ಆನೆ ಕಾರಿಡಾರ್‌ಗೆ ರೈತರ ಜಮೀನು
x

ಆನೆ ಕಾರಿಡಾರ್‌ಗೆ ರೈತರ ಜಮೀನು


ಆನೆ ಕಾರಿಡಾರ್‌ ಗೆ ರೈತರ ಜಮೀನು

-ಮುರಳೀಧರ ಖಜಾನೆ

ಆನೆಗಳನ್ನು ಶತಮಾನಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಗೌರವಿಸಲಾಗುತ್ತಿದೆ. ಅವು ರಾತ್ರಿ ನಿದ್ರೆಯ ವೇಳೆಯ ಕಥೆಗಳು ಮತ್ತು ಜಾನಪದ ಕಥೆಗಳ ಭಾಗವಾಗಿವೆ. ದೇಶಕ್ಕೆ ಅವು ಎಷ್ಟು ಮುಖ್ಯ ಎಂದರೆ, ಅವುಗಳನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಗುರುತಿಸಲಾಗಿದೆ. ಆದರೆ, ಆನೆಗಳ ಆವಾಸಸ್ಥಾನಗಳ ಸಮೀಪದಲ್ಲಿ ವಾಸಿಸುವ ಜನರು ಆನೆಗಳೊಡನೆ ಸಂಕೀರ್ಣ ಸಂಬಂಧ ಹೊಂದಿದ್ದಾರೆ. ಮಾನವರು ಮತ್ತು ಆನೆಗಳು ಎರಡೂ ಒಂದು ಸಂಪನ್ಮೂಲಕ್ಕಾಗಿ ಹೋರಾಡುತ್ತಾರೆ; ಅದು ಭೂಮಿ.

ಆದರೆ, ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ, ಆನೆ ಕಾರಿಡಾರ್‌ಗಾಗಿ ರೈತರ ಗುಂಪೊಂದು ತಮ್ಮ ಭೂಮಿಯನ್ನು ಹಸ್ತಾಂತರಿಸಲು ಮುಂದಾದ ವಿಶಿಷ್ಟ ಉದಾಹರಣೆ ವರದಿಯಾಗಿದೆ.

ದೇಶದಲ್ಲಿರುವ ಸುಮಾರು 30,000 ಆನೆಗಳಲ್ಲಿ, 6,399 ಕರ್ನಾಟಕದಲ್ಲಿ ಕಂಡುಬರುತ್ತವೆ. ರೈತರು, ವಿಶೇಷವಾಗಿ ಅರಣ್ಯದ ಗಡಿಯಲ್ಲಿ ಕೃಷಿ ಮಾಡುವವರು, ವರ್ಷದಿಂದ ವರ್ಷಕ್ಕೆ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಸನ ಅರಣ್ಯ ವಿಭಾಗಕ್ಕೆ ಹೊಂದಿಕೊಂಡಿರುವ ಸಕಲೇಶಪುರದ ಹೆತ್ತೂರು ಹೋಬಳಿಯ ರೈತರು ಕೃಷಿ ಮಾಡಲು ಕಷ್ಟವಾದ್ದರಿಂದ ಆನೆ ಕಾರಿಡಾರ್ಗೆ ತಮ್ಮ ಭೂಮಿ ಹಸ್ತಾಂತರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ರೈತ ಸಮೂಹ ರಾಜ್ಯದ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿತ್ತು. ಖಂಡ್ರೆ ಅವರು ಮುಖ್ಯಮಂತ್ರಿ ಅವರಿಂದ ಪ್ರಸ್ತಾವನೆಗೆ ಒಪ್ಪಿಗೆ ಪಡೆದಿದ್ದಾರೆ. ಜಮೀನು ನೀಡಿದ ರೈತರಿಗೆ ಪರಿಹಾರ ನೀಡಲು ಅರಣ್ಯೀಕರಣಕ್ಕಾಗಿ ಗಣಿ ಕಂಪನಿಗಳು ಠೇವಣಿ ಮಾಡಿದ ಮೀಸಲು ಹಣವನ್ನು ಬಳಸಿಕೊಳ್ಳುವಂತೆ ಖಂಡ್ರೆ ಅವರಿಗೆ ಸೂಚಿಸಿದ್ದಾರೆ.

