ಮಕ್ಕಳ ದತ್ತು ಸ್ವೀಕಾರಕ್ಕೆ ಹಲವೆಂಟು ಅಡೆತಡೆ
x

ಮಕ್ಕಳ ದತ್ತು ಸ್ವೀಕಾರಕ್ಕೆ ಹಲವೆಂಟು ಅಡೆತಡೆ

ದತ್ತು ಕಾನೂನುಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಿಯಂತ್ರಿಸಲು ರೂಪುಗೊಂಡಿವೆ. ವ್ಯಕ್ತಿಯೊಬ್ಬರು ಕಾನೂನುಬದ್ಧವಾಗಿ ಇನ್ನೊಬ್ಬರ ಮಗುವನ್ನು ತೆಗೆದುಕೊಳ್ಳುತ್ತಾರೆ. ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್‌ಎ, ಸೆಂಟ್ರಲ್ ಅಡಾಪ್ಷನ್ ರಿಸರ‍್ಸ್ ಅಥಾರಿಟಿ) ದತ್ತು ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆ. ಆದರೆ, ದತ್ತು ಪ್ರಕ್ರಿಯೆ ಕಠಿಣವಾಗಿದ್ದು, ಮಕ್ಕಳನ್ನು ಮನೆಗೆ ಕರೆತರುವಲ್ಲಿ ಹೈರಾಣಾಗುತ್ತಾರೆ.ಮಕ್ಕಳ ದತ್ತು ಸ್ವೀಕಾರಕ್ಕೆ ಹಲವೆಂಟು ಅಡೆತಡೆ

-ಮೈತ್ರೇಯಿ ಬರುವಾ

.................................................

೨೦೨೧ರ ಆರಂಭದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಅದಿತಿ (ಹೆಸರು ಬದಲಿಸಲಾಗಿದೆ) ಮತ್ತು ಅವರ ಪತಿ ಮಗುವೊಂದನ್ನು ದತ್ತು ಪಡೆಯಲು ನಿರ‍್ಧರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕೃತ ಸಂಸ್ಥೆಯಾಗಿರುವ ಸಿಎಆರ್‌ಎಯಲ್ಲಿ ಹೆಸರು ನೋಂದಾಯಿಸಿಕೊಂಡರು. ʻಅನಾಥರು, ಪರಿತ್ಯಕ್ತರು ಅಥವಾ ವಶವರ‍್ತಿʼ ಎಂದು ವರ‍್ಗೀಕೃತ ಮಕ್ಕಳನ್ನು ಸಿಎಆರ್‌ಎ ಮತ್ತು ಅದರ ಸಂಯೋಜಿತ ದತ್ತು ಏಜೆನ್ಸಿಗಳ ಮೂಲಕ ದತ್ತು ಪಡೆಯಬಹುದು. ಸಿಎಆರ್‌ಎ ದೇಶದೊಳಗೆ ಮತ್ತು ಬೇರೆ ದೇಶಗಳಿಂದ ಮಕ್ಕಳನ್ನು ದತ್ತು ಪಡೆಯಲು ಮಾರ‍್ಗಸೂಚಿಗಳನ್ನು ರಚಿಸುತ್ತದೆ.

ಆನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ(ಡಿಸಿಪಿಯು)ದ ಸದಸ್ಯರು ದಂಪತಿ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ದಂಪತಿ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆರ‍್ಥಿಕವಾಗಿ ಸಮರ‍್ಥರಿದ್ದಾರೆ. ಗಂಭೀರ ಕಾಯಿಲೆಗಳಿಲ್ಲ ಮತ್ತು ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿಲ್ಲ. ಹೀಗಾಗಿ, ಮಗುವನ್ನು ದತ್ತು ತೆಗೆದುಕೊಳ್ಳಲು ಸಮರ‍್ಥರಿದ್ದಾರೆ ಎಂದು ಶಿಫಾರಸು ಮಾಡಿದರು.

