ಬಿಜೆಪಿ- ಜೆಡಿಎಸ್‌ ಮೈತ್ರಿಯಲ್ಲಿ ಒಡಕು? ಸಭೆಯಲ್ಲಿ ಅಸಮಾಧಾನ ಸ್ಫೋಟ
x

ಬಿಜೆಪಿ- ಜೆಡಿಎಸ್‌ ಮೈತ್ರಿಯಲ್ಲಿ ಒಡಕು? ಸಭೆಯಲ್ಲಿ ಅಸಮಾಧಾನ ಸ್ಫೋಟ

ಸೀಟು ಹಂಚಿಕೆಯ ಕಸರತ್ತಿನಲ್ಲಿ ಜೆಡಿಎಸ್ ನಿರ್ಲಕ್ಷ್ಯ, ನರೇಂದ್ರ ಮೋದಿಯವರ ಕರ್ನಾಟಕ ಚುನಾವಣಾ ಸಭೆಗಳಿಗೆ ಮಿತ್ರಪಕ್ಷ ಜೆಡಿಎಸ್ ನ ವರಿಷ್ಠ ಹೆಚ್.ಡಿ. ದೇವೇಗೌಡ ಅಥವಾ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಮೇಲಾಗಿ ಕರ್ನಾಟಕದ ನಾನಾ ಭಾಗಗಳಲ್ಲಿ ಪಕ್ಷದ ಮಹತ್ವವಿದ್ದರೂ ಸ್ಥಳೀಯ ಜೆಡಿಎಸ್ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.


ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿರ್ಧಾರಗಳ ಬಗ್ಗೆ ಪಕ್ಷದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಮೈತ್ರಿ ಬಳಿಕ ರಾಜ್ಯದಲ್ಲಿ ಬಿಜೆಪಿಯಲ್ಲಿ ಬದಲಾಗುತ್ತಿರುವ ನಡವಳಿಕೆಯನ್ನು ಎತ್ತಿ ತೋರಿಸಿರುವ ನಾಯಕರು, ಜೆಡಿಎಸ್‌ ಅಸ್ತಿತ್ವಕ್ಕೇ ಬಿಜೆಪಿ ಕೊಡಲಿಯೇಟು ನೀಡಲಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಸೀಟು ಹಂಚಿಕೆಯ ಕಸರತ್ತಿನಲ್ಲಿ ಜೆಡಿಎಸ್ ನಿರ್ಲಕ್ಷ್ಯ, ನರೇಂದ್ರ ಮೋದಿಯವರ ಕರ್ನಾಟಕ ಚುನಾವಣಾ ಸಭೆಗಳಿಗೆ ಮಿತ್ರಪಕ್ಷ ಜೆಡಿಎಸ್ ನ ವರಿಷ್ಠ ಹೆಚ್.ಡಿ. ದೇವೇಗೌಡ ಅಥವಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವ ಬಗ್ಗೆ ಅಪಸ್ವರ ವ್ಯಕ್ತವಾಗಿದೆ. ಮೇಲಾಗಿ ಕರ್ನಾಟಕದ ನಾನಾ ಭಾಗಗಳಲ್ಲಿ ಪಕ್ಷದ ಮಹತ್ವವಿದ್ದರೂ ಸ್ಥಳೀಯ ಜೆಡಿಎಸ್ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವ ನಿರ್ಧಾರದ ಬಗ್ಗೆ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಪಕ್ಷದೊಳಗಿನ ಅಸಮಾಧಾನ, ವಿಶೇಷವಾಗಿ ಹಳೇ ಮೈಸೂರು ಭಾಗದ ಒಕ್ಕಲಿಗರ ಭದ್ರಕೋಟೆಯಲ್ಲಿ ಪಕ್ಷದ ನೆಲೆಯನ್ನು ಕಳೆದುಕೊಳ್ಳುವ ಭಯವಿದೆ.

