ಶಿಕ್ಷಣ ವಿಕೇಂದ್ರೀಕರಣಕ್ಕೆ ಹೆಚ್ಚಿದ ಹೋರಾಟ |ಮೆಡಿಕಲ್ ಸೀಟಿಗೆ ಸಿಇಟಿ
ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಪ್ರವೇಶಾತಿ ಪರೀಕ್ಷೆಯ ಕೇಂದ್ರೀಕೃತ ವ್ಯವಸ್ಥೆ ರದ್ದುಪಡಿಸಬೇಕು. ಶಿಕ್ಷಣವನ್ನು ಮತ್ತೆ ರಾಜ್ಯಪಟ್ಟಿಗೆ ಸೇರಿಸಬೇಕೆಂಬ ಕೂಗು ಮೊಳಗುತ್ತಿದೆ.

ಇಂದು ದೇಶದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮತ್ತು ವೈಚಾರಿಕ ಸಂಘರ್ಷ ಶುರುವಾಗಿದೆ. ಒಂದೆಡೆ ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ಕೀ ಉತ್ತರದ ಗೊಂದಲಗಳು ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯವನ್ನೇ ಕತ್ತಲಿಗೆ ದೂಡಿದರೆ, ಇನ್ನೊಂದೆಡೆ ದೇಶಾದ್ಯಂತ ನೀಟ್ ರದ್ದುಗೊಳಿಸಬೇಕೆಂಬ ಅಭಿಯಾನ ಆರಂಭವಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿ ಸಮುದಾಯ ಮತ್ತು ಪೋಷಕರು, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೀಟ್ ಅಕ್ರಮದ ಕುರಿತಷ್ಟೇ ತನಿಖೆಯಾದರೆ ಸಾಲದು. ಪ್ರವೇಶಾತಿ ಪರೀಕ್ಷೆಯ ಕೇಂದ್ರೀಕೃತ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಶಿಕ್ಷಣವನ್ನು ಮತ್ತೆ ರಾಜ್ಯಪಟ್ಟಿಗೆ ಸೇರಿಸಬೇಕೆಂಬ ಕೂಗು ಮೊಳಗುತ್ತಿದೆ.
ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ನೀಟ್ ವಿರುದ್ಧ ಬಹಿರಂಗ ಸಮರ ಸಾರಿದೆ. ಅದೇ ರೀತಿ ಕರ್ನಾಟಕದಲ್ಲೂ ಪ್ರಗತಿಪರ ಚಿಂತಕರು, ಕನ್ನಡಪರ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರು ಗಂಭೀರವಾದ ಪ್ರಶ್ನೆ ಎತ್ತಿದ್ದಾರೆ. ಅದೇನೆಂದರೆ, ಕರ್ನಾಟಕವೇ ಮೊದಲ ಬಾರಿಗೆ ಪರಿಚಯಿಸಿದ ಸಿಇಟಿ ವ್ಯವಸ್ಥೆಯಡಿಯೇ ವೈದ್ಯಕೀಯ ಶಿಕ್ಷಣವನ್ನು ಸೇರಿಸಬೇಕು ಎಂದು ಆಗ್ರಹ ಕೇಳಿ ಬರುತ್ತಿದೆ.
ಮೊದಲಿಗೆ ಈ ಶಿಕ್ಷಣ ಮತ್ತು ಒಕ್ಕೂಟ ವ್ಯವಸ್ಥೆಯ ಗೊಂದಲವನ್ನು ಅರ್ಥಮಾಡಿಕೊಳ್ಳೋಣ. 1976 ಕ್ಕಿಂತ ಮೊದಲು ಶಿಕ್ಷಣ ಎಂಬುದು ಸಂಪೂರ್ಣವಾಗಿ ಸಂವಿಧಾನದ ರಾಜ್ಯಪಟ್ಟಿಯಲ್ಲಿ ಇತ್ತು. ಆಯಾ ರಾಜ್ಯದ ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಶಿಕ್ಷಣ ನೀತಿ ರೂಪಿಸುವ, ಪರೀಕ್ಷೆ ನಡೆಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗಿತ್ತು. ಆದರೆ, 1976 ರಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಸಂ ವಿಧಾನದ 42ನೇ ತಿದ್ದುಪಡಿ ಮೂಲಕ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು. ಇದರ ಪರಿಣಾಮ ಏನಾಯಿತು ಗೊತ್ತಾ?