ʻಸ್ವಾಧೀನಪಡಿಸಿಕೊಂಡ ಭೂಮಿಯನ್ನು ಆನೆ ಕಾರಿಡಾರ್ ವಿಸ್ತರಿಸಲು ಯೋಜಿಸುತ್ತಿದ್ದೇವೆ. ಅದು ಜೀವ ಮತ್ತು ಆಸ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆʼ ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರು ನಗರದ ಸುತ್ತ ಆನೆ ಕಾರಿಡಾರ್ ನಿರ್ಮಿಸಲು ರೈತರಿಂದ ಕೃಷಿ ಭೂಮಿಯನ್ನು ಪಡೆದುಕೊಳ್ಳಲು ಸರ್ಕಾರ ಯೋಜಿಸುತ್ತಿದೆ ಎಂದು ಖಂಡ್ರೆ ಹೇಳಿದ್ದಾರೆ. ʻರೈತರಿಂದ ಭೂಮಿ ಖರೀದಿಸಿ ಫಲ ನೀಡುವ ಮರಗಳನ್ನು ನೆಡುವುದು ನಮ್ಮ ಯೋಜನೆ. ಸುತ್ತಲೂ ಮರಗಳಿರುವುದರಿಂದ, ಆನೆಗಳು ಅರಣ್ಯದಿಂದ ಹೊರಬರುವುದಿಲ್ಲ. ಅವು ಆಹಾರ ಮತ್ತು ನೀರು ಹುಡುಕಿಕೊಂಡು ನಗರ ಪ್ರದೇಶಗಳಿಗೆ ಭೇಟಿ ನೀಡುತ್ತವೆ,ʼ ಎಂದು ಅವರು ಹೇಳಿದರು.

ಹಾಸನ ವಿಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಸಕಲೇಶಪುರದ ಹೆತ್ತೂರು ಹೋಬಳಿಯಲ್ಲಿ ಅಂದಾಜು 11,653 ಎಕರೆ ಸಾರ್ವಜನಿಕ ಭೂಮಿ ಮತ್ತು 3,355.23 ಎಕರೆ ಖಾಸಗಿ ಭೂಮಿ ಲಭ್ಯವಿದೆ. ಹೋಬಳಿಯ ಎಂಟು ಗ್ರಾಮಗಳ ಖಾಸಗಿ ಜಮೀನುದಾರರು ತಮಗೆ ಸೂಕ್ತ ಪರಿಹಾರ ನೀಡಿದರೆ, 3,143.02 ಎಕರೆ ಜಮೀನನ್ನು ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ.

ಪುರಾತನ ಸಮಸ್ಯೆ:

ಕರ್ನಾಟಕದಲ್ಲಿ ಮಾನವ-ಆನೆ ಸಂಘರ್ಷ ಎರಡು ಶತಮಾನಗಳಷ್ಟು ಹಳೆಯದು. ಹೆಸರಾಂತ ಕಲಾವಿದ ಗೆರ್ಹಾರ್ಡ್ ರಿಕ್ಟರ್, 1822 ರಲ್ಲಿ ಕೂರ್ಗ್‌ನ ಗೆಜೆಟಿಯರ್‌ನಲ್ಲಿ ಅಂತಹ ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ರಿಕ್ಟರ್ ಪ್ರಕಾರ, ಆನೆಗಳಿಂದ ಬೆಳೆ ಮತ್ತು ಮನೆ ನಾಶದ ಬಗ್ಗೆ ಜನರು ಕೊಡಗಿನ ಮಹಾರಾಜರಿಗೆ ದೂರು ನೀಡಿದರು.

ಆದರೆ, ಜನಸಂಖ್ಯೆ ಹೆಚ್ಚಳ ಮತ್ತು ಅರಣ್ಯ ಭೂಮಿಯ ಅತಿಕ್ರಮಿಸುತ್ತಿರುವುದರಿಂದ, ಮನುಷ್ಯ-ಆನೆ ಸಂಘರ್ಷ ಹೆಚ್ಚಿದೆ.

ಅರಣ್ಯ ಇಲಾಖೆ ಪ್ರಕಾರ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ 2022 ರಲ್ಲಿ ಅತಿ ಹೆಚ್ಚು ಆನೆ ದಾಳಿ ವರದಿಯಾಗಿದೆ. 2018 ರಿಂದ 2023 ರ ಅವಧಿಯಲ್ಲಿ ಆನೆಗಳ ದಾಳಿಯಿಂದ 148 ಜನರು ಸಾವನ್ನಪ್ಪಿದ್ದಾರೆ. ಅದೇ ಅವಧಿಯಲ್ಲಿ ಆಹಾರ ಮತ್ತು ನೀರು ಹುಡುಕಿಕೊಂಡು ಬಂದ 50 ಆನೆಗಳನ್ನು ಹತ್ಯೆ ಮಾಡಲಾಗಿದೆ. ಇದು ರಾಜ್ಯದಲ್ಲಿ ಆನೆ ಕಾರಿಡಾರ್‌ಗಳನ್ನು ಬಲಪಡಿಸಲು ‘ಆನೆ ಸ್ನೇಹಿ’ ಮತ್ತು ‘ರೈತ ಪರ’ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವನ್ನು ಪ್ರೇರೇಪಿಸಿದೆ.

