ಒರಾನ್ ಕಲೆ, ಸಂಸ್ಕೃತಿ ಉಳಿವಿಗೆ ಪ್ರಯತ್ನ -ಎಂ.ಟಿ..ಸಾಜು
ನಿಮ್ಮ ಸ್ಪೂರ್ತಿ ಯಾವುದು ಎಂದು ಒರಾನ್ (ಕುರುಖ್) ಸಮುದಾಯಕ್ಕೆ ಸೇರಿದ ಕಲಾವಿದೆ ಸುಮಂತಿ ಭಗತ್ ಅವರನ್ನು ಕೇಳಿದರೆ ಬರುವ ಉತ್ತರ- ಅರಣ್ಯ ದೇವತೆಗಳು, ಸೂರ್ಯ, ನಕ್ಷತ್ರಗಳು, ಪಕ್ಷಿಗಳು ಮತ್ತು ಸಾಂಪ್ರದಾ ಯಿಕ ಆಚರಣೆಗಳು. ಆಕೆ ವಂಶಪಾರಂಪರ್ಯವಾಗಿ ಪಡೆದುಕೊಂಡು ಬಂದಿದ್ದು ಮತ್ತು ಆಕೆಯ ಬಳಿ ಇರುವುದು ಎಲ್ಲಕ್ಕೂ ಮೂಲ- ಅರಣ್ಯ .
ಚತ್ತೀಸ್ಗಢದ ಜಶ್ಪುರದ ಶೈಲಾ ಎಂಬ ದೂರದ ಹಳ್ಳಿಯಲ್ಲಿ ಜನಿಸಿದ ಸುಮಂತಿ, ಬದಿಗೊತ್ತಲ್ಪಟ್ಟ ಸಮುದಾಯದ ಕಲಾವಿದೆ. ಒರಾನ್ ಸಮುದಾಯದ ಮೌಖಿಕ ಸಂಪ್ರದಾಯಗಳು ಮತ್ತು ಜಾನಪದ ಕಥೆಗಳನ್ನು ಕೇಳುತ್ತ ಬೆಳೆದರು. ಲಿಖಿತ ಅಥವಾ ದಾಖಲಾದ ಪಠ್ಯಗಳಿಲ್ಲದ್ದರಿಂದ, ಮೌಖಿಕವಾಗಿ ಕಥೆಗಳನ್ನು ಹೇಳುವ ಸಂಪ್ರದಾಯ ಉಳಿದುಕೊಂಡಿತು. ಆಕೆಯ ಪೋಷಕರು ಹೇಳಿದ ಸಮುದಾಯದ ಬದುಕು, ನಂಬಿಕೆಗಳನ್ನು ಕುರಿತ ಕಥೆಗಳನ್ನು ಕೇಳುತ್ತ ಬೆಳೆದರು.
ದೇಶದ ಹೆಚ್ಚಿನ ಬುಡಕಟ್ಟು ಸಮುದಾಯಗಳಂತೆ, ಒರಾನ್ ಸಮುದಾಯ ಕೂಡ ವರ್ಷಕ್ಕೊಮ್ಮೆ ಮನೆಯ ಗೋಡೆಗಳನ್ನು ಸಾಂಪ್ರದಾ ಯಿಕ ವಿನ್ಯಾಸಗಳು ಮತ್ತು ಆಕಾರಗಳನ್ನು ಚಿತ್ರಿಸುತ್ತಾರೆ. ಸುಮಂತಿ ತಮ್ಮ ಅಜ್ಜಿ ಮತ್ತು ತಾಯಿಯಿಂದ ಗೋಡೆ ಚಿತ್ರಕಲೆಯ ಮೂಲ ತಂತ್ರಗಳನ್ನು ಕಲಿತರು. ಖಜುರಾಹೋದಲ್ಲಿ ನಡೆದ ಆದಿವಾಸಿ ಕಲಾವಿದರ ಪ್ರದರ್ಶನ ಅವರ ಬದುಕಿಗೆ ತಿರುವುದ ನೀಡಿತು. ಆನಂತರ ದೇಶದ ಅನೇಕ ಪ್ರಮುಖ ನಗರಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಸುಮುದಾಯದ ಭಾಷೆ ಕುರುಖ್, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಲ್ಲಿದ್ದಲು, ಹಸಿರು ಎಲೆಗಳು ಮತ್ತು ಕೆಂಪು ಜೇಡಿಮಣ್ಣನ್ನು ಬಳಸುವ ಮೂಲಕ ಉತ್ತೇಜಿಸುತ್ತಾರೆ.