ಈಗ ಈ ಅಸಮಾಧಾನ ಬೆಂಗಳೂರಿನಲ್ಲಿ ಸೋಮವಾರ ನಡೆದ ಜೆಡಿಎಸ್‌ನ ಪ್ರಮುಖರ, ಶಾಸಕರ ಮತ್ತು ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಸ್ಫೋಟಗೊಂಡಿದೆ. ಬಿಜೆಪಿಯ ನಿರ್ಲಕ್ಷ್ಯ ಧೋರಣೆ ಮತ್ತು ಜೆಡಿಎಸ್ ಬಗ್ಗೆ ಏಕಪಕ್ಷೀಯ ಕ್ರಮಕ್ಕೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಹಿರಿಯ ನಾಯಕರು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಮೈತ್ರಿ ಮತ್ತು ಜೆಡಿಎಸ್‌ನೊಂದಿಗಿನ ನಂತರದ ವರ್ತನೆಯ ಬಗ್ಗೆ ಅಸಮಾಧಾನಗಳನ್ನು ನೇರವಾಗಿ ಉಲ್ಲೇಖಿಸಿದ್ದಾರೆ.

ಹಾಲಿ ಶಾಸಕ ಮತ್ತು ಮಾಜಿ ಸಚಿವರೊಬ್ಬರು "ದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ಮಾಹಿತಿ ಪ್ರಕಾರ, ಸಭೆಯಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾದವು. ಇದು ಎರಡು ಪಕ್ಷಗಳ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ. ಮೈತ್ರಿಕೂಟದ ಆರಂಭದಿಂದಲೂ ಬಿಜೆಪಿ ಜೆಡಿಎಸ್ ನಾಯಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಹಲವು ನಾಯಕರು, ನಿರ್ಣಾಯಕ ಚುನಾವಣಾ ಸಭೆಗಳು ಮತ್ತು ಪ್ರಚಾರಗಳಿಂದ ಬಿಜೆಪಿಯು ಜೆಡಿಎಸ್ ನಾಯಕರನ್ನು ವ್ಯವಸ್ಥಿತವಾಗಿ ಹೊರಗಿಟ್ಟಿದೆ ಎಂದು ಆರೋಪಿಸಿದರು, ಇದು ಪಕ್ಷದ ಆತ್ಮಗೌರವಕ್ಕೆ ಚ್ಯುತಿ ತರಲಿದೆ ಎಂಬ ಅಭಿಪ್ರಾಯ ಕೇಳಿಬಂತು," ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಕ್ಕೆ ಜೆಡಿಎಸ್ ನಾಯಕರ ಮೇಲಿನ ಬೇಸರ ಒಂದು ಹಂತದಲ್ಲಿ ಬಿಜೆಪಿ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರತ್ತ ತಿರುಗಿತು ಎನ್ನಲಾಗಿದೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ತನ್ನ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದರೂ ಜೆಡಿಎಸ್‌ನೊಂದಿಗೆ ಸಮಾಲೋಚಿಸದೆ ಬಿಜೆಪಿಯ ಸೀಟು ಹಂಚಿಕೆ ನಿರ್ಧಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಸಮಾಧಾನಗಳನ್ನು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಾಯಕರು ಪಟ್ಟಿ ಮಾಡಿದ್ದಾರೆ ಎನ್ನಲಾಗಿದೆ.

"ಜೆಡಿಎಸ್ ವರಿಷ್ಠರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಮೈತ್ರಿಕೂಟದ ಯಶಸ್ಸಿಗೆ ಪರಸ್ಪರ ವಿಶ್ವಾಸವೂ ಮುಖ್ಯ. ಆದರೆ ಬಿಜೆಪಿ ನಾಯಕರ ವರ್ತನೆ ಸರಿಯಿಲ್ಲ ಎಂಬ ಮಾತು ಕೇಳಿಬಂತು. ಪಕ್ಷದ ಭವಿಷ್ಯದ ಮೇಲೆ ಬಿಜೆಪಿಯ ತಂತ್ರಗಾರಿಕೆಯಿಂದ ಆಗುವ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು" ಎಂದು ಮೂಲಗಳು ತಿಳಿಸಿವೆ.

ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಪಕ್ಷ ನಿರ್ಲಕ್ಷಿಸಿರುವುದರಿಂದ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ನಿರ್ಧಾರಗಳ ಬಗ್ಗೆ ಹಲವಾರು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. "ಬಿಜೆಪಿ ಈ ಆರಂಭಿಕ ಹಂತದಲ್ಲೇ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದು ಹೀಗೆಯೇ ಮುಂದುವರಿದರೆ ಚುನಾವಣೆಯ ನಂತರ ಏನಾಗುತ್ತದೆ?" ಎಂದು ಹಲವರು ಪ್ರಶ್ನಿಸಿದ್ದಾರೆ. ಅಲ್ಲದೆ, ಬಿಜೆಪಿಯ ಪ್ರವೃತ್ತಿ ಹೀಗೆಯೇ ಮುಂದುವರಿದರೆ ನಾವು ಸಾರಾಸಗಾಟಾಗಿ ಬಿಜೆಪಿಯನ್ನು ತಳಮಟ್ಟದಲ್ಲಿ ಬೆಂಬಲಿಸುವುದು ಕಷ್ಟಸಾಧ್ಯ” ಎಂದು ನಾಯಕರೊಬ್ಬರು ದಿ ಫೆಡರಲ್‌ಗೆ ತಿಳಿಸಿದರು.

‘ಮೈತ್ರಿಯ ತತ್ವಗಳನ್ನು’ ರಕ್ಷಿಸಲು ಬಿಜೆಪಿ ಯಾವುದೇ ಆಸಕ್ತಿಯನ್ನು ತೋರಿಸದಿದ್ದಲ್ಲಿ, ಅಗತ್ಯವಿದ್ದರೆ ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆಯೂ ಕೆಲವು ನಾಯಕರು ಚರ್ಚಿಸಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ, ಜೆಡಿಎಸ್ ವರಿಷ್ಠರು ಪಕ್ಷದ ಹಿತಾಸಕ್ತಿ ಕಾಪಾಡದಿದ್ದಲ್ಲಿ ಚುನಾವಣಾ ಸಮಯದಲ್ಲಿ ಮೌನವಾಗಿರಲು ಕೆಲವು ಶಾಸಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆʼ ಎಂದು ಮೂಲಗಳು ತಿಳಿಸಿವೆ.

ನಾಯಕರ ಅವಗಣನೆ

ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ನಡೆದ ಬೃಹತ್ ಚುನಾವಣಾ ಸಭೆಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಆದರೆ, ಮೈತ್ರಿಕೂಟದ ಪಾಲುದಾರ ಪಕ್ಷವಾದ ಜೆಡಿಎಸ್‌ ಅನ್ನು ಮತ್ತು ಅದರ ಪ್ರಮುಖ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಥವಾ ಯಾವುದೇ ಸ್ಥಳೀಯ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಿಲ್ಲ. "ಹಾಗಾದರೆ ಅವರಿಗೆ ಚುನಾವಣೆಯಲ್ಲಿ ನಮ್ಮ ಬೆಂಬಲ ಏಕೆ ಬೇಕು? ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಜೆಡಿಎಸ್ ಉತ್ತಮ ಶೇಕಡಾವಾರು ಮತಗಳನ್ನು ಹೊಂದಿದೆ. ಅವರಿಗೆ ಜೆಡಿಎಸ್‌ನ ಮತ ಬೇಕು. ಆದರೆ ನಾಯಕರು ಬೇಡವೇ?," ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಶೇ.3ರಿಂದ 4ರಷ್ಟು ಮತಗಳ ಬಲವಿದೆ ಎಂದು ಮತ್ತೊಬ್ಬ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದು ಬಿಜೆಪಿ ಸುಮಾರು 18 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ. ''ಪ್ರಧಾನಿಯವರು ಚುನಾವಣಾ ಸಭೆಗಳಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಬರುತ್ತಿದ್ದಾರೆ. ಆದರೆ ಸ್ಥಳೀಯ ಬಿಜೆಪಿ ನಾಯಕರು ಜೆಡಿಎಸ್‌ನತ್ತ ಎಳ್ಳಷ್ಟೂ ಯೋಚಿಸುತ್ತಿಲ್ಲ. ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದಲ್ಲಿ ಜೆಡಿಎಸ್ ಶಾಸಕರಿದ್ದರೂ ಮೋದಿ ರ‍್ಯಾಲಿಗೆ ಜೆಡಿಎಸ್ ಶಾಸಕರ ಅಥವಾ ಯಾವುದೇ ನಾಯಕರ ಸಲಹೆ ಕೇಳಿಲ್ಲ. ಶಿವಮೊಗ್ಗ ಸಭೆಗಾದರೂ ದೇವೇಗೌಡ ಅಥವಾ ಕುಮಾರಸ್ವಾಮಿ ಅವರನ್ನು ಆಹ್ವಾನಿಸಬಹುದಿತ್ತು, ಆದರೆ ಆಗಲಿಲ್ಲ,'' ಎಂದು ವಿವರಿಸಿದರು.