2023 ರ ಗಣತಿ ಪ್ರಕಾರ, ರಾಜ್ಯದಲ್ಲಿ 2017 ಕ್ಕಿಂತ 346 ಹೆಚ್ಚು ಆನೆಗಳಿವೆ. ಆನೆಗಳ ಸಾಂದ್ರತೆ ಹೆಚ್ಚಿರುವ ದಕ್ಷಿಣ ಕರ್ನಾಟಕದಲ್ಲಿ ಆನೆ-ಮನುಷ್ಯ ಸಂಘರ್ಷದ ಸಮಸ್ಯೆ ಹೆಚ್ಚು ತೀವ್ರವಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ) ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯುಐಐ) ಸಹಯೋಗದಲ್ಲಿ ಸೆಪ್ಟೆಂಬರ್ 2023 ರಲ್ಲಿ ರಾಜ್ಯದಲ್ಲಿ ಒಂಬತ್ತು ಆನೆ ಕಾರಿಡಾರ್‌ಗಳನ್ನು ಗುರುತಿಸಿದೆ. ಅವೆಂದರೆ, ಕರಡಿಕಲ್-ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್ ಶ್ರೇಣಿ), ತಾಳಿ ಬಿಳಿಕಲ್ (ತಮಿಳುನಾಡು ಮತ್ತು ಕರ್ನಾಟಕ), ಬಿಳಿಕಲ್ -ಜವಳಗಿರಿ (ತಮಿಳುನಾಡು ಮತ್ತು ಕರ್ನಾಟಕ), ಎಡೆಹಳ್ಳಿ-ಗುತ್ತಿಯಾಲತ್ತೂರು (ತಮಿಳುನಾಡು ಮತ್ತು ಕರ್ನಾಟಕ), ಎಡೆಹಳ್ಳಿ-ದೊಡ್ಡಸಂಪಿಗೆ (ಕರ್ನಾಟಕ), ಚಾಮರಾಜನಗರ-ತಲಮಲೈ ಮುದ್ದಹಳ್ಳಿ (ತಮಿಳುನಾಡು ಮತ್ತು ಕರ್ನಾಟಕ), ಕಣಿಯನಪುರ-ಮೋಯಾರ್ ಮತ್ತು ಬೇಗೂರು-ಬ್ರಹ್ಮಗಿರಿ (ಕರ್ನಾಟಕ).

ಗುರುತಿಸಿದ ಕಾರಿಡಾರ್‌ಗಳಲ್ಲಿ ಒಂದು ದುರ್ಬಲಗೊಂಡಿದ್ದು, ಆನೆಗಳ ಸಂಚಾರವನ್ನು ಸುಲಭಗೊಳಿಸಲು ತಕ್ಷಣ ಮರುಸ್ಥಾಪನೆ ಆಗಬೇಕಿದೆ. ಇತರ ಮೂರು ಕಾರಿಡಾರ್ಗಳು ಹೆಚ್ಚು ಬಳಕೆ ಆಗುತ್ತಿವೆ. ಒಂಬತ್ತು ಕಾರಿಡಾರ್‌ಗಳಲ್ಲಿ ಏಳನ್ನು ಅತಿಕ್ರಮಣ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದ ರಕ್ಷಿಸಬೇಕು. ಎರಡರಲ್ಲಿ ಅತಿಕ್ರಮಣ ಪ್ರದೇಶಗಳ ತೆರವು ಮತ್ತು ವಾಸಸ್ಥಳ ಸುಧಾರಣೆ ಮಾಡಬೇಕು ಎಂದು ಎಂಒಇಎಫ್‌ಸಿಸಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಪೈಕಿ ಎಡೆಹಳ್ಳಿ-ದೊಡ್ಡಸಂಪಿಗೆ ಆನೆ ಕಾರಿಡಾರ್ ನ್ನು ರಾಜ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

Read More
Next Story