ನೋಂದಣಿಯಿಂದ ಮನೆಯ ಪರಿಶೀಲನೆಗೆ ಮೂರು ತಿಂಗಳು ತೆಗೆದುಕೊಂಡಿತು. ಆದರೆ, ಆನಂತರ ಕಾಯುವಿಕೆ ಪ್ರಾರಂಭವಾಯಿತು; ಎರಡು ವರ‍್ಷ ಕಳೆದಿದ್ದು, ಮಗು ಯಾವಾಗ ಮಡಿಲು ಸೇರುತ್ತದೆ ಎಂಬುದು ಖಾತ್ರಿಯಿಲ್ಲ. ಅದಿತಿ ಸಿಎಆರ್‌ಎಯಲ್ಲಿ ನೋಂದಾಯಿಸಿಕೊಂಡ ೩೦,೭೬೧ ಪೋಷಕರಲ್ಲಿ ಒಬ್ಬರು. ಡಿಸೆಂಬರ್ ೮ರ ಸಿಎಆರ್‌ಎ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ೨,೧೦೨ ಮಕ್ಕಳು ಮಾತ್ರ ದತ್ತು ನೀಡಲು ಅರ‍್ಹರಾಗಿದ್ದಾರೆ. ಇವರಲ್ಲಿ ೧,೩೮೮ ಮಂದಿ ವಿಶೇಷ ಅಗತ್ಯ ಹೊಂದಿದ್ದಾರೆ(ಈ ಮಾಹಿತಿ ದ ಫೆಡರಲ್ ಬಳಿ ಇದೆ). ತಜ್ಞರ ಪ್ರಕಾರ, ದತ್ತು ಪಡೆಯಲು ನೋಂದಾಯಿಸಿಕೊಂಡವರು ಮಗುವನ್ನು ಮನೆಗೆ ಕರೆತರಲು ಕನಿಷ್ಠ ಮೂರು ವರ‍್ಷ ಬೇಕಾಗುತ್ತದೆ. ದತ್ತು ನೀಡಬಹುದಾದ ಮಕ್ಕಳು ಬಹಳ ಕಡಿಮೆ ಇರುವುದು ಈ ದೀರ‍್ಘ ಕಾಯುವಿಕೆಗೆ ಕಾರಣ.

ಕರ‍್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ದತ್ತು ಪರಿಶೀಲನೆ ಸಮಿತಿ ಸದಸ್ಯೆ ಸಿಂಧು ನಾಯ್ಕ್ ಪ್ರಕಾರ, ಮಕ್ಕಳನ್ನು ದತ್ತು ಪಡೆಯಲು ಬಯಸುವ ಶೇ. ೮೦ ಪೋಷಕರು ೨ ವರ‍್ಷದೊಳಗಿನ ಮಕ್ಕಳಿಗೆ ಆದ್ಯತೆ ನೀಡುತ್ತಾರೆ. ಅಸ್ಸಾಂನ ಸಿಲ್ಚಾರ್‌ನಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಸಹಾಯ ಮಾಡುವ ಎನ್‌ಜಿಒ ನಡೆಸುತ್ತಿರುವ ದಿಬಾ ರಾಯ್, ಪೋಷಕರು ಸಾಮಾನ್ಯವಾಗಿ ಶಿಶುಗಳನ್ನು ದತ್ತು ತೆಗೆದುಕೊಳ್ಳಲು ಬಯಸುತ್ತಾರೆ ಎನ್ನುತ್ತಾರೆ. ಅನಾಥಾಶ್ರಮ ಎಂದು ಕರೆಯಲ್ಪಡುವ ಮಕ್ಕಳ ಆರೈಕೆ ಸಂಸ್ಥೆ(ಸಿಸಿಐ)ಗಳಲ್ಲಿ ಬೆಳೆಯುವ ಆರು ವರ‍್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಶಾಶ್ವತ ನೆಲೆಯನ್ನು ಕಂಡುಕೊಳ್ಳುವುದಿಲ್ಲ. ರಾಯ್‌ ಅವರ ಎನ್‌ಜಿಒ, ಕೇಂದ್ರ ಅಡಾಪ್ಷನ್ ರಿಸೋರ್ಸ್‌ ಅಥಾರಿಟಿಯಲ್ಲಿ ನೋಂದಣಿಯಾದ ಸಂಸ್ಥೆ. ಆದರೆ, ೩೦ ದಶಲಕ್ಷಕ್ಕೂ ಅಧಿಕ ಅನಾಥ, ಪರಿತ್ಯಕ್ತ ಮತ್ತು ವಶವರ‍್ತಿ ಮಕ್ಕಳಿದ್ದರೂ, ಕೆಲವೇ ಸಾವಿರ ಮಕ್ಕಳನ್ನು ದತ್ತು ಪಡೆಯಲಾಗುತ್ತಿದೆ.