ರಾಜ್ಯಗಳ ಮೇಲಿನ ಹಕ್ಕು ಕಸಿದು, ದೆಹಲಿಯಲ್ಲಿ ಕುಳಿತ ಕೇಂದ್ರ ಸಂಸ್ಥೆಗಳು ಇಡೀ ದೇಶಕ್ಕೆ ಒಂದೇ ನಿಯಮ ರೂಪಿಸಲು ಶುರು ಮಾಡಿದವು. ರಾಜ್ಯ ಸರ್ಕಾರಗಳು ತನ್ನ ತೆರಿಗೆದಾರರ ಹಣದಿಂದ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳಲ್ಲಿ, ಸ್ಥಳೀಯ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಆದ್ಯತೆ ಕಡಿಮೆಯಾಗುತ್ತಾ ಬಂತು.ಇಂದು ತಮಿಳುನಾಡು ಮತ್ತು ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳು ಹೇಳುತ್ತಿರುವುದು ಒಂದೇ ಮಾತು. ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ನಾವು ವೈದ್ಯಕೀಯ ಕಾಲೇಜು ಕಟ್ಟುತ್ತೇವೆ. ನಮ್ಮ ಪಠ್ಯಕ್ರಮದಲ್ಲಿ ಓದಿದ ನಮ್ಮ ಮಕ್ಕಳಿಗೆ ಡಾಕ್ಟರ್ ಆಗುವ ಹಕ್ಕಿಲ್ಲವೇ?, ಹಾಗಾಗಿಯೇ ಶಿಕ್ಷಣವನ್ನು ಮರಳಿ ರಾಜ್ಯಪಟ್ಟಿಗೆ ಸೇರಿಸಬೇಕು ಮತ್ತು ವೃತ್ತಿಪರ ಕೋರ್ಸ್ಗಳಿಗೆ ಆಯಾ ರಾಜ್ಯಗಳೇ ಪರೀಕ್ಷೆ ನಡೆಸುವಂತಾಗಬೇಕು ಎಂಬ ಪ್ರಬಲ ವಾದ ಮುನ್ನೆಲೆಗೆ ಬಂದಿದೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳು ಶ್ರೀಮಂತರಿಗೆ ಮಾತ್ರ ಸಿಗುವಂತಿದ್ದ ಆ ಪರಿಸ್ಥಿತಿಯೇ ಶೈಕ್ಷಣಿಕ ಸುಧಾರಣೆಗೆ ನಾಂದಿ ಹಾಡಿತು. 1983ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ತರಲಾಯಿತಾದರೂ, ವ್ಯವಸ್ಥೆ ಸಂಪೂರ್ಣ ಸುಧಾರಿಸಿರಲಿಲ್ಲ. ಶಿಕ್ಷಣದ ವ್ಯಾಪಾರೀಕರಣ ಮತ್ತು ಡೊನೇಷನ್ ದಂಧೆಗೆ ಕಡಿವಾಣ ಹಾಕಲು 1992 ರಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಎಂ. ವೀರಪ್ಪ ಮೊಯ್ಲಿ ಅವರು ಕರ್ನಾಟಕದಲ್ಲಿ ಕ್ಯಾಪಿಟೇಷನ್ ಫೀಸ್ ಹಾವಳಿಗೆ ಕಡಿವಾಣ ಹಾಕಲು ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಜಾರಿಗೆ ತಂದರು. ಇದರಿಂದ ಸಾಮಾನ್ಯ ರೈತರು ಮತ್ತು ಹಿಂದುಳಿದ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಮೆರಿಟ್ ಆಧಾರದ ಮೇಲೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳು ಸಿಗುವಂತೆ ಮಾಡಿದರು.
1994 ರಲ್ಲಿ ಎಂ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾದಾಗ ಕರ್ನಾಟಕದಲ್ಲಿ ಅಧಿಕೃತವಾಗಿ ಸಿಇಟಿ ಸೆಲ್ ಸ್ಥಾಪಿಸಿದರು. ಇಡೀ ದೇಶದಲ್ಲೇ ಇಂತಹ ಪ್ರವೇಶ ಪರೀಕ್ಷೆ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಯಿತು. ಜತೆಗೆ ಕರ್ನಾಟಕದ ಸಿಇಟಿ ಮಾದರಿಯನ್ನೇ ಎಲ್ಲ ರಾಜ್ಯಗಳು ಅಳವಡಿಸಿಕೊಂಡಿದ್ದವು. ಈಗ ಸಿಇಟಿ ಸೆಲ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಿ ಮರು ನಾಮಕರಣಗೊಂಡಿದೆ.