ಒರಾನ್ ಎಂಬುದು ಒಡಿಶಾ, ಜಾರ್ಖಂಡ್, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಡುಬರುವ ದ್ರಾವಿಡಿಯನ್ ಭಾಷೆ ಮಾತ ನಾಡುವ ಸಮುದಾಯ. ಪ್ರಸ್ತುತ ಭೋಪಾಲ್ನಲ್ಲಿ ನೆಲೆಸಿರುವ ಸುಮಂತಿ, ʻನಾನು ನೈಸರ್ಗಿಕ ವರ್ಣದ್ರವ್ಯಗಳನ್ನು ಬಳಸುತ್ತೇನೆ ಮತ್ತು ನೈಸರ್ಗಿಕ ಧಾತುಗಳಿಂದ ಬಣ್ಣಗಳನ್ನು ತಯಾರಿಸುತ್ತೇನೆʼ ಎಂದು ಹೇಳಿದರು.
ಅವರು ಈ ಪ್ರದೇಶದ ಕಾಡುಗಳಲ್ಲಿ ಕಂಡುಬರುವ ಮೂರು ವಿಭಿನ್ನ ಬಣ್ಣಗಳ ಮಣ್ಣನ್ನು ಬಳಸುತ್ತಾರೆ: ಕಪ್ಪು, ಕೆಂಪು ಮತ್ತು ಹಳದಿ. ಜೊತೆಗೆ, ನೀಲಿ ಮತ್ತು ಗೋರಂಟಿ ಸಸ್ಯಗಳ ಎಲೆಗಳನ್ನು ನೈಸರ್ಗಿಕ ವರ್ಣದ್ರವ್ಯಗಳಾಗಿ ಬಳಸುತ್ತಾರೆ. ʻಬಣ್ಣದ ಮಣ್ಣಿನಲ್ಲಿ ಅದ್ದಿದ ಬೆರಳುಗಳಿಂದ ವಿನ್ಯಾಸಗಳನ್ನು ರಚಿಸುತ್ತೇನೆ ಮತ್ತು ಬ್ರಷ್ ನಿಂದ ಬಾಹ್ಯರೇಖೆಗಳನ್ನು ಬರೆಯುತ್ತೇನೆ. ಹೆಚ್ಚಿನ ಚಿತ್ರಗಳು ಹಬ್ಬಗಳು ಮತ್ತು ಆಚರಣೆಗಳ ಕುರಿತು ಇರುತ್ತವೆʼ ಎಂದು ಹೇಳಿದರು. ʻಕಥೆಗಳನ್ನು ಹುಡುಕುತ್ತ ಇದ್ದುದರಿಂದ ಮದುವೆ ಆಗಲಿಲ್ಲʼ ಎನ್ನುವ 43 ವರ್ಷದ ಸುಮಂತಿ, ʼನಮ್ಮಲ್ಲಿ ಕಥೆಗಳನ್ನು ಆಧರಿಸಿದ ಶ್ರೀಮಂತ ಇತಿಹಾಸವಿದೆ. ಪುರಾಣಗಳು ಮತ್ತು ಜಾನಪದ ಕಥೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ. ನನ್ನ ಸ್ನೇಹಿತರು ಮದುವೆಯಾಗು ತ್ತಿದ್ದಾಗ ನಾನು ಹಿರಿಯರ ಕಥೆಗಳನ್ನು ಹುಡುಕುವುದರಲ್ಲಿ ನಿರತಳಾಗಿದ್ದೆ,ʼ ಎಂದು ಹೇಳಿದರು.