ಕೊರೋನ-೧೯ ಸಾಂಕ್ರಾಮಿಕದಲ್ಲಿ ಸುಮಾರು ೧,೫೦,೦೦೦ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಸಿಎಆರ್‌ಎ ಪ್ರಕಾರ, ೨೦೨೦-೨೧ರಲ್ಲಿ ದೇಶದಲ್ಲಿ ೩,೧೪೨ ಮತ್ತು ಇತರ ದೇಶಗಳಿಂದ ೪೧೭ ದತ್ತುಗಳು ಹಾಗೂ ೨೦೨೧-೨೦೨೨ ರಲ್ಲಿ ೨,೯೯೧ ಮತ್ತು ೪೧೪ ದತ್ತುಗಳು ನಡೆದಿವೆ. ʻದತ್ತು ಪಡೆಯುವವರ ಸಂಖ್ಯೆ ತೀರಾ ಕಡಿಮೆ. ಮಗುವನ್ನು ದತ್ತು ಕೊಡುವ ಮುನ್ನ ಜೈವಿಕ ಕುಟುಂಬ ಅಥವಾ ಪಾಲಕರನ್ನು ಹುಡುಕಲು ಪ್ರಯತ್ನ ಮಾಡಲಾಗುತ್ತದೆʼ ಎಂದು ಸಿಂಧು ನಾಯ್ಕ್‌ ಹೇಳುತ್ತಾರೆ.

ಎರಡು ವರ‍್ಷದೊಳಗಿನ ಮಗುವಿನ ಜೈವಿಕ ಕುಟುಂಬವನ್ನು ಪತ್ತೆಹಚ್ಚಲು ಎರಡು ತಿಂಗಳು ಮತ್ತು ಎರಡು ವರ‍್ಷಕ್ಕಿಂತ ಮೇಲ್ಪಟ್ಟವರಿಗೆ ನಾಲ್ಕು ತಿಂಗಳು ಬೇಕಾಗುತ್ತದೆ. ಮಗುವನ್ನು ಕಾನೂನುಬದ್ಧ ವಾಗಿ ದತ್ತು ಪಡೆಯಲು ಎರಡು ತಿಂಗಳು ತೆಗೆದುಕೊಳ್ಳುತ್ತದೆ. ಪೊಲೀಸ್, ಆರೋಗ್ಯ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಎಸ್‌ಎಎ, ಡಿಸಿಪಿಯು ಮತ್ತು ಸಿಸಿಐ ಸೇರಿದಂತೆ ವಿವಿಧ ಸಂಸ್ಥೆಗಳು ದತ್ತು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಮೊದಲನೆಯದಾಗಿ, ಅತ್ಯಾಚಾರದ ಪರಿಣಾಮವಾಗಿ ಜನಿಸಿದ ಮಕ್ಕಳನ್ನು ತಾಯಂದಿರು ತೊರೆದಾಗ, ಡಿಎನ್‌ಎ ವರದಿ ಪಡೆಯಲು ವಿಳಂಬವಾಗಬಹುದು.

