ಕಾಡಿನ ಕತ್ತಲಿಂದ ಜ್ಞಾನದ ಬೆಳಕಿನಡೆಗೆ… ಆದಿವಾಸಿ ಸಮುದಾಯದ ಶೈಕ್ಷಣಿಕ ಸಾಧಕರು ಇವರು...
ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಆದಿವಾಸಿ ಸಮುದಾಯದ ಮಕ್ಕಳು ಇಂದು ಹೊಸ ಇತಿಹಾಸ ಬರೆದಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ಆದಿವಾಸಿ ಅಲೆಮಾರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ಬಡತನ ಮತ್ತು ಸಮಾಜದ ಪೂರ್ವಾಗ್ರಹಗಳ ವಿರುದ್ಧ ಹೋರಾಡಿ SSLC ಹಾಗೂ PUC ಪರೀಕ್ಷೆಗಳಲ್ಲಿ ಶೇಕಡಾ 85ರಿಂದ 96ರಷ್ಟು ಅಂಕ ಗಳಿಸಿದ ಸಾಧಕ ಮಕ್ಕಳನ್ನು ಗೌರವಿಸಲಾಯಿತು. ಶಾಲೆ ಮುಗಿಸಿ ಭಿಕ್ಷೆ ಬೇಡುತ್ತಾ, ರಜಾದಿನಗಳಲ್ಲಿ ಕೂಲಿ ಕೆಲಸ ಮಾಡುತ್ತಾ, ಹಾಸ್ಟೆಲ್‌ಗಳಲ್ಲಿ ಹಗಲು-ರಾತ್ರಿ ಎನ್ನದೆ ಓದಿ ಬದುಕಿನ ಹೋರಾಟವನ್ನು ಗೆದ್ದ ಚೆನ್ನದಾಸ, ಬುಡಗಜಂಗಮ, ಶಿಳ್ಳೆಕ್ಯಾತ, ಜೇನುಕುರುಬ, ಹಕ್ಕಿಪಿಕ್ಕಿ ಸೇರಿದಂತೆ 33ಕ್ಕೂ ಹೆಚ್ಚು ಅಲೆಮಾರಿ ಹಾಗೂ ಆದಿವಾಸಿ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳ ಕಣ್ಣಲ್ಲಿ ಮೂಡಿದ ಆತ್ಮವಿಶ್ವಾಸದ ವಿಶೇಷ ವರದಿ ಇಲ್ಲಿದೆ ನೋಡಿ.

ಸಮಾಜದಿಂದ ಸದಾ ಅಂಚಿಗೆ ತಳ್ಳಲ್ಪಟ್ಟ, ಶಾಶ್ವತ ಸೂರು, ಕುಡಿಯಲು ಶುದ್ಧ ನೀರು ಹಾಗೂ ವಿದ್ಯುತ್ ಸಂಪರ್ಕವಿಲ್ಲದ ಕತ್ತಲ ಗುಡಿಸಲುಗಳಲ್ಲಿ ಬದುಕು ಸವೆಸುತ್ತಿರುವ ಅಲೆಮಾರಿ ಹಾಗೂ ಆದಿವಾಸಿ ಸಮುದಾಯದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಬಡತನ, ಅವಮಾನ ಹಾಗೂ ಸಮಾಜದ ಪೂರ್ವಾಗ್ರಹಗಳನ್ನು ಮೆಟ್ಟಿ ನಿಂತಿರುವ ಈ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 85ರಿಂದ 96ರಷ್ಟು ಅತ್ಯುನ್ನತ ಅಂಕಗಳನ್ನು ಗಳಿಸಿ ಸಾಧನೆಯ ಶಿಖರವೇರಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹಾಗೂ ಆದಿವಾಸಿ ಅಲೆಮಾರಿ ಫೌಂಡೇಶನ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಿಕ್ಷಾಟನೆ, ಕೂಲಿ ಕೆಲಸದ ನಡುವೆಯೂ ಅಕ್ಷರ ಸಾಧನೆ
ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸಿದ ಈ ಮಕ್ಕಳ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಕೇವಲ ಪರೀಕ್ಷೆಯಲ್ಲಿ ಪಾಸಾಗುವುದಷ್ಟೇ ಅಲ್ಲ, ಬದುಕಿನ ಕಠಿಣ ಹೋರಾಟದಲ್ಲೂ ಇವರು ಜಯಶಾಲಿಯಾಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಕೆಲವರು ಶಾಲೆ ಮುಗಿಸಿ ಮನೆಗೆ ಮರಳಿದ ಬಳಿಕ ಭಿಕ್ಷಾಟನೆಗೆ ತೆರಳಿದ್ದರೆ, ಇನ್ನು ಕೆಲವರು ರಜಾ ದಿನಗಳಲ್ಲಿ ಕೂಲಿ ಕೆಲಸ ಮಾಡಿ ತಮ್ಮ ವಿದ್ಯಾಭ್ಯಾಸದ ಖರ್ಚು ನಿಭಾಯಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಆಶ್ರಯ ಪಡೆದು ಹಗಲಿರುಳು ಓದಿನಲ್ಲಿ ತೊಡಗಿಸಿಕೊಂಡು ತಮ್ಮ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಸಮುದಾಯ ಅನುಭವಿಸಿದ ಅವಮಾನ, ಮೂದಲಿಕೆ ಹಾಗೂ ತಿರಸ್ಕಾರಗಳಿಗೆ ಈ ಮಕ್ಕಳು ತಮ್ಮ ಶಿಕ್ಷಣದ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.