ಸೀಟು ಹಂಚಿಕೆ

ಕೋಲಾರ ಲೋಕಸಭಾ ಕ್ಷೇತ್ರದ ಬಗ್ಗೆ ಬಿಜೆಪಿಯ ಅನಿಶ್ಚಿತತೆಯ ಬಗ್ಗೆ ಹಲವಾರು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಜೆಡಿಎಸ್ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಬಿಜೆಪಿ ನೀಡಿಲ್ಲ. ಜೆಡಿಎಸ್ ಕೈಯಲ್ಲಿ ಮಂಡ್ಯ ಮತ್ತು ಹಾಸನವಿದ್ದು, ಕೋಲಾರ ಕ್ಷೇತ್ರವನ್ನು ನಿರ್ಧರಿಸಲು ಬಿಜೆಪಿ ಸಿದ್ಧವಾಗಿಲ್ಲ. ಕೇವಲ ಎರಡು ಸ್ಥಾನ ಪಡೆಯಲು ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಎಂದು ಹಲವು ಚುನಾವಣಾ ಉಸ್ತುವಾರಿ ನಾಯಕರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. "ಈ ಹಿಂದೆ ನಮಗೆ 5 ಸ್ಥಾನಗಳು ಸಿಗುವುದಾಗಿ ಹೇಳಿದ್ದೀರಿ, ಆದರೆ ಈಗ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ" ಎಂದು ಅವರು ಕೇಳಿದರು.

ಗೌಡರ ಸಲಹೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಸಾಂತ್ವನ ಹೇಳಿದರು. ದೇವೇಗೌಡರು ಮಧ್ಯಪ್ರವೇಶಿಸಿ, ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ ಸ್ಥಾನ ಹಂಚಿಕೆ ಹಾಗೂ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.

ಎಚ್‌ಡಿಕೆ ಹೇಳಿಕೆ

ಸಭೆಯ ನಂತರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿದೆ. ಜೆಡಿಎಸ್ ನ ಶೇ.3ರಿಂದ 4ರಷ್ಟು ಮತಗಳು ಬಿಜೆಪಿಯತ್ತ ವಾಲಿದರೆ 18 ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವುದು ಸುಲಭವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಬಿಜೆಪಿ ಈ ಅವಕಾಶವನ್ನು ನಿರ್ಲಕ್ಷಿಸಿದರೆ, ಗೆಲ್ಲುವ ಜವಾಬ್ದಾರಿ ಅವರ (ಬಿಜೆಪಿ) ಮೇಲಿದೆಯೇ ಹೊರತು ಜೆಡಿಎಸ್‌ಗೆ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿದರು.

Read More
Next Story