ಎರಡ ನೆಯದಾಗಿ, ಆರು ವರ‍್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಆಶ್ರಯ ಮನೆಗಳಲ್ಲಿ ಬಿಟ್ಟ ಬಡ ವಲಸಿಗ ಪೋಷಕರು ತಮ್ಮ ಮಕ್ಕಳನ್ನು ವಾಪಸ್‌ ಕರೆದುಕೊಂಡು ಹೋಗಲು ಬರುತ್ತಾರೆ ಎಂದು ಕಾಯಲಾಗುತ್ತದೆ. ಮೂರನೆಯದಾಗಿ, ಹೆತ್ತವರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದಾಗ, ದತ್ತು ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ. ಇಂಥ ಸಂದರ‍್ಭದಲ್ಲಿ ಪೋಷಕರ ಮಾನಸಿಕ ಯೋಗಕ್ಷೇಮವನ್ನು ಮೌಲ್ಯಮಾಪನ ಮಾಡಲು ವೈದ್ಯಕೀಯ ವೃತ್ತಿಪರರ ತಂಡವನ್ನು ರಚಿಸಬೇಕಾಗುತ್ತದೆ.

ಪೋಷಕರಿಲ್ಲದ ೩೦ ದಶಲಕ್ಷ ಮಕ್ಕಳಲ್ಲಿ ಕೇವಲ ೨,೬೧,೦೦೦ ಮಕ್ಕಳು ಶಿಶುಪಾಲನಾ ಸಂಸ್ಥೆ(ಸಿಸಿಐ)ಗಳಲ್ಲಿ ಇದ್ದಾರೆ. ಅಲ್ಲದೆ, ಸುಮಾರು ೮,೦೦೦ ಶಿಶುಪಾಲನಾ ಸಂಸ್ಥೆಗಳು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿಲ್ಲ; ಇದರಿಂದ ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ ಮತ್ತು ಪೋಷಕರು ಅಕ್ರಮವಾಗಿ ಮಕ್ಕಳನ್ನು ದತ್ತು ಪಡೆಯುತ್ತಿದ್ದಾರೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ದತ್ತು ಪ್ರಕ್ರಿಯೆಯಲ್ಲಿನ ವಿಳಂಬವು ಸುಪ್ರೀಂ ಕೋರ್ಟ್‌ ಗಮನ ಸೆಳೆದಿದ್ದು, ಅಕ್ಟೋಬರ್‌ನಲ್ಲಿ ಎರಡು ಮನವಿಗಳ ವಿಚಾರಣೆ ವೇಳೆ ಈ ಬಗ್ಗೆ ಚರ‍್ಚಿಸಿದೆ. ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಸಲಹೆ ನೀಡಿದೆ. ʻಗಮನಾರ‍್ಹ ವಿಳಂಬವಾಗುತ್ತಿದೆʼ ಎಂದು ಮುಖ್ಯ ನ್ಯಾಯಮೂರ‍್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ಕೋಲ್ಕತ್ತಾದ ಗೃಹಿಣಿ ದೀಪಾನಿತಾ ಮೊಂಡಲ್ ಮಗುವನ್ನು ದತ್ತು ಪಡೆಯಲು ಮೂರ‍್ನಾಲ್ಕು ವರ‍್ಷಗಳಿಂದ ಕಾಯುತ್ತಿದ್ದಾರೆ. ʻದತ್ತು ಪ್ರಕ್ರಿಯೆಯನ್ನು ಆರಂಭಿಸಿ ಎರಡು ವರ‍್ಷ ಕಳೆದಿದೆ. ದತ್ತು ತೆಗೆದುಕೊಳ್ಳುವ ನಿರ‍್ಧಾರಕ್ಕೆ ಅಂಟಿಕೊಂಡಿದ್ದೇವೆ. ನಮ್ಮ ಕುಟುಂಬವನ್ನು ಪೂರ‍್ಣಗೊಳಿಸಲು ಬಯಸುತ್ತೇವೆ. ಆದರೆ, ನಮ್ಮಿಬ್ಬರಿಗೂ ಶೀಘ್ರದಲ್ಲೇ ೪೦ ವರ‍್ಷ ಆಗಲಿದೆʼ ಎಂದು ಮೊಂಡಲ್ ಹೇಳಿದರು. ಜೈವಿಕವಾಗಿ ಮಗುವಿಗೆ ಜನನ ನೀಡಲು ಸಾಧ್ಯವಾಗದ ದಂಪತಿ, ಮಗುವೊಂದಕ್ಕೆ ಸಹಾಯ ಮಾಡಲು, ಮನೆ ಮತ್ತು ಕುಟುಂಬವನ್ನು ನೀಡಲು ದತ್ತು ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ದಂಪತಿ ತೆಗೆದುಕೊಳ್ಳಲು ನಿರ‍್ಧರಿಸಿದಾಗ, ಅವರಿಗೆ ಮೂವತ್ತು ದಾಟಿರುತ್ತದೆ. ಹೆಚ್ಚು ಕಾಲ ಕಾಯಬೇಕಾಗಿ ಬಂದರೆ, ಮಗು ಮನೆಗೆ ಬರುವಷ್ಟರಲ್ಲಿ ನಲವತ್ತು ದಾಟಿರುತ್ತಾರೆ.