ಒರಾನ್ ಸಮುದಾಯದವರು ಮನೆಯ ಗೋಡೆಗಳಿಗೆ ಬಳಿಯಲು ಆಯ್ಕೆ ಮಾಡುವ ಬಣ್ಣವು ಅವರ ಕುಲ ಅಥವಾ ಉಪಜಾತಿಯನ್ನು ಪ್ರತಿನಿಧಿಸುತ್ತದೆ. 1990 ರಿಂದ ಒರಾಂಗ್ ಬುಡಕಟ್ಟಿನೊಡನೆ ಕೆಲಸ ಮಾಡುತ್ತಿರುವ ಎನ್ಜಿಒ ಕ್ಯಾಪ್ರೆ ಫೌಂಡೇಶನ್ನ ಪ್ರತಿನಿಧಿ ಲಿಲಿ ಭವನಕೋಲರ್ ಅವರು ಹಂಚಿಕೊಂಡಿದ್ದಾರೆ. ಲಿಲಿ ಭಾವ್ನಾ ಕೌಲರ್ ಹೇಳುತ್ತಾರೆ; ʻವಿವಿಧ ಪ್ರಾಣಿಗಳಿಂದ ಪ್ರತಿನಿಧಿಸಲ್ಪಡುವ 12 ಕುಲ ಗಳಿವೆ. ಉದಾಹರಣೆಗೆ, ಹುಲಿ ಲಾಕ್ರಾ ಕುಲವನ್ನು, ಗಿಳಿ ತಾರ್ಕಿ ಕುಲವನ್ನು, ಮೀನು ಮಿಂಜ್ ಕುಲವನ್ನು ಮತ್ತು ಆಮೆ ಕಚಾಪ್ ಕುಲವನ್ನು ಪ್ರತಿನಿಧಿಸುತ್ತದೆʼ. ಚಂಡೀಗಢದಲ್ಲಿ ಲಿಲಿ ಆಯೋಜಿಸಿದ್ದ ಸುಮಂತಿ ಅವರ ಚಿತ್ರಗಳ ಪ್ರದರ್ಶನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಓರಾನ್ ಸಮುದಾಯ ಸರ್ನಾ ಧರ್ಮದ ಅನುಯಾಯಿಗಳು. ಅದು ಜಾರ್ಖಂಡದ ಆದಿವಾಸಿಗಳ ಸ್ಥಳೀಯ ಧರ್ಮ. ಸಂತಾಲ್, ಮುಂಡಾ, ಹೋ ಮತ್ತಿತರ ಧರ್ಮಗಳಂತೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಶೋಧಕ ಮುಕುಲ್ ಬಾರಾ ವಿವರಿಸಿದಂತೆ, ಸರ್ನಾ ಎಂದರೆ ಪವಿತ್ರವಾದ ತೋಪು ಎಂದು. ಒರಾನ್ ಜನರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಧರ್ಮೆಸ್ ಎಂಬ ದೇವತೆ ಸುತ್ತ ಕೇಂದ್ರೀಕೃತ ವಾಗಿವೆ ಮತ್ತು ಪ್ರಮುಖ ಆಚರಣೆಗೆ ಮೊದಲು ದೇವತೆಯ ಆಶೀರ್ವಾದ ಪಡೆಯುತ್ತಾರೆ.
