2 ಕೋಟಿ ನಗದು ಜಪ್ತಿ ಪ್ರಕರಣ | ಚುನಾವಣಾ ವೆಚ್ಚದ ಹಣ ಎಂದ ಬಿಜೆಪಿ
x
ಚುನಾವಣಾ ಅಧಿಕಾರಿಗಳು 2 ಕೋಟಿ ರೂ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.

2 ಕೋಟಿ ನಗದು ಜಪ್ತಿ ಪ್ರಕರಣ | ಚುನಾವಣಾ ವೆಚ್ಚದ ಹಣ ಎಂದ ಬಿಜೆಪಿ

ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದರು


Click the Play button to hear this message in audio format

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿದ್ದು, ಈ ಕುರಿತು ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಸ್ಪಷ್ಟನೆ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದ ಸುಮಾರು ₹2 ಕೋಟಿ ನಗದು ಮೈಸೂರು ಮತ್ತು ಮೈಸೂರು ಗ್ರಾಮಾಂತರದ ಚುನಾವಣಾ ಕಾರ್ಯಾಲಯದ ಚುನಾವಣಾ ವೆಚ್ಚಕ್ಕಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕಿನಿಂದ ಹಣ ತೆಗೆದಿದ್ದಕ್ಕೆ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಕಾಂಗ್ರೆಸ್‌ನ ಸಚಿವ ಕೃಷ್ಣಬೈರೇಗೌಡರ ಕುಮ್ಮಕ್ಕಿನಿಂದ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹಣ ಅಕ್ರಮ ಸಾಗಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಸ್ಸೀಮ. ತಾನು ಕಳ್ಳ, ಪರರನ್ನು ನಂಬ ಎಂಬ ಸ್ಥಿತಿ ಕಾಂಗ್ರೆಸ್ಸಿಗರದು. ಕಾಂಗ್ರೆಸ್ ಹಿಂದಿನಿಂದಲೇ ಹಣ, ಹೆಂಡ ಮತ್ತು ತೋಳ್ಳಲದ ಮೂಲಕ ಗೆಲುವು ಸಾಧಿಸುತ್ತಿತ್ತು. ಈಚಿನ ದಿನಗಳಲ್ಲಿ ಪಂಚರಾಜ್ಯಗಳ ಚುನಾವಣೆ ನಡೆದಾಗ ಕಾಂಗ್ರೆಸ್ ಮುಖಂಡರು ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಬಳಸಿಕೊಂಡಿದ್ದರು ಎಂದು ಅವರು ಆರೋಪಿಸಿದರು.

ಕಾಟನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಚೆಕ್‌ ಪೋಸ್ಟ್‌ನಲ್ಲಿ ಶನಿವಾರ ಸಂಜೆ ಕಾರು ತಪಾಸಣೆ ನಡೆಸಿದಾಗ ರೂ. 2 ಕೋಟಿ ನಗದು ಪತ್ತೆಯಾಗಿತ್ತು. ಅದು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂಬುದಾಗಿ ಕಾರಿನಲ್ಲಿದ್ದವರು ದಾಖಲೆ ಒದಗಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನಗದನ್ನು ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದರು. ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರೆ ಇಬ್ಬರ ವಿರುದ್ಧ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Read More
Next Story