ಕಾವೇರಿ-5 ನೇ ಹಂತದ ಯೋಜನೆ | ಬಿಜೆಪಿ ಮುಗಿಸಿದ ಕಾಮಗಾರಿಗೆ ಕಾಂಗ್ರೆಸ್‌ ಲೇಬಲ್‌-ಆರ್.ಅಶೋಕ ಕಿಡಿ
x
ಪ್ರತಿಪಕ್ಷ ನಾಯಕ ಆರ್.ಅಶೋಕ

ಕಾವೇರಿ-5 ನೇ ಹಂತದ ಯೋಜನೆ | ಬಿಜೆಪಿ ಮುಗಿಸಿದ ಕಾಮಗಾರಿಗೆ ಕಾಂಗ್ರೆಸ್‌ ಲೇಬಲ್‌-ಆರ್.ಅಶೋಕ ಕಿಡಿ

ಪೂಜೆ ಮುಗಿದ ನಂತರ ಕೊನೆಯಲ್ಲಿ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ-5ನೇ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್ ಮುಂದೆ ಬಂದು ಹೆಸರು ಪಡೆದುಕೊಳ್ಳುತ್ತಿದೆ.


ಕಾವೇರಿ-5ನೇ ಹಂತದ ಕಾಮಗಾರಿ ಮುಗಿಸಿದ ಮೇಲೆ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಈಗ ಯೋಜನೆ ಲೋಕಾರ್ಪಣೆ ಮಾಡಿ ತಮ್ಮದೇ ಯೋಜನೆ ಎಂದು ಲೇಬಲ್‌ ಹಾಕಿಕೊಳ್ಳುತ್ತಿದೆ. ಯೋಜನೆಯನ್ನು ಬಿಜೆಪಿ ಆರಂಭಿಸಿದ್ದು ಎಂಬ ಸತ್ಯ ಗೊತ್ತಿದ್ದರೂ ನಾವೇ ಜಾರಿ ಮಾಡಿದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದರು

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಕಾವೇರಿ 5 ನೇ ಹಂತದ ಯೋಜನೆಯನ್ನು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. 2018 ಜನವರಿ 24 ರಂದು ಯೋಜನೆಗೆ 5,500 ಕೋಟಿ ರೂ. ಸಾಲ ತಂದು ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭಿಸಿದರು. ಆಗ ಕಾಮಗಾರಿಗೆ 90 ತಿಂಗಳ ಗಡುವು ವಿಧಿಸಲಾಗಿತ್ತು. ಕಾಮಗಾರಿ ನಡೆಸುವ ಸಂಸ್ಥೆಗಳನ್ನೂ ನಿಗದಿಪಡಿಸಲಾಗಿತ್ತು.

2019 ರ ಜನವರಿ 1 ರಂದು ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಪ್ಯಾಕೇಜ್-2 ನಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ದೀಕರಣ ಘಟಕ, ಪ್ಯಾಕೇಜ್ -3 ರಲ್ಲಿ ಟಿ.ಕೆ.ಹಳ್ಳಿ, ಪಂಪಿಂಗ್ ಘಟಕ, ಪ್ಯಾಕೇಜ್- 4 ರಲ್ಲಿ ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ಎರಡು ಪಂಪಿಂಗ್ ಸ್ಟೇಶನ್, ಪ್ಯಾಕೇಜ್ -7 ರಲ್ಲಿ ಟಿ.ಕೆ.ಹಳ್ಳಿ-ಹಾರೋಹಳ್ಳಿ ಪೈಪ್‌ಲೈನ್, ಪ್ಯಾಕೇಜ್ -8 ರಲ್ಲಿ ಹಾರೋಹಳ್ಳಿ-ವಾಜರಹಳ್ಳಿ ಪೈಪ್‌ಲೈನ್, ಪ್ಯಾಕೇಜ್ -10 ರಲ್ಲಿ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್, ಪ್ಯಾಕೇಜ್ -12 ರಲ್ಲಿ ಪೂರ್ವ ಭಾಗದಲ್ಲಿ ನೆಲಮಟ್ಟದ ಜಲಾಗಾರ, ಪ್ಯಾಕೇಜ್ -13 ರಲ್ಲಿ ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಎಂದು ವಿವರಿಸಿದರು.

ನಂತರ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿತ್ತು. ಡಿಪಿಆರ್, ಹಣ ಹೊಂದಿಕೆ, ಕಾಮಗಾರಿ ಆರಂಭ, ಹೀಗೆ ಎಲ್ಲವನ್ನೂ ಮುಚ್ಚಿಟ್ಟು ಈಗ ನಾವೇ ಮಾಡಿದ್ದಾಗಿ ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ದೇವರನ್ನು ಕೂರಿಸಿ ಹೋಮವನ್ನು ನಾವು ಮಾಡಿದರೆ, ಮಂಗಳಾರತಿ ಸಮಯದಲ್ಲಿ ಕಾಂಗ್ರೆಸ್ ನಾಯಕರು ಬಂದು ಇದು ನಮ್ಮದು ಎನ್ನುತ್ತಿದ್ದಾರೆ ಎಂದು ಕಿಚಾಯಿಸಿದರು.

ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದೆ. ಈಗ ಏಕಾಏಕಿ ನಾವೇ ಕಷ್ಟಪಟ್ಟಿದ್ದು ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

ಹಣ ವಾಪಸ್

ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ 8,000 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಸುಮಾರು ಶೇ 50 ಕೆಲಸ ಆರಂಭವಾಗಿತ್ತು. ರಾಜಕಾಲುವೆ ಸುಧಾರಣೆಗೆ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಡಿ.ಕೆ ಶಿವಕುಮಾರ್ ಅವರು ಬ್ಯಾಂಡ್ ಬೆಂಗಳೂರು ಮಾಡುತ್ತೇನೆಂದು ಹೇಳಿ ಇದೇ ಹಿಂದಿನ ಅನುದಾನಗಳನ್ನು ವಾಪಸ್ ಪಡೆದುಕೊಂಡರು. ಬಳಿಕ ಹೊಸದಾಗಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ವಿಶೇಷ ಅನುದಾನವನ್ನು ಬೆಂಗಳೂರಿಗೆ ನೀಡಿದ್ದರು. ಬಳಿಕ ಪ್ರತಿ ವರ್ಷ 3-4 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ವಿಶೇಷ ಅನುದಾನವಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಆರೋಪಿಸಿದರು.

Read More
Next Story