ಒರಾನ್ ಸಮುದಾಯದವರು ಜಾರ್ಖಂಡ್, ಚತ್ತೀಸಗಢ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿರುವ ಪೂರ್ವ ಭಾರತದ ಚೋಟಾನಾಗ್ಪುರ ಪ್ರಸ್ಥಭೂಮಿಯ ನಿವಾಸಿಗಳು. ಜಾನಪದ ಕಥೆಗಳು ಮತ್ತು ಸಾಂಪ್ರದಾಯಿಕ ಮೂಲಗಳ ಪ್ರಕಾರ, ಒರಾಂಗ್ ಸಮುದಾಯದವರ ಮೂಲ ಕೊಂಕಣ ಪ್ರದೇಶ. ʻಡಾಲ್ಟನ್ (1872), ಪಿ. ಡೆಹಾನ್ (1906), ಆರ್.ಒ. ಧಾನ್ (1967) ಮತ್ತು ಎಸ್.ಸಿ. ರೈ (2004) ಪ್ರಕಾರ, ಜನಸಂಖ್ಯೆ ಹೆಚ್ಚಳ ಮತ್ತು ಬಾಹ್ಯ ಒತ್ತಡದಿಂದ ಅವರು ಪಶ್ಚಿಮ ಭಾರತದಿಂದ ಉತ್ತರ ಭಾರತಕ್ಕೆ ವಲಸೆ ಬಂದರು. ಬಿಹಾರದ ಶಹಾಬಾದ್ ಜಿಲ್ಲೆಯ ರೋಹ್ತಸ್ಗಢದಲ್ಲಿ ಕ್ರಿಪೂ 800 ರಲ್ಲಿ ರೈತರಾಗಿ ನೆಲೆಸಿದರುʼ ಎಂದು ಬಾರಾ ಬರೆಯುತ್ತಾರೆ. ಆನಂತರ ಚೋಟಾನಾಗಪುರದ ವಿವಿಧ ಭಾಗಗಳಿಗೆ ಎರಡು ಗುಂಪಿನಲ್ಲಿ ವಲಸೆ ಹೋದರು. ಬರ್ಗ್ ಅಥವಾ ಬರ್ಗಾ ಒರಾನ್ ಎಂದು ಕರೆಯಲ್ಪಡುವ ಮೊದಲ ಗುಂಪು ಗಂಗಪುರ ರಾಜ್ಯದಲ್ಲಿ ನೆಲೆಸಿತು. ಮಾಲೆ ಎಂದು ಕರೆಯಲ್ಪಡುವ ಒರಾನ್ಗಳ ಇನ್ನಿತರ ಗುಂಪುಗಳು ರಾಜಮಹಲ್ ಪರ್ವತ ಪ್ರದೇಶ, ಚೋಟಾನಾಗಪುರ ಪ್ರಸ್ಥಭೂಮಿಯಲ್ಲಿ ನೆಲೆಸಿತು. ಧಂಗಾರ್,ಕೋರಾ ಮತ್ತು ಕಿಸಾನ್ ಸಮುದಾಯಗಳನ್ನು ಬಿಹಾರ, ಒಡಿಷಾ,ಪಶ್ಚಿಮ ಬಂಗಾಳ,ಚತ್ತೀಸ್ಗಢ,ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ನೋಡಬಹುದು.
ಲಿಲಿ ಸುಮಾರು 10 ವರ್ಷಗಳಿಂದ ಸುಮತಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ʻಆಕೆ ತನ್ನ ಭಾಷೆ, ಸಂಸ್ಕೃತಿ, ಕಥೆಗಳು ಮತ್ತು ಕಲೆಯನ್ನು ಇತರರಿಗೆ ಹಂಚುತ್ತಾಳೆ. ವಲಸೆಯಿಂದಾಗಿ ಒರಾನ್ ಸಮುದಾಯ ತಮ್ಮ ಶ್ರೀಮಂತ ಸಂಸ್ಕೃತಿಯನ್ನು ಕಳೆದುಕೊಂಡಿದೆ. ನಾನು ಸುಮತಿಗೆ ಸಂಶೋಧನೆ ನೆರವು ನೀಡುತ್ತೇನೆ. ಕಳೆದುಹೋದ ಕಥೆಗಳನ್ನು ಹುಡುಕಿಕೊಡುತ್ತೇನೆ ಮತ್ತು ಅವುಗಳನ್ನು ಕಲೆಯಾಗಿ ಪರಿವರ್ತಿಸುತ್ತೇವೆ. ಆಸ್ಟ್ರೇಲಿಯಾದ ಸ್ಥಳೀಯ ಜನರೊಂದಿಗೆ ಇದೇ ಕೆಲಸ ಮಾಡುತ್ತಿದ್ದೇನೆʼ ಎಂದು ಲಿಲಿ ಹೇಳುತ್ತಾರೆ.