ರಾಜ್ಯದ ಮೂಲೆ ಮೂಲೆಗಳ 33 ಪ್ರತಿಭೆಗಳಿಗೆ ಪುರಸ್ಕಾರ
ಈ ಕಾರ್ಯಕ್ರಮದಲ್ಲಿ ರಾಯಚೂರು, ಹಾವೇರಿ, ವಿಜಯಪುರ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚೆನ್ನದಾಸ, ಬುಡಗಜಂಗಮ, ಶಿಳ್ಳೆಕ್ಯಾತ, ಸಿಂದೋಳಿ, ಬೋಸಂಗಿ, ಹೊಲೆದಾಸ, ದೊಂಬರು, ಕಾಡುಗೊಲ್ಲ, ಬುಡುಬುಡಿಕೆ, ಗೊಂದಳಿ, ಎಳವರ, ಜೇನುಕುರುಬ, ಹಕ್ಕಿಪಿಕ್ಕಿ ಹಾಗೂ ಸುಡುಗಾಡು ಸಿದ್ಧ ಮುಂತಾದ ಹಲವು ಅಲೆಮಾರಿ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದ ಒಟ್ಟು 33 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವೇಳೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಹಣ, ದೊಡ್ಡ ಮನೆ ಅಥವಾ ಅತ್ಯಾಧುನಿಕ ಸೌಲಭ್ಯಗಳಿಲ್ಲದಿದ್ದರೂ, ಕೇವಲ ಶಿಕ್ಷಣ ಪಡೆಯುವ ಛಲವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ.
ಮೀಸಲಾತಿ ವಂಚನೆ ಹಾಗೂ ದಾಖಲೆಗಳ ಕೊರತೆ ಬಗ್ಗೆ ಕಳವಳ
ಮಕ್ಕಳ ಸಾಧನೆಯ ಸಂಭ್ರಮದ ನಡುವೆಯೂ, ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿದವು. ಸಂವಿಧಾನಬದ್ಧ ಮೀಸಲಾತಿ ಹಕ್ಕುಗಳು ಇಂದಿಗೂ ಈ ಸಮುದಾಯದ ಮಕ್ಕಳಿಗೆ ಮರೀಚಿಕೆಯಾಗಿರುವ ಬಗ್ಗೆ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದರು. ಅನೇಕ ಅಲೆಮಾರಿ ಜನಾಂಗಗಳಿಗೆ ಜಾತಿ ಪ್ರಮಾಣಪತ್ರ ಪಡೆಯುವುದೇ ದುಸ್ತರವಾಗಿದ್ದು, ಇದರಿಂದ ಮಕ್ಕಳು ಕಷ್ಟಪಟ್ಟು ಓದಿದರೂ ಮುಂದಿನ ಹಂತದಲ್ಲಿ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಯಿತು.
ಸಾಮಾಜಿಕ ಕಾರ್ಯಕರ್ತೆ ಸುಶೀಲಾ ಅವರು ಮಾತನಾಡಿ, ಇಂದಿಗೂ ಅನೇಕ ಹಾಡಿಗಳಲ್ಲಿ ಮಕ್ಕಳಿಗೆ ಮೂಲಭೂತ ಶಿಕ್ಷಣ ಸೌಲಭ್ಯಗಳಾಗಲೀ, ಶಾಲೆಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆಯಾಗಲೀ ಇಲ್ಲ. ಪ್ರತಿದಿನ ಹಲವು ಕಿಲೋಮೀಟರ್ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ದುಸ್ಥಿತಿಯಿದ್ದು, ಸರ್ಕಾರ ತುರ್ತಾಗಿ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಮಾತನಾಡಿ, ಅಲೆಮಾರಿ ಸಮುದಾಯದ ನಿರಂತರ ಸ್ಥಳಾಂತರದ ಬದುಕಿನಿಂದಾಗಿ ಅವರಿಗೆ ಸ್ಥಿರ ದಾಖಲೆಗಳು ಲಭ್ಯವಾಗುತ್ತಿಲ್ಲ. ದಾಖಲೆಗಳಿಲ್ಲದ ಕಾರಣ ವಸತಿ, ಶಿಕ್ಷಣ ಮತ್ತು ಮೀಸಲಾತಿ ಸೇರಿದಂತೆ ಪ್ರಮುಖ ಸರ್ಕಾರಿ ಸೌಲಭ್ಯಗಳು ಕೈತಪ್ಪುತ್ತಿವೆ ಎಂದು ಸರ್ಕಾರದ ಗಮನ ಸೆಳೆದರು. ಕತ್ತಲ ಗುಡಿಸಲುಗಳಲ್ಲಿ ಕುಳಿತು ಸಾಧನೆಗೈದ ಈ ಮಕ್ಕಳು ಭವಿಷ್ಯದಲ್ಲಿ ವೈದ್ಯರಾಗಿ, ಎಂಜಿನಿಯರ್‌ಗಳಾಗಿ ಅಥವಾ ದೇಶ ಮುನ್ನಡೆಸುವ ಐಎಎಸ್ ಅಧಿಕಾರಿಗಳಾಗಿ ಹೊರಹೊಮ್ಮಲು ಸರ್ಕಾರ ಹಾಗೂ ಸಮಾಜ ಬೆಂಬಲವಾಗಿ ನಿಲ್ಲಬೇಕಾದ ತುರ್ತು ಅಗತ್ಯವಿದೆ ಎಂಬ ಒಕ್ಕೊರಲಿನ ಆಗ್ರಹದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

