರುವ ಬರ ಪರಿಹಾರ ಹಣ ಬಿಡುಗಡೆಯಲ್ಲಿ ವಿಳಂಬವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೋದಿ, ಶಾ ಭೇಟಿಯಾದರೂ ಹಣ ನೀಡಿಲ್ಲ
ಬರ ಪರಿಹಾರ ಕೋರಿ ತಮ್ಮ ಸರ್ಕಾರ ಕೇಂದ್ರದ ಮೊರೆ ಹೋಗಿ ಐದು ತಿಂಗಳಾದರೂ ರಾಜ್ಯಕ್ಕೆ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಅಕ್ಟೋಬರ್‌ನಿಂದ ಮೂರು ಜ್ಞಾಪನ ಪತ್ರಗಳನ್ನು ನೀಡಲಾಗಿದೆ; ಕೇಂದ್ರ ತಂಡವೂ ಪರಿಶೀಲನೆಗೆ ಬಂದಿದ್ದು, ಅವರು ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದದ್ದಾರೆ.
“ನಾನು ಡಿಸೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ, 20 ರಂದು ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದೆ, ಡಿಸೆಂಬರ್ 23 ರಂದು ಸಭೆ ಕರೆದು ನಿರ್ಧರಿಸುತ್ತೇನೆ ಎಂದು ಅವರು ಹೇಳಿದ್ದರು. ಇಷ್ಟೆಲ್ಲ ಆದರೂ ಕೇಂದ್ರ ಸರ್ಕಾರದಿಂದ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. “ಅಮಿತ್ ಶಾ ಅವರ ಮನೆಯಿಂದ ಹಣ ನೀಡುತ್ತಿದ್ದಾರಾ? ಇದು ಭಿಕ್ಷೆಯೇ? ಇದು ನಮ್ಮ ಹಣ, ನಮ್ಮ ತೆರಿಗೆ ಹಣ” ಎಂದ ಅವರು ಹಣ ಬಿಡುಗಡೆಗೆ ಸೂಕ್ತ ಕಾರಣ ನೀಡದೆ, ರಾಜ್ಯ ಸರ್ಕಾರವನ್ನು ಹೊಣೆ ಮಾಡುತ್ತಿರುವ ಅಮಿತ್ ಶಾ ಅವರಿಗೆ ಕರ್ನಾಟಕದ ಮತದಾರ ಮತ ಕೇಳಲು ಯಾವ ನೈತಿಕ ಹಕ್ಕಿದೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬರ ಪರಿಹಾರದಲ್ಲಿನ ವಿಳಂಬವನ್ನು ಪ್ರಮುಖ ವಿಷಯಗಳಲ್ಲಿ ಒಂದಾಗಿ ಪರಿಗಣಿಸಿದೆ. ಕರ್ನಾಟಕವು 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ; ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. ಜೊತೆಗೆ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ, ಅನುದಾನದಲ್ಲಿ ಅನುದಾನ ಮತ್ತು ಕೇಂದ್ರ ಯೋಜನೆಗಳಿಗೆ ಅನುಮತಿ ವಿಳಂಬ ಮುಂತಾದ ವಿಷಯಗಳನ್ನು ಮತದಾರರ ಮುಂದೆ ಪ್ರಸ್ತಾಪಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.