ಜಾರ್ಖಂಡ್, ಚತ್ತೀಸಗಢ, ಬಿಹಾರ ಮತ್ತು ಒಡಿಶಾದಲ್ಲಿ ಬಳಕೆಯಲ್ಲಿರುವ ನಾಗಪುರಿ (ಸದ್ರಿ)ಭಾಷಿಗರು ಕುರುಖ್ ಭಾಷಿಗರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಚಹಾ ತೋಟಗಳಲ್ಲಿ ಸಂವಹನ ಉದ್ದೇಶಕ್ಕಾಗಿ ನಾಗಪುರಿಯನ್ನು ಬಳಸಲಾಗುತ್ತದೆ. ʻಹೆಚ್ಚು ಮಾತನಾಡಿದರೆ ಭಾಷೆ ಹೆಚ್ಚು ಬೆಳೆಯುತ್ತದೆ ಎಂದು ಕುರುಖ್ ಸಮುದಾಯದವರಿಗೆ ಹೇಳುತ್ತೇನೆ. ನಮ್ಮ ಸಂಪ್ರದಾಯಗಳು ಮತ್ತು ಆಚಾರಗಳು ನಮ್ಮ ಭಾಷೆಯೊಂದಿಗೆ ಹೆಣೆದುಕೊಂಡಿವೆ. ಭಾಷೆಯನ್ನು ಉಳಿಸದಿದ್ದರೆ, ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಕುರುಖ್ ಮಾತ ನಾಡುವಂತೆ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದೇನೆ,ʼ’ ಎಂದು ಸುಮಂತಿ ಹೇಳುತ್ತಾರೆ.
ಕುರುಖ್ಗೆ ಲಿಪಿ ಇರಲಿಲ್ಲ. 1990ರಲ್ಲಿ ಜಾರ್ಖಂಡ್ನ ಡಾ. ನಾರಾಯಣ್ ಒರಾನ್ ಅವರು ಟಲಾಂಗ್ ಸಿಕಿ ಲಿಪಿ ಯನ್ನು ಅಭಿವೃದ್ಧಿಪಡಿಸಿದರು. 2006 ರಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಕುರುಖ್ ಸಾಹಿತ್ಯ ಸಂಘವನ್ನು ಸ್ಥಾಪಿಸಲಾಯಿತು. ʻಸುಮಂತಿಯ ಮುಖ್ಯ ಸಮಸ್ಯೆ- ಮಾರಾಟ ಕಾರ್ಯಜಾಲದ ಕೊರತೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅನನುಭವ. ನಾನು ಈ ಕಂದರ ತುಂಬಲು ನೆರವಾಗುತ್ತಿದ್ದೇನೆ. ಒರಾನ್ ಕಲೆ ಬಗ್ಗೆ ಪ್ರಚಾರ ಇಲ್ಲದೆ ಇರುವುದರಿಂದ ಕಲಾಕೃತಿಗಳು ಮಾರಾಟವಾಗುವುದು ಕಡಿಮೆ. ಪ್ರಸ್ತುತ ನಾನು ಒಂದು ಅಂತಾರಾಷ್ಟ್ರೀಯ ಪ್ರದರ್ಶನದ ಪ್ರಯತ್ನ ನಡೆಸುತ್ತಿದ್ದೇನೆ. ಮಾರ್ಚ್ 15 ರಂದು ಸಿಲಿಗುರಿಯಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಸುಮಂತಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆʼ ಎಂದು ಲಿಲಿ ಹೇಳಿದರು.