ನಿಮ್ಮ ನಂಬರ್ ಬೇಕೆಂದು ಹಠ ಹಿಡಿದ ಹೋಟೆಲ್‌ಗಳು: ಕೊನೆಗೂ ಮಣಿದ ಜೊಮಾಟೊ? ಮುಂದೇನು?
x

ಜೊಮಾಟೊ

ನಿಮ್ಮ ನಂಬರ್ ಬೇಕೆಂದು ಹಠ ಹಿಡಿದ ಹೋಟೆಲ್‌ಗಳು: ಕೊನೆಗೂ ಮಣಿದ ಜೊಮಾಟೊ? ಮುಂದೇನು?

ಆಹಾರ ವಿತರಣಾ ವೇದಿಕೆಗಳು ಗ್ರಾಹಕರ ಫೋನ್ ಸಂಖ್ಯೆಗಳು ಅಥವಾ ಇತರ ವೈಯಕ್ತಿಕ ವಿವರಗಳನ್ನು ರೆಸ್ಟೋರೆಂಟ್‌ಗಳಿಗೆ ತಲುಪಲು ಸಾಧ್ಯವಾಗದಂತೆ ಮಾಹಿತಿಯನ್ನು ಮರೆಮಾಚುತ್ತವೆ. ಇದು ವರ್ಷಗಳಿಂದ ಈ ವಿಚಾರ ಫುಡ್‌ ಡೆಲಿವರಿ ಅಗ್ರಿಗೇಟರ್‌ಗಳು ಹಾಗೂ ರೆಸ್ಟೋರೆಂಟ್‌ಗಳ ನಡುವಿನ ವಿವಾದದ ಕೇಂದ್ರಬಿಂದುವಾಗಿತ್ತು.


Click the Play button to hear this message in audio format

ಆಹಾರ ವಿತರಣಾ ದೈತ್ಯ ಜೊಮಾಟೊ (Zomato) ಗ್ರಾಹಕರ ಡೇಟಾ ಹಂಚಿಕೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರ ಹೊಸ ಚರ್ಚೆಗೆ ಗ್ರಾಸವಾಗಿದೆ. ರೆಸ್ಟೋರೆಂಟ್‌ಗಳ ಬಹುದಿನದ ಬೇಡಿಕೆಗೆ ಕಂಪನಿ ತಲೆಬಾಗಿದೆ ಎನ್ನಲಾಗಿದ್ದು, ಇದು ಗ್ರಾಹಕರ ಗೌಪ್ಯತೆಯ ಹಕ್ಕಿಗೆ ಸವಾಲಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು: "ಗ್ರಾಹಕನೇ ದೇವರು" ಎನ್ನುವುದು ಹಳೆಯ ಮಾತು. ಡಿಜಿಟಲ್ ಯುಗದಲ್ಲಿ "ಗ್ರಾಹಕರ ಮಾಹಿತಿಯೇ (Data) ದೇವರು" ಎಂಬಂತಾಗಿದೆ. ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಜೊಮಾಟೊ ಇದೀಗ ಅಂತಹದ್ದೇ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಹಲವು ವರ್ಷಗಳಿಂದ ರೆಸ್ಟೋರೆಂಟ್‌ಗಳ ಜೊತೆ ನಡೆಯುತ್ತಿದ್ದ 'ಮಾಹಿತಿ ಮುಚ್ಚಿಡುವ' (Data Masking) ಸಂಘರ್ಷಕ್ಕೆ ಅಂತ್ಯ ಹಾಡಲು ಜೊಮಾಟೊ ಮುಂದಾಗಿದ್ದು, ತನ್ನ ಗ್ರಾಹಕರ ಫೋನ್ ನಂಬರ್ ಸೇರಿದಂತೆ ಪ್ರಮುಖ ಮಾಹಿತಿಯನ್ನು ರೆಸ್ಟೋರೆಂಟ್‌ಗಳೊಂದಿಗೆ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದರೆ, ಗ್ರಾಹಕ ವಲಯದಲ್ಲಿ ಆತಂಕ ಹುಟ್ಟುಹಾಕಿದೆ.

ಏನಿದು ಹೊಸ 'ಡೇಟಾ ಡೀಲ್'?

ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ, ನೀವು ಜೊಮಾಟೊ ಅಥವಾ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದಾಗ, ನಿಮ್ಮ ಫೋನ್ ನಂಬರ್ ರೆಸ್ಟೋರೆಂಟ್‌ಗೆ ನೇರವಾಗಿ ತಿಳಿಯುತ್ತಿರಲಿಲ್ಲ. ಅದು ಎನ್‌ಕ್ರಿಪ್ಟ್ (Encrypt) ಆಗಿರುತ್ತಿತ್ತು. ಆದರೆ, ರೆಸ್ಟೋರೆಂಟ್‌ಗಳ ಒಕ್ಕೂಟವಾದ 'ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ' (NRAI), "ನಮ್ಮ ಗ್ರಾಹಕರು ಯಾರು ಎಂಬುದೇ ನಮಗೆ ತಿಳಿಯದಿದ್ದರೆ, ಅವರಿಗೆ ಉತ್ತಮ ಸೇವೆ ನೀಡುವುದು ಹೇಗೆ? ನಮ್ಮ ಮಾರ್ಕೆಟಿಂಗ್ ಮಾಡುವುದು ಹೇಗೆ?" ಎಂದು ಪ್ರಶ್ನಿಸುತ್ತಲೇ ಬಂದಿತ್ತು. ಅಲ್ಲದೆ, ಇದು ಸ್ಪರ್ಧಾತ್ಮಕ ವಿರೋಧಿ ನೀತಿ ಎಂದು ಸ್ಪರ್ಧಾ ಆಯೋಗಕ್ಕೂ (CCI) ದೂರು ನೀಡಿತ್ತು.

ಈ ಒತ್ತಡಕ್ಕೆ ಮಣಿದಿರುವ ಜೊಮಾಟೊ, ಇದೀಗ 5 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುವ NRAI ಜೊತೆ ಮಹತ್ವದ ಮಾತುಕತೆ ನಡೆಸಿದೆ. ಇದರ ಫಲವಾಗಿ, ಗ್ರಾಹಕರ ಮಾಹಿತಿಯನ್ನು ಹಂಚಿಕೊಳ್ಳಲು ತಾತ್ವಿಕ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಜೊಮಾಟೊದ ಪ್ರಮುಖ ಪ್ರತಿಸ್ಪರ್ಧಿ ಸ್ವಿಗ್ಗಿ (Swiggy) ಕೂಡ ಇದೇ ಹಾದಿ ತುಳಿಯುವ ಸಾಧ್ಯತೆ ದಟ್ಟವಾಗಿದೆ.

ಗ್ರಾಹಕರ ಮೊಬೈಲ್‌ಗೆ ಲಗ್ಗೆ ಇಡುತ್ತಾ ಜೊಮಾಟೊ?

ಈ ಹೊಸ ಯೋಜನೆಯ ಭಾಗವಾಗಿ, ಜೊಮಾಟೊ ಈಗಾಗಲೇ ತನ್ನ ಆ್ಯಪ್‌ನಲ್ಲಿ ಗ್ರಾಹಕರಿಗೆ ಒಂದು 'ಪಾಪ್-ಅಪ್' (Pop-up) ನೋಟಿಫಿಕೇಶನ್ ಕಳುಹಿಸಲು ಆರಂಭಿಸಿದೆ. "ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಿಂದ ಆಫರ್‌ಗಳು ಮತ್ತು ವಿಶೇಷ ಮಾಹಿತಿ ಪಡೆಯಲು ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಲು ಅನುಮತಿ ನೀಡಿ" ಎಂದು ಅದು ಕೇಳುತ್ತದೆ.

