ಪಿಸಿಸಿ ಪದಾಧಿಕಾರಿಗಳ ಕೊಠಡಿಗಳಿಗೆ ಬೀಗ ಹಾಕಿದ ವೈ.ಎಸ್. ಶರ್ಮಿಳಾ
ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಶರ್ಮಿಳಾ ಅವರನ್ನು ದೂಷಿಸಿರುವ ಇಬ್ಬರು ಕಾರ್ಯಾಧ್ಯಕ್ಷರು, ಕಳಪೆ ಸಾಧನೆ ಕುರಿತು ತನಿಖೆ ಮಾಡಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ವಿಜಯವಾಡದ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದಿವೆ.
ರಾಜ್ಯ ಘಟಕದ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಿದ ಇಬ್ಬರು ಕಾರ್ಯಾಧ್ಯಕ್ಷರ ಕೊಠಡಿಗಳಿಗೆ ಬೀಗ ಹಾಕಿದ್ದಾರೆ ಮತ್ತು ಎಲ್ಲಾ ಸಮಿತಿಗಳನ್ನು ವಿಸರ್ಜಿಸಿದ್ದಾರೆ.
ವರದಿಗಳ ಪ್ರಕಾರ, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ)ಯ ಸುಂಕರ ಪದ್ಮಶ್ರೀ ಮತ್ತು ಪಿ ರಾಕೇಶ್ ರೆಡ್ಡಿ ಅವರು ಕೇಂದ್ರ ನಾಯಕತ್ವಕ್ಕೆ ಬರೆದ ಪತ್ರದಲ್ಲಿ ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನಕ್ಕೆ ಶರ್ಮಿಳಾ ಕಾರಣ ಎಂದು ಆರೋಪಿಸಿದ್ದರು. ಶರ್ಮಿಳಾ ಅವರ ತಂಡವು ಪ್ರತಿಫಲ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಿದೆ. ಚುನಾವಣೆಯಲ್ಲಿ ಕಳಪೆ ಸಾಧನೆ ಕುರಿತು ತನಿಖೆ ಮಾಡಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದ್ದರು.
ಇದರಿಂದ ಕೋಪಗೊಂಡ ಶರ್ಮಿಳಾ, ರಾಜ್ಯ ಘಟಕದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿದ್ದು, ವಿಜಯವಾಡದ ಕಾಂಗ್ರೆಸ್ ಕಚೇರಿಯಲ್ಲಿ ಪದ್ಮಶ್ರೀ ಮತ್ತು ರೆಡ್ಡಿ ಅವರ ಕೊಠಡಿಗಳಿಗೆ ಬೀಗ ಹಾಕಿದ್ದಾರೆ.
ʻಎಐಸಿಸಿ ಇತಿಹಾಸದಲ್ಲಿ ಎಲ್ಲ ಸಮಿತಿಗಳನ್ನು ವಿಸರ್ಜಿಸಿದ ಮತ್ತು ಕಾರ್ಯಾಧ್ಯಕ್ಷರ ಕಚೇರಿ ಬಾಗಿಲುಗಳಿಗೆ ಬೀಗ ಹಾಕಿದ ಪಿಸಿಸಿ ಅಧ್ಯಕ್ಷರು ಇಲ್ಲ. ಈ ನಡವಳಿಕೆಯು ಪಿಸಿಸಿ ಅಧ್ಯಕ್ಷೆ ಶರ್ಮಿಳಾ ಅವರಿಗೆ ಸಾಂಸ್ಥಿಕ ರಚನೆ ಬಗ್ಗೆ ಇರುವ ತಿರಸ್ಕಾರವನ್ನು ತೋರಿಸುತ್ತದೆ ಮಾತ್ರವಲ್ಲದೆ, ಕಾರ್ಯಕರ್ತರ ಅವಿರತ ಶ್ರಮವನ್ನು ಕಡೆಗಣಿಸುತ್ತದೆ,ʼ ಎಂದು ಪದ್ಮಶ್ರೀ ಹೇಳಿಕೆ ನೀಡಿದ್ದಾರೆ.
ಶರ್ಮಿಳಾ ಸೋಲು: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪಕ್ಷದ ಸ್ಥಿತಿಯನ್ನು ಸುಧಾರಿಸಲು ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರನ್ನು ಆಂಧ್ರಪ್ರದೇಶದ ಮುಖ್ಯಸ್ಥೆಯಾಗಿ ಕಾಂಗ್ರೆಸ್ ನೇಮಿಸಿತ್ತು. ಆದರೆ, ಶರ್ಮಿ ಳಾ ಕಡಪ ಲೋಕಸಭೆ ಕ್ಷೇತ್ರದಲ್ಲಿ ಸೋದರ ಸಂಬಂಧಿ, ವೈಎಸ್‌ಆರ್ ಕಾಂಗ್ರೆಸ್ ನ ಅವಿನಾಶ್ ರೆಡ್ಡಿ ವಿರುದ್ಧ ಸೋತಿದ್ದಾರೆ. ತೆಲುಗು ದೇಶಂ ಪಕ್ಷದ ಸಿ.ಬಿ. ಸುಬ್ಬರಾಮಿ ರೆಡ್ಡಿ ಎರಡನೇ ಸ್ಥಾನ ಹಾಗೂ ಶರ್ಮಿಳಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
2019 ರ ಚುನಾವಣೆಯಲ್ಲಿ ಶೇ.1.17ರಷ್ಟು ಮತ ಗಳಿಸಿದ್ದ ಕಾಂಗ್ರೆಸ್, 2024ರಲ್ಲಿ ಶೇ.1.72 ಮತ ಗಳಿಸಿದೆ.