ಬೆಂಗಳೂರಿನ ಮಕ್ಕಳ ಹಕ್ಕುಗಳ ಕಾರ‍್ಯಕರ‍್ತ ನಾಗಸಿಂಹ ರಾವ್ ಪ್ರಕಾರ, ʻಭವಿಷ್ಯದ ಪೋಷಕರಿಗೆ ವಿವಿಧ ತೊಂದರೆಗಳನ್ನು ನಿಭಾಯಿಸಲು ಸಮಾಲೋಚನೆ ಅಗತ್ಯ. ದೇಶದಲ್ಲಿ ಬಂಜೆತನ ಗಮನಾರ‍್ಹವಾಗಿ ಹೆಚ್ಚಳ ಕಂಡಿದೆ. ಇದು ದತ್ತು ತೆಗೆದುಕೊಳ್ಳಲು ಆಶಿಸುವವರ ಸಂಖ್ಯೆ ಹೆಚ್ಚಲು ಕಾರಣ. ದೇಶದಲ್ಲಿ ಸುಮಾರು ೨೭.೫ ದಶಲಕ್ಷ ಜನ ಮಕ್ಕಳನ್ನು ಹೊಂದಲಾರರು ಎಂದು ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ ಹೇಳುತ್ತದೆ,ʼ ಎನ್ನುತ್ತಾರೆ.

ಏಕಾಂಗಿಗಳು, ವಿಶೇಷವಾಗಿ ಆರ‍್ಥಿಕವಾಗಿ ಸ್ವತಂತ್ರ ಮಹಿಳೆಯರು ದತ್ತು ತೆಗೆದುಕೊಳ್ಳಲು ನಿರ‍್ಧರಿಸುತ್ತಿದ್ದಾರೆ. ಕುಟುಂಬಕ್ಕೆ ಮಗುವನ್ನು ಸ್ವಾಗತಿಸುವಿಕೆಯು ಕೇವಲ ಭಾವನೆಗಳನ್ನು ಅವಲಂಬಿಸಬಾರದು. ದತ್ತು ತೆಗೆದುಕೊಳ್ಳುವ ಮುನ್ನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಮುಖ್ಯ.

---------

(ಲೇಖನ ಡಿಸೆಂಬರ್‌ ೧೧ ರಂದು ದ ಫೆಡರಲ್‌ನಲ್ಲಿ ಪ್ರಕಟಗೊಂಡಿತ್ತು)Read More
Next Story