ಇಲ್ಲಿರುವ ಅತಿದೊಡ್ಡ ಆತಂಕವೆಂದರೆ, ಒಮ್ಮೆ ಗ್ರಾಹಕರು 'ಒಪ್ಪಿಗೆ' (Consent) ಸೂಚಿಸಿದರೆ, ಆ ಮಾಹಿತಿಯನ್ನು ಹಿಂಪಡೆಯಲು ಸದ್ಯಕ್ಕೆ ಯಾವುದೇ ಆಯ್ಕೆ ಇಲ್ಲ. ಅಂದರೆ, ನಿಮ್ಮ ಒಪ್ಪಿಗೆಯ ನಂತರ ನಿಮ್ಮ ನಂಬರ್ ರೆಸ್ಟೋರೆಂಟ್‌ಗಳ ಪಾಲಾಗುತ್ತದೆ. ನಂತರ ಅವರು ನಿಮಗೆ ಕರೆ ಮಾಡಿ ಅಥವಾ ಮೆಸೇಜ್ ಕಳುಹಿಸಿ ತಮ್ಮ ಆಫರ್‌ಗಳ ಬಗ್ಗೆ ಪ್ರಚಾರ ಆರಂಭಿಸಬಹುದು. ಇದು ಸ್ಪ್ಯಾಮ್ (Spam) ಕರೆಗಳ ಹಾವಳಿಗೆ ನಾಂದಿ ಹಾಡಬಹುದು ಎಂಬುದು ತಜ್ಞರ ಆತಂಕ.

'ಸ್ಪ್ಯಾಮ್ ಭೀತಿ: ತಜ್ಞರ ಕಳವಳ

ಜೊಮಾಟೊದ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯಸಭಾ ಸಂಸದ ಮಿಲಿಂದ್ ದಿಯೋರಾ ಅವರು ಈ ಬಗ್ಗೆ ಟ್ವೀಟ್ ಮಾಡಿ, "ಉತ್ತಮ ಸೇವೆಯ ನೆಪದಲ್ಲಿ ಇದು ಗ್ರಾಹಕರ ಗೌಪ್ಯತೆಯ ಉಲ್ಲಂಘನೆ ಮತ್ತು ಅನಗತ್ಯ ಸ್ಪ್ಯಾಮ್‌ಗೆ ಬಾಗಿಲು ತೆರೆದಂತಾಗುತ್ತದೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, "ಆ್ಯಪ್‌ಗಳು ಏಕಪಕ್ಷೀಯವಾಗಿ ಇಂತಹ ನಿರ್ಧಾರ ಕೈಗೊಂಡರೆ, ಅದು ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ತನಿಖೆಗೆ ಆಗ್ರಹಿಸಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ.

ಜೊಮಾಟೊ ಸಿಇಒ ಸ್ಪಷ್ಟನೆ ಏನು?

ವಿವಾದದ ಕಾವು ಹೆಚ್ಚಾಗುತ್ತಿದ್ದಂತೆ, ಜೊಮಾಟೊ ಸಿಇಒ ಆದಿತ್ಯ ಮಂಗ್ಲಾ ಅವರು ಸ್ಪಷ್ಟನೆ ನೀಡಿದ್ದಾರೆ. "ನಾವು ಗ್ರಾಹಕರ ಅನುಮತಿ ಇಲ್ಲದೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಗ್ರಾಹಕರು ಸ್ಪಷ್ಟವಾಗಿ 'ಹೌದು' ಎಂದಾಗ ಮಾತ್ರ ಫೋನ್ ನಂಬರ್ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳುವುದಿಲ್ಲ," ಎಂದು ಅವರು ಭರವಸೆ ನೀಡಿದ್ದಾರೆ.

ರೆಸ್ಟೋರೆಂಟ್ ಉದ್ಯಮಕ್ಕೆ ಈ ನಡೆ 'ಸಂಜೀವಿನಿ'ಯಾಗಬಹುದು. ತಮಗೆ ಯಾರು ಆರ್ಡರ್ ಮಾಡುತ್ತಿದ್ದಾರೆ ಎಂದು ತಿಳಿದರೆ, ಅವರು ಆ ಗ್ರಾಹಕರನ್ನು ಉಳಿಸಿಕೊಳ್ಳಲು ನೇರವಾಗಿ ಆಫರ್ ನೀಡಬಹುದು. ಆದರೆ, ಸಾಮಾನ್ಯ ಗ್ರಾಹಕನಿಗೆ ಇದು 'ತಲೆನೋವು' ಆಗುವ ಸಾಧ್ಯತೆಯೇ ಹೆಚ್ಚು. ದಿನವಿಡೀ ಬರುವ ಮಾರ್ಕೆಟಿಂಗ್ ಕರೆಗಳ ಸಾಲಿಗೆ ಈಗ ಊಟದ ಹೋಟೆಲ್‌ಗಳ ಕರೆಗಳೂ ಸೇರ್ಪಡೆಯಾದರೆ ಕಷ್ಟ.

Read More
Next Story