ಯಾವುದೇ ಮೆರಿಟ್ ದುರುಪಯೋಗವಿಲ್ಲದೆ, ಶೇ. 100 ರಷ್ಟು ಪಾರದರ್ಶಕ ಕೌನ್ಸೆಲಿಂಗ್ ವ್ಯವಸ್ಥೆ ಸಿಇಟಿಯಲ್ಲಿ ಬಂದಿತು. ಕರ್ನಾಟಕದಲ್ಲಿ ಕನಿಷ್ಠ 7 ವರ್ಷ ಓದಿದ ವಿದ್ಯಾರ್ಥಿಗಳಿಗೆ ಮಾತ್ರ ಸಿಇಟಿ ಬರೆಯುವ ಅರ್ಹತೆ ಇತ್ತು. ಇದರಿಂದ ರಾಜ್ಯದ ಗ್ರಾಮೀಣ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶೇ. 85 ಕ್ಕೂ ಹೆಚ್ಚು ಸೀಟುಗಳು ಲಭ್ಯವಾಗುತ್ತಿದ್ದವು. ದಶಕಗಳ ಕಾಲ ನಡೆದ ಈ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅಕ್ರಮದಂತಹ ಕಪ್ಪುಚುಕ್ಕೆಗಳು ಬರಲೇ ಇಲ್ಲ. ಮೆಡಿಕಲ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಫಾರ್ಮಸಿ ಹೀಗೆ ಎಲ್ಲ ವೃತ್ತಿಪರ ಕೋರ್ಸ್ಗಳಿಗೂ ಅತ್ಯಂತ ಯಶಸ್ವಿಯಾಗಿ ಸೀಟು ಹಂಚಿಕೆ ಮಾಡುತ್ತಿದ್ದ ವ್ಯವಸ್ಥೆ ನಮ್ಮಲ್ಲಿತ್ತು.
ಸಿಇಟಿ ಕೌನ್ಸಿಲಿಂಗ್ ವೇಳೆ ಸೀಟ್ ಬ್ಲಾಕಿಂಗ್ ಹಗರಣ ಬಯಲಾದರೂ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಖಾಸಗಿ ಮೆಡಿಕಲ್ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ ಹಾಗೂ ಎಂ. ವೀರಪ್ಪ ಮೊಯಿಲಿ ಅವರು ಪರಿಣಾಮಕಾರಿ ಪ್ರವೇಶ ಪರೀಕ್ಷಾ ವ್ಯವಸ್ಥೆ ಜಾರಿಗೆ ತಂದರು. ಆದರೆ, ಅದನ್ನು ಹೆಚ್ಚು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ನಡೆಸಿಕೊಂಡ ಹೋದವರಲ್ಲಿ ದಕ್ಷ ಐಎಎಸ್ ಅಧಿಕಾರಿಗಳ ಪಾಲೂ ಇದೆ. ಜತೆಗೆ ರಾಷ್ಟ್ರ ಮಟ್ಟದ ಅರ್ಹತಾ ಪ್ರವೇಶ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದವರಲ್ಲಿ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಕೂಡ ಒಬ್ಬರು.
ಸಿಇಟಿಯಲ್ಲಿ ರಾಜ್ಯದ ಪಿಯುಸಿ ಪಠ್ಯಕ್ರಮ ಆಧರಿಸಿ ಪ್ರಶ್ನೆಪತ್ರಿಕೆ ತಯಾರಿಸಲಾಗುತ್ತದೆ. ಇದರಿಂದ ಸರ್ಕಾರಿ ಹಾಗೂ ಗ್ರಾಮೀಣ ಶಾಲೆಯಲ್ಲಿ ಓದಿದ ಸಾಮಾನ್ಯ ವಿದ್ಯಾರ್ಥಿ ಕೂಡ ಯಾವುದೇ ಕೋಚಿಂಗ್ ಇಲ್ಲದೆ ಪರೀಕ್ಷೆ ಎದುರಿಸಬಹುದು. ಆದರೆ, ನೀಟ್ ಪರೀಕ್ಷೆ ಸಂಪೂರ್ಣ ಸಿಬಿಎಸ್ಇ ಪಠ್ಯಕ್ರಮದ ಮೇಲೆಯೇ ಆಧಾರಿತವಾಗಿದೆ. ಇದರಿಂದ ರಾಜ್ಯಗಳಲ್ಲಿ ಸ್ಥಳೀಯ ಪಠ್ಯಕ್ರಮ ಓದುವ ಶೇ. 80 ರಷ್ಟು ಬಡ ಮಕ್ಕಳಿಗೆ ಆರಂಭದಲ್ಲೇ ಹಿನ್ನಡೆ ಆಗಲಿದೆ. ಇದೇ ವಿಚಾರ ಮುಂದಿಟ್ಟುಕೊಂಡು ‘ನಮ್ಮ ನಾಡು, ನಮ್ಮ ಆಳ್ವಿಕೆ’ ಸಂಘಟನೆ ವತಿಯಿಂದ ನೀಟ್ ಬ್ಯಾನ್ ಮಾಡಿ, ಸಿಇಟಿ ಅಳವಡಿಸಿಕೊಳ್ಳಬೇಕೆಂಬ ಅಭಿಯಾನ ಆರಂಭಿಸಲಾಗಿದೆ. ಆನ್ಲೈನ್ ಸಹಿ ಸಂಗ್ರಹವೂ ಶುರುವಾಗಿದೆ.

